ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಾಮರಾಜನಗರ ಜಿಲ್ಲೆಯಾದ್ಯಂತ ಆನೆ ಗಣತಿ ಆರಂಭ

ಬಿಆರ್‌ಟಿಯಲ್ಲಿ ಸಿಬ್ಬಂದಿ ಮೇಲೆ ಆನೆ ದಾಳಿ, ಕೂದಲೆಳೆ ಅಂತರದಲ್ಲಿ ಪಾರು
Published 23 ಮೇ 2024, 16:01 IST
Last Updated 23 ಮೇ 2024, 16:01 IST
ಅಕ್ಷರ ಗಾತ್ರ

ಚಾಮರಾಜನಗರ/ಗುಂಡ್ಲುಪೇಟೆ: ಜಿಲ್ಲೆಯ ನಾಲ್ಕೂ ರಕ್ಷಿತಾರಣ್ಯಗಳಲ್ಲಿ ಮೂರು ದಿನಗಳ ಆನೆಗಣತಿಗೆ ಗುರುವಾರ ಚಾಲನೆ ಸಿಕ್ಕಿದೆ. 

ದಕ್ಷಿಣದ ರಾಜ್ಯಗಳ ಗಡಿಭಾಗದಲ್ಲಿರುವ ಎಲ್ಲ ಕಾಡುಗಳಲ್ಲಿ ಅರಣ್ಯ ಇಲಾಖೆಯು ಸಮನ್ವಯ ಸಾಧಿಸಿ ಏಕಕಾಲಕ್ಕೆ ಗಣತಿ ನಡೆಸುತ್ತಿದೆ. 

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ, ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶ, ಮಲೆ ಮಹದೇಶ್ವರ ವನ್ಯಧಾಮ, ಕಾವೇರಿ ವನ್ಯಧಾಮಗಳಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಎಲ್ಲ ವಲಯಗಳ ಬೀಟ್‌ ವ್ಯಾಪ್ತಿಯಲ್ಲಿ ಸುತ್ತಾಡಿ ಆನೆಗಳ ಬಗ್ಗೆ ಮಾಹಿತಿ ಕಲೆ ಹಾಕಿದರು. ಪ್ರತಿ ಬೀಟ್‌ಗೂ ಮೂವರು ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.  

ಬೆಳಿಗ್ಗೆ 6ರಿಂದ ಸಂಜೆ 6 ಗಂಟೆಯವರೆಗೆ ಗಣತಿ ಕಾರ್ಯ ನಡೆಯಿತು. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಅರಣ್ಯ ಭೂಮಿ ತೇವಗೊಂಡಿದ್ದು, ಸಿಬ್ಬಂದಿ ನಡೆದಾಡಲು ಕಷ್ಟ ಪಟ್ಟರು. 

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ 13 ವಲಯಗಳಲ್ಲೂ 113 ಬೀಟ್‌ಗಳಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಕಾಲ್ನಡಿಗೆಯಲ್ಲಿ ಸಾಗಿ ಆನೆ ಲೆಕ್ಕ ಹಾಕಿದರು. 

ಆನೆ ಗುಂಪಿನಲ್ಲಿ ಎಷ್ಟು ಆನೆಗಳಿವೆ? ಎಷ್ಟು ಹೆಣ್ಣಾನೆಗಳಿವೆ? ಎಷ್ಟು ಮರಿಗಳಿವೆ? ಎಂಬುದನ್ನು ದಾಖಲು ಮಾಡಿದರು. 

ಎರಡನೇ ದಿನವಾದ ಶುಕ್ರವಾರ ಆನೆಯ ಲದ್ದಿಯ ಆಧಾರದಲ್ಲಿ ಗಣತಿ ನಡೆಸಲಿದ್ದಾರೆ. ಕೊನೆಯ ದಿನ ಶನಿವಾರ ಜಲಮೂಲಗಳಿಗೆ ಭೇಟಿ ನೀಡಿ ಆನೆಗಳ ಗಣತಿ ಮಾಡಲಿದ್ದಾರೆ. 

ಬಂಡೀಪುರದಲ್ಲಿ ಗುರುವಾರ ಆನೆ ಗಣತಿ ನಡೆಸುತ್ತಿದ್ದ ಸಿಬ್ಬಂದಿಗೆ ಕಾಣಿಸಿಕೊಂಡ ಆನೆಗಳು
ಬಂಡೀಪುರದಲ್ಲಿ ಗುರುವಾರ ಆನೆ ಗಣತಿ ನಡೆಸುತ್ತಿದ್ದ ಸಿಬ್ಬಂದಿಗೆ ಕಾಣಿಸಿಕೊಂಡ ಆನೆಗಳು

ಆನೆ ದಾಳಿ; ಸಿಬ್ಬಂದಿ ಪಾರು

ಯಳಂದೂರು: ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟ ಹುಲಿ ಸಂರಕ್ಷಿತ ಪ್ರದೇಶದ ಆಮೆಕೆರೆ ಕ್ಯಾಂಪಸ್‌ನಲ್ಲಿ ಗುರುವಾರ ಆನೆ ಗಣತಿ ಮಾಡುತ್ತಿದ್ದ ವೇಳೆ ಆನೆಯೊಂದು ಏಕಾಏಕಿ ಸಿಬ್ಬಂದಿ ಮೇಲೆ ದಾಳಿ ಮಾಡಿದೆ. ಸಿಬ್ಬಂದಿ ದಾಳಿಯಿಂದ ತಪ್ಪಿಸಿಕೊಂಡಿದ್ದು ತರಚಿತ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.  ‘ಮೂವರು ಸಿಬ್ಬಂದಿ ಗಣತಿ ಕಾರ್ಯದಲ್ಲಿ ತೊಡಗಿದ್ದರು. ವಿವರಗಳನ್ನು ದಾಖಲು ಮಾಡುತ್ತಿದ್ದ ಸಂದರ್ಭದಲ್ಲಿ ದಿಢೀರ್‌ ಆಗಿ ಒಬ್ಬ ಗಸ್ತುಪಾಲಕ ಸಿಬ್ಬಂದಿ ಮೇಲೆ ಆನೆ ದಾಳಿ ಮಾಡಿದೆ. ಎಚ್ಚೆತ್ತುಕೊಂಡ ಅವರು ತಕ್ಷಣವೇ ತಪ್ಪಿಸಿಕೊಂಡಿದ್ದಾರೆ. ಅವರಿಗೆ ಯಳಂದೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಮನೆಗೆ ಕಳುಹಿಸಲಾಗಿದೆ’ ಎಂದು ಮೂಲಗಳು ತಿಳಿಸಿವೆ.   ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಅಧಿಕಾರಿಗಳಿಗೆ ಕರೆಮಾಡಿದರೂ ಸಂಪರ್ಕ ಸಾಧ್ಯವಾಗಲಿಲ್ಲ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT