ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕ ಕಲೆ, ಸಂಸ್ಕೃತಿಯ ನೆಲೆಬೀಡು: ಶಾಸಕ ಎ.ಆರ್.ಕೃಷ್ಣಮೂರ್ತಿ

Published 12 ಫೆಬ್ರುವರಿ 2024, 16:04 IST
Last Updated 12 ಫೆಬ್ರುವರಿ 2024, 16:04 IST
ಅಕ್ಷರ ಗಾತ್ರ

ಕೊಳ್ಳೇಗಾಲ: ‘ಕರ್ನಾಟಕ ಕಲೆ ಮತ್ತು ಸಂಸ್ಕೃತಿಯ ನೆಲೆಬೀಡು’ ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಹೇಳಿದರು.

ನಗರದಲ್ಲಿ ಭಾನುವಾರ ಸಂಜೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಆಯೋಜಿಸಿದ್ದ ಜಿಲ್ಲಾ ಮಟ್ಟದ ‘ಸಾಂಸ್ಕೃತಿಕ ಸೌರಭ 2023-24’ ಉದ್ಘಾಟನೆ ಮಾಡಿ ಮಾತನಾಡಿದರು.

‘ವಿಶ್ವದಲ್ಲೆಡೆ ಕಲೆ ಮತ್ತು ಸಂಸ್ಕೃತಿ ಅನಾವರಣಗೊಳಿಸುವಲ್ಲಿ ಕರ್ನಾಟಕ ಅಗ್ರ ಸ್ಥಾನದಲ್ಲಿದೆ. ಮಲೆ ಮಹದೇಶ್ವರ, ಮಂಟೇಸ್ವಾಮಿ, ಸಿದ್ದಪ್ಪಾಜಿ ಅವರಂತಹ ಸಾಂಸ್ಕೃತಿಕ ನಾಯಕರು ನಡೆದಾಡಿದಂತಹ ಜಿಲ್ಲೆ, ಐತಿಹಾಸಿಕ, ಸಾಂಸ್ಕೃತಿಕ ಲೋಕದ ವೈಭವ ಇಲ್ಲಿ ಸೃಷ್ಟಿ ಮಾಡಬಹುದು. ವಿಶ್ವವಿಖ್ಯಾತ ದಸರಾದಲ್ಲಿ ಭಾಗವಹಿಸುವ ಕಲಾತಂಡಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿವೆ. ಹಂಪಿ ಉತ್ಸವವನ್ನು ಸರ್ಕಾರ ವಹಿಸಿಕೊಳ್ಳುತ್ತದೆ. ದಸರಾ ವೈಭವವನ್ನು ಹಂಪಿ ಉತ್ಸವದಲ್ಲಿ ಕಾಣುತ್ತೇವೆ. ಸ್ಥಳೀಯ ಕಲಾವಿದರು ಕೇವಲ ಜಿಲ್ಲಾ, ರಾಜ್ಯ, ರಾಷ್ಟ್ರಮಟ್ಟವಲ್ಲದೆ ಅಂತರಾಷ್ಟ್ರೀಯ ಮಟ್ಟದ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಲೆ ಅನಾವರಣಗೊಳಿಸಬೇಕು’ಎಂದರು.

‘ಈ ಕಾರ್ಯಕ್ರಮವನ್ನು ಜಿಲ್ಲಾ ಮಟ್ಟದಲ್ಲಿ ಹಮ್ಮಿಕೊಳ್ಳಬೇಕಾಗಿತ್ತು. ಆದರೆ, ಕೊಳ್ಳೇಗಾಲ ಜಿಲ್ಲೆಯ ಉಪವಿಭಾಗ ಕೇಂದ್ರ. ಆದ್ದರಿಂದ ಈ ಕಾರ್ಯಕ್ರಮವನ್ನು ಇಲ್ಲಿ ಆಯೋಜಿಸಲಾಗಿದೆ. ಇದುವರೆಗೂ ಕ್ರೀಡಾಕೂಟಗಳು, ಆರೋಗ್ಯ ಮೇಳಗಳು, ಹಾಗೂ ರಾಷ್ಟ್ರೀಯ ಹಬ್ಬ ಇಲ್ಲಿನ ಎಂಜಿಎಸ್‌ವಿ ಕಾಲೇಜು ಮೈದಾನದಲ್ಲಿ ನಡೆಯುತ್ತಿದ್ದವು. ನಗರ ಸಭೆಯ ವಾರ್ಡ್ ಯಾವುದೇ ಬಡಾವಣೆಗಳಲ್ಲಿ ಇಂತಹ ಕಾರ್ಯಕ್ರಮಗಳು ನಡೆಯುತ್ತಿರಲಿಲ್ಲ. ಈ ಬಾರಿ ಮಂಜುನಾಥ ನಗರದಲ್ಲಿ  ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಸಾಂಸ್ಕೃತಿಕ ಸೌರಭ ಕಾರ್ಯಕ್ರಮ ಆಯೋಜಿಸಲಾಗಿದೆ’ ಎಂದರು.

 ಸಂಜೆ 6ಕ್ಕೆ ಕೆಎಸ್ಆರ್‌‌‌ಟಿಸಿ ಬಸ್ ಡಿಪೋ ವೃತ್ತದಿಂದ ಬಡಾವಣೆ ಮುಖ್ಯರಸ್ತೆ ಮೂಲಕ ಕಲಾ ತಂಡಗಳ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯಲ್ಲಿ ಗೊರವರ ಕುಣಿತ , ಡೊಳ್ಳು ಕುಣಿತ , ಕೀಲು ಕುದುರೆ, ಜೋಕರ್, ತಮಟೆ, ಕಲಾವಿದರು ಭಾಗವಹಿಸಿದ್ದರು.

ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸ್ಥಳೀಯ ಕಲಾವಿದರಾದ ಕೊಳ್ಳೇಗಾಲದ ಬಸಪ್ಪ ತಂಡದವರಿಂದ ವಾದ್ಯ ಸಂಗೀತ, ಕಟ್ನವಾಡಿ ಮಹದೇವಸ್ವಾಮಿ ತಂಡದಿಂದ ವಚನ ಸಂಗೀತ, ಚಾಮರಾಜನಗರದ ಸಿ.ಎಂ.ನರಸಿಂಹಮೂರ್ತಿ  ತಂಡದಿಂದ ಸುಗಮ ಸಂಗೀತ, ವಿ.ಮಹೇಶ್‌‌ ತಂಡದಿಂದ ನೃತ್ಯರೂಪಕ, ರಾಮಸಮುದ್ರದ ಜಿ.ರಾಜಪ್ಪ ಮತ್ತು ತಂಡದಿಂದ ಜನಪದ ಜೇಂಕಾರ, ಗುಂಡ್ಲುಪೇಟೆ ಮಹದೇವಪ್ರಸಾದ್ ತಂಡದಿಂದ ನಾಟಕ ಮಂಟೇಸ್ವಾಮಿ ಕಥಾ ಪ್ರಸಂಗ, ದೊಡ್ಡಮೂಳೆ ದೊಡ್ಡ ಗವಿಬಸಪ್ಪ ಮತ್ತು ತಂಡದಿಂದ ನೀಲಗರ ಪದ ಕಾರ್ಯಕ್ರಮ ನಡೆದವು.

 ಕಾರ್ಯಕ್ರಮಕ್ಕೆ ನಗರಸಭಾ ಸದಸ್ಯ ಪ್ರಕಾಶ್ ಶಂಕರಪುರ, ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳ. ಎಂ ಅವರನ್ನು ಹೊರತುಪಡಿಸಿ ಉಳಿದ ಯಾವ ಆಹ್ವಾನಿತ ಗಣ್ಯರು ಬಾರದ ಕಾರಣ ಶಾಸಕರ ಜೊತೆ ಆಗಮಿಸಿದ್ದ ನಗರಸಭಾ ಸದಸ್ಯೆ ರೇಖಾ ರಮೇಶ್, ಬಸ್ತಿಪುರ ಶಾಂತರಾಜು, ಜಿ.ಪಿ.ಶಿವಕುಮಾರ್, ಸುಮಾ ಸುಬ್ಬಣ್ಣ, ಅಕ್ಮಲ್ ಪಾಷ, ಕೃಷ್ಣವೇಣಿ, ಕೊಳ್ಳೇಗಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ತೋಟೇಶ್, ಯಳಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಮಚಂದ್ರ, ಶಾಲೆಯ ಮುಖ್ಯಶಿಕ್ಷಕಿ ಅಸಂತಮೇರಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT