ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ | ಮಣಿಪುರ ಹಿಂಸಾಚಾರ ಖಂಡಿಸಿ ಆ.2ಕ್ಕೆ ಕ್ರಿಶ್ಚಿಯನ್ನರಿಂದ ಪ್ರತಿಭಟನೆ

Published 1 ಆಗಸ್ಟ್ 2023, 6:46 IST
Last Updated 1 ಆಗಸ್ಟ್ 2023, 6:46 IST
ಅಕ್ಷರ ಗಾತ್ರ

ಚಾಮರಾಜನಗರ: ಮಣಿಪುರದಲ್ಲಿ ಅಲ್ಪಸಂಖ್ಯಾತ ಕುಕಿ ಸಮುದಾಯದ ಮೇಲೆ ನಡೆಯುತ್ತಿರುವ ಹಿಂಸಾಚಾರ, ದೌರ್ಜನ್ಯ ಖಂಡಿಸಿ ಜಿಲ್ಲಾ ಕ್ರಿಶ್ಚಿಯನ್‌ ಸಂಘಟನೆಗಳ ಒಕ್ಕೂಟವು ಬುಧವಾರ (ಆ.2) ನಗರದಲ್ಲಿ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿದೆ. 

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಗರದ ಸಂತ ಪೌಲರ ದೇವಾಲಯದ ಪಾದ್ರಿ ಅಂತೋಣಪ್ಪ  ಅವರು,  ‘ನಗರದ ಸತ್ಯಮಂಗಲ ರಸ್ತೆಯಲ್ಲಿರುವ ಸಿಎಸ್‌ಐ ಚರ್ಚ್‌ ಬಳಿಯಿಂದ ಬುಧವಾರ ಬೆಳಿಗ್ಗೆ 10 ಗಂಟೆಗೆ ಪ್ರತಿಭಟನಾ ಮೆರವಣಿಗೆ ಆರಂಭವಾಗಲಿದೆ. ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಲಿದ್ದು, ಜಿಲ್ಲಾಡಳಿತ ಭವನದಲ್ಲಿ ಮುಕ್ತಾಯವಾಗಲಿದೆ. ಅಲ್ಲಿ ಧರಣಿ ನಡೆಸಿ ಜಿಲ್ಲಾಧಿಕಾರಿಯವರ ಮೂಲಕ ಪ್ರಧಾನಿ, ಗೃಹಸಚಿವರು ಹಾಗೂ ನಮ್ಮ ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು’ ಎಂದರು. 

ಮಣಿಪುರದಲ್ಲಿ ಮೂರು ತಿಂಗಳುಗಳಿಂದ ಅಲ್ಪಸಂಖ್ಯಾತ ಕ್ರಿಶ್ಚಿಯನ್‌ ಕುಕಿ  ಬುಡಕಟ್ಟು  ಸಮುದಾಯದವರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಇದು ಇಡೀ ದೇಶವೇ ತಲೆತಗ್ಗಿಸುವ ವಿಷಾದನೀಯ ಘಟನೆ. ಮೈತೇಯಿ ಸಮುದಾಯ ಈ ದೌರ್ಜನ್ಯ ನಡೆಸುತ್ತಿದೆ. ಮೀಸಲಾತಿ ವಿಚಾರವನ್ನು ಮುಂದಿಟ್ಟುಕೊಂಡು ಹಿಂಸಾಚಾರ ನಡೆಸುತ್ತಿದೆ’ ಎಂದರು. 

‘ಮಣಿಪುರದಲ್ಲಿ 5,800ಕ್ಕೂ ಹೆಚ್ಚು ಅತ್ಯಾಚಾರ ಪ್ರಕರಣಗಳು ಠಾಣೆಗಳಲ್ಲಿ ದಾಖಲಾಗಿವೆ. 300 ಕ್ಕೂ ಹೆಚ್ಚು ಕ್ರಿಶ್ಚಿಯನ್‌ ದೇವಾಲಯಗಳು, ನೂರಾರು ಕ್ರಿಶ್ಚಿಯನ್ನರ ಮನೆಗಳಿಗೆ ಹಾನಿಯಾಗಿದೆ. ಮಹಿಳೆಯರನ್ನು ನಗ್ನಗೊಳಿಸಿ ಮೆರವಣಿಗೆ ಮಾಡಿರುವುದು, ಅತ್ಯಾಚಾರ ಎಸಗಿರುವುದು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ಜಿಲ್ಲಾ ಕ್ರಿಶ್ಚಿಯನ್‌ ಸಂಘಟನೆಗಳ ಒಕ್ಕೂಟವು ಇದನ್ನು ಖಂಡಿಸುತ್ತದೆ’ ಎಂದರು. 

‘ಮಣಿಪುರ ಮುಖ್ಯಮಂತ್ರಿ, ಗೃಹಸಚಿವ, ಅಧಿಕಾರಿಗಳು ಕಠಿಣ ಕ್ರಮಕೈಗೊಳ್ಳದಿರುವುದು ವಿಷಾದನೀಯ. ಪ್ರಧಾನಿಯವರು ತಕ್ಷಣ ಮಧ್ಯಪ್ರವೇಶಿಸಿ ನಿಯಂತ್ರಣ ಕ್ರಮ ಕೈಗೊಂಡು ಮಣಿಪುರದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೆ ತರಬೇಕು’ ಎಂದು ಒತ್ತಾಯಿಸಿದರು. 

ದೊಡ್ಡರಾಯಪೇಟೆ ಚರ್ಚ್‌ನ ಧರ್ಮಗುರು ಆಂತೋಣಿರಾಜ್, ಕೊಳ್ಳೇಗಾಲ ತಾಲ್ಲೂಕು ಕ್ರಿಶ್ಚಿಯನ್‌ ಒಕ್ಕೂಟದ ಅಧ್ಯಕ್ಷ ಜಿ.ಸೆಲ್ವರಾಜ್‌, ಕಾರ್ಯದರ್ಶಿ ಜಾನ್‌ ಪೀಟರ್‌, ಕೊಳ್ಳೇಗಾಲದ ಬೇತೆಲ್‌ ಲೂಥರನ್‌ ಚರ್ಚ್‌ನ ಸಭಾಪಾಲಕ ಜೋಶ್ವೋ ಪ್ರಸನ್ನಕುಮಾರ್, ಕೊಳ್ಳೇಗಾಲ ರೋಮನ್‌ ಕ್ಯಾಥೋಲಿಕ್‌ ಚರ್ಚ್‌ನ ಮುಖಂಡ ಎ.ವಿನ್ಸೆಂಟ್‌, ಮುಖಂಡರಾದ ನಿರ್ಮಲಾ, ಫಿಲಿಪ್‌ ಇದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT