ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದತ್ತೂರಿ ಕಾಯಿ, ಬೇವಿನಸೊಪ್ಪಿನ ಕುಚ್ಚಿಗೆ ₹70

ಕೊರೊನಾ ತಡೆಗಾಗಿ ಮೌಢ್ಯಾಚರಣೆಗೆ ಮುಂದಾದ ಜನರು
Last Updated 5 ಏಪ್ರಿಲ್ 2020, 18:10 IST
ಅಕ್ಷರ ಗಾತ್ರ

ಯಳಂದೂರು: ದತ್ತೂರಿಕಾಯಿ (ಮುಳ್ಳುಕಾಯಿ), ಬೇವಿನಸೊಪ್ಪು ಹಾಗೂ ಒಣಮೆಣಸಿನ ಕಾಯಿಯ ಕುಚ್ಚನ್ನು ಮನೆ ಬಾಗಿಲಿಗೆ ಕಟ್ಟಿದರೆ ಕೊರೊನಾ ಸೋಂಕು ತಗಲುವುದಿಲ್ಲ ಎಂಬ ನಂಬಿಕೆ ಗ್ರಾಮೀಣ ಭಾಗದಲ್ಲಿ ಹೆಚ್ಚಾಗುತ್ತಿದೆ. ಜನರ ಭೀತಿಯನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವರು, ದತ್ತೂರಿ ಕಾಯಿ, ಬೇವಿನಸೊಪ್ಪಿನ ಕುಚ್ಚನ್ನು ₹70ಕ್ಕೆ ಮಾರಾಟ ಮಾಡುತ್ತಿದ್ದಾರೆ.

ದೇವರ ಮುಂದಿಟ್ಟು ಪೂಜಿಸಿರುವ ಕುಚ್ಚನ್ನು ಕಟ್ಟಿದರೆ ಮಾತ್ರ ಸೋಂಕು ತಗಲುವುದಿಲ್ಲವೆಂದು ಕೆಲವರು ಜನರನ್ನು ನಂಬಿಸುತ್ತಿದ್ದಾರೆ. ಇಂತಹ ಕುಚ್ಚನ್ನೇ ಕಟ್ಟುವಂತೆ ಸೂಚಿಸುತ್ತಿದ್ದಾರೆ. ಇದರಿಂದ ಜನರು ಹಣ ಕೊಟ್ಟು ದತ್ತೂರಿ ಕಾಯಿಯ ಕುಚ್ಚನ್ನು ಖರೀದಿಸುತ್ತಿದ್ದಾರೆ.

ತಾಲ್ಲೂಕಿನ ಯರಿಯೂರು, ಅಗರ–ಮಾಂಬಳ್ಳಿ, ಗೂಳಿಪುರ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಈ ಆಚರಣೆ ಇದೆ. ಜನರು ದತ್ತೂರಿ ಕಾಯಿಗಳಿಗಾಗಿ ರಸ್ತೆ ಬದಿ, ಪಾಳು ಬಿದ್ದ ಭೂಮಿ, ಪೊದೆಗಳ ಕಡೆಗೆ ಮುಖ ಮಾಡಿದ್ದಾರೆ.

‘ದತ್ತೂರಿಕಾಯಿ, ಬೇವಿನಸೊಪ್ಪು ಹಾಗೂ ಒಣಮೆಣಸಿನ ಕಾಯಿಯನ್ನು ಬಾಗಿಲಿಗೆ ಕಟ್ಟಿ, ಅರಿಸಿನ, ಕುಂಕುಮ ಇಟ್ಟು ಪೂಜೆ ಸಲ್ಲಿಸಿ, ಪೊರಕೆಯಿಂದ ಮೂರು ಸಲ ಕುಚ್ಚನ್ನು ಬಡಿಯಬೇಕು. ಇದರಿಂದ ಯಾವ ಸೋಂಕೂ ತಗಲುವುದಿಲ್ಲ’ ಎಂದು ಗೂಳಿಪುರ ಗ್ರಾಮದ ರಾಜಮ್ಮ ಹೇಳಿದರು.

‘ದತ್ತೂರಿ ಗಿಡವನ್ನು ಹುಡುಕಿ ಅದರ ಕಾಯಿಯನ್ನು ತಂದು ಬಾಗಿಲಿಗೆ ಕಟ್ಟಿದೆವು’ ಎಂದು ಮುಡಿಗುಂಡ ಮಾದಪ್ಪ ತಿಳಿಸಿದರು.

ಕೊರೊನಾ ವೈರಸ್‌ಗೂ ದತ್ತೂರಿ ಕಾಯಿಗೂ ಯಾವುದೇ ಸಂಬಂಧವಿಲ್ಲ. ಆದರೆ, ಈ ಕಾಯಿ ನೋಡಲು ಕೊರೊನಾ ವೈರಸ್‌ ಚಿತ್ರದ ಮಾದರಿಯಲ್ಲಿದೆ. ಈ ಕಾಯಿಯನ್ನು ಬಾಗಿಲಿಗೆ ಕಟ್ಟುವುದರಿಂದ ಸೋಂಕು ತಗಲುವುದಿಲ್ಲ ಎಂಬುದು ಮೌಢ್ಯದ ಪರಮಾವಧಿ ಎಂದು ಸಸ್ಯತಜ್ಞ ಬಿಆರ್‌ಟಿ ರಾಮಾಚಾರಿ ಪ್ರತಿಕ್ರಿಯಿಸಿದರು.

ಇದು ಮೂಢನಂಬಿಕೆಯ ಪರಮಾವಧಿ. ಜನರು ಸ್ವಚ್ಛತೆ ಮತ್ತು ಸಾಮಾಜಿಕ ಅಂತರ ಕಾಯ್ದುಳ್ಳುವುದರಿಂದ ಮಾತ್ರ ಸೋಂಕು ಹರಡದಂತೆ ತಡೆಗಟ್ಟಬಹುದು ಎಂದು ಶಿಕ್ಷಕ ಮಹದೇವ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT