ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಾಮರಾಜನಗರ| ಶಿಕ್ಷಣಕ್ಕೆ ಒತ್ತು ನೀಡಿ: ಮಡಿವಾಳರಿಗೆ ಕರೆ

ಜಿಲ್ಲಾಡಳಿತದಿಂದ ಮಡಿವಾಳ ಮಾಚಿದೇವ ಜಯಂತಿ: ಅದ್ಧೂರಿ ಮೆರವಣಿಗೆ
Last Updated 12 ಫೆಬ್ರುವರಿ 2023, 6:07 IST
ಅಕ್ಷರ ಗಾತ್ರ

ಚಾಮರಾಜನಗರ: ‘ಮಡಿವಾಳ ಸಮುದಾಯವು ಶಿಕ್ಷಣಕ್ಕೆ ಒತ್ತು ನೀಡಬೇಕು. ಸರ್ಕಾರ ನೀಡುವ ಶೈಕ್ಷಣಿಕ ಸೌಲಭ್ಯಗಳನ್ನು ಪಡೆಯಬೇಕು’ ಎಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ಶನಿವಾರ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಗರದ ಡಾ.ರಾಜ್‌ಕುಮಾರ್‌ ಜಿಲ್ಲಾ ರಂಗ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸಮುದಾಯದವರು ಒಗ್ಗಟ್ಟಾಗಿ ಹೋರಾಟ ಮಾಡಿದಾಗ ಎಲ್ಲ ಫಲವೂ ಸಿಗುತ್ತದೆ. ನಿಮ್ಮೊಂದಿಗೆ ನಾವೂ ಇದ್ದೇವೆ. ಸರ್ಕಾರದಿಂದ ಬರುವ ಎಲ್ಲ ಸವಲತ್ತುಗಳನ್ನೂ ನೀಡಲಾಗುವುದು. ನಗರದಲ್ಲಿ ದೋಬಿಘಾಟ್ ನಿರ್ಮಾಣಕ್ಕೆ ಸಹಾಯ ಮಾಡಲಾಗುವುದು. ಜಿಲ್ಲಾ ಸಮುದಾಯ ಭವನಕ್ಕೂ ನೆರವು ಒದಗಿಸಲಾಗುವುದು’ ಎಂದು ಹೇಳಿದರು.

‘ಮಡಿವಾಳ ಮಾಚಿದೇವ ನೇರ ಹಾಗೂ ನಿಷ್ಠುರ ಶರಣರಾಗಿದ್ದರು. ಅವರ ವಚನಗಳ ಸಾರವನ್ನು ಅರ್ಥ ಮಾಡಿಕೊಂಡು ನಾವೆಲ್ಲರೂ ಮುನ್ನಡೆಯಬೇಕು’ ಎಂದರು.

ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಾ.ರಾಜು ಎಂ.ತಲ್ಲೂರು ಮಾತನಾಡಿ, ‘ನಿಗಮದಿಂದ ನೀಡಲಾಗುವ ಗಂಗಾ ಕಲ್ಯಾಣ, ಶೈಕ್ಷಣಿಕ ಸಾಲ ಸೇರಿದಂತೆ ವಿವಿಧ ಯೋಜನೆಗಳನ್ನು ಸದುಪಯೋಗ ಮಾಡಿಕೊಂಡು ಮಡಿವಾಳ ಸಮುದಾಯ ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಧೃಢವಾಗಿ ಬೆಳೆಯಬೇಕು’ ಎಂದು ಸಲಹೆ ನೀಡಿದರು.

ನಗರಸಭೆ ಅಧ್ಯಕ್ಷೆ ಸಿ.ಎಂ.‌ಆಶಾ ಮಾತನಾಡಿ, ‘ಮಡಿವಾಳ ಮಾಚಿದೇವ ಅವರ ವಚನಗಳು ಅರ್ಥಪೂರ್ಣವಾಗಿವೆ. ಅವರ ಶಕ್ತಿ, ಪವಾಡಗಳ ಬಗ್ಗೆ ಸಾಕಷ್ಟು ಕೇಳಿದ್ದೇವೆ. ಇವರ ಆದರ್ಶಗಳನ್ನು ಪಾಲನೆ ಮಾಡಬೇಕು’ ಎಂದರು.

ಪ್ರೊ.ಹ.ರಾ.ಮಹೇಶ್ ಮಾತನಾಡಿ, ‘ಮಡಿವಾಳ ಮಾಚಿದೇವರು 12ನೇ ಶತಮಾನದ ವಚನ ಸಾಹಿತ್ಯಕಾರರ ಸಾಲಿನಲ್ಲಿ ತನ್ನದೇ ಆದ ವಿಭಿನ್ನ ಶೈಲಿಯಿಂದ ಗುರುತಿಸಿಕೊಂಡಿದ್ದರು. ಮಾಚಿದೇವರು ಅಂದಿನ ಸಮಾಜದಲ್ಲಿ ಅಸಮಾನತೆ, ಮೂಢನಂಬಿಕೆ, ಲಿಂಗ ತಾರತಮ್ಯದಂತಹ ಹಲವಾರು ಅನಿಷ್ಟ ಪದ್ಧತಿಗಳ ವಿರುದ್ಧ ಧ್ವನಿ ಎತ್ತಿದರು’ ಎಂದರು.

ಪ್ರಕೃತಿ ಮತ್ತು ಮನುಷ್ಯನೇ ದೇವರೆಂದು ಭಾವಿಸಿದ್ದ ಮಡಿವಾಳ ಮಾಚಿದೇವ ವಚನಗಳ ರಕ್ಷಣೆಗೆ ಮುಂದಾದರು. ಮಡಿವಾಳ ಸಮುದಾಯ ಮನುಷ್ಯನ ಹೃದಯ, ಮಿದುಳು ಸ್ವಚ್ಛಗೊಳಿಸಿ ದೇಶ ಕಟ್ಟುವ ಕಾಯಕಕ್ಕೆ ಮುಂದಾಗಬೇಕು. ಮನೆಮನೆಯಲ್ಲೂ ವಚನ ಬರೆಯಲು ಪ್ರೇರೇಪಿಸಿದ 12ನೇ ಶತಮಾನದ ಮಹತ್ವ ಅರಿಯಬೇಕು’ ಎಂದರು.

ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಪೂವಿತಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎನ್. ಗುರುಲಿಂಗಯ್ಯ, ಸಮುದಾಯದ ಮುಖಂಡರಾದ ದುಂಡುಮಾದಯ್ಯ, ಸಿದ್ದಯ್ಯ ಇದ್ದರು.

ಅದ್ಧೂರಿ ಮೆರವಣಿಗೆ: ವೇದಿಕೆ ಸಮಾರಂಭಕ್ಕೂ ಮೊದಲು ನಗರದಲ್ಲಿ ಮಡಿವಾಳ ಮಾಚಿದೇವ ಅವರ ಭಾವಚಿತ್ರದ ಅದ್ಧೂರಿ ಮೆರವಣಿಗೆ ನಡೆಯಿತು. ಚಾಮರಾಜೇಶ್ವರಸ್ವಾಮಿ ದೇವಾಲಯದಲ್ಲಿ ಮೆರವಣಿಗೆಗೆ ಚಾಲನೆ ನೀಡಲಾಯಿತು. ಕಲಾತಂಡಗಳೊಂದಿಗೆ ಸಾಗಿದ ವೈಭವದ ಮೆರವಣಿಗೆ ಬಿ.ರಾಚಯ್ಯ ಜೋಡಿ ರಸ್ತೆಯ ಮೂಲಕ ರಂಗ ಮಂದಿರ ತಲುಪಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT