ಶನಿವಾರ, ಅಕ್ಟೋಬರ್ 16, 2021
23 °C
ನಂಜನಗೂಡು ರಸ್ತೆಯಲ್ಲಿ ವೆಂಕಟೇಶ್‌ ನೆಟ್ಟು ಪೋಷಿಸಿದ ಮರಗಳ ರೆಂಬೆಗಳಿಗೆ ಅಗತ್ಯಕ್ಕಿಂತ ಹೆಚ್ಚು ಕತ್ತರಿ

ಸೆಸ್ಕ್‌ ನಡೆಗೆ ಪರಿಸರ ಪ್ರೇಮಿಗಳ ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ನಗರದ ಪರಿಸರ ಪ್ರೇಮಿ ಸಿ.ಎಂ.ವೆಂಕಟೇಶ್‌ ಸ್ವಂತ ವೆಚ್ಚದಲ್ಲಿ ನಂಜನಗೂಡು ರಸ್ತೆಯಲ್ಲಿ ನೆಟ್ಟು ಬೆಳೆಸಿದ ಮರಗಳ ರೆಂಬೆಗಳನ್ನು ಸೆಸ್ಕ್‌ ಸಿಬ್ಬಂದಿ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಕತ್ತರಿಸಿದ್ದು, ಪರಿಸರ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ. 

ಸೆಸ್ಕ್ ಸಿಬ್ಬಂದಿ ಮಂಗಳವಾರ ನಗರದಲ್ಲಿ ತಂತಿ ನಿರ್ವಹಣಾ ಕಾರ್ಯ ಕೈಗೊಂಡಿದ್ದರು. ತಂತಿಗಳಿಗೆ ತಾಗುತ್ತಿದ್ದ ಗಿಡ ಮರಗಳ ರೆಂಬೆಗಳನ್ನು ಕತ್ತರಿಸುತ್ತಿದ್ದರು. ನಂಜನಗೂಡು ರಸ್ತೆಯಲ್ಲಿ ವೆಂಕಟೇಶ್‌ ಅವರು ನಾಲ್ಕೈದು ವರ್ಷದ ಹಿಂದೆ ನೆಟ್ಟಿದ್ದ ಗಿಡಗಳು ಈಗ ಹುಲುಸಾಗಿ ಬೆಳೆದು ಸಣ್ಣ ಮರವಾಗಿವೆ.

ಹೊಂಗೆ, ಬೇವು, ಮಹಾಗನಿ ಗಿಡಗಳ ರೆಂಬೆಗಳು ತಂತಿ ತಾಗುತ್ತಿದ್ದವು. ಕರ್ತವ್ಯದಲ್ಲಿದ್ದ ಸೆಸ್ಕ್‌ ಸಿಬ್ಬಂದಿ ವಿದ್ಯುತ್‌ ತಂತಿಗಳನ್ನು ಸವರುತ್ತಿದ್ದ ರೆಂಬೆಗಳನ್ನು ಕಡಿಯುವುದರ ಜೊತೆಗೆ ರಸ್ತೆ ಬದಿಗೆ ವಾಲಿಕೊಂಡು ನೆರಳು ನೀಡುತ್ತಿದ್ದ ರೆಂಬೆಗಳನ್ನೂ ಕಡಿದಿದ್ದರು. 

ಸ್ಥಳೀಯರು ವೆಂಕಟೇಶ್‌ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದರು. ತಕ್ಷಣ ಸ್ಥಳಕ್ಕೆ ಬಂದ ವೆಂಕಟೇಶ್‌ ಅವರು ಅಗತ್ಯಕ್ಕಿಂತ ಹೆಚ್ಚು ರೆಂಬೆಗಳನ್ನು ಕತ್ತರಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಅಲ್ಲದೇ ಫೇಸ್‌ಬುಕ್‌ ಲೈವ್‌ ಮಾಡುವುದರ ಮೂಲಕ ತಮ್ಮ ನೋವನ್ನು ಹೊರಹಾಕಿದರು. 

ವೆಂಕಟೇಶ್‌ ಅವರ ಬೆಂಬಲಕ್ಕೆ ಬಂದ ಹಲವರು ಸೆಸ್ಕ್‌ ಸಿಬ್ಬಂದಿಯನ್ನು ಪ್ರಶ್ನಿಸಿದರು. ಸಾಮಾಜಿಕ ಜಾಲತಾಣಗಳಲ್ಲೂ ಜನರು ವೆಂಕಟೇಶ್‌ ಅವರಿಗೆ ಬೆಂಬಲ ವ್ಯಕ್ತಪಡಿಸಿ ಸೆಸ್ಕ್‌ನ ನಡೆಯನ್ನು ಖಂಡಿಸಿದರು. ವಿಷಯ ದೊಡ್ಡದಾಗುತ್ತಲೇ ಸೆಸ್ಕ್‌ ಸಿಬ್ಬಂದಿ ಅಲ್ಲಿಂದ ಬೇರೆ ಕಡೆಗೆ ಹೋದರು. ಅವರು ಕಡಿದಿದ್ದ ರೆಂಬೆಗಳು ಮಧ್ಯಾಹ್ನದವರೆಗೂ ರಸ್ತೆಯಲ್ಲಿ ಬಿದ್ದಿದ್ದವು.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಸೆಸ್ಕ್‌ ಚಾಮರಾಜನಗರ ವಿಭಾಗದ ಕಾರ್ಯಪಾಲಕ ಎಂಜಿನಿಯರ್‌ ಪೂರ್ಣ ಚಂದ್ರ ತೇಜಸ್ವಿ, ‘ಗಿಡ/ಮರಗಳನ್ನು ಕಡಿಯುವ ಉದ್ದೇಶ ನಮ್ಮದಲ್ಲ. ನಾವು ಯಾವ ಗಿಡ ಅಥವಾ ಮರವನ್ನು ಬುಡದಿಂದ ಕಡಿದಿಲ್ಲ. ತಂತಿಗಳಿಗೆ ತಾಗುತ್ತಿರುವ ರೆಂಬೆಗಳನ್ನು ಮಾತ್ರ ಕಡಿಯುತ್ತೇವೆ. ಒಮ್ಮೆ ರೆಂಬೆಗಳನ್ನು ಕಡಿದರೆ ಎರಡು ಮೂರು ತಿಂಗಳಿಗೆ ನಾವು ಮತ್ತೆ ನಿರ್ವಹಣೆ ಮಾಡುವುದಿಲ್ಲ. ಮಳೆ ಬರುತ್ತಿರುವುದರಿಂದ ಗಿಡಗಳು ಬೇಗ ಚಿಗುರುತ್ತವೆ. ಹಾಗಾಗಿ, ಸ್ವಲ್ಪ ಹೆಚ್ಚು ರೆಂಬೆಗಳನ್ನು ಕತ್ತರಿಸಿದ್ದಾರೆ. ವಿಷಯ ಗೊತ್ತಾಗುತ್ತಿದ್ದಂತೆಯೇ ಸಿಬ್ಬಂದಿಗೆ ಸೂಚನೆ ನೀಡಲಾಗಿದ್ದು, ತಂತಿಗಳಿಗೆ ತಾಗುತ್ತಿರುವ ರೆಂಬೆಗಳನ್ನು ಮಾತ್ರ ಕಡಿಯುವುದಕ್ಕೆ ತಿಳಿಸಿದ್ದೇವೆ’ ಎಂದರು. 

ಅಪ್ಪಿಕೊ ಚಳವಳಿಯ ಎಚ್ಚರಿಕೆ: ಘಟನೆಯ ಸಂಬಂಧ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ನಗರಸಭಾ ಸದಸ್ಯ ಎಂ.ಮಹೇಶ್‌, ‘ವೆಂಕಟೇಶ್‌ ನಗರದಲ್ಲಿ ನೆಟ್ಟಿರುವ ಗಿಡಗಳನ್ನು ಒಂದಿಲ್ಲೊಂದು ಒಂದು ಕಾರಣಕ್ಕೆ ಕಡಿಯಲಾಗುತ್ತಿದೆ ಇಲ್ಲವೇ ಸಾಯಿಸಲಾಗುತ್ತಿದೆ. ಇದು ಖಂಡನೀಯ. ಗಿಡ ನೆಟ್ಟು ಪೋಷಿಸುವುದು ಸುಲಭದ ಕೆಲಸವಲ್ಲ. ಸರ್ಕಾರದ ಸಂಸ್ಥೆಯೊಂದು ಈ ರೀತಿ ಮಾಡುವುದು ಸರಿಯಲ್ಲ. ಇದೇ ರೀತಿ ಗಿಡಗಳನ್ನು ಕಡಿಯುತ್ತಿದ್ದಾರೆ. ಸುಂದರ್‌ಲಾಲ್‌ ಬಹುಗುಣ ಮಾಡಿದಂತೆ ಅಪ್ಪಿಕೊ ಚಳವಳಿ ಹಮ್ಮಿಕೊಳ್ಳಬೇಕಾಗುತ್ತದೆ’ ಎಂದು ಎಚ್ಚರಿಸಿದರು.

"ಗಮನಕ್ಕೆ ತಂದಿದ್ದರೆ, ನಾನೇ ಕತ್ತರಿಸುತ್ತಿದ್ದೆ’

ಘಟನೆಯ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ವೆಂಕಟೇಶ್‌, ‘ವಿದ್ಯುತ್‌ ತಂತಿಗಳಿಗೆ ತಾಗುತ್ತಿದ್ದ ರೆಂಬೆಗಳನ್ನು ಕತ್ತರಿಸಿದ್ದರೆ ನನಗೇನೂ ಬೇಜಾರಾಗುತ್ತಿರಲಿಲ್ಲ. ನಂಜನಗೂಡು ರಸ್ತೆಯಲ್ಲಿ ಗಿಡಗಳು ಚೆನ್ನಾಗಿ ಬೆಳೆದಿದ್ದು, ನೂರಾರು ಜನರಿಗೆ ನೆರಳು ನೀಡುತ್ತಿದ್ದವು. ಮೇಲ್ಭಾಗಕ್ಕೆ ಹೋದ ರೆಂಬೆಗಳು ಮಾತ್ರವಲ್ಲದೇ, ರಸ್ತೆಯತ್ತ ವಾಲಿದ್ದ, ಅಗಲವಾಗಿ ಹರಡಿದ್ದ ರೆಂಬೆಗಳನ್ನು ಕಡಿಯಲಾಗಿದೆ’ ಎಂದು ಹೇಳಿದರು. 

‘ವಿದ್ಯುತ್‌ ಎಲ್ಲರಿಗೂ ಮುಖ್ಯ. ಅದಿಲ್ಲದೇ ಜೀವನ ನಡೆಯದು. ನನಗೂ ಅದು ಗೊತ್ತಿದೆ. ಗಿಡ ಹಾಗೂ ಮರಗಳ ರೆಂಬೆಗಳನ್ನು ಕತ್ತರಿಸುವ ಮೊದಲು ಸೆಸ್ಕ್‌ನವರು ನನ್ನ ಗಮನಕ್ಕೆ ತಂದಿದ್ದರೆ, ನಾನೂ ಅವರಿಗೆ ನೆರವಾಗುತ್ತಿದ್ದೆ. 25ರಿಂದ 30 ಗಿಡಗಳ ರೆಂಬೆಗಳನ್ನು ಅಗತ್ಯಕ್ಕಿಂತ ಹೆಚ್ಚಾಗಿ ಕತ್ತರಿಸಿದ್ದಾರೆ. ಸ್ಥಳೀಯ ಕೆಲವರು ಸೆಸ್ಕ್‌ ಸಿಬ್ಬಂದಿಗೆ ಈ ಕೃತ್ಯ ನಡೆಸಲು ಕುಮ್ಮಕ್ಕು ನೀಡಿದ್ದಾರೆ’ ಎಂದು ಅವರು ಆರೋಪಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.