ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಆಮ್ಲಜನಕ ದುರಂತದ ಕಹಿಯ ವರ್ಷ

ವರ್ಷಪೂರ್ತಿ ಕಾಡಿದ ಕೋವಿಡ್‌; 2021ರ ನೆನಪಿನಲ್ಲಿ ಸಿಹಿಗಿಂತ ಕಹಿಯೇ ಹೆಚ್ಚು–ಪುನೀತ್‌ ಸಾವಿಗೂ ಮರುಗು
Last Updated 1 ಜನವರಿ 2022, 4:11 IST
ಅಕ್ಷರ ಗಾತ್ರ

ಚಾಮರಾಜನಗರ: ಕೋವಿಡ್‌ ಎರಡನೇ ಅಲೆ ಅಬ್ಬರದ ನಡುವೆ ಸಂಭವಿಸಿದ ಆಮ್ಲಜನಕ ದುರಂತದಿಂದಾಗಿ ಮುಗ್ಧ ಜೀವಗಳ ಸಾವಿನ ಕಹಿಯೊಂದಿಗೆ ಗಡಿ ಜಿಲ್ಲೆಯು 2021ಕ್ಕೆ ವಿದಾಯ ಹೇಳಿದೆ.

ರಾಷ್ಟ್ರಪತಿ ರಾಮನಾಥ ಕೋವಿಂದ್‌ ಭೇಟಿ, ವೈದ್ಯಕೀಯ ಕಾಲೇಜಿನ ಹೊಸ ಬೋಧನಾ ಆಸ್ಪತ್ರೆ ಉದ್ಘಾಟನೆ, ಮುಖ್ಯಮಂತ್ರಿ ಭೇಟಿ, ಕೊಳ್ಳೇಗಾಲ ಶಾಸಕ ಎನ್‌.ಮಹೇಶ್‌ ಬಿಜೆಪಿ ಸೇರ್ಪಡೆ, ಕೊಳ್ಳೇಗಾಲ ನಗರಸಭೆಯ ಏಳು ಸದಸ್ಯರ ಅನರ್ಹತೆ, ಅಲ್ಲಲ್ಲಿ ನಡೆದ ಅಪಘಾತ, ಕಳ್ಳತನ, ರೈತರ ಪ್ರತಿಭಟನೆ, ಜಿಲ್ಲೆಯ ವಿದ್ಯಾರ್ಥಿ ಯುಪಿಎಸ್‌ಸಿ ಪರೀಕ್ಷೆ ತೇರ್ಗಡೆಯಾಗಿದ್ದು...

ವರ್ಷದ ಕೊನೆಯಲ್ಲಿ ಅಬ್ಬರಿಸಿದ ಭಾರಿ ಮಳೆ, ತುಂಬಿದ ಕೆರೆ, ಜಲಾಶಯ, ರೈತರಿಗೆ ಆದ ಬೆಳೆ ಹಾನಿಯ ನಡುವೆ ವರ್ಷಪೂರ್ತಿ ಕಾಡಿದ ಕೊರೊನಾ ವೈರಸ್‌... ಜಿಲ್ಲೆಯ ಈ ವರ್ಷದ ನೆನಪಿನ ಹೊತ್ತಗೆಯ ಪುಟಗಳಲ್ಲಿ ಅಚ್ಚಳಿಯದೆ ಉಳಿಯುವ ಪ್ರಮುಖ ಸಂಗತಿಗಳು.

ದುರಂತದ ಕಹಿ:ಕೋವಿಡ್‌ನ ಮೊದಲ ಅಲೆಯ ನಿಯಂತ್ರಣದಲ್ಲಿ ತಕ್ಕಮಟ್ಟಿಗಿನ ಯಶಸ್ಸುಗಳಿಸಿ ಬೀಗಿದ್ದ ಜಿಲ್ಲಾಡಳಿತದ ಹುಳುಕುಗಳು ಎರಡನೇ ಅಲೆಯಲ್ಲಿ ಬಟಾಬಯಲಾಯಿತು. ರಾಜ್ಯದಾದ್ಯಂತ ಅಬ್ಬರಿಸಿದ ಎರಡನೇ ಅಲೆ ಜಿಲ್ಲೆಯಲ್ಲೂ ಅಬ್ಬರಿಸಿತ್ತು. ಆದರೆ, ಕೋವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಗಳಿಗೆ ಮೇ 2ರಂದು ಸಕಾಲದಲ್ಲಿ ಆಮ್ಲ ಜನಕ ಪೂರೈಕೆಯಾಗದೆ ಕೆಲವೇ ಗಂಟೆ ಅವಧಿಯಲ್ಲಿ 24 ಮಂದಿ ಪ್ರಾಣಕಳೆದುಕೊಂಡರು (ಮೃತಪಟ್ಟ ವರು 26 ಮಂದಿ ಅಲ್ಲ, 36 ಎಂಬ ಮಾತು ಕೂಡ ಇದೆ).

ಜಿಲ್ಲಾಡಳಿತದ ನಿರ್ಲಕ್ಷ್ಯದಿಂದಲೇ ಈ ದುರಂತ ಸಂಭವಿಸಿತ್ತು ಎಂದು ಹೈಕೋರ್ಟ್‌ ನೇಮಿಸಿದ್ದ ತನಿಖಾ ಸಮಿತಿ ಹೇಳಿತ್ತು. ಆದರೂ ಈವರೆಗೂ ಯಾರೊಬ್ಬರ ವಿರುದ್ಧವೂ ಕ್ರಮ ಆಗಿಲ್ಲ. ಮೃತರ ಕುಟುಂಬಗಳಿಗೆ ಸಾಂತ್ವನ ಹೇಳುವ ಕೆಲಸವನ್ನು ಸರ್ಕಾರ, ಜಿಲ್ಲಾಡಳಿತ ಮಾಡಲಿಲ್ಲ. ಹೈಕೋರ್ಟ್‌ನ ಸೂಚನೆಯಂತೆ 24 ಮಂದಿ ಕುಟುಂಬಗಳಿಗೆ ಸಣ್ಣ ಮೊತ್ತದ ಪರಿಹಾರ ಕೊಟ್ಟು ಸರ್ಕಾರ ಕೈತೊಳೆದುಕೊಂಡಿತು. ಪ್ರಕರಣ ಇನ್ನೂ ವಿಚಾರಣೆ ಹಂತದಲ್ಲಿದೆ.

ಈ ದುರಂತ ಒಂದು ಕಡೆಯಾದರೆ, ವರ್ಷ ಪೂರ್ತಿ ಕಾಡಿದ ಕೋವಿಡ್‌ ಜಿಲ್ಲೆಯ ಜನರನ್ನು ಹೈರಾಣ ರನ್ನಾಗಿಸಿತು. ಲಾಕ್‌ಡೌನ್‌, ರಾತ್ರಿ ಕರ್ಫ್ಯೂ, ಚಟುವಟಿಕೆಗಳ ಮೇಲಿನ ನಿರ್ಬಂಧಗಳು ಬಡ ಹಾಗೂ ಮಧ್ಯಮ ವರ್ಗದವರ ಜೀವನವನ್ನು ಹಿಂಡಿ ತೊಪ್ಪೆಯನ್ನಾಗಿಸಿತು.

ರಾಷ್ಟ್ರಪತಿ, ಮುಖ್ಯಮಂತ್ರಿ ಭೇಟಿಯ ಖುಷಿ: ಸರ್ಕಾರಿ ವೈದ್ಯಕೀಯ ಕಾಲೇಜಿ ಗಾಗಿ ನಗರದ ಹೊರ ವಲಯದ ಯಡಬೆಟ್ಟದಲ್ಲಿ ನಿರ್ಮಿಸಲಾಗಿದ್ದ 450 ಹಾಸಿಗೆ ಸಾಮರ್ಥ್ಯದ ಬೋಧನಾ ಆಸ್ಪತ್ರೆಯ ಉದ್ಘಾಟನೆ ನೆಪದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್‌, ರಾಜ್ಯಪಾಲ ಥ್ಯಾವರಚಂದ್‌ ಗೆಹ ಲೋತ್‌, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ನೀಡಿದ್ದು ಜಿಲ್ಲೆಯ ಜನರಲ್ಲಿ ಖುಷಿ ತಂದಿರುವ ಘಟನೆ. ‘ಮುಖ್ಯಮಂತ್ರಿ ಚಾಮರಾಜನಗರಕ್ಕೆ ಬಂದಿಲ್ಲ. ಹೊರವಲಯಕ್ಕೆ ಬಂದಿದ್ದರು. ಹಾಗಾಗಿ, ನಗರಕ್ಕೆ ಬಂದರೆ ಅಧಿಕಾರ ಹೋಗುತ್ತದೆ ಎಂಬ ಮೂಢನಂಬಿಕೆಗೆ ಇವರೂ ಜೋತು ಬಿದ್ದಿದ್ದಾರೆ’ ಎಂಬ ಚರ್ಚೆಯೂ ನಡೆದಿತ್ತು.

ರಾಷ್ಟ್ರಪತಿ ಬಿಳಿಗಿರಿರಂಗನ ಬೆಟ್ಟಕ್ಕೂ ಖಾಸಗಿ ಭೇಟಿ ನೀಡಿ ರಂಗನಾಥನ ದರ್ಶನ ಪಡೆದಿದ್ದರು.

ಬಿಳಿಗಿರಿರಂಗನಬೆಟ್ಟ ದೇವಾಲಯ ಜೀರ್ಣೋದ್ಧಾರ: ಜಿಲ್ಲೆಯ ಪ್ರಸಿದ್ಧ ಯಾತ್ರಾ ಸ್ಥಳ ಬಿಳಿಗಿರಿ ರಂಗನ ಬೆಟ್ಟದ ರಂಗನಾಥ ಸ್ವಾಮಿಯ ನವೀಕೃತ ದೇವಾಲಯ ಹಲವು ವರ್ಷದ ಕಾಮಗಾರಿ ನಂತರ ಪೂರ್ಣಗೊಂಡು ಏಪ್ರಿಲ್‌ ಆರಂಭದಲ್ಲಿ ಪುನರಾರಂಭಗೊಂಡಿತು. ದೇವಾಲಯದ ರಥ ನಿರ್ಮಾಣವೂ ಮುಕ್ತಾಯಗೊಂಡು ದೇವಾಲಯ ತಲುಪಿತು.

ಯುಪಿಎಸ್‌ಸಿ ಸಾಧನೆ: ಕೇಂದ್ರ ಲೋಕಸೇವಾ ಆಯೋಗದ (ಯುಪಿ ಎಸ್‌ಸಿ) ಪರೀಕ್ಷೆಯಲ್ಲಿ ಗುಂಡ್ಲುಪೇಟೆ ತಾಲ್ಲೂಕಿನ ಹಳ್ಳದ ಮಾದಹಳ್ಳಿಯ ಪ್ರಮೋದ್‌ ಆರಾಧ್ಯ 601ನೇ ರ‍್ಯಾಂಕ್‌ ಪಡೆದು ಗಮನ ಸೆಳೆದರು.

ಜಿಲ್ಲೆಯಲ್ಲೂ ಪ್ರತಿಭಟನೆ: ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ದೆಹಲಿಯಲ್ಲಿ ರೈತರು ನಡೆಸುತ್ತಿದ್ದ ಪ್ರತಿಭಟನೆ ಬೆಂಬಲಿಸಿ, ಜಿಲ್ಲೆಯಲ್ಲೂ ವರ್ಷ ಪೂರ್ತಿ ಪ್ರತಿಭಟನೆ ನಡೆದವು. ಕಾಯ್ದೆ ವಾಪಸ್‌ ಪಡೆಯಲಾಗುವುದು ಎಂದು ಪ್ರಧಾನಿ ಘೋಷಿಸಿದಾಗ ರೈತರು ಸಂಭ್ರಮಾಚರಣೆಯನ್ನೂ ಮಾಡಿದರು.

ಚಂಗಡಿ ಸ್ಥಳಾಂತರ: ಮಲೆ ಮಹದೇಶ್ವರ ವನ್ಯಧಾಮದ ವ್ಯಾಪ್ತಿಯಲ್ಲಿ ಬರುವ ಚಂಗಡಿ ಗ್ರಾಮವನ್ನು ಡಿ.ಎಂ.ಸಮುದ್ರದ ಬಳಿಗೆ ಸ್ಥಳಾಂತರ ಮಾಡುವ ಸಂಬಂಧ ಅರಣ್ಯ ಇಲಾಖೆ ಸರ್ಕಾರಕ್ಕೆ ಅಕ್ಟೋಬರ್‌ನಲ್ಲಿ ವರದಿ ಸಲ್ಲಿಸಿರುವುದು ಈ ವರ್ಷದ ಪ್ರಮುಖ ಬೆಳವಣಿಗೆಗಳಲ್ಲೊಂದು.

ಅಪರಾಧ ಚಟುವಟಿಕೆ: ಜಿಲ್ಲೆಯಲ್ಲಿ ವರ್ಷ ಪೂರ್ತಿ ಅಲ್ಲಲ್ಲಿ ಕಳ್ಳತನ, ಅಪರಾಧ ಪ್ರಕರಣ, ಅಪಘಾತ ನಡೆದಿವೆ.

ಹನೂರು ತಾಲ್ಲೂಕಿನ ವ್ಯಾಪ್ತಿಯಲ್ಲಿ ನಿರಂತರವಾಗಿ ತೋಟಗಳಿಂದ ಬಾಳೆಗೊನೆ ಕಳ್ಳತನವಾಗಿದ್ದು, ಚಾಮರಾಜನಗರದ ಭುವನೇಶ್ವರಿ ವೃತ್ತದಲ್ಲಿ ಗಮನ ಬೇರೆಡೆಗೆ ಸೆಳೆದು ಶಿಕ್ಷಕರೊಬ್ಬರಿಂದ ₹ 2 ಲಕ್ಷ ದೋ‌ಚಿದ್ದು, ರಾಚಯ್ಯ ಜೋಡಿ ರಸ್ತೆಯ ಜಿಲ್ಲಾಡಳಿತ ಭವನದ ಗೇಟಿನ ಮುಂಭಾಗದಲ್ಲಿ ಜಮೀನು ಖರೀದಿಗಾಗಿ ರೈತ ದಂಪತಿ ತಂದಿದ್ದ ₹ 9.5 ಲಕ್ಷ ನಗದನ್ನು ಕಳ್ಳರು ದೋಚಿ ಪರಾರಿಯಾಗಿದ್ದು, ಈ ವರ್ಷದ ಪ್ರಮುಖ ಅಪ‍ರಾಧ ಪ್ರಕರಣಗಳು. ಮೂರು ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಅಪರಾಧಿಯನ್ನು ಪೊಲೀಸರು ಬಳ್ಳಾರಿಯಲ್ಲಿ ಬಂಧಿಸಿದ್ದು, ಜಿಲ್ಲಾ ಪೊಲೀಸರ ಪ್ರಮುಖ ಸಾಧನೆ.

ಜೂನ್‌ 2ರಂದು ಚಾಮರಾಜನಗರ ತಾಲ್ಲೂಕಿನ ಎಚ್‌.ಮೂಕಹಳ್ಳಿಯಲ್ಲಿ ರೈತ ಕುಟುಂಬವೊಂದರ ಸಾಮೂಹಿಕ ಆತ್ಮಹತ್ಯೆ ಇಡೀ ಜಿಲ್ಲೆಯನ್ನೇ ಬೆಚ್ಚಿಬೀಳಿಸಿತ್ತು.

ಸಾಂಸ್ಕೃತಿಕ ಕ್ಷೇತ್ರ: ಜಾನಪದ ಅಕಾಡೆಮಿಯ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ಈ ವರ್ಷ ಜಿಲ್ಲೆಯಲ್ಲಿ ನಡೆಯಿತು. ರಾಜ್ಯ ಮಟ್ಟದ ಪ‍್ರಶಸ್ತಿ ಪ್ರದಾನ ಸಮಾರಂಭ ಗಡಿ ಜಿಲ್ಲೆಯಲ್ಲಿ ನಡೆದಿದ್ದು, ಇದೇ ಮೊದಲು.

ಕೊಳ್ಳೇಗಾಲದ ಸಾಹಿತಿ ಮಹದೇವ ಶಂಕನಪುರ ಅವರು ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದರು. ಜಿಲ್ಲಾ ಕಸಾಪಗೆ ಚುನಾವಣೆ ನಡೆದು ಶೈಲಕುಮಾರ್‌ ಅವರು ಅಧ್ಯಕ್ಷರಾಗಿ ಆಯ್ಕೆಯಾದರು.

ಪ್ರಮುಖ ರಾಜಕೀಯ ವಿದ್ಯಮಾನ
ಜಿಲ್ಲೆಯು 2021ರಲ್ಲಿ ಕೆಲವು ಪ್ರಮುಖ ರಾಜಕೀಯ ಬೆಳವಣಿಗೆಗಳಿಗೆ ಸಾಕ್ಷಿಯಾಗಿದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್‌ಪಿಯಿಂದ ಗೆದ್ದಿದ್ದ ಎನ್‌.ಮಹೇಶ್‌ ಈ ವರ್ಷದ ಆಗಸ್ಟ್‌ 5ರಂದು ಬಿಜೆಪಿಗೆ ಸೇರ್ಪಡೆಗೊಂಡರು.

ಮೈತ್ರಿ ಸರ್ಕಾರದ ಪತನದ ನಂತರ ಬಿಎಸ್‌ಪಿಯಿಂದ ಉಚ್ಚಾಟನೆಗೊಂಡಿದ್ದ ಅವರು, ನಂತರ ಸ್ವತಂತ್ರರಾಗಿದ್ದರು. ಬಿಜೆಪಿ ಬಗ್ಗೆ ಮೃದು ಧೋರಣೆ ಹೊಂದಿದ್ದ ಮಹೇಶ್‌ ಕೊನೆಗೂ ಅದೇ ಪಕ್ಷ ಸೇರಿದರು. ಅದರ ವಿರುದ್ಧ ಬಿಎಸ್‌ಪಿ, ಕೆಲವು ದಲಿತ, ಪ್ರಗತಿಪರ ಸಂಘಟನೆಗಳು ಪ್ರತಿಭಟನೆಯನ್ನೂ ನಡೆಸಿದವು.

ಕೊಳ್ಳೇಗಾಲ ನಗರಸಭೆಯ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಪಕ್ಷದ ವಿಪ್‌ ಉಲ್ಲಂಘಿಸಿದ್ದಕ್ಕಾಗಿ ಜಿಲ್ಲಾಧಿಕಾರಿ ನ್ಯಾಯಾಲಯವು ಬಿಎಸ್‌ಪಿಯ ಏಳು ಸದಸ್ಯರ ಸದಸ್ಯತ್ವ ಅನರ್ಹಗೊಳಿಸಿ ಆದೇಶಿಸಿತು. ಅನರ್ಹಗೊಂಡವರಲ್ಲಿ ನಗರಸಭೆ ಅಧ್ಯಕ್ಷೆಯೂ ಇದ್ದರು.

ತುಂಬಿದ ಕೆರೆ–ಕಟ್ಟೆಗಳು
ಮುಂಗಾರು ಪೂರ್ವ, ಮುಂಗಾರು ಅವಧಿಯಲ್ಲಿ ಕಡಿಮೆ ಮಳೆಯಾಗಿ ರೈತರು ಕಷ್ಟ ಅನುಭವಿಸಿದರೆ, ಹಿಂಗಾರು ಅವಧಿಯಲ್ಲಿ ಹೆಚ್ಚು ಮಳೆಯಾಗಿ ಸಂಕಟ ಪಟ್ಟರು. 2,550 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ಹಾನಿ ಸಂಭವಿಸಿ ರೈತರು ಕೋಟ್ಯಂತರ ರೂಪಾಯಿ ನಷ್ಟ ಅನುಭವಿಸಿದರು. 300ಕ್ಕೂ ಹೆಚ್ಚು ಮನೆಗಳಿಗೆ ಹಾನಿಯೂ ಆಯಿತು.

ನಿರಂತರ ಮಳೆಯಿಂದಾಗಿ ಹಲವು ವರ್ಷಗಳಿಂದ ತುಂಬದೇ ಇದ್ದ ಗುಂಡಾಲ್‌ ಜಲಾಶಯ ಸೇರಿದಂತೆ ಜಿಲ್ಲೆಯ ಬಹುತೇಕ ಎಲ್ಲ ಜಲಾಶಯಗಳು ಹಾಗೂ ಕೆರೆ ಕಟ್ಟೆಗಳು ಭರ್ತಿಯಾಗಿ ಬೆಳೆ ಹಾನಿಯ ನೋವಿನ ನಡುವೆಯೇ ಸಂತಸ ಉಂಟುಮಾಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT