ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಳಿದ ಪ್ರಕರಣ, ತಗ್ಗಿದ ಆಮ್ಲಜನಕ ಬೇಡಿಕೆ

ಆಮ್ಲಜನಕ ಸಾಂದ್ರಕಗಳಿಂದಲೂ ಅನುಕೂಲ: ಈಗ ದಿನಕ್ಕೆ 4000 ಲೀಟರ್‌ ಪ್ರಾಣವಾಯು ಬೇಕು
Last Updated 16 ಜೂನ್ 2021, 15:49 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯಲ್ಲಿ‌ ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಯುತ್ತಿರುವಂತೆಯೇ, ರೋಗಿಗಳ ಚಿಕಿತ್ಸೆಗಾಗಿ ಅಗತ್ಯವಿರುವ ವೈದ್ಯಕೀಯ ಆಮ್ಲಜನಕದ ಬೇಡಿಕೆಯ ಪ್ರಮಾಣವೂ ಕಡಿಮೆ‌ಯಾಗುತ್ತಿದೆ.

15 ದಿನಗಳಿಂದ ಆಮ್ಲಜನಕ‌ ಬೇಡಿಕೆ ಪ್ರಮಾಣ 2,500 ಲೀಟರ್‌ಗಳಷ್ಟು ಕಡಿಮೆಯಾಗಿದೆ.

'ಜಿಲ್ಲೆಯಲ್ಲಿ ‌ಕೋವಿಡ್ ಪ್ರಕರಣಗಳು ಹೆಚ್ಚಿದ್ದ ಸಂದರ್ಭದಲ್ಲಿ ಪ್ರತಿ ದಿನ 6,500 ಲೀಟರ್‌ಗಳಷ್ಟು ಆಮ್ಲಜನಕದ ಅಗತ್ಯವಿತ್ತು. ಈಗ ಅದು 4 ಸಾವಿರ ಲೀಟರ್‌ಗೆ ಇಳಿದಿದೆ' ಎಂದು ಆಮ್ಲಜನಕ ಪೂರೈಕೆ ನೋಡೆಲ್ ಅಧಿಕಾರಿ ವಿ.ಏಡುಕುಂಡಲು ಅವರು 'ಪ್ರಜಾವಾಣಿ'ಗೆ ತಿಳಿಸಿದರು.

'ಹತ್ತು ದಿನಗಳಿಂದ ಆಮ್ಲಜನಕದ ಬೇಡಿಕೆ ಹಂತ ಹಂತವಾಗಿ ಕಡಿಮೆಯಾಗುತ್ತಾ‌ ಬಂದಿದೆ. ಇನ್ನು ಒಂದೆರಡು ವಾರಗಳಲ್ಲಿ ಇದು 3,000-3,500 ಲೀಟರ್‌ಗೆ ಇಳಿಯುವ ಸಾಧ್ಯತೆ ಇದೆ' ಎಂದು ಅವರು ಹೇಳಿದರು.

ಸಾಂದ್ರಕಗಳಿಂದ ಅನುಕೂಲ: ಪ್ರಕರಣಗಳ ಇಳಿಕೆ ಒಂದೆಡೆಯಾದರೆ, ಆಮ್ಲಜನಕ ಸಾಂದ್ರಕಗಳು ಸಾಕಷ್ಟು‌ ಪ್ರಮಾಣದಲ್ಲಿ ಲಭ್ಯವಿರುವುದು ಕೂಡ ಆಮ್ಲಜನಕ‌ ಬೇಡಿಕೆ ಪ್ರಮಾಣ‌ ಕಡಿಮೆಯಾಗಲು ಇನ್ನೊಂದು ಕಾರಣ.

'ಆಮ್ಲಜನಕ ಸಾಂದ್ರಕಗಳಿಂದ ಅನುಕೂಲವಾಗಿದೆ. ಕಡಿಮೆ ಪ್ರಮಾಣದಲ್ಲಿ ಆಮ್ಲಜನಕ ಅಗತ್ಯವಿರುವ‌ ರೋಗಿಗಳಿಗೆ ಐಸಿಯುನಲ್ಲಿಟ್ಟು ಆಮ್ಲಜನಕ ಪೂರೈಕೆ ಮಾಡುವ ಅಗತ್ಯವಿಲ್ಲ. ಆಮ್ಲಜನಕ ಸಾಂದ್ರಕಗಳೇ ಸಾಕು. ನಮ್ಮ ಜಿಲ್ಲಾ ಆಸ್ಪತ್ರೆಯಲ್ಲಿ ಈಗ 130 ಆಮ್ಲಜನಕ ಸಾಂದ್ರಕಗಳಿವೆ. ಎರಡು ಲೀಟರ್, ಐದು ಲೀಟರ್, ಏಳು ಲೀಟರ್ ಆಮ್ಲಜನಕ ಅಗತ್ಯವಿರುವವರಿಗೆ ಸಾಂದ್ರಕಗಳ ಮೂಲಕ ಪೂರೈಸಲಾಗುತ್ತಿದೆ' ಎಂದು‌ ಜಿಲ್ಲಾ ಸರ್ಜನ್ ಡಾ.ಶ್ರೀನಿವಾಸ 'ಪ್ರಜಾವಾಣಿ'ಗೆ ತಿಳಿಸಿದರು.

400 ಸಾಂದ್ರಕಗಳು: 'ನಮ್ಮಲ್ಲಿ 400ರಷ್ಟು‌ ಆಮ್ಲಜನಕ‌ ಸಾಂದ್ರಕಗಳಿವೆ. ಇವುಗಳಲ್ಲಿ 200ರಷ್ಟು‌ ಸಾಂದ್ರಕಗಳನ್ನು‌ ವಿವಿಧ ಇಲಾಖೆಗಳ ಅಡಿಯಲ್ಲಿ ಜಿಲ್ಲಾಡಳಿತ ಖರೀದಿ ಮಾಡಿದೆ. 200ರಷ್ಟು‌ ಸಾಂದ್ರಕಗಳು ದೇಣಿಗೆಯಾಗಿ ಬಂದಿವೆ. ಸಂಘ–ಸಂಸ್ಥೆಗಳು, ಖಾಸಗಿ ಕಂಪನಿಗಳು ಹಾಗೂ ಕೆಲವರು ವೈಯಕ್ತಿಕವಾಗಿಯೂ ಸಾಂದ್ರಕಗಳನ್ನು‌ ದೇಣಿಗೆಯಾಗಿ ನೀಡಿದ್ದಾರೆ' ಎಂದು ವಿ.ಏಡುಕುಂಡಲು ಮಾಹಿತಿ ನೀಡಿದರು.

‘ಆಸ್ಪತ್ರೆಗಳಲ್ಲದೇ ಕೋವಿಡ್ ಕೇರ್ ಕೇಂದ್ರಗಳಿಗೂ‌ ಸಾಂದ್ರಕಗಳನ್ನು‌ ಒದಗಿಸಲಾಗಿದ್ದು, ಇದರಿಂದ ಕಡಿಮೆ‌ ಆಮ್ಲಜನಕದ ಅಗತ್ಯವಿರುವವರಿಗೆ ಈ ಕೇಂದ್ರಗಳಲ್ಲೇ ಚಿಕಿತ್ಸೆ ನೀಡಲು ಸಾಧ್ಯವಾಗಿದೆ. ಜಿಲ್ಲೆಯಲ್ಲಿ ಒಂದು ಆಮ್ಲಜನಕ ಬಸ್‌ ಕೂಡ ಇದ್ದು, ಅದರಲ್ಲಿ ಆರು ಸಾಂದ್ರಕಗಳಿವೆ. ಗುಂಡ್ಲುಪೇಟೆಯಲ್ಲಿಯೂ ಈ ಸೌಲಭ್ಯ ಕಲ್ಪಿಸಲಾಗಿದೆ’ ಎಂದು ಅವರು ವಿವರಿಸಿದರು.

‘ಸೋಂಕು ಕಡಿಮೆಯಾದರೂ ಎಚ್ಚರಿಕೆ ಅತ್ಯಗತ್ಯ’

ಜಿಲ್ಲೆ‌ಯಲ್ಲಿ ದೃಢಪಡುತ್ತಿರುವ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿರಬಹುದು. ಆದರೆ, ಜನರು ಇನ್ನೂ ಎಚ್ಚರಿಕೆಯಿಂದಲೇ ಇರಬೇಕು ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.

‘ಎರಡನೇ ಅಲೆ ಕಡಿಮೆಯಾಗಿದೆ ಎಂದು ತಿಳಿದುಕೊಳ್ಳುವುದು ಬೇಡ. ಲಾಕ್‌ಡೌನ್‌ ನಿರ್ಬಂಧಗಳಿರುವುದರಿಂದ ಪ್ರಕರಣಗಳು ಕಡಿಮೆಯಾಗಿರಬಹುದು. ಕಳೆದ ವರ್ಷಕ್ಕೆ ಹೋಲಿಸಿದರೆ, ಜಿಲ್ಲೆಯಲ್ಲಿ ಈಗಲೂ ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ. ಇದುವರೆಗೆ ಜಾಸ್ತಿ ಪ್ರಕರಣಗಳು ದೃಢಪಡುತ್ತಿದ್ದರಿಂದ ನಮಗೆ ಈಗ ಸೋಂಕು ಕಡಿಮೆಯಾದಂತೆ ಭಾಸವಾಗುತ್ತಿದೆ. ಆದರೆ, ಎಲ್ಲರೂ ಜಾಗರೂಕರಾಗಿರಬೇಕು’ ಎಂದು ಜಿಲ್ಲಾ ಸರ್ಜನ್‌ ಡಾ.ಶ್ರೀನಿವಾಸ ‘ಪ್ರಜಾವಾಣಿ’ಗೆ ತಿಳಿಸಿದರು.

‘ಜನರು ಅನಗತ್ಯ ಓಡಾಡುವುದನ್ನು ನಿಲ್ಲಿಸಬೇಕು. ಗುಂಪು ಸೇರುವುದು, ಜನ ಸಂದಣಿ ಪ್ರದೇಶಗಳಿಗೆ ಹೋಗುವುದಕ್ಕೆ ಕಡಿವಾಣ ಹಾಕಬೇಕು. ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು. ಸುರಕ್ಷಿತ ಅಂತರವನ್ನು ಕಾಪಾಡಿಕೊಳ್ಳಬೇಕು’ ಎಂದು ಅವರು ಸಲಹೆ ನೀಡಿದರು.

---

ಪ್ರಕರಣಗಳು ಇಳಿಕೆಯಾಗುತ್ತಿರುವುದರಿಂದ ಹಾಗೂ ಆಮ್ಲಜನಕ ಸಾಂದ್ರಕಗಳ ಲಭ್ಯತೆಯಿಂದ ಆಮ್ಲಜನಕದ ಬೇಡಿಕೆ ಈಗ ಕಡಿಮೆಯಾಗಿದೆ
ಡಾ.ಶ್ರೀನಿವಾಸ, ಜಿಲ್ಲಾ ಸರ್ಜನ್‌

---

ಕೊರೊನಾ ವೈರಸ್‌ ಸೋಂಕಿನ ಪ್ರಮಾಣ ಕಡಿಮೆಯಾಗಿದೆ. 10 ದಿನಗಳಲ್ಲಿ ಕೋವಿಡ್‌ ಪ್ರಕರಣಗಳು ಇನ್ನಷ್ಟು ಇಳಿಯುವ ನಿರೀಕ್ಷೆ ಇದೆ
ಡಾ.ಎಂ.ಸಿ.ರವಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT