ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜೇಶ್ವರ ನೂತನ ರಥ ಶುಕ್ರವಾರ ನಗರಕ್ಕೆ

ಶಾಸಕರ ನೇತೃತ್ವದಲ್ಲಿ ಪೂರ್ವಭಾವಿ ಸಭೆ; ಅದ್ದೂರಿಯಾಗಿ ಸ್ವಾಗತಿಸಲು ತೀರ್ಮಾನ
Last Updated 11 ಮೇ 2022, 16:28 IST
ಅಕ್ಷರ ಗಾತ್ರ

ಚಾಮರಾಜನಗರ: ಇಲ್ಲಿನ ಇತಿಹಾಸ ಪ್ರಸಿದ್ಧ ಚಾಮರಾಜೇಶ್ವರಸ್ವಾಮಿ ದೇವಾಲಯದ ನೂತನ ರಥ ಶುಕ್ರವಾರ (ಮೇ 13) ನಗರಕ್ಕೆ ಬರಲಿದೆ.

ಹೊಸ ರಥವನ್ನು ಅದ್ದೂರಿಯಾಗಿ ಸ್ವಾಗತಿಸಲು ದೇವಾಲಯದ ಆಡಳಿತ ಮಂಡಳಿ, ಮುಖಂಡರು ಹಾಗೂ ಭಕ್ತ ಸಮೂಹ ಸಿದ್ಧತೆ ನಡೆಸಿದೆ.

ರಥ ಬರುತ್ತಿರುವುದರಿಂದ ಬುಧವಾರ ಶಾಸಕ ಸಿ.ಪುಟ್ಟರಂಗಶೆಟ್ಟಿ ನೇತೃತ್ವದಲ್ಲಿ ಸಭೆ ನಡೆದಿದ್ದು, ಅದ್ದೂರಿಯಾಗಿ ಸ್ವಾಗತಿಸಲು ನಿರ್ಧಾರ ಕೈಗೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಶಾಸಕರು ಮನವಿ ಮಾಡಿದ್ದಾರೆ.

ಪ್ರಮುಖ ಬೀದಿಗಳಲ್ಲಿ ಮೆರವಣಿಗೆ: ಹೊಸ ರಥವು ಗುರುವಾರ ಬೆಂಗಳೂರಿನಿಂದ ಹೊರಡಲಿದೆ. ತಡ ರಾತ್ರಿ ನಗರ ತಲುಪಲಿದೆ. ಶುಕ್ರವಾರ ಬೆಳಿಗ್ಗೆ ಸಂತೇಮರಹಳ್ಳಿ ವೃತ್ತದಲ್ಲಿ ರಥವನ್ನು ಸ್ವಾಗತಿಸಿ, ಪೂಜೆ ಸಲ್ಲಿಸಿ ಆದಿಶಕ್ತಿ ದೇವಾಲಯದಿಂದ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲು ನಿರ್ಧರಿಸಲಾಗಿದೆ.

ಡೀವಿಯೇಷನ್‌ ರಸ್ತೆ, ಭುವನೇಶ್ವರಿ ವೃತ್ತ, ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಮೂಲಕ ಸುಲ್ತಾನ್‌ ಷರೀಫ್‌ ವೃತ್ತ, ದೊಡ್ಡಂಗಡಿ ಬೀದಿ, ಚಿಕ್ಕಂಗಡಿ ಬೀದಿಗಳಲ್ಲಿ ಮೆರವಣಿಗೆ ನಡೆಸಿ, ದೇವಾಲಯಕ್ಕೆ ಮೂರು ಸುತ್ತು ಪ್ರದಕ್ಷಿಣೆ ಮಾಡಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಕುಂಭಾಭಿಷೇಕ: ಹಳೆಯ ಬ್ರಹ್ಮರಥಕ್ಕೆ ಕಿಡಿಗೇಡಿಯೊಬ್ಬ ಬೆಂಕಿ ಹಚ್ಚಿದ ಕಾರಣಕ್ಕೆ ಆಷಾಢ ಮಾಸದಲ್ಲಿ ನಡೆಯುವ ಚಾಮರಾಜೇಶ್ವರ ರಥೋತ್ಸವ ಸ್ಥಗಿತಗೊಂಡು ಐದು ವರ್ಷವಾಯಿತು. ಹೊಸ ರಥ ನಿರ್ಮಾಣ ವಿಳಂಬವಾಗಿದ್ದರಿಂದ ಅದ್ದೂರಿ ಜಾತ್ರೋತ್ಸವ ನಡೆದಿರಲಿಲ್ಲ. ಈ ಬಾರಿ ಜಾತ್ರೆಯ ದಿನ ಜುಲೈ 13ಕ್ಕೆ ನಿಗದಿಯಾಗಿದೆ. ಈ ಬಾರಿ ಅದ್ದೂರಿಯಾಗಿ ರಥೋತ್ಸವ ನಡೆಸಲು ತೀರ್ಮಾನಿಸಲಾಗಿದೆ.

ದೇವಾಲಯ ಜೀರ್ಣೋದ್ಧಾರಗೊಂಡ ಬಳಿಕ ಕುಂಭಾಭಿಷೇಕ ಹಾಗೂ ಗಿರಿಜಾ ಕಲ್ಯಾಣ ಕಾರ್ಯಕ್ರಮ ನಡೆದಿಲ್ಲ. ರಥೋತ್ಸವ ನಡೆಯಬೇಕಾದರೆ ಈ ಎರಡು ಕಾರ್ಯಕ್ರಮ ನಡೆಸಬೇಕಿದೆ.

‘ಜೂನ್‌ 4, 5, 6ರಂದು ಕುಂಭಾಭಿಷೇಕ, ಗಿರಿಜಾ ಕಲ್ಯಾಣ ಕಾರ್ಯಕ್ರಮಗಳನ್ನು ನಡೆಸಲು ನಿರ್ಧರಿಸಲಾಗಿದ್ದು, ಜುಲೈ 13ರಂದು ವಿಜೃಂಭಣೆಯ ರಥೋತ್ಸವ ನಡೆಯಲಿದೆ’ ಎಂದು ಕನ್ನಡ ಹೋರಾಟಗಾರ ಚಾ.ರಂ.ಶ್ರೀನಿವಾಸಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

‘ಧಾರ್ಮಿಕ ವಿಧಿ ವಿಧಾನಗಳ ಪ್ರಕಾರ ಆ ತೇರನ್ನು ಬಳಸದೆ ಹೊಸ ತೇರನ್ನು ಸಿದ್ಧಪಡಿಸಲು ತೀರ್ಮಾನಿಸಲಾಗಿತ್ತು. ಅದರಂತೆ, ಆಗ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ಹೊಸ ರಥ ಸಿದ್ಧಪಡಿಸಲು ₹ 1.20 ಕೋಟಿ ಅನುದಾನ ಬಿಡುಗಡೆ ಮಾಡಲಾಗಿತ್ತು. ಅದರಂತೆ ಹೊಸ ರಥವನ್ನು ಸಿದ್ಧಪಡಿಸಲಾಗಿದೆ’ ಎಂದರು.

ಮುಖಂಡರಾದ ಗಣೇಶ್ ದೀಕ್ಷಿತ್‌, ದುಗ್ಗಹಟ್ಟಿ ವೀರಭದ್ರಪ್ಪ, ಅರ್ಚಕರಾದ ನಾಗರಾಜ ದೀಕ್ಷಿತ್, ರಾಮಚಂದ್ರ ಭಾರದ್ವಾಜ್‌, ಆಡಳಿತಾಧಿಕಾರಿ ರಾಜಣ್ಣ, ಬಾಬು, ಜಯಕುಮಾರ್‌ ಸಭೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT