ಶುಕ್ರವಾರ, ಜುಲೈ 30, 2021
20 °C
ಆಯುಷ್‌ ಇಲಾಖೆಯಿಂದ ಆಯುರ್ವೇದ, ಯುನಾನಿ, ಹೋಮಿಯೋಪಥಿಯ ಔಷಧ ಉಚಿತ ವಿತರಣೆ

ಚಾಮರಾಜನಗರ: ರೋಗ ನಿರೋಧಕ ಶಕ್ತಿ ವೃದ್ಧಿಸಲು ಆಯುಷ್‌ ಮದ್ದು

ಸೂರ್ಯನಾರಾಯಣ ವಿ. Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಕೋವಿಡ್‌–19 ಪ್ರಭಾವವನ್ನು ಕಡಿಮೆಗೊಳಿಸುವಲ್ಲಿ ಮನುಷ್ಯನ ರೋಗ ನಿರೋಧ ಶಕ್ತಿ ಮಹತ್ವದ ಪಾತ್ರ ವಹಿಸಿದ್ದು, ಇದನ್ನು ಹೆಚ್ಚಿಸುವ ಸಲುವಾಗಿ ಆಯುಷ್‌ (ಆಯುರ್ವೇದ, ಯುನಾನಿ, ನ್ಯಾಚುರೋಪಥಿ, ಸಿದ್ಧ, ಹೋಮಿಯೋಪಥಿ ವೈದ್ಯ ಪದ್ಧತಿ) ಇಲಾಖೆಯು ಜನರಿಗೆ ಉಚಿತವಾಗಿ ವಿತರಿಸುತ್ತಿದೆ. 

ಇದಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಜನರು ಆಯುಷ್‌ ಆಸ್ಪತ್ರೆಗಳಿಗೆ ಭೇಟಿ ನೀಡಿ ಔಷಧಗಳನ್ನು ಪಡೆಯುತ್ತಿದ್ದಾರೆ. ಜಿಲ್ಲಾ ಕೇಂದ್ರ ಮಾತ್ರವಲ್ಲದೇ ತಾಲ್ಲೂಕು ಕೇಂದ್ರಗಳಲ್ಲೂ ವಿತರಣೆ ನಡೆಯುತ್ತಿದ್ದು, ಬಂದಿರುವ ದಾಸ್ತಾನು ಮುಗಿಯುವ ಹಂತಕ್ಕೆ ಬಂದಿದೆ ಎಂದು ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ. 

ಕೊರೊನಾ ವಿರುದ್ಧ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಸಿಬ್ಬಂದಿಗೆ ಹಾಗೂ ಜನರಿಗೆ ಉಚಿತವಾಗಿ ಔಷಧಗಳನ್ನು ಹಂಚುವ ನಿರ್ಧಾರಕ್ಕೆ ಆಯುಷ್‌ ಇಲಾಖೆ ಬಂದಿತ್ತು. ಅದರಂತೆ ಜಿಲ್ಲೆಯೂ ಕೆಲವು ದಿನಗಳಿಂದ ಹಂಚಲಾಗುತ್ತಿದೆ. ನಗರದಲ್ಲಿ ಜಿಲ್ಲಾಸ್ಪತ್ರೆಯ ಹಿಂದಿರುವ ಆಯುಷ್‌ ಆಸ್ಪತ್ರೆಯಲ್ಲಿ ವಿತರಿಸಲಾಗುತ್ತಿದೆ.

‘ಇಲಾಖೆಯ ಸೂಚನೆಯಂತೆ ಹಲವು ದಿನಗಳಿಂದ ವಿತರಿಸುತ್ತಿದ್ದೇವೆ. ದಿನಕ್ಕೆ 150ರಿಂದ 200 ಮಂದಿ ಔಷಧವನ್ನು ಪಡೆಯುತ್ತಿದ್ದಾರೆ. ನಮ್ಮಲ್ಲಿ ಸ್ವಲ್ಪ ದಾಸ್ತಾನು ಉಳಿಸಿಕೊಂಡು ತಾಲ್ಲೂಕುಗಳಲ್ಲಿರುವ ಆಯುಷ್‌ ಆಸ್ಪತ್ರೆಗೂ ಕಳುಹಿಸಿದ್ದೇವೆ. ಜನರಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದಕ್ಕಾಗಿ ಇದನ್ನು ನೀಡುತ್ತಿದ್ದೇವೆ’ ಎಂದು ಜಿಲ್ಲಾ ಆಯುಷ್‌ ಅಧಿಕಾರಿ ಡಾ.ಆರ್‌.ರಾಚಯ್ಯ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಮೂರು ಔಷಧ

ಆಯುರ್ವೇದದ ಸಂಶಮನಿ ವಟಿ ಗುಳಿಗೆ, ಯುನಾನಿ ವೈದ್ಯ ಪದ್ಧತಿಯ ಅರ್ಕ್‌ ಅಜೀಬ್‌ ಮತ್ತು ಹೋಮಿಯೋಪಥಿಯ ಆರ್ಸೆನಿಕಮ್‌ ಅಲ್ಬಂ ಎಂಬ ಔಷಧವನ್ನು ನೀಡಲಾಗುತ್ತಿದೆ. 

‌‘ಸಂಶಮನೀ ವಟಿ ಗುಳಿಗೆಯನ್ನು ಬೆಳಿಗ್ಗೆ ಮತ್ತು ರಾತ್ರಿ (ಊಟ ಆದ ಮೇಲೆ) ಹೊತ್ತು ತಲಾ ಎರಡಂತೆ ಐದು ದಿನಗಳ ಕಾಲ ಸೇವಿಸಬೇಕು. ಅರ್ಕ್‌ ಅಜೀಬ್‌ ಅನ್ನು, ಕುದಿಸಿದ ಬಿಸಿನೀರಿಗೆ ಎರಡು ಹನಿ ಹಾಕಿ ಹಬೆ ತೆಗೆದುಕೊಳ್ಳಬೇಕು. ಶೀತ ನೆಗಡಿ ವಿರುದ್ಧ ಇದು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಆರ್ಸೆನಿಕಮ್‌ ಆಲ್ಬಮ್ ಅನ್ನು ತಿಂಗಳಿಗೆ ಮೂರು ದಿವಸ, ಬೆಳಿಗ್ಗೆ ತಿಂಡಿಗೂ ಮುನ್ನ ಒಂದೊಂದು ಸೇವಿಸಬೇಕು’ ಎಂದು ಡಾ.ರಾಚಯ್ಯ ಅವರು ಮಾಹಿತಿ ನೀಡಿದರು. 

‘ಜನರಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಈ ಮೂರು ಔಷಧಗಳು ನೆರವಾಗುತ್ತವೆ. ರೋಗ ನಿರೋಧಕ ಶಕ್ತಿ ಹೆಚ್ಚಿದರೆ, ಕೋವಿಡ್‌–19 ಅನ್ನು ಸುಲಭವಾಗಿ ಜಯಿಸಬಹುದು’ ಎಂದು ಅವರು ಹೇಳಿದರು. 

‘ಈಗಾಗಲೇ ವಿತರಣೆ ಮಾಡಿರುವ ಔಷಧಗಳಿಂದ ಜನರಿಗೆ ಅನುಕೂಲವಾಗಿದೆಯೇ ಎಂಬುದರ ಬಗ್ಗೆ ಇನ್ನು ಮಾಹಿತಿ ಕಲೆ ಹಾಕಬೇಕಾಗಿದೆ. ಜನರ ಅಭಿಪ್ರಾಯವನ್ನು ತೆಗೆದುಕೊಳ್ಳುತ್ತೇವೆ’ ಎಂದು ಡಾ.ರಾಚಯ್ಯ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು