ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಕರಿನೆರಳಿಗೆ ಕುಗ್ಗಿದ ಹಲಸಿನ ಘಮಲು

ವ್ಯಾಪಾರಕ್ಕೆ ತಂದ ಹಲಸು ಹಸುವಿನ ಪಾಲು; ಖರೀದಿದಾರರಿಲ್ಲದೇ ಬೆಳೆಗಾರರು ಕಂಗಾಲು
Last Updated 10 ಮೇ 2021, 3:54 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯ ಹಲಸು ಎಂದರೆ ಮೈಸೂರು, ಬೆಂಗಳೂರು ಮಾತ್ರವಲ್ಲ ಪಕ್ಕದ ಕೇರಳ ರಾಜ್ಯದವರಿಗೂ ಬಲು ಅಚ್ಚುಮೆಚ್ಚು. ಇಲ್ಲಿಗೆ ಬೇಸಿಗೆಯಲ್ಲಿ ಬಂದ ಪ್ರವಾಸಿಗರು ಹಲಸಿನ ಸವಿಯನ್ನು ಸವಿಯದೇ ಹೋಗುತ್ತಿರಲಿಲ್ಲ. ಬೆಂಗಳೂರಿನಷ್ಟು ದುಬಾರಿಯಲ್ಲದ, ಅಗ್ಗವೆನ್ನಬಹುದಾದ ಹಲಸು ಇಲ್ಲಿಯದು. ಆದರೆ, ಈಗ ಹಲಸು ಕೊರೊನಾ ಕರಿನೆರಳಿನಲ್ಲಿ ಖರೀದಿದಾರರಿಲ್ಲದೇ ಹಸುವಿನ ಪಾಲಾಗುತ್ತಿದೆ.

ಇಲ್ಲಿನ ಚಾಮರಾಜನಗರ– ತಿ.ನರಸೀಪುರ ರಸ್ತೆಯ ದೊಡ್ಡರಾಯನಪೇಟೆ ಅಡ್ಡರಸ್ತೆಯ ಬಳಿ ಹಲವು ಮಂದಿ ಹಲಸಿನ ಹಣ್ಣುಗಳ ವ್ಯಾಪಾರ ಮಾಡುತ್ತಾರೆ. ರಸ್ತೆ ಬದಿಯಲ್ಲಿ ತಳ್ಳುವ ಗಾಡಿಯಲ್ಲಿ ಇಡೀ ಹಣ್ಣನ್ನು ಹಾಗೂ ಹಣ್ಣನ್ನು ಕೋಯ್ದು ಹಲಸಿನ ತೊಳೆಗಳನ್ನು ವ್ಯಾಪಾರಕ್ಕೆ ಇಟ್ಟಿದ್ದಾರೆ. ಆದರೆ, ಇವರು ಕೊರೊನಾ ಸೋಂಕು ನಿಯಂತ್ರಿಸಲು ಹೇರಲಾದ ಜನತಾ ಕರ್ಫ್ಯೂವಿನಿಂದ ಗ್ರಾಹಕರು ಇಲ್ಲದೇ ನಷ್ಟ ಅನುಭವಿಸುತ್ತಿದ್ದಾರೆ.

ಸಾಮಾನ್ಯವಾಗಿ ಜಿಲ್ಲೆಯಲ್ಲಿ ಹಲಸನ್ನೇ ಮುಖ್ಯ ಬೆಳೆಯನ್ನಾಗಿ ಬೆಳೆಯುವವರು ತೀರಾ ಕಡಿಮೆ. ಕೂಡ್ಲೂರು,ಆಲೂರು,ಚಂದಕವಾಡಿ,ಮಲ್ಲಿಪುರ,ಸರಗೂರುಮೋಳೆ,ಉಡಿಗಾಲ,ಕೊತ್ತಲವಾಡಿ,ತೆರಕಣಾಂಬಿ ಸೇರಿದಂತೆ ಹಲವೆಡೆ ರೈತರು ತಮ್ಮ ತೋಟಗಳಲ್ಲಿ, ಜಮೀನುಗಳಲ್ಲಿ ಇತರೆ ಬೆಳಗಳ ಮಧ್ಯೆ ಹಲಸನ್ನು ಬೆಳೆಯುತ್ತಿದ್ದಾರೆ. ಈ ಸಮಯದಲ್ಲಿ ಇದೇ ಇವರ ಆದಾಯದ ಮೂಲವಾಗಿತ್ತು. ಆದರೆ, ಈಗ ಬೇಡಿಕೆ ಕಡಿಮೆಯಾಗಿರುವುದರಿಂದ ಗುತ್ತಿಗೆದಾರರು ಖರೀದಿಗೆ ಮುಂದಾಗುತ್ತಿಲ್ಲ.

ಮತ್ತೊಂದು ಕಡೆ ಈಗಾಗಲೇ ಗುತ್ತಿಗೆ ಪಡೆದ ವ್ಯಾಪಾರಸ್ಥರು ಗ್ರಾಹಕರ ಕೊರತೆಯಿಂದ ನಷ್ಟ ಅನುಭವಿಸುತ್ತಿದ್ದಾರೆ. ಮರದಿಂದ ಕೋಯ್ದು, ಹಣ್ಣು ಮಾಡಿ, ಸರಕು ಸಾಗಣೆ ಆಟೊದಲ್ಲಿ ಮಾರಾಟಕ್ಕೆಂದು ತಂದ ಹಲಸು ಮಾರಾಟವಾಗದೇ ಕೊಳೆಯುತ್ತಿದೆ. ಅನಿವಾರ್ಯವಾಗಿ ಇವರು ಇಂತಹ ಹಲಸನ್ನು ಹಸುಗಳಿಗೆ ಮೇವಿನ ರೂಪದಲ್ಲಿ ನೀಡುವಂತಾಗಿದೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ದೊಡ್ಡರಾಯಪೇಟೆ ಅಡ್ಡರಸ್ತೆಯಲ್ಲಿ ಹಲಸು ಮಾರಾಟ ಮಾಡುವ ಕೂಡ್ಲೂರಿನ ನಂಜುಂಡಶೆಟ್ಟಿ, ‘ಸ್ವಸಹಾಯ ಸಂಘಗಳಲ್ಲಿ ಸಾಲ ಮಾಡಿ ಮರಗಳನ್ನು ಗುತ್ತಿಗೆಗೆ ತೆಗೆದುಕೊಂಡಿದ್ದೇವೆ. ಈಗ ಗ್ರಾಹಕರೇ ಇಲ್ಲವಾಗಿದ್ದಾರೆ. ಲಾಕ್‌ಡೌನ್‌ ಜಾರಿಯಾದ ನಂತರವಂತೂ ವ್ಯಾಪಾರ ಸ್ವಲ್ಪವೂ ಆಗುವುದಿಲ್ಲ. ಇದೀಗ ಖರೀದಿಸಿರುವ ಹಲಸಿನಹಣ್ಣುಗಳನ್ನು ಏನು ಮಾಡುವುದು’ ಎಂದು ಪ್ರಶ್ನಿಸಿದರು.

ಇದೀಗ ಕೊಳ್ಳೇಗಾಲ ಮತ್ತು ಹನೂರಿನ ಮಧ್ಯೆ ಕೆಲವು ರೈತರು ವಿಯಾಟ್ನಂ ತಳಿಯ ಹಲಸನ್ನು ಬೆಳೆಯಲು ಉತ್ಸುಕತೆ ತೋರಿದ್ದಾರೆ. ಕೇರಳ ಭಾಗದಿಂದ ಗುಂಡ್ಲುಪೇಟೆಗೆ ಈ ತಳಿಯ ಸಸಿಗಳು ಬರುತ್ತಿವೆ. ಇಲ್ಲಿಂದ ಹಲಸಿನ ಗಿಡಗಳನ್ನು ಖರೀದಿಸಿ ಹಲಸಿನ ತೋಟ ಮಾಡಲು ಕೆಲವರು ಆಸಕ್ತಿ ತೋರಿದ್ದಾರೆ. ಆದರೆ, ಕೊರೊನಾ ಅನಿಶ್ಚಿತತೆ ಇವರನ್ನೂ ಗೊಂದಲದಲ್ಲಿ ನೂಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT