ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

SSLC Results: ಗುಂಡ್ಲುಪೇಟೆ ತಾಲ್ಲೂಕಿಗೆ ಮೊದಲ ಸ್ಥಾನ

ಆರೇಳು ವರ್ಷಗಳಿಂದ ಕೊನೆಯ ಎರಡು ಸ್ಥಾನಕ್ಕೆ ತೃಪ್ತಿ ಪಡುತ್ತಿದ್ದ ಬ್ಲಾಕ್‌
Published 10 ಮೇ 2024, 4:45 IST
Last Updated 10 ಮೇ 2024, 4:45 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ಆರೇಳು ವರ್ಷಗಳಿಂದ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಜಿಲ್ಲೆಯಲ್ಲಿ ಕೊನೆಯ ಇಲ್ಲವೇ ಅದಕ್ಕಿಂತ ಮೊದಲ ಸ್ಥಾನ ಪಡೆಯುತ್ತಿದ್ದ ಗುಂಡ್ಲುಪೇಟೆ ತಾಲ್ಲೂಕು, ಈ ವರ್ಷ ಮೊದಲ ಸ್ಥಾನ ಗಳಿಸಿ ಎಲ್ಲರನ್ನೂ ಅಚ್ಚರಿಗೆ ಕೆಡವಿದೆ.

ಶೇ 78.65 ಫಲಿತಾಂಶ ದಾಖಲಿಸುವ ಮೂಲಕ ಇತರ ತಾಲ್ಲೂಕುಗಳನ್ನು ಹಿಂದಿಕ್ಕಿದೆ. ಈ ಸಲ ಪರೀಕ್ಷಾ ಕೊಠಡಿಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳ ಅಳವಡಿಕೆ ಮಾಡಿದ್ದರಿಂದ ನೈಜ ಫಲಿತಾಂಶ ಬಂದಿದೆ ಎಂಬುದು ತಾಲ್ಲೂಕಿನ ಶಿಕ್ಷಕರ ಅಭಿಪ್ರಾಯ.

ಪಟ್ಟಣದ ಆದರ್ಶ ಶಾಲೆಯ ವಿದ್ಯಾರ್ಥಿನಿ, ಕೃಷಿ ಕುಟುಂಬದ ರತ್ನಮ್ಮ 619 ಅಂಕ ಗಳಿಸಿ ಜಿಲ್ಲೆಗೆ ಮೊದಲ ಸ್ಥಾನ ಗಳಿಸುವ ಮೂಲಕ ತಾಲ್ಲೂಕಿನ ಕೀರ್ತಿ ಹೆಚ್ಚಿಸಿದ್ದಾಳೆ.

ಆರೇಳು ವರ್ಷಗಳಿಂದ ತಾಲ್ಲೂಕಿನ ಫಲಿತಾಂಶ ಸುಧಾರಣೆ ಆಗಿರಲಿಲ್ಲ. ಸರ್ಕಾರಿ ಮತ್ತು ಖಾಸಗಿ ಶಾಲೆಗಳ ಫಲಿತಾಂಶ ಉತ್ತಮವಾಗಿದ್ದರೂ, ಅನುದಾನಿತ ಶಾಲೆಗಳ ಫಲಿತಾಂಶ ಕಳಪೆಯಾಗಿತ್ತು. ಇದು ಒಟ್ಟಾರೆ ಫಲಿತಾಂಶದ ಮೇಲೆ ಪ್ರಭಾವ ಬೀರುತ್ತಿತ್ತು. ಅನುದಾನಿತ ಶಾಲೆಗಳ ಫಲಿತಾಂಶ ಕಡಿಮೆ ಆದರೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂಬ ಎಚ್ಚರಿಕೆ ಹಾಗೂ ಈ ಬಾರಿಯ ಪರೀಕ್ಷೆಯಲ್ಲಿ ಕೊಠಡಿಗಳಿಗೂ ಸಿಸಿಟಿವಿ ಕ್ಯಾಮೆರಾಗಳ ಅಳವಡಿಕೆ ಮಾಡುತ್ತಾರೆ ಎಂಬ ಮಾಹಿತಿ ಇದ್ದುದರಿಂದ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಶ್ರಮ ವಹಿಸಬೇಕಾಯಿತು. ಫಲಿತಾಂಶ ಸುಧಾರಣೆಗಾಗಿ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಸೇರಿದಂತೆ ಶಿಕ್ಷಕರ ತಂಡ ವಿವಿಧ ಕಾರ್ಯಕ್ರಮಗಳ‌ನ್ನೂ ಹಮ್ಮಿಕೊಂಡಿತ್ತು.‌ ಇವೆಲ್ಲದರ ಪರಿಣಾಮವಾಗಿ ಫಲಿತಾಂಶ ಸುಧಾರಿಸಿದೆ.

ಪಟ್ಟಣದ ಮೂವರು ವಿದ್ಯಾರ್ಥಿಗಳು 615ಕ್ಕಿಂತಲೂ ಹೆಚ್ಚು ಅಂಕ ಗಳಿಸಿದ್ದಾರೆ. ಇವರಲ್ಲಿ  ಆದರ್ಶ ವಿದ್ಯಾಲಯದ ರತ್ನಮ್ಮ (619), ಎನ್.ಎಂ.ನಂದಿನಿ (615) ಮತ್ತು ಸಿಎಂಐ ಕ್ರೈಸ್ಟ್ ಶಾಲೆಯ ಎಂ.ಎನ್.ಅಂಕಿತಾ (615) ಅಂಕ ಪಡೆದುಕೊಂಡಿದ್ದಾರೆ.

ತಾಲ್ಲೂಕಿನಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ 1,250 ಬಾಲಕರು, 1,195 ಬಾಲಕಿಯರು ಸೇರಿದಂತೆ ಒಟ್ಟು 2,445 ವಿದ್ಯಾರ್ಥಿಗಳು ಹಾಜರಾಗಿದ್ದರು. ಅದರಲ್ಲಿ 873 ಬಾಲಕರು, 1,050 ಬಾಲಕಿಯರು ಸೇರಿ ಒಟ್ಟು 1,923 ಮಂದಿ ಉತ್ತೀರ್ಣರಾಗಿದ್ದು, ಒಟ್ಟು ಶೇ 78.65ರಷ್ಟು ಫಲಿತಾಂಶ ಬಂದಿದೆ. ಇದರಲ್ಲಿ ಶೇ 69.84 ಬಾಲಕರು ಹಾಗೂ ಶೇ 87.86ರಷ್ಟು ಬಾಲಕಿಯರು ತೇರ್ಗಡೆ ಹೊಂದಿದ್ದಾರೆ. ಇದರಲ್ಲಿ ತೆರಕಣಾಂಬಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಶೇ 100 ಫಲಿತಾಂಶ ದಾಖಲಿಸಿದೆ.

ತಾಲ್ಲೂಕಿನ 26 ಸರ್ಕಾರಿ ಶಾಲೆಗಳಲ್ಲಿ 668 ಬಾಲಕರು, 701 ಬಾಲಕಿಯರು ಸೇರಿ ಒಟ್ಟು 1,369 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಅದರಲ್ಲಿ 1,056 ವಿದ್ಯಾರ್ಥಿಗಳು ತೇರ್ಗಡೆ ಹೊಂದುವ ಮೂಲಕ ಶೇ 77.13 ಫಲಿತಾಂಶ ಬಂದಿದೆ.

14 ಅನುದಾನಿತ ಶಾಲೆಗಳಲ್ಲಿ 324 ಬಾಲಕರು, 276 ಬಾಲಕಿಯರು ಸೇರಿ 600 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. 423 ವಿದ್ಯಾರ್ಥಿಗಳು ತೇರ್ಗಡೆ ಹೊಂದುವ ಮೂಲಕ ಶೇ 70.50ರಷ್ಟು ಫಲಿತಾಂಶ ದಾಖಲಾಗಿದೆ.

9 ಖಾಸಗಿ ಶಾಲೆಗಳಲ್ಲಿ 258 ಬಾಲಕರು, 218 ಬಾಲಕಿಯರು ಸೇರಿ ಒಟ್ಟು 476 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಅದರಲ್ಲಿ 444 ವಿದ್ಯಾರ್ಥಿಗಳು ತೇರ್ಗಡೆ ಹೊಂದುವ ಮೂಲಕ ಶೇ 93.27ರಷ್ಟು ಫಲಿತಾಂಶ ದೊರಕಿದೆ.

ರೈತನ ಮಗಳು ಜಿಲ್ಲೆಗೆ ಮೊದಲಿಗಳು

625ರಲ್ಲಿ 619 ಅಂಕಗಳನ್ನು ಗಳಿಸಿರುವ ಪಟ್ಟಣದ ಆದರ್ಶ ವಿದ್ಯಾಲಯದ ವಿದ್ಯಾರ್ಥಿನಿ ರತ್ನಮ್ಮ ರೈತನ ಮಗಳು. ಟ್ಯೂಷನ್‌ ಪಡೆಯದೇ ಈ ಸಾಧನೆ ಮಾಡಿದ್ದಾಳೆ. ತಾಲ್ಲೂಕಿನ ಮಲ್ಲಮ್ಮನಹುಂಡಿ ಗ್ರಾಮದ ರೈತರ ಸ್ವಾಮಿ ಮತ್ತು ರೂಪ ದಂಪತಿಯ ಒಬ್ಬಳೇ ಮಗಳಾದ ರತ್ನಮ್ಮ ಅವರಿಗೆ ಬಡತನ ವಿದ್ದರೂ ಓದಿಗೆ ಅಡ್ಡಿಯಾಗಿಲ್ಲ. ತಮ್ಮೆರಡು ಎಕರೆ ಜಮೀನಿನಲ್ಲಿ ಕೃಷಿ ಮಾಡುತ್ತ ಮಗಳ ಶೈಕ್ಷಣಿಕ ಜೀವನಕ್ಕೆ ಪೋಷಕರು ಬೆನ್ನೆಲುಬಾಗಿ ಇದ್ದಾರೆ.

ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಸಹಕಾರದಿಂದ ಜಿಲ್ಲೆಗೆ ಮೊದಲ ಸ್ಥಾನ ಪಡೆಯಲು ಸಾಧ್ಯವಾಗಿದೆ
-ರಾಜಶೇಖರ್, ಕ್ಷೇತ್ರ ಶಿಕ್ಷಣಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT