ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಳಂದೂರು: ರಾಶಿ ಹೂ ಮುಡಿದ ಮಾವಿನ ವೃಕ್ಷಗಳು

Published 21 ಫೆಬ್ರುವರಿ 2024, 7:13 IST
Last Updated 21 ಫೆಬ್ರುವರಿ 2024, 7:13 IST
ಅಕ್ಷರ ಗಾತ್ರ

ಯಳಂದೂರು: ಚಳಿ– ಬಿಸಿಲಿನ ವಾತಾವರಣದಲ್ಲಿ ಮಾವಿನ ಮರಗಳು ಹೂ ಅರಳಿಸಿವೆ. ಕೆಲವು ಕಡೆಗಳಲ್ಲಿ ಕಳೆದ ವರ್ಷಕ್ಕಿಂತಲೂ ಹೆಚ್ಚು ಹೂ ಕಾಣಿಸುತ್ತಿದೆ. ಬಯಲು ಪ್ರದೇಶಗಳ ಮರಗಳಲ್ಲಿ ಇನ್ನೂ ಹೂ ಬಿಟ್ಟಿಲ್ಲ. 

ಮಾವಿನ ಬೆಳೆಯಲ್ಲಿ ಪ್ರತಿ ವರ್ಷ ವ್ಯತ್ಯಾಸ ಕಂಡುಬರುತ್ತದೆ. ಕಳೆದ ವರ್ಷವೂ ಮಾವು ನಿರೀಕ್ಷಿಸಿದಷ್ಟು ಬರಲಿಲ್ಲ. ಈ ವರ್ಷ ಹೈಬ್ರಿಡ್‌ ತಳಿಗಳು ಹೆಚ್ಚು ಫಲ ಕಚ್ಚಿವೆ. ಸ್ಥಳೀಯ ಮರಗಳಲ್ಲಿ ಇನ್ನೂ ಹೂ ಬಂದಿಲ್ಲ.

ಜನವರಿ ಆರಂಭದಿಂದಲೇ ಮರಗಳಲ್ಲಿ ಚಿಗುರೊಡೆದು, ಹೂ ಕಾಣಿಸಿಕೊಂಡಿದ್ದು, ಹೀಚು ಕಾಯಿ ಅಲ್ಲಲ್ಲಿ ಕಾಣ ಸಿಗುತ್ತಿವೆ. ಶಿವರಾತ್ರಿ ಹೊತ್ತಿಗೆ ಕಾಯಿಯ ಗಾತ್ರ ಇನ್ನಷ್ಟು  ಹೆಚ್ಚಾಗಲಿದೆ.

‘ಹೋದ ವರ್ಷ ಹೂ ಬಿಡದ ಮರಗಳಲ್ಲಿ ಈ ಬಾರಿ ಚಿಗುರು ಕಾಣಿಸಿಕೊಂಡಿದೆ. ಕೆಲವು ಮರಗಳಲ್ಲಿ ಹೂಗಳ ಪ್ರಮಾಣ ದ್ವಿಗುಣಗೊಂಡಿದೆ. ಶೇ 50 ರಷ್ಟು ಮರಗಳಲ್ಲಿ ಮೊಗ್ಗು ತೊನೆದಾಡುತ್ತಿದ್ದು, ಉತ್ತಮ ಫಸಲು ನಿರೀಕ್ಷಿಸಬಹುದು. ಮಾರ್ಚ್ ಆರಂಭದಲ್ಲಿ ಮಳೆ ಬಂದರೆ ತೊಂದರೆ ಎದುರಾಗಬಹುದು’ ಎಂದು ಹೇಳುತ್ತಾರೆ ಅಧಿಕಾರಿಗಳು. 

‘ಸದ್ಯ ರೋಗದ ಬಾಧೆ ಎಲ್ಲೂ ಕಾಣಿಸಿಕೊಂಡಿಲ್ಲ. ಹೂ ಹೊದ್ದ ಗಿಡಗಳಲ್ಲಿ ಪರಾಗಸ್ಪರ್ಶ ನಡೆಯುವುದರಿಂದ ಈಗ ಕ್ರಿಮಿ ನಾಶಕ ಸಿಂಪಡಿಸಬಾರದು. ಸಿಂಪಡಿಸಿದರೆ ಇದರಿಂದ  ಜೇನು, ಚಿಟ್ಟೆ ಮತ್ತಿತರ ಜೀವಿಗಳು ಸಾಯಬಹುದು. ಇದು ಇಳುವರಿ ಕುಸಿತಕ್ಕೂ ಕಾರಣಬಹುದು’ ಎಂದು ಹೇಳುತ್ತಾರೆ ಅವರು. 

‘ಫೆಬ್ರುವರಿ ಅಂತ್ಯದ ತನಕವೂ ಮರಗಳಲ್ಲಿ ಹೂ ಬರುವ ನಿರೀಕ್ಷೆ ಇದೆ. ಹೂ ಬಿಡದ ಮರಗಳಿಗೆ ಔಷಧೋಪಚಾರ ಮಾಡಿದರೆ, ಹೂ ಕಟ್ಟಬಹುದು. ಈಗಾಗಲೇ ಶೇ 50ರಷ್ಟು ಮರ ಹೂ ಕಚ್ಚಿದ್ದು, ಹೂ ಉಳಿಸಿಕೊಳ್ಳುವ ದೆಸೆಯಲ್ಲಿ ತೋಟಗಾರಿಕಾ ತಜ್ಞರ ನೆರವು ಪಡೆಯಬಹುದು’ ಎಂದು ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ರಾಜು ‘ಪ್ರಜಾವಾಣಿ’ಗೆ ತಿಳಿಸಿದರು. 

‘ಹವಾಮಾನ ಬದಲಾದಂತೆ ಮಾವಿನ ಇಳುವರಿ ವ್ಯತ್ಯಯವಾಗುತ್ತದೆ.  ಅತಿಯಾದ ಶೀತ ಇಲ್ಲವೇ ಮಳೆಯನ್ನು ಮಾವು ಸಹಿಸದು. ಲಕ್ಷಾಂತರ ಹೂಗಳು ಇದ್ದರೂ, ಫಲಿತವಾಗಲು ಸಾವಿರ ಸಂಖ್ಯೆ ಸಾಕಾಗುತ್ತದೆ. ಮಿಡಿಗಾಯಿ ಉದುರಿದರೂ ಆತಂಕ ಪಡಬೇಕಿಲ್ಲ. ಮುಂದಿನ ದಿನಗಳು ಫಸಲನ್ನು ನಿರ್ಧರಿಸಲಿವೆ. ಕೆಲವೆಡೆ ಇನ್ನೂ ಒಂದೂ ಹೂ ಕಂಡಿಲ್ಲ. ನೀರಿನ ಕೊರತೆ ಇರುವಲ್ಲಿ ಮರಗಳು ಈಗ ಈಗ ಚಿಗುರು ಬಿಡುತ್ತಿವೆ. ಆಗಾಗಿ, ಆತಂಕ ಪಡಬೇಕಿಲ್ಲ’ ಎಂದು ಆಲ್ಕೆರೆ ಅಗ್ರಹಾರ ಗ್ರಾಮದ ಕೃಷಿಕ ರಾಮಪ್ಪ ಹೇಳಿದರು.

ಮಾವು ಫಸಲು ಹವಾಮಾನದ ಮೇಲೆ ಅವಲಂಬಿತವಾಗುತ್ತಿದೆ. ಈ ಬಾರಿ ಕೆಲವು ಮರಗಳು ಹೂ ಬಿಟ್ಟಿದ್ದರೆ ಇನ್ನೂ ಕೆಲವು ಬಿಟ್ಟಿಲ್ಲ
- ಬಿ.ಎಲ್‌.ಶಿವಪ್ರಸಾದ್‌, ತೋಟಗಾರಿಕಾ ಇಲಾಖೆ ಉಪನಿರ್ದೇಶಕ

‘ಈ ಬಾರಿ 50:50 ಫಲ’

‘ಕಳೆದ ವರ್ಷ ಹೈಬ್ರಿಡ್ ಮತ್ತು ಸ್ಥಳೀಯ ವೃಕ್ಷಗಳಲ್ಲೂ ಹೂ ಬಂದಿತ್ತು. ಇಬ್ಬನಿ ಮೋಡ ಕವಿದ ವಾತಾವರಣದ ಕಾರಣಕ್ಕೆ ಬೂದಿ ರೋಗ ಕೊಳೆರೋಗ ಕಂಡುಬಂದಿತ್ತು. ಈ ಬಾರಿ ಇಮಾಂ ಪಸಂದ್ ಬಾದಾಮಿ ಮಲಗೋವ ತೋತಾಪುರಿ ಗಿಡಗಳಲ್ಲಿ ಭರಪೂರ ಹೂ ಕಂಡುಬಂದರೆ ಮಲ್ಲಿಕಾ  ಬೈಗನ್‌ ಪಲ್ಲಿ ಕೇಸರ್ ಗಿಡಗಳಲ್ಲಿ ಹೂ ಬಂದಿಲ್ಲ. ತಜ್ಞರು ಮಾವು ಸ್ಪೆಷಲ್ ಔಷಧ ಸಿಂಪಡಣೆ ಮಾಡಲು ಸಲಹೆ ಮಾಡಿದ್ದು  ಫಸಲು ಕೈಸೇರುವ ನಿರೀಕ್ಷೆ ಇದೆ’ ಎಂದು ಕೆಸ್ತೂರು ಸಾವಯವ ಕೃಷಿಕ ಲೋಕೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.

450 ಹೆಕ್ಟೇರ್‌ನಲ್ಲಿ ಮಾವು

ಬೇರೆ ತೋಟಗಾರಿಕಾ ಬೆಳೆಗಳಿಗೆ ಹೋಲಿಸಿದರೆ ಜಿಲ್ಲೆಯಲ್ಲಿ ಮಾವು ಬೆಳೆಯುವವರ ಸಂಖ್ಯೆ ಕಡಿಮೆ. ಇತ್ತೀಚೆಗೆ ಕೊಳ್ಳೇಗಾಲ ಗುಂಡ್ಲುಪೇಟೆ ಭಾಗದಲ್ಲಿ ಕೆಲವು ರೈತರು ಮಾವಿನ ತೋಪುಗಳನ್ನು ಅಭಿವೃದ್ಧಿ ಪಡಿಸುತ್ತಿದ್ದಾರೆ.  ತೋಟಗಾರಿಕಾ ಇಲಾಖೆಯ ಪ್ರಕಾರ ಜಿಲ್ಲೆಯಲ್ಲಿ 450 ಹೆಕ್ಟೇರ್‌ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT