ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ

ಮಹಾಲಿಂಗನಕಟ್ಟೆ: ಪರಿಮಳಾ ನಾಗಪ್ಪ, ಬಿ.ವೆಂಕಟೇಶ್‌ ಬೆಂಬಲಿಗರ ನಡುವೆ ಜಗಳ, ಪ್ರಕರಣ ದಾಖಲು
Last Updated 1 ಮೇ 2022, 6:25 IST
ಅಕ್ಷರ ಗಾತ್ರ

ಹನೂರು: ತಾಲ್ಲೂಕಿನಮಹಾಲಿಂಗನಕಟ್ಟೆ ಗ್ರಾಮದ ಹಬ್ಬಕ್ಕೆ ಪಕ್ಷದ ಮುಖಂಡರನ್ನು ಆಹ್ವಾನಿಸಿದ ವಿಚಾರದಲ್ಲಿ ಬಿಜೆಪಿ ಕಾರ್ಯಕರ್ತರ ಎರಡು ಗುಂಪಿನ ನಡುವೆ ಘರ್ಷಣೆ ನಡೆದು, ಐವರ ವಿರುದ್ಧ ಹನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗ್ರಾಮದಲ್ಲಿ ಏ.27ರಂದು ಹಬ್ಬ ನಡೆದಿತ್ತು. ಹಬ್ಬಕ್ಕೆ ಯಾವುದೇ ರಾಜಕೀಯ ಮುಖಂಡರನ್ನು ಆಹ್ವಾನಿಸಬಾರದು ಎಂದು ಸೂಚಿಸಲಾಗಿತ್ತು. ಆದರೆ, ಗ್ರಾಮಪಂಚಾಯಿತಿ ಸದಸ್ಯ ಮಲ್ಲೇಶ್ ಎಂಬುವವರು, ಬಿಜೆಪಿ ಮುಖಂಡ ಹಾಗೂ ಜನಾಶ್ರಯ ಟ್ರಸ್ಟ್‌ನ ಬಿ.ವೆಂಕಟೇಶ್ ಅವರನ್ನು ಹಬ್ಬಕ್ಕೆ ಆಹ್ವಾನಿಸಿದ್ದರು. ಹಬ್ಬಕ್ಕೆ ಬಂದಿದ್ದ ವೆಂಕಟೇಶ್ ದೇವಸ್ಥಾನಕ್ಕೆ ಭೇಟಿ ನೀಡಿ ₹20 ಸಾವಿರ ಕಾಣಿಕೆಯನ್ನು ಸಲ್ಲಿಸಿದ್ದರು.

ಧ್ವನಿವರ್ಧಕದಲ್ಲಿ ವೆಂಕಟೇಶ್ ನೀಡಿರುವ ಕಾಣಿಕೆ ಮಾಹಿತಿಯನ್ನು ಘೋಷಿಸುತ್ತಿದ್ದಂತೆಯೇ, ಬಿಜೆಪಿ ನಾಯಕಿ ಪರಿಮಳಾ ನಾಗಪ್ಪ ಅವರೊಂದಿಗೆ ಗುರುತಿಸಿಕೊಂಡಿರುವ ಕಾರ್ಯಕರ್ತರಿಗೂ ಹಾಗೂ ಮಲ್ಲೇಶ್ ಅವರಿಗೂ ಮಾತಿನ ಚಕಮಕಿ ನಡೆದಿತ್ತು ಎಂದು ಮೂಲಗಳು ತಿಳಿಸಿವೆ. ಗ್ರಾಮದ ಮುಖಂಡರು ಮಧ್ಯೆ ಪ್ರವೇಶಿಸಿ ವಾತಾವರಣ ತಿಳಿಗೊಳಿಸಿದ್ದರು.

ಮೂರು ದಿನಗಳಿಂದಲೂ ಬೂದಿ ಮುಚ್ಚಿದ ಕೆಂಡದಂತಿದ್ದ ಪ್ರಕರಣ ಶುಕ್ರವಾರ ಸಂಜೆ ಭುಗಿಲೆದ್ದಿದೆ. ಎರಡು ಗುಂಪಿನ ನಡುವೆ ಘರ್ಷಣೆ ಉಂಟಾಗಿದೆ.

ಗ್ರಾಮದ ಪ್ರವೀಣ್, ಮಹಾದೇವ ಹಾಗೂ ಸೌಮ್ಯ ಎಂಬುವವರ ಮೇಲೆ ಜಗದೀಶ, ಮಹಾದೇವಪ್ರಭು, ಮಹಾದೇವಸ್ವಾಮಿ, ದೀಪು ಹಾಗೂ ಚಿನ್ನತಾಯಮ್ಮ ಎಂಬುವವರು ಹಲ್ಲೆ ನಡೆಸಿದ್ದಾರೆ ಎಂದು ಗ್ರಾಮದ ಮಹಾದೇವಪ್ರಸಾದ್ ಹನೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಮಲ್ಲೇಶ್ ಎಂಬುವವರು ಬಿ.ವೆಂಕಟೇಶ್ ಅನುಯಾಯಿಯಾಗಿದ್ದು, ಹಲ್ಲೆ ಮಾಡಿರುವ ಗುಂಪಿನವರು ಪರಿಮಳಾ ನಾಗಪ್ಪ ಅವರ ಅನುಯಾಯಿಗಳು ಎಂದು ಮೂಲಗಳು ತಿಳಿಸಿವೆ.

‘ಮಹಾಲಿಂಗನಕಟ್ಟೆ ಗ್ರಾಮದ ಸದಸ್ಯ ಮಲ್ಲೇಶ್ ನನ್ನ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾದವರು. ಸ್ವತಂತ್ರ ಅಭ್ಯರ್ಥಿಯಾಗಿ ಗ್ರಾಮಪಂಚಾಯಿತಿ ಚುನಾವಣೆಯಲ್ಲಿ ಜಯಗಳಿಸಿದ್ದಾರೆ. ಅವರು ನನ್ನನ್ನು ಹಬ್ಬಕ್ಕೆ ಆಹ್ವಾನಿಸಿದ್ದರು. ಗ್ರಾಮದಲ್ಲಿ ಶೇ 80 ನನ್ನ ಬೆಂಬಲಿಗರಿದ್ದಾರೆ. ಹಬ್ಬಕ್ಕೆ ಹೋಗಿ ₹20 ಸಾವಿರ ಕಾಣಿಕೆಯನ್ನು ಸಲ್ಲಿಸಿದ್ದೇನೆ. ಆದರೆ ನನ್ನನ್ನು ಹಬ್ಬಕ್ಕೆ ಆಹ್ವಾನಿಸಿದ್ದಕ್ಕಾಗಿ ಮತ್ತೊಂದು ಗುಂಪು ನನ್ನ ಬೆಂಬಲಿಗರೊಂದಿಗೆ ಗಲಾಟೆ ಮಾಡಿದ್ದಾರೆ. ಇಲ್ಲಿ ಯಾರನ್ನೂ ಕಡೆಗಣಿಸುವ ಪ್ರಶ್ನೆ ಇಲ್ಲ. ಎಲ್ಲರೂ ನಮ್ಮವರೇ’ ಎಂದು ಬಿಜೆಪಿ ಮುಖಂಡ, ಜನಾಶ್ರಯ ಟ್ರಸ್ಟ್‌ನ ಬಿ. ವೆಂಕಟೇಶ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಪರಿಮಳಾ ನಾಗಪ್ಪ ಅವರು ಪ್ರತಿಕ್ರಿಯಿಸಿ, ‘ಮಹಾಲಿಂಗನಕಟ್ಟೆ ಗ್ರಾಮದಲ್ಲಿ ಎರಡು ಗುಂಪಿನವರು ಗಲಾಟೆ ಮಾಡಿಕೊಂಡಿರುವ ವಿಷಯ ಗಮನಕ್ಕೆ ಬಂದಿದೆ. ಗ್ರಾಮದಲ್ಲಿ ನಡೆಯುವ ಹಬ್ಬಕ್ಕೆ ರಾಜಕೀಯ ನಾಯಕರನ್ನು ಆಹ್ವಾನಿಸಿದಂತೆ ಸೂಚಿಸಲಾಗಿತ್ತಂತೆ. ಇದನ್ನು ಮೀರಿ ಕೆಲವರು ವೆಂಕಟೇಶ್ ಅವರನ್ನು ಹಬ್ಬಕ್ಕೆ ಕರೆದಿದ್ದಾರೆ. ಈ ವಿಷಯಕ್ಕೆ ಎರಡು ಗುಂಪಿನ ನಡುವೆ ಹೊಡೆದಾಟವಾಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನು ಸರಿಪಡಿಸುವ ಪ್ರಯತ್ನ ಮಾಡಲಾಗುವುದು’ ಎಂದರು.

***

ಮಹಾಲಿಂಗನಕಟ್ಟೆ ಗ್ರಾಮದಲ್ಲಿ ನಡೆದ ಘರ್ಷಣೆಯಿಂದ ಪಕ್ಷಕ್ಕೆ ಯಾವುದೇ ಹಾನಿಯಿಲ್ಲ. ಕಾರ್ಯಕರ್ತರು ಗೊಂದಲಕ್ಕೀಡಾಗಬಾರದು.

- ಪರಿಮಳಾ ನಾಗಪ್ಪ, ಬಿಜೆಪಿ ನಾಯಕಿ

****

ಪ್ರಜಾಪ್ರಭುತ್ವ ವ್ಯವಸ್ಥೆ ಗ್ರಾಮದಲ್ಲಿ ನಡೆಯುವ ಹಬ್ಬಕ್ಕೆ ಹೋಗಬಹುದು. ನಾನು ಹೋಗಿ ಕಾಣಿಕೆ ಸಲ್ಲಿಸಿದ್ದನ್ನು ಕೆಲವರು ಆಕ್ಷೇಪಿಸಿದ್ದಾರೆ

- ಬಿ. ವೆಂಕಟೇಶ್, ಬಿಜೆಪಿ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT