ಸೋಮವಾರ, ಆಗಸ್ಟ್ 8, 2022
24 °C
ಅನಾಥ ಮಕ್ಕಳಿಗೆ ಸರ್ಕಾರದ ಎಲ್ಲ ಸೌಲಭ್ಯ

ಮಕ್ಕಳಿಗಾಗಿ ತಾಲ್ಲೂಕಿನಲ್ಲಿ ಕೋವಿಡ್‌ ಕೇರ್‌ ಕೇಂದ್ರ: ಸಚಿವೆ ಶಶಿಕಲಾ ಜೊಲ್ಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಸಂಭಾವ್ಯ ಕೋವಿಡ್‌ 3ನೇ ಅಲೆ ಮಕ್ಕಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಪರಿಸ್ಥಿತಿಯನ್ನು ಎದುರಿಸುವುದಕ್ಕಾಗಿ ಜಿಲ್ಲೆಯ ನಾಲ್ಕು ತಾಲ್ಲೂಕು ಕೇಂದ್ರಗಳಲ್ಲಿ ಮಕ್ಕಳಿಗಾಗಿಯೇ ಪ್ರತ್ಯೇಕ ಕೋವಿಡ್‌ ಕೇರ್‌ ಕೇಂದ್ರಗಳನ್ನು ತೆರೆಯಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ, ಅಂಗವಿಕಲರ, ಹಿರಿಯ ನಾಗರಿಕರ ಸಬಲೀಕರಣ ಸಚಿವೆ ಶಶಿಕಲಾ ಜೊಲ್ಲೆ ಅವರು ಶನಿವಾರ ಹೇಳಿದರು. 

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಾಲ್ಕು ತಾಲ್ಲೂಕುಗಳಲ್ಲಿ ಈಗಾಗಲೇ ಕೋವಿಡ್‌ ಕೇರ್‌ ಕೇಂದ್ರಕ್ಕಾಗಿ ವಸತಿ ಶಾಲೆಗಳನ್ನು ಗುರುತಿಸಲಾಗಿದೆ. ಮಕ್ಕಳಿಗೆ ಕೋವಿಡ್‌ ಇರುವುದು ದೃಢಪಟ್ಟ ಸಂದರ್ಭದಲ್ಲಿ ಅವರನ್ನು ಈ ಕೋವಿಡ್‌ ಕೇರ್‌ ಕೇಂದ್ರಗಳಲ್ಲಿ ಇರಿಸಲಾಗುವುದು. ಅವರ ಆರೈಕೆ ಮಾಡಲು ತಾಯಿಗೂ ವ್ಯವಸ್ಥೆ ಮಾಡಲಾಗುವುದು. ಬಾಲಕರಿಗೆ ಹಾಗೂ ಬಾಲಕಿಯರಿಗೆ ಪ್ರತ್ಯೇಕ ವಿಭಾಗ ಮಾಡಲಾಗುವುದು’ ಎಂದು ಹೇಳಿದರು. 

ಪ್ರತ್ಯೇಕ ವಾರ್ಡ್‌: ‘ಕೋವಿಡ್‌ನಿಂದ ತೀವ್ರ ಅನಾರೋಗ್ಯಕ್ಕೆ ಒಳಗಾಗುವ ಮಕ್ಕಳಿಗೆ ಚಿಕಿತ್ಸೆ ನೀಡಲು ಸಮುದಾಯ ಕೇಂದ್ರಗಳು, ತಾಲ್ಲೂಕು ಆಸ್ಪತ್ರೆಗಳು, ಜಿಲ್ಲಾಸ್ಪತ್ರೆಗಳಲ್ಲಿ ಪ್ರತ್ಯೇಕ ವಾರ್ಡ್‌ ಮೀಸಲಿಡಲಾಗುವುದು. ತಾಲ್ಲೂಕು ಆಸ್ಪತ್ರೆಗಳಲ್ಲಿ 10 ಹಾಸಿಗೆಗಳನ್ನು ಇದೇ ಉದ್ದೇಶಕ್ಕೆ ಮೀಸಲಿಡಲಾಗುವುದು. ಚಾಮರಾಜನಗರದಲ್ಲಿ 100 ಹಾಸಿಗೆಗಳ ವ್ಯವಸ್ಥೆ ಮಾಡಲಾಗುವುದು. 50 ಹಾಸಿಗೆಗಳು ಈಗಾಗಲೇ ಲಭ್ಯವಿವೆ. ಇನ್ನೂ 50 ಹಾಸಿಗೆಗಳನ್ನು ಸೇರಿಸಲಾಗುವುದು. ಆಸ್ಪತ್ರೆಗೆ ಬೇಕಾದ ವೆಂಟಿಲೇಟರ್‌, ಉಪಕರಣಗಳು, ಚಿಕಿತ್ಸೆಗೆ ಬೇಕಾದ ಔಷಧಗಳು ಎಲ್ಲವನ್ನೂ ಸರ್ಕಾರ ಪೂರೈಸಲಿದೆ’ ಎಂದು ಅವರು ವಿವರಿಸಿದರು.

ಅಪೌಷ್ಟಿಕ ಮಕ್ಕಳಿಗೆ ಆಹಾರ ಕಿಟ್‌: ‘ಅಪೌಷ್ಟಿಕ ಮಕ್ಕಳ ಮೇಲೂ ಗಮನ ನೀಡಲಾಗುತ್ತಿದೆ. ಎರಡು ಮೂರು ತಿಂಗಳ ಕಾಲ ಅವರಿಗೆ ಪೌಷ್ಟಿಕ ಆಹಾರ ಕೊಡಲಾಗುವುದು. ಜಿಲ್ಲೆಯಲ್ಲಿ 5,412 ಮಕ್ಕಳು ತೀವ್ರ ಹಾಗೂ ಮಧ್ಯಮ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಈ ‌ಪೈಕಿ 81 ಮಕ್ಕಳು ತೀವ್ರ ಅಪೌಷ್ಟಿಕತೆ ಸಮಸ್ಯೆ ಎದುರಿಸುತ್ತಿದ್ದಾರೆ. ಇವರಿಗೆಲ್ಲ ಆಹಾರ ಕಿಟ್‌ ನೀಡಲಾಗುವುದು’ ಎಂದು ಶಶಿಕಲಾ ಜೊಲ್ಲೆ ಹೇಳಿದರು. 

ಐವರು ಕಾರ್ಯಕರ್ತೆಯರ ಸಾವು: ‘ಕೋವಿಡ್‌ ಸಂದರ್ಭದಲ್ಲಿ ಮುಂಚೂಣಿಯಲ್ಲಿ ನಿಂತು ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿ ಕಾರ್ಯಕರ್ತರ ಪೈಕಿ ಕಳೆದ ವರ್ಷ ಇಬ್ಬರು ಹಾಗೂ ಈ ವರ್ಷ ಮೂವರು ಕೋವಿಡ್‌ನಿಂದ ಮೃತಪಟ್ಟಿದ್ದಾರೆ. ಇಬ್ಬರಿಗೂ ಈಗಾಗಲೇ ₹30 ಲಕ್ಷ ಪರಿಹಾರ ನೀಡಲಾಗಿದ್ದು, ಉಳಿದ ಮೂವರಿಗೂ ಸಿಗಲಿದೆ’ ಎಂದರು.  

‘ಜಿಲ್ಲೆಯಲ್ಲಿ 15 ಮಕ್ಕಳ ತಜ್ಞರು ಇದ್ದಾರೆ. ಕೋವಿಡ್‌ ಮೂರನೇ ಅಲೆಯಲ್ಲಿ ಮಕ್ಕಳ ಮೇಲೆ ಪರಿಣಾಮ ಬೀರಿದರೆ ಹೆಚ್ಚಿನ ವೈದ್ಯರ ಅಗತ್ಯ ಬೀಳಬಹುದು. ಖಾಸಗಿ ವೈದ್ಯರು ಕೂಡ ಸರ್ಕಾರದೊಂದಿಗೆ ಸಹಕರಿಸುತ್ತಿದ್ದಾರೆ. ಅಗತ್ಯ ತಜ್ಞರನ್ನು ನಿಯೋಜಿಸಲು ಸರ್ಕಾರ ಕ್ರಮ ಕೈಗೊಳ್ಳಲಿದೆ’ ಎಂದರು. 

ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಆರ್‌.ನರೇಂದ್ರ, ಎನ್‌.ಮಹೇಶ್‌, ಮುಡಾ ಅಧ್ಯಕ್ಷ ರಾಜೀವ್‌, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್‌ ಭೊಯರ್‌ ನಾರಾಯಣರಾವ್‌, ಹೆಚ್ಚುವರಿ ಜಿಲ್ಲಾಧಿಕಾರಿ ಕಾತ್ಯಾಯಿನಿ ದೇವಿ ಇದ್ದರು. 

‘ಮಕ್ಕಳ ಜೊತೆ ಸರ್ಕಾರ ಇದೆ’

ಕೋವಿಡ್‌ನಿಂದಾಗಿ ರಾಜ್ಯದಲ್ಲಿ 45 ಮಕ್ಕಳು ತಂದೆ ತಾಯಿಯನ್ನು ಕಳೆದು ಕೊಂಡು ಅನಾಥರಾಗಿದ್ದಾರೆ. ಜಿಲ್ಲೆಯಲ್ಲಿ ಕೊತ್ತಲವಾಡಿಯ ಒಂದು ಮಗು ಅನಾಥವಾಗಿದೆ. ರಾಜ್ಯದಾದ್ಯಂತ 947 ಮಕ್ಕಳು ತಂದೆ ಇಲ್ಲವೇ ತಾಯಿಯನ್ನು ಕಳೆದುಕೊಂಡಿದ್ದಾರೆ. ಜಿಲ್ಲೆಯಲ್ಲಿ 32 ಮಕ್ಕಳು ಈ ಸ್ಥಿತಿಯನ್ನು ಎದುರಿಸಿದ್ದಾರೆ ಎಂದು ಶಶಿಕಲಾ ಜೊಲ್ಲೆ ಅವರು ಹೇಳಿದರು. 

‘ತಂದೆ ತಾಯಿ ಕಳೆದುಕೊಂಡು ಅನಾಥವಾದ ಮಕ್ಕಳನ್ನು ಖುದ್ದಾಗಿ ಭೇಟಿ ಮಾಡುತ್ತಿದ್ದೇನೆ. ಈ ಹಿಂದೆ ವಿಡಿಯೊ ಕಾನ್ಫರೆನ್ಸ್‌ ಮೂಲಕವೂ ಮಾತನಾಡಿದ್ದೇನೆ. ಅವರ ಪಾಲಕರನ್ನು ಭೇಟಿ ಮಾಡಿ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದೇನೆ. ಈ ಮಕ್ಕಳ ಜೊತೆ ಸರ್ಕಾರ ಇದೆ. ಅವರಿಗೆ ಅಗತ್ಯವಿರುವ ಸೌಲಭ್ಯಗಳನ್ನು ಇಲಾಖೆ ಕಲ್ಪಿಸಲಿದೆ’ ಎಂದರು. 

‘ಇದೇ ಉದ್ದೇಶಕ್ಕೆ ಮುಖ್ಯಮಂತ್ರಿ ಬಾಲ ಸೇವಾ ಯೋಜನೆ ಜಾರಿಗೆ ತರಲಾಗಿದೆ. ಮಕ್ಕಳ ಖಾತೆಗೆ ಪ್ರತಿ ತಿಂಗಳು ₹3,500 ಜಮೆ ಮಾಡಲಾಗುವುದು. ಉಚಿತ ಶಿಕ್ಷಣದ ವ್ಯವಸ್ಥೆ ಕಲ್ಪಿಸಲಾಗುವುದು. ಎಸ್ಸೆಸ್ಸೆಲ್ಸಿ ನಂತರ ಉನ್ನತ ವ್ಯಾಸಂಗಕ್ಕೆ ಉಚಿತ ಲ್ಯಾಪ್‌ಟಾಪ್‌ ನೀಡಲಾಗುವುದು. ಹೆಣ್ಣು ಮಕ್ಕಳಾಗಿದ್ದರೆ, 21ನೇ ವರ್ಷಕ್ಕೆ ₹ 1ಲಕ್ಷ ನೆರವು ನೀಡಲಾಗುವುದು’ ಎಂದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು