ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

₹24.58 ಕೋಟಿ ವೆಚ್ಚ; ಚಾಮರಾಜನಗರ ರೈಲು ನಿಲ್ದಾಣಕ್ಕೆ ಹೊಸ ರೂಪ

ಚಾಮರಾಜನಗರ ರೈಲು ನಿಲ್ದಾಣ ಅಭಿವೃದ್ಧಿಗೆ ಪ‍್ರಧಾನಿ ಮೋದಿ ಶಂಕುಸ್ಥಾಪನೆ
Published 27 ಫೆಬ್ರುವರಿ 2024, 5:44 IST
Last Updated 27 ಫೆಬ್ರುವರಿ 2024, 5:44 IST
ಅಕ್ಷರ ಗಾತ್ರ

ಚಾಮರಾಜನಗರ: ಇಲ್ಲಿನ ರೈಲು ನಿಲ್ದಾಣವನ್ನು ₹24.58 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸುವ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯಿಂದ ವಿಡಿಯೊ ಕಾನ್ಫರೆನ್ಸ್‌ ಮೂಲಕ ಸೋಮವಾರ ಚಾಲನೆ ನೀಡಿದರು.

ಚಾಮರಾಜನಗರ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ 554 ರೈಲು ನಿಲ್ದಾಣಗಳ ಅಭಿವೃದ್ಧಿ ಮತ್ತು 1,500 ಮೇಲ್ಸೇತುವೆ ಮತ್ತು ಅಂಡರ್‌ಪಾಸ್‌ಗಳ ಉದ್ಘಾಟನೆ ಮತ್ತು ನಿರ್ಮಾಣಕ್ಕೆ ಶಂಕು ಸ್ಥಾಪನೆಯವನ್ನು ಪ್ರಧಾನಿಯವರು ನೆರವೇರಿಸಿದರು.

ನಗರದ ರೈಲು ನಿಲ್ದಾಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಂಸದ ವಿ.ಶ್ರೀನಿವಾಸ ಪ್ರಸಾದ್‌ ಮತ್ತು ನೈರುತ್ಯ ರೈಲ್ವೆಯ ಹಿರಿಯ ಅಧಿಕಾರಿಗಳು ಪಾಲ್ಗೊಂಡ‌ರು.

ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸದ ವಿ.ಶ್ರೀನಿವಾಸ ಪ್ರಸಾದ್‌ ಅವರು, ‘ನಗರದ ರೈಲು ನಿಲ್ದಾಣವನ್ನು ₹24.58 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಇದರಿಂದ ಜಿಲ್ಲೆಯ ಜನರಿಗೆ ಅನುಕೂಲವಾಗಲಿದೆ. ನಿಲ್ದಾಣದಲ್ಲಿ ಹೆಚ್ಚಿನ ಸೌಲಭ್ಯಗಳು ಸಿಗಲಿವೆ. ಈ ಕಾಮಗಾರಿ ತ್ವರಿತವಾಗಿ ನಡೆಯಬೇಕು’ ಎಂದು ಹೇಳಿದರು.

‘10 ವರ್ಷಗಳ ಅವಧಿಯಲ್ಲಿ ರೈಲ್ವೆಯ ಅಭಿವೃದ್ಧಿಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಪ್ರಧಾನಿ ಮೋದಿಯವರು ವಿವರಿಸಿದ್ದಾರೆ. ರೈಲ್ವೆಯ ಮೈಸೂರು ವಿಭಾಗದಲ್ಲಿ 14 ನಿಲ್ದಾಣಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ’

ಎಂದರು.

‘47 ವರ್ಷಗಳಿಂದ ನಾನು ಜಿಲ್ಲೆಯ ಚುನಾವಣಾ ರಾಜಕೀಯದಲ್ಲಿದ್ದೇನೆ. ಸಂಸದನಾಗಿ, ಕೇಂದ್ರ ಸಚಿವನಾಗಿದ್ದಾಗ ಚಾಮರಾಜನಗರ–ಮೈಸೂರು ನಡುವೆ ರೈಲು ಸೇವೆ ಅಭಿವೃದ್ಧಿ ಬಗ್ಗೆ ಸದನದಲ್ಲಿ ಮಾತನಾಡಿದ್ದೇನೆ. ಚಾಮರಾಜನಗರದಿಂದ ಮೆಟ್ಟುಪಾಳ್ಯಂ ವರೆಗೆ ರೈಲು ಮಾರ್ಗ ವಿಸ್ತರಿಸುವ ಯೋಜನೆಯ ಬಗ್ಗೆ ನಾನು ಕೇಂದ್ರ ಸಚಿವನಾಗಿದ್ದಾಗ ರೈಲ್ವೆ ಮಂಡಳಿ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೆ. ಆರ್ಥಿಕವಾಗಿ ಆ ಯೋಜನೆ ಕಾರ್ಯಸಾಧುವಲ್ಲ ಎಂದು ಅವರು ಹೇಳಿದ್ದರು. ಹಾಗಾಗಿ, ಆ ಯೋಜನೆ ಮುಂದುವರಿಯಲಿಲ್ಲ. ಚಾಮರಾಜನಗರಕ್ಕೆ ಬ್ರಾಡ್‌ಗೇಜ್‌ ಆಗಲು ಸಾಕಷ್ಟು ಪ್ರಯತ್ನ ಪಟ್ಟಿದ್ದೆ’ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ನಗರದ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಮಾಜಿ ಸಚಿವ ಎನ್‌.ಮಹೇಶ್‌, ಮಾಜಿ ಶಾಸಕ ಎಸ್.ಬಾಲರಾಜ್, ಜಿಲ್ಲಾಧಿಕಾರಿ ಶಿಲ್ಪಾ ನಾಗ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು, ನೈಋತ್ಯ ರೈಲ್ವೆ ಮೈಸೂರು ವಿಭಾಗದ ಹೆಚ್ಚುವರಿ ಮಂಡಲ ವ್ಯವಸ್ಥಾಪಕಿ ಇ.ವಿಜಯಾ, ಹಿರಿಯ ಡಿಎಂಇ ಬೀಸ್‌ ದತ್‌, ಝಡ್‌ಆರ್‌ಯುಸಿಸಿ ಸದಸ್ಯ ಚಂದ್ರಶೇಖರ್, ರೈಲ್ವೆ ಅಧಿಕಾರಿಗಳು, ಸಿಬ್ಬಂದಿ ಭಾಗವಹಿಸಿದ್ದರು.

ಏನೇನು ಸೌಲಭ್ಯಗಳು?

* ನಗರದ ರೈಲು ನಿಲ್ದಾಣವನ್ನು ಅಮೃತ್‌ ಭಾರತ್‌ ನಿಲ್ದಾಣ ಯೋಜನೆ ಅಡಿಯಲ್ಲಿ ಅಭಿವೃದ್ಧಿ ಪಡಿಸಲು ಆಯ್ಕೆ ಮಾಡಲಾಗಿದೆ. 

* ಹೊಸ ನಿಲ್ದಾಣದಲ್ಲಿ ಹಲವು ಸೌಲಭ್ಯಗಳಿದ್ದು, ಈಗಿನ ಕಟ್ಟಡಕ್ಕಿಂತ ವಿಸ್ತಾರವಾಗಿರಲಿದೆ. ಟಿಕೆಟ್‌ ಕಾಯ್ದಿರಿಸಲು ಹೊಸ ಕೌಂಟರ್‌ ನಿರ್ಮಾಣವಾಗಲಿದೆ. 

* ರೈಲಿಗೆ ಕಾಯುವ ಸಂದರ್ಭದಲ್ಲಿ ಕುಳಿತುಕೊಳ್ಳಲು ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕ ಕೊಠಡಿಗಳು, ಇವುಗಳಲ್ಲಿ ಶೌಚಾಲಯ ವ್ಯವಸ್ಥೆಯೂ ಇರಲಿದೆ. ಮಹಿಳೆಯರಿಗಾಗಿ ಇರುವ ಕೊಠಡಿಯಲ್ಲಿ ಮಕ್ಕಳಿಗೆ ಹಾಲುಣಿಸಲು ಪ್ರತ್ಯೇಕ ಕೋಣೆ ಇರಲಿದೆ. 

* ಪಾರ್ಸೆಲ್‌ ವಸ್ತುಗಳಿಗಾಗಿ ಕಚೇರಿ, ಒಂದು ಕೆಫೆಟೇರಿಯಾ, ಮೂರು ಆಹಾರ ಮಳಿಗೆಗಳು, ಪ್ರತ್ಯೇಕ ಶೌಚಾಲಯಗಳು, ವಿಸ್ತಾರವಾದ ಪ್ಲಾಟ್‌ಫಾರಂ, ಪ್ರತ್ಯೇಕ ವಾಹನ ನಿಲುಗಡೆ ವ್ಯವಸ್ಥೆ, ಹೊಸ ಚರಂಡಿ ವ್ಯವಸ್ಥೆ, ಮಳೆ ನೀರು ಸಂಗ್ರಹ ವ್ಯವಸ್ಥೆ, ನಿಲ್ದಾಣಕ್ಕೆ ಹೋಗುವ ರಸ್ತೆಗಳ ವಿಸ್ತರಣೆ, ಸಿಸಿಟಿವಿ ಕ್ಯಾಮೆರಾ, ವೈಫೈ, ರೈಲುಗಳ ಮಾಹಿತಿ ನೀಡಲು ಎಲ್‌ಇಡಿ ಪರದೆ ಸೇರಿದಂತೆ ಹಲವು ಸೌಲಭ್ಯಗಳು ಹೊಸ ನಿಲ್ದಾಣದಲ್ಲಿ ಇರಲಿವೆ. 

* ಈಗಾಗಲೇ ಪ್ಲಾಟ್‌ಫಾರಂ ಚಾವಣಿ ನಿರ್ಮಾಣ, ವಿಸ್ತರಿತ ಕಟ್ಟಡದ ಅಡಿಪಾಯ, ರಸ್ತೆ ಅಭಿವೃದ್ಧಿ, ವಾಹನ ನಿಲುಗಡೆ ಕೆಲಸಗಳು ನಡೆಯುತ್ತಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT