ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಡೀಪುರ, ನಾಗರಹೊಳೆಯಲ್ಲಿ ಪ್ರವಾಸಿಗರಿಗೆ ವಿಮೆ ಜಾರಿ

Published 7 ಅಕ್ಟೋಬರ್ 2023, 15:27 IST
Last Updated 7 ಅಕ್ಟೋಬರ್ 2023, 15:27 IST
ಅಕ್ಷರ ಗಾತ್ರ

ಚಾಮರಾಜನಗರ/ಗುಂಡ್ಲುಪೇಟೆ/ಮೈಸೂರು: ರಾಜ್ಯದ ರಕ್ಷಿತಾರಣ್ಯಗಳಲ್ಲಿ ಪರಿಸರ ಪ್ರವಾಸೋದ್ಯಮ ಸ್ಥಳಗಳಿಗೆ ಭೇಟಿ ನೀಡುವ ಪ್ರವಾಸಿಗರಿಗೆ ವಿಮೆ ಭದ್ರತೆ ಒದಗಿಸುವ ಅರಣ್ಯ ಇಲಾಖೆಯ ಯೋಜನೆ ಬಂಡೀಪುರ, ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಜಾರಿಗೆ ಬಂದಿದೆ. 

ಎರಡೂ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಸಫಾರಿ ವ್ಯವಸ್ಥೆ ಇದ್ದು, ಈ ಸಂದರ್ಭದಲ್ಲಿ ಕಾಡು ಪ್ರಾಣಿಗಳ ದಾಳಿ ಸೇರಿದಂತೆ ಇತರೆ ಯಾವುದೇ ಅವಘಡದ ಸಂದರ್ಭಗಳಲ್ಲಿ ಪ್ರವಾಸಿಗರ ಜೀವ ಹಾನಿಯಾದರೆ ₹1 ಕೋಟಿ ವಿಮಾ ಮೊತ್ತ ಪ್ರವಾಸಿಗರ ಕುಟುಂಬದವರಿಗೆ ಸಿಗಲಿದೆ. 

ಈ ಯೋಜನೆಗೆ ಅರ್ಹರಾಗಲು ಯಾವುದೇ ನೋಂದಣಿ ಅಗತ್ಯವಿಲ್ಲ, ಸಫಾರಿಗೆ ಹೋಗಿರುವ ಟಿಕೆಟ್ ಇದ್ದರೆ ಸಾಕು. ಕಾಡಿನೊಳಗೆ ಪ್ರಾಣ ಹಾನಿ ಸಂಭವಿಸಿದರೆ ಆರ್ಥಿಕ ನೆರವು ಸಿಗಲಿದೆ ಎಂದು ಬಂಡೀಪುರ ಹುಲಿ ಯೋಜನೆ ನಿರ್ದೇಶ‌ಕ ರಮೇಶ್‌ಕುಮಾರ್ ಮಾಹಿತಿ ನೀಡಿದ್ದಾರೆ.

ಬಂಡೀಪುರದ ಸಫಾರಿಗೆ ಪ್ರತಿ ವರ್ಷ 1.5 ಲಕ್ಷದಷ್ಟು ಪ್ರವಾಸಿಗರು ಬರುತ್ತಾರೆ. ಸಫಾರಿ ವೇಳೆ ಆನೆ, ಹುಲಿ ಚಿರತೆ ಹಾಗೂ ಕಾಡೆಮ್ಮೆಗಳು ಆಕಸ್ಮಿಕವಾಗಿ ಪ್ರವಾಸಿಗರ ಮೇಲೆ ದಾಳಿ ಮಾಡುವ ಅಪಾಯ ಇರುತ್ತದೆ. ಆನೆಗಳು ಸಫಾರಿ ವಾಹನಗಳನ್ನು ಅಟ್ಟಾಡಿಸಿರುವ ನಿದರ್ಶನಗಳೂ ಇವೆ. 

‘ಪ್ರವಾಸಿಗರಿಂದ ಇಲಾಖೆಗೆ ಅನೇಕ ಉಪಯೋಗ ಆಗುತ್ತದೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಿಂದ ಪ್ರವಾಸಿಗರಿಗೂ ಅನುಕೂಲವಾಗಬೇಕು ಎಂಬ ಉದ್ದೇಶದಿಂದ ವಿಮೆ ಯೋಜನೆ ಜಾರಿಗೊಳಿಸಲಾಗಿದೆ’ ಎಂದು ರಮೇಶ್ ಕುಮಾರ್ ತಿಳಿಸಿದರು.

ಅರಣ್ಯ ಇಲಾಖೆಯ ಅಂಗಸಂಸ್ಥೆಯಾದ ಜಂಗಲ್‌ ಲಾಡ್ಜಸ್‌ ಅಂಡ್‌ ರೆಸಾರ್ಟ್ಸ್‌, ತನ್ನ ರೆಸಾರ್ಟ್ಸ್‌ಗೆ ಭೇಟಿ ನೀಡುವ ಎಲ್ಲ ಪ್ರವಾಸಿಗರಿಗೆ ವಿಮೆಯ ಭದ್ರತೆ ಒದಗಿಸುತ್ತಿದೆ. ಅದೇ ಮಾದರಿಯಲ್ಲಿ ಪರಿಸರ ಪ್ರವಾಸೋದ್ಯಮ ಸ್ಥಳಕ್ಕೆ ಭೇಟಿ ನೀಡುವ ಪ್ರವಾಸಿಗರಿಗೂ ವಿಮಾ ಭದ್ರತೆ ಒದಗಿಸಬೇಕು ಎಂದು ಬೆಳಗಾವಿಯ ಪರಿಸರ ಸಂರಕ್ಷಣವಾದಿ ಗಿರಿಧರ ಕುಲಕರ್ಣಿ ಅವರು ಅರಣ್ಯ ಇಲಾಖೆಗೆ ಪತ್ರ ಬರೆದು, ಒತ್ತಾಯಿಸಿದ್ದರು. ಈ ಪತ್ರಕ್ಕೆ ಸ್ಪಂದಿಸಿದ್ದ ಅರಣ್ಯ ಇಲಾಖೆ ವಿಮೆ ಯೋಜನೆ ಜಾರಿಗೊಳಿಸಲು ತೀರ್ಮಾನಿಸಿತ್ತು. 

ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಕುಮಾರ್‌ ಪುಷ್ಕರ್‌ ಅವರು ಜಿಲ್ಲೆಯ ಬಂಡೀಪುರ, ಬಿಆರ್‌ಟಿ ಸೇರಿದಂತೆ ರಾಜ್ಯದ ಎಲ್ಲ ಐದು ಹುಲಿಸಂರಕ್ಷಿತ ಪ್ರದೇಶದ ನಿರ್ದೇಶಕರು, ರಕ್ಷಿತಾರಣ್ಯಗಳ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಇದೇ ಜೂನ್‌ 22ರಂದು ಪತ್ರ ಬರೆದು ಯೋಜನೆ ಅನುಷ್ಠಾನಕ್ಕೆ ಕ್ರಮ ವಹಿಸುವಂತೆ ಸೂಚಿಸಿದ್ದರು. 

ಜಿಲ್ಲೆಯ ಬಿಆರ್‌ಟಿ ಹುಲಿ ಯೋಜನೆ ಪ್ರದೇಶದಲ್ಲೂ ಈ ಯೋಜನೆ ಜಾರಿಗೆ ಬರುತ್ತಿದ್ದು, ಕೊನೆಯ ಹಂತದ ಪ್ರಕ್ರಿಯೆ ನಡೆಯುತ್ತಿದೆ. 

ಬಂಡೀಪುರ, ನಾಗರಹೊಳೆ ಮಾದರಿಯಲ್ಲಿ ನಮ್ಮಲ್ಲೂ ವಿಮಾ ಯೋಜನೆ ಶೀಘ್ರದಲ್ಲಿ ಜಾರಿಗೆ ಬರಲಿದೆ ಎಂದು ಬಿಆರ್‌ಟಿ ಡಿಸಿಎಫ್‌ ದೀಪ್‌ ಜೆ.ಕಾಂಟ್ರ್ಯಾಕ್ಟರ್‌ ‘ಪ್ರಜಾವಾಣಿ’ಗೆ ತಿಳಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT