ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಇ–ವಾಹನಕ್ಕಿದೆ ಬೇಡಿಕೆ, ಚಾರ್ಜಿಂ‌ಗ್‌ ಕೇಂದ್ರಗಳೇ ಇಲ್ಲ

ಎರಡು ವರ್ಷಗಳಿಂದ ವಾಹನಗಳ ಮಾರಾಟ, ನೋಂದಣಿ ಹೆಚ್ಚಳ, ದ್ವಿಚಕ್ರವಾಹನಗಳ ಸಿಂಹಪಾಲು
Last Updated 13 ಫೆಬ್ರುವರಿ 2023, 7:12 IST
ಅಕ್ಷರ ಗಾತ್ರ

ಚಾಮರಾಜನಗರ: ಪರಿಸರ ಸ್ನೇಹಿ ವಿದ್ಯುತ್‌ ಚಾಲಿತ ವಾಹನಗಳ ಬಳಕೆಗೆ ಕೇಂದ್ರ ಸರ್ಕಾರ ಪ್ರೋತ್ಸಾಹ ನೀಡಲು ಆರಂಭಿಸಿದ ನಂತರ ಜಿಲ್ಲೆಯಲ್ಲೂ ಇ–ವಾಹನಗಳ ಖರೀದಿ ಹೆಚ್ಚಾಗಿದೆ. ವರ್ಷದಿಂದ ವರ್ಷಕ್ಕೆ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಇ–ವಾಹನಗಳ ನೋಂದಣಿ ಸಂಖ್ಯೆ ಜಾಸ್ತಿಯಾಗುತ್ತಿದೆ. ಆದರೆ, ಜಿಲ್ಲೆಯಲ್ಲಿ ಎಲ್ಲೂ ಚಾರ್ಜಿಂಗ್‌ ಕೇಂದ್ರಗಳು ಇಲ್ಲದಿರುವುದರಿಂದ ಇ–ವಾಹನಗಳ ಬಗ್ಗೆ ಆಸಕ್ತಿ ಹೊಂದಿರುವವರು ಕೂಡ ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ.

ಜಿಲ್ಲೆಯಲ್ಲಿ ಇ–ಸ್ಕೂಟರ್‌ಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಆರ್‌ಟಿಒ ಅಂಕಿ ಅಂಶಗಳ ಪ್ರಕಾರ, ಮೂರು ವರ್ಷಗಳಲ್ಲಿ ಜಿಲ್ಲೆಯಲ್ಲಿ 518 ಇ–ವಾಹನಗಳು ನೋಂದಣಿಯಾಗಿವೆ. ಈ ಪೈಕಿ 512 ದ್ವಿಚಕ್ರವಾಹನಗಳು, ಐದು ಕಾರುಗಳು ಮತ್ತು ಒಂದು ಆಟೊ/ಗೂಡ್ಸ್‌. 2020–21ರಲ್ಲಿ 48 ಸ್ಕೂಟರ್‌, ಒಂದು ಕಾರು, 2021–22ರಲ್ಲಿ 219 ಸ್ಕೂಟರ್‌, ಒಂದು ಆಟೊ ಹಾಗೂ 2022–23ರಲ್ಲಿ ಈವರೆಗೆ 245 ಸ್ಕೂಟರ್‌ಗಳು ಮತ್ತು ನಾಲ್ಕು ಕಾರುಗಳು.

ಪ್ರತಿ ಗಂಟೆಗೆ 25 ಕಿ.ಮೀಗಿಂತಲೂ ಕಡಿಮೆ ವೇಗದಲ್ಲಿ ಓಡುವ ಹಾಗೂ ಕಡಿಮೆ ಬ್ಯಾಟರಿ ಸಾಮರ್ಥ್ಯವಿರುವ ದ್ವಿಚಕ್ರವಾಹನಗಳನ್ನು ನೋಂದಣಿ ಮಾಡುವ ಅವಶ್ಯಕತೆ ಇಲ್ಲ. ನಗರ, ಪಟ್ಟಣ ಪ್ರದೇಶದಲ್ಲಿ ನೋಂದಣಿಯಾಗದ ಕೆಲವು ಸ್ಕೂಟರ್‌ಗಳೂ ಓಡಾಡುತ್ತಿವೆ. ಇವುಗಳ ಲೆಕ್ಕ ಆರ್‌ಟಿಒ ಬಳಿ ಲಭ್ಯವಿಲ್ಲ.

ವಿದ್ಯುತ್‌ ಚಾಲಿತ ಕಾರುಗಳು ದುಬಾರಿಯಾದರೂ, ಇ–ಸ್ಕೂಟರ್‌ಗಳು ಪೆಟ್ರೋಲ್‌ ದ್ವಿಚಕ್ರವಾಹನಗಳಷ್ಟೇ ಹಾಗೂ ಅದಕ್ಕಿಂತಲೂ ಕಡಿಮೆ ಬೆಲೆಯಲ್ಲಿ ಸಿಗುತ್ತಿವೆ. ಹಾಗಾಗಿ, ಗ್ರಾಹಕರು ಇ–ಸ್ಕೂಟರ್‌ಗಳನ್ನು ಖರೀದಿಸಲು ಒಲವು ತೋರಿಸುತ್ತಿದ್ದಾರೆ.

ಪ್ರತಿಷ್ಠಿತ ದ್ವಿಚಕ್ರ ವಾಹನ ಕಂಪನಿಗಳ ಇ–ಸ್ಕೂಟರ್‌/ಬೈಕ್‌ ಶೋರೂಂಗಳು ಜಿಲ್ಲೆಯಲ್ಲಿ ಇಲ್ಲದಿದ್ದರೂ, ಹೆಚ್ಚು ಪ್ರಚಲಿತದಲ್ಲಿದ್ದ ಕಂಪನಿಗಳು ತಯಾರಿಸುವ ಇ–ಸ್ಕೂಟರ್‌ಗಳ ಮಳಿಗೆಗಳು ಜಿಲ್ಲೆಯಲ್ಲಿವೆ. ಚಾಮರಾಜನಗರದಲ್ಲೇ ಮೂರು ಮಳಿಗೆಗಳು ಇವೆ. ಗ್ರಾಹಕರು ಇಲ್ಲಿಗೆ ತೆರಳಿ ಸ್ಕೂಟರ್‌ಗಳ ಬಗ್ಗೆ ವಿಚಾರಿಸುತ್ತಿದ್ದಾರೆ. ಇವರಲ್ಲಿ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕೆಲವು ಗ್ರಾಹಕರು ಮೈಸೂರಿನಿಂದಲೂ ಇ–ಸ್ಕೂಟರ್‌ಗಳನ್ನು ಖರೀದಿಸುತ್ತಿದ್ದಾರೆ.

ಚಾರ್ಜಿಂಗ್‌ ಕೇಂದ್ರಗಳಿಲ್ಲ: ಇ–ಕಾರುಗಳು ಸಾಮಾನ್ಯ ಕಾರುಗಳಿಗಿಂತ ಹೆಚ್ಚು ದುಬಾರಿಯಾಗಿರುವುದರಿಂದ ಜನರು ಅವುಗಳ ಖರೀದಿಗೆ ಮುಂದಾಗುತ್ತಿಲ್ಲ. ಜಿಲ್ಲೆಯಲ್ಲಿ ಚಾರ್ಜಿಂಗ್‌ ಕೇಂದ್ರಗಳು ಇಲ್ಲದಿರುವುದರಿಂದ ದುಡ್ಡು ಇರುವವರು ಕೂಡ ವಿದ್ಯುತ್‌ ಚಾಲಿತ ಕಾರುಗಳನ್ನು ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ.

‘ಜಿಲ್ಲಾ ಕೇಂದ್ರ ಸೇರಿದಂತೆ ಜಿಲ್ಲೆಯಲ್ಲೂ ಎಲ್ಲೂ ಸಾರ್ವಜನಿಕವಾಗಿ ಚಾರ್ಜಿಂಗ್‌ ಕೇಂದ್ರಗಳಿಲ್ಲ. ಎಲ್ಲರೂ ತಮ್ಮ ಮನೆಗಳಲ್ಲೇ ಕಾರು, ಇ–ಸ್ಕೂಟರ್‌ ಬ್ಯಾಟರಿ ಚಾರ್ಜ್‌ ಮಾಡಬೇಕಾಗಿದೆ. ದ್ವಿಚಕ್ರವಾಹನಗಳಿಗಾದರೂ ಅಷ್ಟು ಸಮಸ್ಯೆಯಾಗುವುದಿಲ್ಲ. ಆದರೆ, ಕಾರುಗಳಿಗೆ ಚಾರ್ಜಿಂಗ್‌ ವ್ಯವಸ್ಥೆ ಬೇಕೇಬೇಕು. ಇಲ್ಲದಿದ್ದರೆ ತುಂಬಾ ಕಷ್ಟವಾಗುತ್ತದೆ’ ಎಂದು ಚಾಮರಾಜನಗರದ ಇ–ಸ್ಕೂಟರ್‌ ಮಾರಾಟ ಪ್ರತಿನಿಧಿ ಹರೀಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಸರ್ಕಾರಿ–ಖಾಸಗಿ ಸಹಭಾಗಿತ್ವದಲ್ಲಿ ಚಾರ್ಜಿಂಗ್‌ ಕೇಂದ್ರಗಳನ್ನು ಆರಂಭಿಸಲಾಗುವುದು ಎಂದು ರಾಜ್ಯ ಸರ್ಕಾರ ಎರಡು ವರ್ಷಗಳ ಹಿಂದೆ ಹೇಳಿತ್ತು. ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮದ ಮಾಹಿತಿ ಪ್ರಕಾರ ಜಿಲ್ಲೆಗೆ 20 ಚಾರ್ಜಿಂಗ್‌ ಕೇಂದ್ರಗಳನ್ನು ಹಂಚಿಕೆ ಮಾಡಲಾಗಿದೆ. 16 ಜಾಗಗಳನ್ನು ಗುರುತಿಸಲಾಗಿದೆ. ಈ ಪೈಕಿ ನಾಲ್ಕು ಕೇಂದ್ರಗಳನ್ನು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಹಾಗೂ 12 ಕೇಂದ್ರಗಳನ್ನು ಉಳಿದ ಕಡೆಗಳಲ್ಲಿ ಗುರುತಿಸಲಾಗಿದೆ. ಇವುಗಳ ಪೈಕಿ ಆರು ಕೇಂದ್ರಗಳು ಸೆಸ್ಕ್‌ಗೆ ಸೇರಿದ ಜಾಗ ಹಾಗೂ ಉಳಿದ 10 ಸ್ಥಳಗಳು ಸರ್ಕಾರದ ವಿವಿಧ ಇಲಾಖೆಗಳಿಗೆ ಸೇರಿದ್ದಾಗಿವೆ. ಆದರೆ ಈವರೆಗೆ ಎಲ್ಲೂ ಚಾರ್ಜಿಂಗ್‌ ಕೇಂದ್ರಗಳು ಆರಂಭವಾಗಿಲ್ಲ.

ಚಾರ್ಜಿಂಗ್‌ ಕೇಂದ್ರಗಳು ಆರಂಭವಾದರೆ ಇ–ವಾಹನಗಳ ಬಳಕೆ ಇನ್ನಷ್ಟು ಹೆಚ್ಚಲಿದೆ ಎಂಬುದು ಇ–ವಾಹನಗಳ ಮಾರಾಟಗಾರರು ಹಾಗೂ ಬಳಕೆದಾರರ ಅಭಿಪ್ರಾಯ.

ಬಳಕೆದಾರರು ಏನಂತಾರೆ?

ಚಾರ್ಜಿಂಗ್‌ ಕೇಂದ್ರ ಬೇಕು

ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಚಾರ್ಜಿಂಗ್ ಕೇಂದ್ರಗಳಿಲ್ಲ. ಒಮ್ಮೆ ಮೂರೂವರೆ ಗಂಟೆಗಳ ಕಾಲ ಚಾರ್ಜ್‌ ಮಾಡಿದರೆ 80 ಕಿ.ಮೀವರೆಗೆ ಚಾಲನೆ ಮಾಡಬಹುದು. ದೂರದ ಪ್ರಯಾಣಕ್ಕೆ ಇ–ವಾಹನ ಸೂಕ್ತವಲ್ಲ. ಆದರೆ, ಇದರಿಂದ ಇಂಧನ ಉಳಿತಾಯ, ಹಣ ಉಳಿಕೆಯಾಗುತ್ತದೆ

–ವೃಷಬೇಂದ್ರ, ಗುಂಡ್ಲುಪೇಟೆ

ಶೀಘ್ರ ವ್ಯವಸ್ಥೆ ಮಾಡಿ

ವಿದ್ಯುತ್ ಚಾಲಿತ ದ್ವಿಚಕ್ರವಾಹನಗಳು ಉತ್ತಮ ಮೈಲೇಜ್ ಕೊಡುತ್ತಿವೆ. ನಮ್ಮ ಕುಟುಂದಲ್ಲಿ ಏಳು ಇ–ಸ್ಕೂಟರ್‌ ಖರೀದಿಸಿದ್ದೇವೆ. ಪೆಟ್ರೋಲ್‌ಗೆ ಹೋಲಿಸಿದರೆ ಶೇಕಡ 70ರಷ್ಟು ಅನುಕೂಲವಾಗಿದೆ. ತಾಲ್ಲೂಕಿನಲ್ಲಿ, ಹೆದ್ದಾರಿಗಳಲ್ಲಿ ಚಾರ್ಜಿಂಗ್ ಕೇಂದ್ರಗಳಲ್ಲಿರುವುದು ದೊಡ್ಡ ಕೊರತೆ. ಸಾರ್ವಜನಿಕ ಸ್ಥಳಗಳಲ್ಲಿ ಬ್ಯಾಟರಿ ಚಾರ್ಜಿಂಗ್‌ ವ್ಯವಸ್ಥೆ ಶೀಘ್ರವಾಗಿ ಕಲ್ಪಿಸಬೇಕು.

–ಶಿವಶಂಕರ್, ಕೊಳ್ಳೇಗಾಲ

ತಾಂತ್ರಿಕತೆ ತಿಳಿದಿಲ್ಲ

ವರ್ಷದಿಂದ ಈಚೆಗೆ ವಿದ್ಯುತ್ ಚಾಲಿತ ವಾಹನಗಳು ರಿಪೇರಿಗೆ ಬಂದಿಲ್ಲ. ಅವುಗಳ ವಿನ್ಯಾಸ ಹಾಗೂ ತಾಂತ್ರಿಕತೆ ಬಗ್ಗೆ ಸಾಂಪ್ರದಾಯಿಕ ದ್ವಿಚಕ್ರ ವಾಹನಗಳ ಮೆಕಾನಿಕ್‌ಗಳಿಗೆ ತಿಳಿದಿಲ್ಲ. ಗ್ರಾಮೀಣ ಪ್ರದೇಶದ ಏರು ರಸ್ತೆ ತಗ್ಗುಗಳಲ್ಲಿ ಇ–ಸ್ಕೂಟರ್‌ಗಳನ್ನು ಸಂಭಾಳಿಸುವುದು ಕಷ್ಟ. ವೇಗದ ಚಾಲನೆಗೆ ಸೂಕ್ತ ಅಲ್ಲ.

–ಶಕೀಲ್, ಮೆಕ್ಯಾನಿಕ್, ಯಳಂದೂರು

ಈಡೇರದ ಭರವಸೆ

ಇ–ವಾಹನಗಳ ಬಳಕೆಯಿಂದ ಹಣದ ಹೊರೆ ತಗ್ಗುತ್ತದೆ. ಎರಡು ವರ್ಷಗಳಿಂದ ಇವುಗಳ ಬಳಕೆ ಹೆಚ್ಚಾಗಿದೆ. ಸರ್ಕಾರವೂ ಚಾರ್ಜಿಂಗ್‌ ಕೇಂದ್ರ ತೆರೆಯುವುದಾಗಿ ಹೇಳಿತ್ತು. ಆದರೆ, ಕೇಂದ್ರಗಳು ಆರಂಭವಾಗಿಲ್ಲ. ಇದರಿಂದಾಗಿ ಸ್ಕೂಟರ್‌ಗಳನ್ನು ದೂರ ತೆಗೆದುಕೊಂಡು ಹೋಗುವುದಕ್ಕೆ ಸಾಧ್ಯವಿಲ್ಲ.

–ರಾಜು, ಸಂತೇಮರಹಳ್ಳಿ

ಹತ್ತಿರದ ಪ್ರಯಾಣಕ್ಕೆ ಸೂಕ್ತ

ನಾಲ್ಕು ಗಂಟೆ ಚಾರ್ಜ್‌ ಮಾಡಿದರೆ 60 ಕಿ.ಮೀ ಓಡಿಸುಸಬಹುದು. ಇ–ಸ್ಕೂಟರ್‌ಗಳು ಮಹಿಳೆಯರಿಗೆ ಹೇಳಿ ಮಾಡಿಸಿದಂತಿದೆ. ಪದೇ ಪದೇ ಇಂಧನ ಹಾಕುವ ಸಮಸ್ಯೆ ನೀಗುತ್ತದೆ. ವರ್ಷದಿಂದ ವಾಹನ ರಿಪೇರಿಗೆ
ಬಂದಿಲ್ಲ. ಹತ್ತಿರದ ಪ್ರಯಾಣಕ್ಕೆ ಹೆಚ್ಚು ಸೂಕ್ತ.

ಮಾರಾಟಗಾರರು ಏನಂತಾರೆ?

ಬೇಡಿಕೆ ಹೆಚ್ಚುತ್ತಿದೆ

ನಾವು ಒಂದೂವರೆ ವರ್ಷದಲ್ಲಿ 200ಕ್ಕೂ ಹೆಚ್ಚು ಸ್ಕೂಟರ್‌ಗಳನ್ನು ಮಾರಾಟ ಮಾಡಿದ್ದೇವೆ. ಬೇಡಿಕೆಯೂ ಹೆಚ್ಚುತ್ತಿದೆ. ಸ್ಕೂಟರ್‌ಗಳನ್ನು ನೋಡಲು ಬರುವವರು ಚಾರ್ಜಿಂಗ್‌ ಕೇಂದ್ರಗಳ ಬಗ್ಗೆ ವಿಚಾರಿಸುತ್ತಾರೆ. ನಮ್ಮಲ್ಲಿ ಎಲ್ಲೂ ಚಾರ್ಜಿಂಗ್‌ ಕೇಂದ್ರಗಳಿಲ್ಲ. ಇ–ಸ್ಕೂಟರ್‌ಗಳು ಈಗ ಚೆನ್ನಾಗಿದ್ದು, ಉತ್ತಮ ಮೈಲೇಜ್‌ ಕೂಡ ಕೊಡುತ್ತಿವೆ. ಆದರೆ, ಕೆಲವರು ಅನಗತ್ಯವಾಗಿ ವದಂತಿಗಳನ್ನು ಹಬ್ಬಿಸುತ್ತಿದ್ದಾರೆ.

–ಹರೀಶ್‌, ಶ್ರೀಮಂಜುನಾಥ್‌ ಇಕೊ ಮೋಟಾರ್ಸ್‌ ಪ್ರತಿನಿಧಿ, ಚಾಮರಾಜನಗರ

ತಪ್ಪು ಅಭಿಪ್ರಾಯ

ಇ- ವಾಹನಗಳ ಬಗ್ಗೆ ಗ್ರಾಹಕರಿಗೆ ಇನ್ನು ತಿಳಿದಿಲ್ಲ. ಚಾರ್ಜಿಂಗ್ ಪಾಯಿಂಟ್, ನಿರ್ವಹಣೆ, ಬಿಸಿ ಆಗುವ ಭಯ, ಹೊತ್ತಿ ಉರಿಯುವ ಆತಂಕ, ಸಿಡಿಯುತ್ತದೆಂಬ ತಪ್ಪು ಕಲ್ಪನೆಗಳಿಂದ ವಾಹನ ಮಾರಾಟ ವೇಗ ಪಡೆದಿಲ್ಲ. ಮುಂದಿನ ಐದಾರು ವರ್ಷಗಳಲ್ಲಿ ಈ ವಾಹನಗಳಿಗೆ ಬೇಡಿಕೆ ಬರಬಹುದು. ವರ್ಷದಿಂದ ಈಚೆಗೆ ಪಟ್ಟಣದಲ್ಲಿ 20 ವಾಹನ ರಸ್ತೆಗೆ ಇಳಿದಿವೆ.

–ಚಂದ್ರಮೌಳಿ, ಇ–ವಾಹನ ಮಾರಾಟಗಾರ, ಯಳಂದೂರು

ಗ್ರಾಹಕರಲ್ಲಿ ಗೊಂದಲ

ಪರಿಸರ ಸ್ನೇಹಿ ವಾಹನಗಳಿಗೆ ತಾಲ್ಲೂಕು ಕೇಂದ್ರಗಳಲ್ಲಿ ಇಂಧನ ತುಂಬಿಸುವ ಕೇಂದ್ರಗಳಿಲ್ಲ. ಪ್ರತಿಷ್ಠಿತ ದ್ವಿಚಕ್ರವಾಹನಗಳ ಕಂಪನಿಗಳು ಕೂಡ ಇನ್ನೂ ಇ– ವಾಹನ ಬಿಡುಗಡೆ ಮಾಡಿಲ್ಲ. ಇದರಿಂದ ಕೊಳ್ಳುವವರಲ್ಲಿ ಗೊಂದಲ ಇದೆ.

–ಸಿ.ಎಸ್.ಶಿವಕುಮಾರ್, ದ್ವಿಚಕ್ರ ಶೋರೂಂ, ಮಾಲೀಕ ಚಾಮಲಾಪುರ ಯಳಂದೂರು ತಾಲೂಕು

–ಸುನೀತಾ. ಆರ್, ಮಲಾರ ಪಾಳ್ಯ, ಯಳಂದೂರು ತಾಲ್ಲೂಕು

ಜಿಲ್ಲೆಯಲ್ಲಿ ಎರಡು ವರ್ಷಗಳಿಂದ ಇ–ವಾಹನಗಳ ನೋಂದಣಿ ಜಾಸ್ತಿಯಾಗುತ್ತಿದೆ. ಇ–ಸ್ಕೂಟರ್‌ಗಳು ಹೆಚ್ಚಾಗಿ ನೋಂದಣಿಯಾಗುತ್ತಿವೆ
ಸುಧಾ ಮಣಿ, ಆರ್‌ಟಿಒ, ಚಾಮರಾಜನಗರ

–––

ಚಾಮರಾಜನಗರ ಉಪ ವಿಭಾಗದಲ್ಲಿ ಚಾರ್ಜಿಂಗ್‌ ಕೇಂದ್ರಗಳಿಗೆ 10 ಸ್ಥಳ ಗುರುತಿಸಿದ್ದೇವೆ. ಗುಂಡ್ಲುಪೇಟೆಯಲ್ಲಿ ಒಂದು ಕೇಂದ್ರ ಸ್ಥಾಪನೆಗೆ ಪ್ರಸ್ತಾವ ಬಂದಿದೆ
ವಸಂತಕುಮಾರ್‌, ಸೆಸ್ಕ್‌ ಕಾರ್ಯಪಾಲಕ ಎಂಜಿನಿಯರ್‌, ಚಾಮರಾಜನಗರ

––––

ನಿರ್ವಹಣೆ: ಸೂರ್ಯನಾರಾಯಣ ವಿ.

ಪೂರಕ ಮಾಹಿತಿ: ನಾ.ಮಂಜುನಾಥಸ್ವಾಮಿ, ಮಹದೇವ್‌ ಹೆಗ್ಗವಾಡಿಪುರ, ಅವಿನ್‌ ಪ್ರಕಾಶ್‌ ವಿ. ಮಲ್ಲೇಶ ಎಂ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT