ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಯು ಪರೀಕ್ಷೆ | ದೈಹಿಕ ನ್ಯೂನತೆ ಇದ್ದರೂ ಮೊದಲ ಯತ್ನದಲ್ಲೇ ತೇರ್ಗಡೆ

22 ವರ್ಷಗಳ ಬಳಿಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದು ತೇರ್ಗಡೆಯಾಗಿದ್ದ ಪ್ರೇಮಜ್ಯೋತಿ
Published 11 ಏಪ್ರಿಲ್ 2024, 7:10 IST
Last Updated 11 ಏಪ್ರಿಲ್ 2024, 7:10 IST
ಅಕ್ಷರ ಗಾತ್ರ

ಹನೂರು: ದೈಹಿಕವಾಗಿ ನ್ಯೂನತೆ ಇದ್ದರೂ, ಮಾನಸಿಕವಾಗಿ ಸದೃಢವಾಗಿರುವ ತಾಲ್ಲೂಕಿನ ಕಣ್ಣೂರು ಗ್ರಾಮದ ಪ್ರೇಮಜ್ಯೋತಿ ಎಂಬುವವರು, ಪ್ರಾಥಮಿಕ ಶಿಕ್ಷಣ ತೊರೆದ 22 ವರ್ಷಗಳ ಬಳಿಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದು ತೇರ್ಗಡೆಯಾಗಿದ್ದರು. ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಖಾಸಗಿಯಾಗಿ ಪರೀಕ್ಷೆ ಬರೆದು ಮೊದಲ ಪ್ರಯತ್ನದಲ್ಲೇ ಉತ್ತೀರ್ಣರಾಗಿದ್ದಾರೆ. 

ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 1999ನೇ ಸಾಲಿನಲ್ಲಿ 7ನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡಿ ಬಳಿಕ ಶಾಲೆಗೆ ಹೋಗುವುದನ್ನೇ ಪ್ರೇಮ ಜ್ಯೋತಿ ನಿಲ್ಲಿಸಿದ್ದರು. 22 ವರ್ಷದ ಬಳಿಕ 2021 ರಲ್ಲಿ ಖಾಸಗಿ ಅಭ್ಯರ್ಥಿಯಾಗಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದು ಪ್ರಥಮ ಯತ್ನದಲ್ಲಿ ತೇರ್ಗಡೆಯಾದರು. ದ್ವಿತೀಯ ಪಿಯುಸಿ ಶಿಕ್ಷಣವನ್ನು ಕೂಡ ದೂರ ಶಿಕ್ಷಣದಲ್ಲಿ ತೆಗೆದುಕೊಂಡು ಪ್ರಸಕ್ತ ವರ್ಷದಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಪ್ರಥಮ ಯತ್ನದಲ್ಲಿಯೇ ಉರ್ತೀರ್ಣರಾಗುವ ಮೂಲಕ ಗಮನಸೆಳೆದಿದ್ದಾರೆ. 

ಪ್ರೇಮಜ್ಯೋತಿ ಅವರ ಎರಡೂ ಕಾಲುಗಳು ಊನವಾಗಿವೆ. ಅವರು 600ಕ್ಕೆ 320 ಅಂಕಗಳನ್ನು ಗಳಿಸಿ ತೇರ್ಗಡೆಯಾಗಿದ್ದಾರೆ.

‘ನಾನೇನೂ ಗಮನಾರ್ಹ ಸಾಧನೆ ಮಾಡಿಲ್ಲ. ಕಡಿಮೆ ಅಂಕಗಳನ್ನು ಪಡೆದಿದ್ದೇನೆ. ನಾನು ನನ್ನ ತಂದೆ ತಾಯಿ ಮಾತು ಕೇಳದೆ ಶಿಕ್ಷಣದಿಂದ ವಂಚಿತಳಾದೆ. ಆದರೂ ಕೆಲವು ವರ್ಷಗಳ ನಂತರ ಓದುವ ಹಂಬಲದಿಂದ 2021ರಲ್ಲಿ ಎಸ್‌ಎಸ್‌ಎಲ್‌ಸಿ  ಪಾಸು ಮಾಡಿದೆ. ಈ ವರ್ಷ ಪಿಯುಸಿಯಲ್ಲಿ ತೇರ್ಗಡೆಯಾಗಿದ್ದೇನೆ. ಹೆಚ್ಚು ಅಂಕಗಳಿಸುವ ನನ್ನ ಪ್ರಯತ್ನಕ್ಕೆ ಯಶಸ್ಸು ಸಿಕ್ಕಿಲ್ಲ. ಮುಂದಿನ ದಿನಗಳಲ್ಲಿ ಉನ್ನತ ಶಿಕ್ಷಣ ಮಾಡಬೇಕೆಂದಿದ್ದೇನೆ’ ಎಂದು ಪ್ರೇಮ ಜ್ಯೋತಿ ‘ಪ್ರಜಾವಾಣಿ’ಗೆ ತಿಳಿಸಿದರು.

‘7ನೇ ತರಗತಿ ಬಳಿಕ ನಾವು ಎಷ್ಟೇ ಪ್ರಯತ್ನಿಸಿದರೂ ಶಾಲೆಗೆ ಹೋಗಲಿಲ್ಲ. ಆದರೆ ಎರಡು ದಶಕಗಳ ಬಳಿಕ ಆಕೆಯೇ ಸ್ವತಃ ಓದಿನ ಕಡೆ ಆಸಕ್ತಿವಹಿಸಿ ಪರೀಕ್ಷೆ ಬರೆಯುತ್ತೇನೆ ಎಂದಾಗ ನಾವು ಸಹಕರಿಸಿದೆವು. ಮುಂದೆ ಅವರ ಆಸಕ್ತಿಗನುಗುಣವಾಗಿ ಶಿಕ್ಷಣಕ್ಕೆ ಸಂಪೂರ್ಣ ಸಹಕಾರ ನೀಡಲಾಗುವುದು’ ಎಂದು ತಂದೆ ಚಿನ್ನಸ್ವಾಮಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT