ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಂಡ್ಲುಪೇಟೆ | ₹5 ಕೋಟಿ ವೆಚ್ಚದಲ್ಲಿ ಪುರಸಭೆಗೆ ಹೊಸ ಕಚೇರಿ

ಗುಂಡ್ಲುಪೇಟೆ: ₹53.15 ಕೋಟಿ ಮೊತ್ತದ ಬಜೆಟ್‌, ₹52.64 ಕೋಟಿ ವೆಚ್ಚ, ₹50.72 ಲಕ್ಷ ಉಳಿತಾಯ
Last Updated 15 ಮಾರ್ಚ್ 2023, 4:01 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ಪಟ್ಟಣದ ಪುರಸಭೆಯಲ್ಲಿ 2023-24ನೇ ಸಾಲಿಗೆ ₹53.15 ಕೋಟಿ ಮೊತ್ತದ, ₹50.72 ಲಕ್ಷ ಉಳಿತಾಯ ಬಜೆಟ್ ಅನ್ನು ಪುರಸಭೆ ಅಧ್ಯಕ್ಷ ಪಿ.ಗಿರೀಶ್ ಮಂಗಳವಾರ ಮಂಡಿಸಿದರು.

ವಿ‌ಶೇಷ ಅನುದಾನದಲ್ಲಿ ₹5 ಕೋಟಿ ವೆಚ್ಚದಲ್ಲಿ ಪುರಸಭೆಗೆ ಹೊಸ ಕಚೇರಿ ನಿರ್ಮಾಣ ಮಾಡುವ ಯೋಜನೆಯನ್ನು ಬಜೆಟ್‌ನಲ್ಲಿ ಘೋಷಿಸಲಾಗಿದೆ.

ಪಾದಚಾರಿ ರಸ್ತೆ ಮತ್ತು ಚರಂಡಿ ಅಭಿವೃದ್ಧಿಗೆ 6.25 ಕೋಟಿ ಮೀಸಲಿಡಲಾಗಿದೆ. ನೀರು ಸರಬರಾಜು ಕಟ್ಟಡ, ನೀರು ಸರಬರಾಜು ಅಭಿವೃದ್ಧಿ ಕಾಮಗಾರಿ ಮತ್ತು ಯಂತ್ರೋಪಕರಣ ಖರೀದಿಗೆ ₹3.35 ಕೋಟಿ, ಪುರಸಭೆ ಅಧಿಕಾರಿ, ಸಿಬ್ಬಂದಿಗಳ ವೇತನ ಮತ್ತು ಭತ್ಯೆಗಳಿಗೆ ₹2.50 ಕೋಟಿ, ಎಸ್‍ಎಫ್‍ಸಿ ವಿದ್ಯುತ್ ಶುಲ್ಕ ₹1.50 ಕೋಟಿ ಹಂಚಿಕೆ ಮಾಡಲಾಗಿದೆ.

‘ನೀರಿನ ಶುಲ್ಕ ಮತ್ತು ಠೇವಣಿ, ಘನ ತ್ಯಾಜ್ಯ ನಿರ್ವಹಣೆ ಶುಲ್ಕ, ರಸ್ತೆ ಅಗೆತ ಶುಲ್ಕ, ಖಾತೆ ಬದಲಾವಣೆ ಮತ್ತು ಪ್ರತಿಗಳ ಶುಲ್ಕ, ಬ್ಯಾಂಕ್ ಖಾತೆ ಬಡ್ಡಿ, ಆಸ್ತಿ ತೆರಿಗೆ ಮತ್ತು ದಂಡ, ಮಳಿಗೆಗಳ ಬಾಡಿಗೆ, ಕಟ್ಟಡ ಪರವಾನಗಿ ಶುಲ್ಕ, ಅಭಿವೃದ್ಧಿ ಮತ್ತು ಮೇಲ್ವಿಚಾರಣ ಶುಲ್ಕ, ಉದ್ದಿಮೆ ಪರವಾನಗಿ ಶುಲ್ಕ, ಜಾಹೀರಾತು, ತೆರಿಗೆ, ಸ್ಟಾಂಪ್ ಶುಲ್ಕ, ಸಕ್ಕಿಂಗ್ ಮೆಷಿನ್, ಸಂತೆ, ಟೆಂಡರ್ ಫಾರಂ, ಪ್ಲಂಬರ್ ನೋಂದಣಿ ಮೂಲಕ ಮೂಲಕ ₹3.86 ಕೋಟಿ ಆದಾಯ ನಿರೀಕ್ಷಿಸಲಾಗಿದೆ’ ಎಂದು ಗಿರೀಶ್‌ ಹೇಳಿದರು.

‘ವಿಶೇಷ ಅನುದಾನ ₹10.50 ಕೋಟಿ, ಎಸ್‍ಎಫ್‍ಸಿ ಮುಕ್ತನಿಧಿ ₹2 ಕೋಟಿ, ಎಸ್‍ಎಫ್‍ಸಿ ವೇತನ ₹2.50 ಕೋಟಿ, ಎಸ್‍ಎಫ್‍ಸಿ ವಿದ್ಯುತ್ ಶುಲ್ಕ ₹6 ಕೋಟಿ, ಪೌರ ಕಾರ್ಮಿಕರ ಗೃಹಭಾಗ್ಯ ಅನುದಾನ ₹30 ಲಕ್ಷ, ನಲ್ಮ್ ಯೋಜನೆ ಅಡಿ ₹12.50 ಲಕ್ಷ, 15 ನೇ ಹಣಕಾಸು ಯೋಜನೆಯಡಿ ₹3 ಕೋಟಿ, ಎಸ್‍ಎಫ್‍ಸಿ ಕುಡಿಯುವ ನೀರಿನ ಅನುದಾನ ₹1.25 ಕೋಟಿ, ಸ್ವಚ್ಚ ಭಾರತ್ ಮಿಷನ್ ₹50 ಲಕ್ಷ, ಘನ ತ್ಯಾಜ್ಯ ನಿರ್ವಹಣೆ ಅನುದಾನ ₹2.50 ಕೋಟಿ ನಿರೀಕ್ಷಿಸಲಾಗಿದೆ’ ಎಂದರು.

‘ನಿರ್ವಸತಿಗರಿಗೆ 670 ನಿವೇಶನ ನೀಡಿರುವುದು ನಮ್ಮ ಸಾಧನೆ. ಮತ್ತೆ 388 ನಿವೇಶನ ಹಂಚಿಕೆ ಪ್ರಗತಿಯಲ್ಲಿದ್ದು, ಸದ್ಯದಲ್ಲೇ ತೃತೀಯ ಹಂತಕ್ಕೆ 10 ಎಕರೆ ಸರ್ಕಾರಿ ಭೂಮಿ ಸ್ವಾದೀನ ಪ್ರಕ್ರಿಯೆ ಆಗಲಿದೆ. ವೀರಮದಕರಿ ನಾಯಕ ರಸ್ತೆ, ಅಂಬೇಡ್ಕರ್ ಸರ್ಕಲ್‍ನಿಂದ ಕೊತ್ವಾಲ್ ಚಾವಡಿ ವರೆಗಿನ ಎಸ್.ಆರ್ ರಸ್ತೆ ಕಾಂಕ್ರೀಟೀಕರಣ ಆಗಲಿದೆ’ ಎಂದು ಹೇಳಿದ ಅವರು ಮುಂದಿನ ಆರ್ಥಿಕ ವರ್ಷದಲ್ಲಿ ಪುರಸಭೆ ವ್ಯಾಪ್ತಿಯಲ್ಲಿ ಕೈಗೊಳ್ಳಲಾಗುವ ವಿವಿಧ ಕಾಮಗಾರಿಗಳ ವಿವರಗಳನ್ನು ನೀಡಿದರು.

ಬಜೆಟ್‌ ನಂತರ ಮಾತನಾಡಿದ ಆಡಳಿತ, ವಿರೋಧ ಪಕ್ಷದ ಸದಸ್ಯರು, ‘ರಾಷ್ಟೀಯ ಹೆದ್ದಾರಿ ಚರಂಡಿ ಅವ್ಯವಸ್ಥೆ ಸರಿಪಡಿಸುವುದು, ಅರ್ಹರಿಗೆ ನಿವೇಶನ ನಿವೇಶನ ನೀಡಿಕೆ, ಸ್ವಚ್ಚ ಪಟ್ಟಣ ಮಾಡವುದು ಸೇರಿ ತಮ್ಮ ವಾರ್ಡ್‍ಗಳಲ್ಲಿ ಆಗಬೇಕಾದ ಕೆಲಸಗಳಿಗೆ ಅನುದಾನ ಮೀಸಲಿಡಬೇಕು’ ಎಂದು ಕೋರಿದರು.

ಪುರಸಭೆ ಉಪಾಧ್ಯಕ್ಷೆ ದೀಪಿಕಾ ಅಶ್ವಿನ್, ಮುಖ್ಯಾಧಿಕಾರಿ ವಸಂತಕುಮಾರಿ, ಸದಸ್ಯರು ಇದ್ದರು.

ನಿವೇಶನ ಹಂಚಿಕೆಯಲ್ಲಿ ಭ್ರಷ್ಟಾಚಾರ: ಆರೋಪ

ಪುರಸಭೆ ವತಿಯಿಂದ ನಿವೇಶನ ಹಂಚಿಕೆ ಮಾಡಿರುವ ವಿಚಾರದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಎಸ್‌ಡಿಪಿಐ ಸದಸ್ಯ ಎಚ್.ಆರ್.ರಾಜಗೋಪಾಲ್ ಆರೋಪಿಸಿದರು. ಇದರ ಬಗ್ಗೆ ಸೂಕ್ತ ತನಿಖೆ ಮಾಡಬೇಕು ಎಂದು ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಪುರಸಭೆ ಅಧ್ಯಕ್ಷ ಪಿ.ಗಿರೀಶ್, ‘ನಮಗೆ ಯಾವುದೇ ದೂರು ಬಂದಿಲ್ಲ. ದೂರು ನೀಡಿದರೆ ಈ ಬಗ್ಗೆ ಕ್ರಮ ವಹಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT