ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ | ಕೈಗಾರಿಕೆಗೆ ಭೂಮಿ: ಎಕರೆಗೆ ₹1.25 ಕೋಟಿಗೆ ಬೇಡಿಕೆ

Published 9 ನವೆಂಬರ್ 2023, 5:57 IST
Last Updated 9 ನವೆಂಬರ್ 2023, 5:57 IST
ಅಕ್ಷರ ಗಾತ್ರ

ಚಾಮರಾಜನಗರ: ಬದನಗುಪ್ಪೆ-ಕೆಲ್ಲಂಬಳ್ಳಿ ಕೈಗಾರಿಕಾ ಪ್ರದೇಶದ ಎರಡನೇ ಹಂತದ ವಿಸ್ತರಣೆಗಾಗಿ ಸ್ಥಳೀಯ ರೈತರಿಂದ ಸ್ವಾಧೀನಪಡಿಸಿಕೊಳ್ಳುವ ಜಮೀನಿಗೆ ಎಕರೆಗೆ ₹1.25 ಕೋಟಿ ಬೆಲೆ ನಿಗದಿಪಡಿಸಬೇಕು ಎಂಬ ಬೇಡಿಕೆಯನ್ನು ರೈತರು ಅಧಿಕಾರಿಗಳ ಮುಂದಿಟ್ಟಿದ್ದಾರೆ. 

ನಗರದ ಜಿಲ್ಲಾಡಳಿತ ಭವನದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಬುಧವಾರ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ವತಿಯಿಂದ ನಡೆದ ಕೆಲ್ಲಂಬಳ್ಳಿ-ಬದನಗುಪ್ಪೆ ಕೈಗಾರಿಕಾ ಪ್ರದೇಶದ ಭೂಸ್ವಾಧೀನ ಸಲಹಾ ಸಮಿತಿ ಸಭೆಯಲ್ಲಿ ರೈತ ಮುಖಂಡರು ಈ ಬೇಡಿಕೆಯನ್ನು ಇಟ್ಟಿದ್ದಾರೆ. 

ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯು (ಕೆಐಡಿಬಿ) ತಾಲ್ಲೂಕಿನ ಬದನಗುಪ್ಪೆ–ಕೆಲ್ಲಂಬಳ್ಳಿ ಕೈಗಾರಿಕಾ ಪ್ರದೇಶವನ್ನು ಇನ್ನಷ್ಟು ವಿಸ್ತರಿಸುವುದಕ್ಕಾಗಿ ಈಗ ಅಭಿವೃದ್ಧಿ ಪಡಿಸಲಾಗಿರುವ ಪ್ರದೇಶಕ್ಕೆ ಹೊಂದಿಕೊಂಡಂತೆ 1,189.09 ಎಕರೆ ಜಮೀನನ್ನು ಸ್ವಾಧೀನ ಪಡಿಸಿಕೊಳ್ಳಲು ಅಧಿಸೂಚನೆ ಈಗಾಗಲೇ ಹೊರಡಿಸಿದೆ. 

ಭೂಮಿ ಸ್ವಾಧೀನ ಹಾಗೂ ಅದಕ್ಕೆ ಬೆಲೆ ನಿಗದಿ ಪಡಿಸುವ ಸಂಬಂಧ ಈಗಾಗಲೇ ಜಿಲ್ಲಾಧಿಕಾರಿಯವರ ನೇತೃತ್ವದಲ್ಲಿ ರೈತರೊಂದಿಗೆ ಒಂದು ಬಾರಿ ಸಭೆ ನಡೆಸಲಾಗಿದೆ. ಆಗ ರೈತರು ಎಕರೆಗೆ ₹1.5 ಕೋಟಿ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದರು. ಕೆಐಎಡಿಬಿ ಗರಿಷ್ಠ ₹35 ಲಕ್ಷ ನೀಡಬಹುದು ಎಂದು ಹೇಳಿತ್ತು. 

ಬುಧವಾರ ನಡೆದ ಸಭೆಯಲ್ಲಿ ರೈತರು ಎಕರೆಗೆ ₹1.25 ಕೋಟಿ ನೀಡಬೇಕು ಎಂದು ಹೇಳಿದ್ದಾರೆ. 

ಮುಖಂಡ ಪು.ಶ್ರೀನಿವಾಸ ನಾಯಕ ಮಾತನಾಡಿ, ‘2014ರಲ್ಲಿ ಕೈಗಾರಿಕಾ ಪ್ರದೇಶಕ್ಕೆ ರೈತರು ಸ್ವಯಂ ಪ್ರೇರಿತರಾಗಿ ತಮ್ಮ ಭೂಮಿ ಕೊಟ್ಟಿದ್ದಾರೆ. ಹಲವು ಕೈಗಾರಿಕೆಗಳು ಬಂದಿವೆ. ಆದರೆ, ಈ ಭಾಗದ ಜನರಿಗೆ ಯಾವುದೇ ಅನುಕೂಲವಾಗಿಲ್ಲ. ಕೈಗಾರಿಕಾ ಪ್ರದೇಶಕ್ಕೆ ಭೂಮಿ ನೀಡುವ ಕುಟುಂಬಗಳಿಗೆ ಉದ್ಯೋಗ, ಪರಿಸರ ಹಾಳಾಗದಂತೆ ಕ್ರಮವಹಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಸೂಕ್ತ ಉದ್ಯೋಗ ನೀಡಿಲ್ಲ. ಜೊತೆಗೆ ಕೈಗಾರಿಕೆಗಳಿಂದ ಪರಿಸರ ಹಾಳಾಗುತ್ತಿದೆ’ ಎಂದರು.

‘ಸರ್ಕಾರ ನಿಗದಿಪಡಿಸಿರುವ ಬೆಲೆ ಸಾಕಾಗುವುದಿಲ್ಲ. ಇದರಿಂದ ಜೀವನ ನಿರ್ವಹಣೆ ಅಸಾಧ್ಯ. ಆದ್ದರಿಂದ ರೈತರ ಭೂಮಿಗೆ ಸೂಕ್ತ ಬೆಲೆ ಕೊಡಬೇಕು. ಇಲ್ಲದಿದ್ದರೆ ಯಾವುದೇ ಕಾರಣಕ್ಕೂ ಭೂಮಿಯನ್ನು ಕೊಡುವುದಿಲ್ಲ’ ಎಂದರು.

ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್ ಮಾತನಾಡಿ, ‘ಈ ಹಿಂದೆ ಎಕರೆಗೆ ₹30 ಲಕ್ಷ ನಿಗದಿಪಡಿಸಲಾಗಿತ್ತು. ಆದರೆ, ರೈತರ ಒತ್ತಾಯದ ಮೇರೆಗೆ ಅದನ್ನು ₹33 ಲಕ್ಷಕ್ಕೆ ಏರಿಕೆ ಮಾಡಲಾಗಿದೆ’ ಎಂದರು. 

ಇದಕ್ಕೆ ಒಪ್ಪದ ರೈತರು, ನಂಜನಗೂಡು ತಾಲ್ಲೂಕಿನ ಅಡಕನಹುಂಡಿಯಲ್ಲಿ ಎಕರೆಗೆ ₹82 ಲಕ್ಷದವರೆಗೆ ನೀಡಲಾಗಿದೆ’ ಎಂದರು. 

ಬಳಿಕ ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾ ನಾಗ್ ಅವರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಪ್ರತ್ಯೇಕವಾಗಿ ಸಭೆ ನಡೆಸಿದ ನಂತರ ಮತ್ತೆ ಸಭೆಗೆ ಬಂದು, ‘42.90 ಲಕ್ಷಕ್ಕಿಂತ ಜಾಸ್ತಿಗೆ ನಿಗದಿ ಮಾಡಲು ಅವಕಾಶವಿಲ್ಲ. ಆದರೂ ರೈತರ ಒತ್ತಾಯದ ಮೇರೆಗೆ ಈ ವಿಚಾರವನ್ನು ಸರ್ಕಾರದ ಗಮನಕ್ಕೆ ತರಲಾಗುವುದು’ ಎಂದರು. 

ಪು.ಶ್ರೀನಿವಾಸನಾಯಕ ಮಾತನಾಡಿ, ‘ಅಲ್ಲದೇ ಈ ಸಂಬಂಧ ಸರ್ಕಾರಕ್ಕೆ ಶೀಘ್ರವಾಗಿ ವರದಿ ಸಲ್ಲಿಸಬೇಕು’ ಎಂದರು. 

ಎರಡು ಮೂರು ದಿನಗಳಲ್ಲಿಯೇ ವರದಿ ಸಲ್ಲಿಸಲಾಗುವುದು ಎಂದು ಶಿಲ್ಪಾ ನಾಗ್‌ ಭರವಸೆ ನೀಡಿದರು. 

ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಮಹೇಶ್, ಕೆಐಎಡಿಬಿ ವಿಶೇಷ ಭೂಸ್ವಾಧೀನಾಧಿಕಾರಿ ಪ್ರಿಯದರ್ಶಿನಿ, ತಹಸೀಲ್ದಾರ್ ಬಸವರಾಜು ಇತರರು ಇದ್ದರು.

ಸಭೆಯ ನಂತರ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಶ್ರೀನಿವಾಸ ನಾಯಕ, ‘ಅಧಿಕಾರಿಗಳು ಗರಿಷ್ಠ ₹43 ಲಕ್ಷ ಅಂತ ಹೇಳುತ್ತಿದ್ದಾರೆ. ಅಷ್ಟಕ್ಕೆ ನಾವು ಜಮೀನು ಕೊಡುವುದಿಲ್ಲ. ಈ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಿ, ಸರ್ಕಾರದ ಹಂತದಲ್ಲಿ ನಾವು ಮಾತನಾಡುತ್ತೇವೆ ಎಂದು ಹೇಳಿದ್ದೇವೆ’ ಎಂದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT