ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹನೂರು: ಶಿವರಾತ್ರಿ– ಮಾದಪ್ಪನ ಬೆಟ್ಟಕ್ಕೆ ಭಕ್ತರ ಹೆಜ್ಜೆ

ದಾರಿಯಲ್ಲಿ ದಾನಿಗಳಿಂದ ಊಟ, ಹಣ್ಣು, ಪಾನೀಯ ವ್ಯವಸ್ಥೆ
Published 6 ಮಾರ್ಚ್ 2024, 6:25 IST
Last Updated 6 ಮಾರ್ಚ್ 2024, 6:25 IST
ಅಕ್ಷರ ಗಾತ್ರ

ಹನೂರು: ರಾಜ್ಯದ ಪ್ರಸಿದ್ಧ ಯಾತ್ರಾಸ್ಥಳ, ತಾಲ್ಲೂಕಿನ ಮಹದೇಶ್ವರ ಬೆಟ್ಟದ ಮಲೆ ಮಹದೇಶ್ವರ ಸ್ವಾಮಿ ದೇವಾಲಯದಲ್ಲಿ ಗುರುವಾರದಿಂದ (ಮಾರ್ಚ್‌ 7) ಆರಂಭವಾಗಲಿರುವ ಮಹಾಶಿವರಾತ್ರಿ ಜಾತ್ರೆಯಲ್ಲಿ ಪಾಲ್ಗೊಳ್ಳಲು ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಬೆಟ್ಟದತ್ತ ಪಾದಯಾತ್ರೆ ನಡೆಸುತ್ತಿದ್ದಾರೆ. 

ಬೆಂಗಳೂರು, ಬೆಂಗಳೂರು ಗ್ರಾಮಾಂತರ, ರಾಮನಗರ, ಮಂಡ್ಯ, ಮೈಸೂರು ಜಿಲ್ಲೆಗಳಲ್ಲಿರುವ ತಮ್ಮ ಊರುಗಳಿಂದ ಎರಡು ಮೂರು ದಿನಗಳ ಹಿಂದೆ ಪಾದಯಾತ್ರೆ ಆರಂಭಿಸಿರುವ ಭಕ್ತರು ಕೌದಳ್ಳಿ, ತಾಳಬೆಟ್ಟ ದಾಟಿ ಮಾದಪ್ಪನ ಸನ್ನಿಧಿಯತ್ತ ಹೆಜ್ಜೆ ಹಾಕಿದರು. 

ಬೆಂಗಳೂರು, ರಾಮನಗರ, ಕನಕಪುರ, ಚನ್ನಪಟ್ಟಣ, ಮಂಡ್ಯ ಮತ್ತಿತರ ಪ್ರದೇಶಗಳಿಂದ ಬಂದ ಭಕ್ತರು ಸೋಮವಾರ, ಮಂಗಳವಾರ ಕಳ್ಳಿದೊಡ್ಡಿ ಸಮೀಪದ ಬಸವನಕಡದಲ್ಲಿ ಕಾವೇರಿ ನದಿ ದಾಟಿ ದುರ್ಗಮ ಅರಣ್ಯ ಪ್ರದೇಶದಲ್ಲಿ ಹೆಜ್ಜೆ ಹಾಕುತ್ತಾ, ಅಲ್ಲಲ್ಲಿ ವಿಶ್ರಾಂತಿ ಪಡೆಯುತ್ತಾ ಎಲ್ಲೆಮಾಳದಲ್ಲಿ ಮುಖ್ಯ ರಸ್ತೆ ತಲುಪಿ, ಅಲ್ಲಿಂದ ಬೆಟ್ಟದತ್ತ ನಡಿಗೆ ಆರಂಭಿಸಿದರು. 

ಭಾನುವಾರದಿಂದ ಆರಂಭವಾಗಿರುವ ಪಾದಯಾತ್ರೆ ಬುಧವಾರದವರೆಗೂ ನಡೆಯಲಿದೆ. ಮಕ್ಕಳು, ವೃದ್ಧರು, ಮಹಿಳೆಯರು ಎನ್ನುವ ಭೇದವಿಲ್ಲದೆ ಕುಟುಂಬದ ಸದಸ್ಯರು, ಸ್ನೇಹಿತರೊಂದಿಗೆ ಅತ್ಯಂತ ಉತ್ಸಾಹದಿಂದ ಉಘೇ ಉಘೇ ಮಾದೇಶ್ವರ ಎಂದು ಕೂಗುತ್ತಾ ಹೆಜ್ಜೆ ಹಾಕಿದರು. ಬರಿಗಾಲಿನಲ್ಲಿ ಪಾದಯಾತ್ರೆ ನಡೆಸುತ್ತಿರುವವರ ಸಂಖ್ಯೆಯೂ ದೊಡ್ಡದಿದೆ. 

ಪಾದಯಾತ್ರಿಗಳ ಸಾಲು: ಮಧ್ಯಾಹ್ನದ ಹೊತ್ತು ಬಿಸಿಲಿನ ಝಳ ತೀವ್ರ ಇರುವುದರಿಂದ ಬೆಳಿಗ್ಗೆ ಮತ್ತು ಸಂಜೆ ಹೊತ್ತು ಪಾದಯಾತ್ರಿಗಳು ಸಾಲಾಗಿ ಬೆಟ್ಟದತ್ತ ಸಾಗಿದರು. ರಸ್ತೆಯ ಮಗ್ಗುಲಲ್ಲಿ ಕಿ.ಮೀ ಗಟ್ಟಲೆ ದೂರಕ್ಕೆ ಪಾದಯಾತ್ರಿಗಳು ಕಂಡು ಬಂದರು.   

‘ಐದು ವರ್ಷಗಳಿಂದ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆಯಲ್ಲಿ ಬರುತ್ತಿದ್ದೇನೆ. ಪ್ರತಿ ವರ್ಷವೂ ಒಂದು ಹರಕೆ ಹೊತ್ತುಕೊಂಡಿದ್ದೆ. ಮಾದಪ್ಪ ಅದನ್ನು ನೆರವೇರಿಸಿದ್ದಾನೆ ಹಾಗಾಗಿ, ಪಾದಯಾತ್ರೆ ನಡೆಸುತ್ತಿದ್ದೇನೆ. ನನ್ನ ಹರಕೆ ಈಡೇರಿದ್ದರಿಂದ ಬರಿಗಾಲಿನಲ್ಲಿ ಪಾದಯಾತ್ರೆ ನಡೆಸುತ್ತಿದ್ದೇನೆ. ನಾನು ಸೇರಿದಂತೆ ಕುಟುಂಬದವರು, ಊರಿನವರು ಇದ್ದೇವೆ’ ಎಂದು ಎಂದು ರಾಮನಗರ ತಾಲ್ಲೂಕಿನ ಸಂಗನಬಸವನದೊಡ್ಡಿಯ ಶಕುಂತಲ ‘ಪ್ರಜಾವಾಣಿ’ಗೆ ತಿಳಿಸಿದರು. 

‘ನಾಲ್ಕು ವರ್ಷಗಳಿಂದ ಶಿವರಾತ್ರಿ ಸಮಯದಲ್ಲಿ ತಾಳಬೆಟ್ಟದಿಂದ ಪಾದಯಾತ್ರೆ ಮಾಡುತ್ತಿದ್ದೇನೆ. ಮಹದೇಶ್ವರ ಸ್ವಾಮಿ ನನ್ನ ಪ್ರಾರ್ಥನೆಯನ್ನು ಈಡೇರಿಸಿದ್ದಾನೆ’ ಎಂದು ಕನಕಪುರದ ಭಕ್ತೆ ಸುನಿತಾ ಹೇಳಿದರು. 

ಭಕ್ತರಿಗೆ ಮಾರ್ಗಮಧ್ಯದಲ್ಲಿ ಕಲ್ಲಂಗಡಿ ವಿತರಿಸಲು ರಾಶಿ ಮಾಡಿರುವ ಕಲ್ಲಂಗಡಿ ಸೌತೆಕಾಯಿ
ಭಕ್ತರಿಗೆ ಮಾರ್ಗಮಧ್ಯದಲ್ಲಿ ಕಲ್ಲಂಗಡಿ ವಿತರಿಸಲು ರಾಶಿ ಮಾಡಿರುವ ಕಲ್ಲಂಗಡಿ ಸೌತೆಕಾಯಿ
ರಾಮನಗರ ರೋಟರಿ ಸಿಲ್ಕ್ ಸಿಟಿ ಸಂಸ್ಥೆ ವತಿಯಿಂದ ಕಾಲ್ನಡಿಗೆಯಲ್ಲಿ ಬರುವ ಭಕ್ತರಿಗೆ ಮಲ್ಲಯ್ಯನಪುರ ಬಳಿ ಅನ್ನದಾನ ಏರ್ಪಡಿಸಿರುವುದು
ರಾಮನಗರ ರೋಟರಿ ಸಿಲ್ಕ್ ಸಿಟಿ ಸಂಸ್ಥೆ ವತಿಯಿಂದ ಕಾಲ್ನಡಿಗೆಯಲ್ಲಿ ಬರುವ ಭಕ್ತರಿಗೆ ಮಲ್ಲಯ್ಯನಪುರ ಬಳಿ ಅನ್ನದಾನ ಏರ್ಪಡಿಸಿರುವುದು
ಮಲೆ ಮಹದೇಶ್ವರ ವನ್ಯಧಾಮದಲ್ಲಿ ಏರು ಹಾದಿಯಲ್ಲಿ ಬೆಟ್ಟದತ್ತ ಹೆಜ್ಜೆ ಹಾಕುತ್ತಿರುವ ಭಕ್ತರು
ಮಲೆ ಮಹದೇಶ್ವರ ವನ್ಯಧಾಮದಲ್ಲಿ ಏರು ಹಾದಿಯಲ್ಲಿ ಬೆಟ್ಟದತ್ತ ಹೆಜ್ಜೆ ಹಾಕುತ್ತಿರುವ ಭಕ್ತರು

ಮಾರ್ಗದುದ್ದಕ್ಕೂ ಊಟದ ವ್ಯವಸ್ಥೆ

ಹರಕೆ ಹೊತ್ತು ಪಾದಯಾತ್ರೆ ಬರುವ ಭಕ್ತರು ಒಂದೆಡೆಯಾದರೆ ದಾನಿಗಳು ಬರುವ ಭಕ್ತರಿಗೆ ಊಟ ಉಪಾಹಾರ ಕಲ್ಲಂಗಡಿ ಸೌತೆಕಾಯಿ ನೀರು ಮಜ್ಜಿಗೆ ಪಾನಕ ಬಿಸ್ಕತ್ ಕಿತ್ತಳೆ ಹಣ್ಣು ಹಾಗೂ ಇನ್ನಿತರ ಆಹಾರ ಪದಾರ್ಥಗಳನ್ನು ವಿತರಿಸುವ ಮೂಲಕ ಮಹದೇಶ್ವರನ ಸೇವಾ ಕಾರ್ಯದಲ್ಲಿ ಪಾಲ್ಗೊಂಡರು.  ರಾಮನಗರ ಕನಕಪುರ ಭಾಗದ ದಾನಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದರು.  ಮಲ್ಲಯ್ಯನಪುರ ಕೌದಳ್ಳಿ ತಾಳಬೆಟ್ಟ ಸೇರಿದಂತೆ ವಿವಿಧ ಕಡೆಗಳಲ್ಲಿ ಶಾಮಿಯಾನ ಹಾಕಿ ಭಕ್ತರಿಗೆ ಊಟದ ವ್ಯವಸ್ಥೆ ಮಾಡಿದ್ದರು. ಇನ್ನೂ ಕೆಲವರು ರಸ್ತೆ ಮಧ್ಯೆ ಟೆಂಪೊ ನಿಲ್ಲಿಸಿ ಮಜ್ಜಿಗೆ ಪಾನಕ ಕಲ್ಲಂಗಡಿ ಕಿತ್ತಳೆ ಹಣ್ಣುಗಳನ್ನು ನೀಡಿ ಭಕ್ತರ ದಾಹವನ್ನು ತೀರಿಸಿದರು.  ಮಲ್ಲಯ್ಯನ ಪುರ ಗ್ರಾಮದಲ್ಲಿ ರಾಮನಗರದ ರೋಟರಿ ಸಿಲ್ಕ್ ಸಂಸ್ಥೆಯವರು ಐದನೇ ವರ್ಷದ ಅನ್ನದಾನದ ವ್ಯವಸ್ಥೆ ಮಾಡಿದ್ದರು. ರಾಮನಗರದ ಎಪಿಎಂಸಿ ಅಚ್ಚಲುದೊಡ್ಡಿ ಮಿತ್ರರು ಮಲ್ಲಯ್ಯನಪುರದಲ್ಲಿ ಸೌತೆಕಾಯಿ ಕಲ್ಲಂಗಡಿ ಹಣ್ಣುಗಳನ್ನು ಭಕ್ತರಿಗೆ ಉಚಿತವಾಗಿ ವಿತರಿಸಿದರು. 13 ವರ್ಷಗಳಿಂದ ಅವರು ಈ ಸೇವೆ ನಡೆಸುತ್ತಾ ಬಂದಿದ್ದಾರೆ.  ಇದಲ್ಲದೇ ಇನ್ನೂ ಹಲವು ದಾನಿಗಳು ಭಕ್ತರಿಗೆ ನೀರಿನ ಬಾಟಲಿ ಜ್ಯೂಸ್‌ ಪೊಟ್ಟಣಗಳನ್ನು ವಿತರಿಸುತ್ತಿದ್ದರು.  ಕುಡಿಯುವ ನೀರಿನ ವ್ಯವಸ್ಥೆ: ಕಾಲ್ನಡಿಗೆಯಲ್ಲಿ ಬರುವ ಭಕ್ತರಿಗಾಗಿ ಮಹದೇಶ್ವರ ಬೆಟ್ಟ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ತಾಳಬೆಟ್ಟದಿಂದ ಮಹದೇಶ್ವರ ಬೆಟ್ಟದವರೆಗೂ ಅಲ್ಲಲ್ಲಿ ಟ್ಯಾಂಕ್ ಗಳ ಮೂಲಕ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು. ರಸ್ತೆಯುದ್ದಕ್ಕೂ ಪ್ಲಾಸ್ಟಿಕ್ ಬಾಟಲಿ ಊಟದ ತಟ್ಟೆಗಳನ್ನು ಎಲ್ಲೆಂದರಲ್ಲಿ ಬಿಸಾಡದಂತೆ ಭಕ್ತರಿಗೆ ಅರಣ್ಯ ಇಲಾಖೆ ಸಿಬ್ಬಂದಿ ಅರಿವು ಮೂಡಿಸುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT