ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಬಹಿರಂಗ ಪ್ರಚಾರ ಅಂತ್ಯ, ಮನೆ ಮನೆ ಭೇಟಿ

ಇಂದು ಮಸ್ಟರಿಂಗ್‌ ಕಾರ್ಯ, ನಾಲ್ಕು ತಾಲ್ಲೂಕು ಕೇಂದ್ರಗಳಲ್ಲಿ ವ್ಯವಸ್ಥೆ
Published 25 ಏಪ್ರಿಲ್ 2024, 4:37 IST
Last Updated 25 ಏಪ್ರಿಲ್ 2024, 4:37 IST
ಅಕ್ಷರ ಗಾತ್ರ

ಚಾಮರಾಜನಗರ: ಶುಕ್ರವಾರ (ಏ.26) ನಡೆಯಲಿರುವ ಮತದಾನಕ್ಕೆ ಜಿಲ್ಲಾಡಳಿತ ಕೊನೆ ಕ್ಷಣದ ಸಿದ್ಧತೆಯಲ್ಲಿ ತೊಡಗಿದ್ದು, ಬುಧವಾರ ಸಂಜೆ 6 ಗಂಟೆಗೆ ಬಹಿರಂಗ ಪ್ರಚಾರ ಅಂತ್ಯಗೊಂಡಿದೆ. 

ಜಿಲ್ಲೆಯ ವ್ಯಾಪ್ತಿಯಲ್ಲಿ ರಾಜಕೀಯ ಪಕ್ಷಗಳ ಮುಖಂಡರು ಬೆಳಿಗ್ಗೆಯಿಂದಲೇ ಬಹಿರಂಗ ಪ್ರಚಾರದಲ್ಲಿ ತೊಡಗಲಿಲ್ಲ. ಮನೆ ಮನೆ ಭೇಟಿ ಮಾಡಿ ತಮ್ಮ ಅಭ್ಯರ್ಥಿ ಪರವಾಗಿ ಪ್ರಚಾರ ನಡೆಸಿದರು. 

ಅಭ್ಯರ್ಥಿಗಳ ಹೆಸರು ಘೋಷಣೆಯಾದ ಬಳಿಕ ನಿರಂತರವಾಗಿ ಬಿರು ಬಿಸಿಲಿನಲ್ಲಿ ಕ್ಷೇತ್ರದಾದ್ಯಂತ ಸುತ್ತಾಡಿದ್ದ ಮುಖಂಡರು ಬುಧವಾರ ಕೊಂಚ ಸಾವರಿಸಿಕೊಂಡರು. ಬಿಜೆಪಿ, ಕಾಂಗ್ರೆಸ್‌ ಮುಖಂಡರು ಸುದ್ದಿಗೋಷ್ಠಿ ನಡೆಸಿ ಪ್ರಚಾರದ ಬಗ್ಗೆ ವಿವರಗಳನ್ನು ನೀಡಿ, ಮತದಾರರು ಬೆಂಬಲ ನೀಡಬೇಕು ಮಾಧ್ಯಮಗಳ ಮೂಲಕ ಮನವಿ ಮಾಡಿದರು. 

ಮತದಾರರ ಸೆಳೆಯಲು ತಂತ್ರ: ಮತದಾನಕ್ಕೆ ಇನ್ನು ಒಂದೇ ದಿನ ಬಾಕಿ ಇರುವಂತೆಯೇ ಮುಖಂಡರು ಮತದಾರರನ್ನು ಸೆಳೆಯಲು ಕಾರ್ಯತಂತ್ರ ಹೆಣೆಯುತ್ತಿದ್ದಾರೆ. ಆಯಾ ಸಮಾಜದ ಮುಖಂಡರು, ಯಜಮಾನರ ಮೂಲಕ ದೂರವಾಣಿ ಕರೆ ಮಾಡಿಸುವುದು, ಪಕ್ಷದ ಮುಖಂಡರು ಮನೆಗಳಿಗೇ ನೇರವಾಗಿ ತೆರಳಿ ಬೆಂಬಲ ನೀಡುವಂತೆ ಮನವಿ ಮಾಡುವುದು, ವಿರೋಧ ಪಕ್ಷದ ಪ್ರಭಾವಿ ಮುಖಂಡರನ್ನು ಸೆಳೆಯುವುದು ಅಥವಾ ತಟಸ್ಥರಾಗುವಂತೆ ನೋಡಿಕೊಳ್ಳುವುದು ಸೇರಿದಂತೆ ವಿವಿಧ ಪ್ರಯತ್ನಗಳನ್ನು ಮಾಡುತ್ತಿದ್ದಾರೆ.  

ಮಸ್ಟರಿಂಗ್‌ ಇಂದು: ಮತದಾನಕ್ಕೆ ಸಂಬಂಧಿಸಿದಂತೆ ಮಸ್ಟರಿಂಗ್‌ ಕಾರ್ಯ ಗುರುವಾರ ನಡೆಯಲಿದೆ. ಜಿಲ್ಲೆ ನಾಲ್ಕೂ ವಿಧಾನ ಸಭಾ ಕ್ಷೇತ್ರ ವ್ಯಾಕ್ತಿಯ ತಾಲ್ಲೂಕು ಕೇಂದ್ರಗಳಲ್ಲಿ ಮಸ್ಟರಿಂಗ್‌ ಮತ್ತು ಡಿ ಮಸ್ಟರಿಂಗ್‌ ಕಾರ್ಯಕ್ಕೆ ತಲಾ ಒಂದೊಂದು ಕೇಂದ್ರ ತೆರೆಯಲಾಗಿದೆ. 

ಹನೂರಿನ ಕ್ರಿಸ್ತರಾಜ ಎಜುಕೇಷನ್ ಟ್ರಸ್ಟ್, ಕೊಳ್ಳೇಗಾಲದ ಮಹದೇಶ್ವರ ಪ್ರಥಮ ದರ್ಜೆ ಕಾಲೇಜು, ಚಾಮರಾಜನಗರದ ಕರಿನಂಜನಪುರ ರಸ್ತೆಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಗುಂಡ್ಲುಪೇಟೆಯ ಊಟಿ ರಸ್ತೆಯಲ್ಲಿರುವ ಸೆಂಟ್ ಜಾನ್ಸ್ ಇಂಗ್ಲಿಷ್‌ ಮಾಧ್ಯಮ ಶಾಲೆಯಲ್ಲಿ ಮಸ್ಟರಿಂಗ್ ಮತ್ತು ಡಿಮಸ್ಟರಿಂಗ್ ನಡೆಯಲಿದೆ. 

ಮತಗಟ್ಟೆ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಮಸ್ಟರಿಂಗ್‌ ಕೇಂದ್ರಕ್ಕೆ ತಲುಪಲು ಮತ್ತು ಅಲ್ಲಿಂದ ನಿಗದಿತ ಮತಗಟ್ಟೆಗಳಿಗೆ ತಲುಪಲು ಕೆಎಸ್‌ಆರ್‌ಟಿಸಿ ಬಸ್‌ ವ್ಯವಸ್ಥೆಯನ್ನು ಜಿಲ್ಲಾಡಳಿತ ಮಾಡಿದೆ. 

ಸ್ಟ್ರಾಂಗ್‌ ರೂಂ: ನಗರದ ಹೊರವಲಯದ ಬೇಡರಪುರದ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಮತದಾನದ ಬಳಿಕ ಇವಿಎಂಗಳನ್ನು ಇಡಲು ಸ್ಟ್ರಾಂಗ್‌ ರೂಂಗಳನ್ನು ತೆರೆಯಲಾಗಿದ್ದು, ಜಿಲ್ಲಾಡಳಿತ ಅಲ್ಲಿ ಎಲ್ಲ ರೀತಿಯ ಭದ್ರತಾ ವ್ಯವಸ್ಥೆ ಮಾಡಿದೆ. ಜೂನ್‌ 4ರಂದು ಅಲ್ಲಿಯೇ ಮತ ಎಣಿಕೆ ಕಾರ್ಯ ನಡೆಯಲಿದೆ. 

ಬೇಸಿಗೆ:ಮುಂಜಾಗ್ರತೆಗೆ ಸೂಚನೆ

ಈ ಮಧ್ಯೆ ಶುಕ್ರವಾರ ಬೆಳಿಗ್ಗೆ 7 ರಿಂದ ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದ್ದು ಬೇಸಿಗೆ ಬಿಸಿಲಿನ ತಾಪದಿಂದ ಅತಿಯಾದ ಶಾಖ ಹಾಗೂ ಶಾಖ ತರಂಗದಿಂದ ಹೀಟ್ ಸ್ಟ್ರೋಕ್ ನಂತಹ ಆರೋಗದ್ಯ ಸಮಸ್ಯೆ ಉಂಟಾಗದಂತೆ ತಡೆಯಲು ಸಾರ್ವಜನಿಕರು ಮುಂಜಾಗ್ರತಾ ಕ್ರಮ ವಹಿಸುವಂತೆ ಆರೋಗ್ಯ ಇಲಾಖೆ ತಿಳಿಸಿದೆ. ‘ಮತದಾನ ಮಾಡಲು ಬರುವ ಸಾರ್ವಜನಿಕರು ಬಿಸಿಲಿನಿಂದ ರಕ್ಷಣೆ ಪಡೆಯಲು ಟೋಪಿ ಛತ್ರಿಗಳ ಸಹಾಯ ಪಡೆಯಬೇಕು. ಹೆಚ್ಚಾಗಿ ದ್ರವ ರೂಪದ ಆಹಾರ ಹಣ್ಣುಗಳನ್ನು ಸೇವಿಸಬೇಕು. ಹೆಚ್ಚಾಗಿ ನೀರು ಕುಡಿಯಬೇಕು ಹಾಗೂ ಮತಗಟ್ಟೆ ಬಳಿ ನಿತ್ರಾಣ ಆದಲ್ಲಿ ಮತಗಟ್ಟೆಗೆ ನಿಯೋಜಿಸಿರುವ ವೈದ್ಯಕೀಯ ತಂಡದ ಬಳಿ ತಿಳಿಸಬೇಕು. ಹೆಚ್ಚಿನ ಚಿಕಿತ್ಸೆ ಅವಶ್ಯಕವಿದ್ದಲ್ಲಿ ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ಯಲು ಆರೋಗ್ಯ ಸಿಬ್ಬಂದಿಯ ಸಹಾಯ ಪಡೆಯಬೇಕು’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಚಿದಂಬರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT