ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷೇತ್ರದ ಅಭಿವೃದ್ಧಿಯೇ ನನ್ನ ಕನಸು: ಕಾಂಗ್ರೆಸ್‌ ಅಭ್ಯರ್ಥಿ ಸುನಿಲ್ ಬೋಸ್‌

ಮಾಧ್ಯಮ ಸಂವಾದದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಭಾಗಿ, ಶ್ರೀನಿವಾಸ ಪ್ರಸಾದ್‌ ಸ್ಪಷ್ಟ ಸಂದೇಶ ನೀಡಿದ್ದಾರೆ
Published 14 ಏಪ್ರಿಲ್ 2024, 4:44 IST
Last Updated 14 ಏಪ್ರಿಲ್ 2024, 4:44 IST
ಅಕ್ಷರ ಗಾತ್ರ

ಚಾಮರಾಜನಗರ: ‘ಎಲ್ಲರೂ ಚಾಮರಾಜನಗರವನ್ನು ಹಿಂದುಳಿದ ಕ್ಷೇತ್ರ ಎಂದು ಕರೆಯುತ್ತಾರೆ. ಇದನ್ನು ಅಭಿವೃದ್ಧಿ ಪಡಿಸುವುದೇ ನನ್ನ ಕನಸು. ಸಂಸದನಾಗಿ ಆಯ್ಕೆಯಾದರೆ, ನಮ್ಮ ಶಾಸಕರು, ಹಿರಿಯರ ಮಾರ್ಗದರ್ಶನ ಪಡೆದು ಹಿಂದುಳಿದ ಹಣೆಪಟ್ಟಿ ತೆಗೆಯಲು ಶ್ರಮಿಸುವೆ’ ಎಂದು ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಸುನಿಲ್ ಬೋಸ್‌ ಶನಿವಾರ ಹೇಳಿದರು. 

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ನಗರದಲ್ಲಿ ಹಮ್ಮಿಕೊಂಡಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ‘ಚಾಮರಾಜನಗರ, ಕೊಳ್ಳೇಗಾಲ, ಕನಕಪುರ ಬೆಂಗಳೂರು ರೈಲು ಯೋಜನೆ ನನೆಗುದಿಗೆ ಬಿದ್ದಿದೆ. ಈ ಯೋಜನೆ ಅನುಷ್ಠಾನಗೊಂಡರೆ ಜನರಿಗೆ ಅನುಕೂಲವಾಗುತ್ತದೆ. ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶ ಇದೆ. ದೇವಾಲಯಗಳು ಸಾಕಷ್ಟು ಸಂಖ್ಯೆಯಲ್ಲಿವೆ. ಪ್ರವಾಸಿ ತಾಣಗಳಿವೆ. ಅಲ್ಲೆಲ್ಲ ಮೂಲಸೌಕರ್ಯಗಳನ್ನು ಕಲ್ಪಿಸಲು ಅನುದಾನ ತರಲು ಪ್ರಯತ್ನಿಸುವೆ’ ಎಂದರು. 

‘ನಮ್ಮಲ್ಲಿ ಅರಣ್ಯ ಪ್ರದೇಶಗಳು ಹೆಚ್ಚಿವೆ. ಕಾಡಂಚಿನ ಪ್ರದೇಶಗಳಲ್ಲಿ ಮಾನವ ವನ್ಯಜೀವಿ ಸಂಘರ್ಷಗಳು ನಡೆಯುತ್ತಿದ್ದು, ಇದಕ್ಕೆ ಕಡಿವಾಣ ಹಾಕಲು ಶ್ರಮಿಸುವೆ. ಬುಡಕಟ್ಟು ಜನರಿಗೆ ಆರೋಗ್ಯ ಸೇವೆ ಕಲ್ಪಿಸಲು ದುಡಿಯುವೆ’ ಎಂದರು. 

ಗೆಲ್ಲುವ ವಿಶ್ವಾ‌ಸ: ‘ನಮ್ಮ ಸರ್ಕಾರ ತಂದಿರುವ ಗ್ಯಾರಂಟಿ ಯೋಜನೆಗಳು ವಿಶೇಷವಾಗಿ ಮಹಿಳೆಯರಿಗೆ, ಬಡವರಿಗೆ ಅನುಕೂಲ ಕಲ್ಪಿಸಿವೆ. ಜನರು ನಮಗೆ ಶಕ್ತಿ ತುಂಬುವ ಕೆಲಸ ಮಾಡುತ್ತಾರೆ. ಕೇಂದ್ರದ ಬಿಜೆಪಿ ಸರ್ಕಾರ ಸುಳ್ಳುಗಳನ್ನೇ ಹೇಳುತ್ತಾ ಬಂದಿದೆ. ಬೆಲೆ ಏರಿಕೆ ಹಾಗೂ ಸರ್ಕಾರದ ನಿರ್ಧಾರಗಳು ಜನರ ಬದುಕನ್ನು ಕಷ್ಟಕರವನ್ನಾಗಿ ಮಾಡಿದೆ. ಹಾಗಾಗಿ, 26ರಂದು ನಡೆಯಲಿರುವ ಚುನಾವಣೆಯಲ್ಲಿ ಕ್ಷೇತ್ರದ ಜನರು ಕಾಂಗ್ರೆಸ್‌ ಅನ್ನು ಬೆಂಬಲಿಸಲಿದ್ದಾರೆ’ ಎಂದು ಸುನಿಲ್‌ ಬೋಸ್‌ ಹೇಳಿದರು. 

ಜನರೊಂದಿಗೇ ಇದ್ದೇನೆ: ಸುನಿಲ್‌ ಬೋಸ್‌ ಜನರ ಕೈಗೆ ಸಿಗುವುದಿಲ್ಲ ಎಂಬ ಆರೋಪ ಇದೆಯಲ್ಲಾ ಎಂದು ಕೇಳಿದ್ದಕ್ಕೆ, ‘2008ರಲ್ಲಿ ನಾನು ರಾಜಕೀಯಕ್ಕೆ ಬಂದೆ. ತಂದೆಯವರು ಶಾಸಕರಾದ ಬಳಿಕ ತಿ.ನರಸೀಪುರ ಕ್ಷೇತ್ರದ ಉಸ್ತುವಾರಿ ವಹಿಸಿಕೊಂಡೆ. ಅಂದಿನಿಂದಲೂ ಜನರೊಂದಿಗೆ ಬೆರೆಯುತ್ತಿದ್ದೇನೆ. ಜನರ ಮಧ್ಯೆ ಇದ್ದ ಕಾರಣಕ್ಕಾಗಿಯೇ ತಂದೆಯವರು ಚುನಾವಣೆಯಲ್ಲಿ ಗೆಲ್ಲುತ್ತಿದ್ದಾರೆ. ಸಚಿವರೂ ಆಗಿದ್ದಾರೆ. 16 ವರ್ಷಗಳಿಂದ ರಾಜಕಾರಣದಲ್ಲಿ ಸಕ್ರಿಯವಾಗಿದ್ದೇನೆ. ಜನರ ಕೈಗೆ ಸಿಗುವುದಿಲ್ಲ ಎಂಬುದು ವಿರೋಧಿಗಳ ಅಪಪ್ರಚಾರ’ ಎಂದು ಉತ್ತರಿಸಿದರು. 

ನೈತಿಕತೆ ಇಲ್ಲ: ‘ಬಿಜೆಪಿ ಅಭ್ಯರ್ಥಿ ಎಸ್‌.ಬಾಲರಾಜು ಅವರು ಧ್ರುವನಾರಾಯಣ ಅಭಿಮಾನಿಗಳು ತಮ್ಮನ್ನು ಬೆಂಬಲಿಸಲಿದ್ದಾರೆ ಎಂದು ಹೇಳಿಕೊಳ್ಳುತ್ತಿದ್ದಾರೆ.  ಧ್ರುವನಾರಾಯಣ ಹೆಸರು ಹೇಳುವ ನೈತಿಕತೆ ಅವರಿಗೆ ಇಲ್ಲ. ತಮ್ಮ ತಂದೆಯ ಹೆಸರು ಹೇಳಿಕೊಂಡು ಮತ ಕೇಳಬಾರದು ಎಂದು ನಂಜನಗೂಡು ಶಾಸಕ ದರ್ಶನ್‌ ಧ್ರುವನಾರಾಯಣ ಅವರು ತಿಳಿಸಿದ್ದಾರೆ. ಬಾಲರಾಜು ಅವರಿಗೆ ಧ್ರುವನಾರಾಯಣ ಅವರ ಹೆಸರು ಹೇಳುವ ನೈತಿಕತೆ ಇಲ್ಲ. ಒಂದು ವೇಳೆ ಧ್ರುವನಾರಾಯಣ ಅವರ ಬಗ್ಗೆ ಪ್ರೀತಿ, ಗೌರವ ಇದ್ದಿದ್ದರೆ ಅವರು ಪಕ್ಷವನ್ನು ತೊರೆಯದೆ, ನಂಜನಗೂಡಿನಲ್ಲಿ ದರ್ಶನ್‌ ಪರವಾಗಿ ಚುನಾವಣಾ ಕೆಲಸ ಮಾಡಬೇಕಿತ್ತು’ ಎಂದು ಬೋಸ್‌ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. 

ಉತ್ತಮ ಸ್ಪಂದನೆ: ‘ಕ್ಷೇತ್ರದಲ್ಲಿ ಬೋಸ್‌ ಇನ್ನೂ ಪರಿಚಿತರಲ್ಲ’ ಎಂಬ ಮಾತು ಕೇಳಿಬರುತ್ತಿದೆಯಲ್ಲಾ ಎಂದು ಕೇಳಿದ್ದಕ್ಕೆ ಉತ್ತರಿಸಿದ ಅವರು, ‘ನನ್ನ ತಂದೆ ಮಹದೇವಪ್ಪ ಅವರು ಈ ಭಾಗದಲ್ಲೇ ರಾಜಕಾರಣ ಮಾಡಿದವರು. ಮೈಸೂರು–ಚಾಮರಾಜನಗರ ಎರಡೂ ಜಿಲ್ಲೆಗಳೂ ಅವರಿಗೆ ಸಂಪೂರ್ಣ ಪರಿಚಿತ. ಅವರ ಅಭಿಮಾನಿಗಳು ಇಲ್ಲಿ ಸಾವಿರಾರು ಜನರು ಇದ್ದಾರೆ. ಅವರಿಗೆ ನಾನು ಕೂಡ ಪರಿಚಯ. ಈಗ ಪ್ರತಿ ಹಳ್ಳಿ ಹಳ್ಳಿಯನ್ನೂ ಸುತ್ತುತ್ತಿದ್ದೇನೆ. ಜನರು ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ನಾಮಪತ್ರ ಸಲ್ಲಿಸುವ ದಿನ ಸೇರಿದ್ದ ಜನರು, ಕೊಳ್ಳೇಗಾಲದಲ್ಲಿ ಶುಕ್ರವಾರದ ಪ್ರಚಾರ ಸಭೆಯಲ್ಲಿ ಸೇರಿದ್ದ ಜನಸ್ತೋಮವೇ ಇದಕ್ಕೆ ಸಾಕ್ಷಿ’ ಎಂದು ಹೇಳಿದರು. 

ಸಂಘದ ಅಧ್ಯಕ್ಷ ದೇವರಾಜು ಕಪ್ಪಸೋಗೆ, ಪ್ರಧಾನ ಕಾರ್ಯದರ್ಶಿ ಲಕ್ಕೂರ್‌ ಪ್ರಸಾದ್‌ ಇದ್ದರು. 

‘ಕಾನೂನು ಹೋರಾಟ ಮಾಡುವೆ’

ನಾಮಪತ್ರದೊಂದಿಗೆ ಸಲ್ಲಿಸಿದ ಪ್ರಮಾಣ ಪತ್ರದಲ್ಲಿ ವೈಯಕ್ತಿಕ ಮಾಹಿತಿಯನ್ನು ಮರೆಮಾಚಲಾಗಿದೆ ಎಂದು ಬಿಜೆಪಿಯವರು ನೀಡಿರುವ ದೂರಿಗೆ ಪ್ರತಿಕ್ರಿಯಿಸಿದ ಸುನಿಲ್‌ ಬೋಸ್‌ ‘ಅದು ನನ್ನ ವೈಯಕ್ತಿಕ ವಿಚಾರ. ಬಿಜೆಪಿಯವರು ನೀಡಿರುವ ದೂರಿಗೆ ಸಂಬಂಧಿಸಿದಂತೆ ಅಗತ್ಯಬಿದ್ದರೆ ಕಾನೂನಾತ್ಮಕವಾಗಿ ಹೋರಾಟ ಮಾಡುವೆ. ಆ ಶಕ್ತಿ ನನಗೆ ಇದೆ’ ಎಂದರು.  ನಾಮಪತ್ರ ಸಲ್ಲಿಸುವ ದಿನ ನಗರದಲ್ಲಿ ಕಂಡು ಬಂದು ಗೋ ಬ್ಯಾಕ್‌ ಭಿತ್ತಿಪತ್ರಗಳ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ‘ಹೇಳಿಕೊಳ್ಳಲು ವಿಷಯಗಳು ಸಾಧನೆಗಳು ಏನೂ ಇಲ್ಲದಿದ್ದಾಗ ವಿರೋಧಿಗಳಿಗೆ ಅಪಪ್ರಚಾರವೇ ಕೊನೆಯ ಅಸ್ತ್ರವಾಗುತ್ತದೆ. ಇಲ್ಲೂ ಅದೇ ರೀತಿ ಮಾಡುತ್ತಿದ್ದಾರೆ. ಹೈಕೋರ್ಟ್‌ನಲ್ಲಿ ನಿರ್ದೋಷಿ ಎಂದು ಇತ್ಯರ್ಥವಾದ ಪ್ರಕರಣವನ್ನು ಪ್ರಸ್ತಾಪಿಸುತ್ತಾರೆ ಎಂದರೆ ವಿರೋಧಿಗಳಲ್ಲಿರುವ ಹತಾಶೆ ಭಾವನೆಯನ್ನು ಇದು ತೋರಿಸುತ್ತದೆ’ ಎಂದರು.  

‘ಶ್ರೀನಿವಾಸ ಪ್ರಸಾದ್ ಒಪ್ಪಿಗೆ ಇಲ್ಲದೇ ಬೆಂಬಲಿಗರು ಕಾಂಗ್ರೆಸ್‌ ಸೇರುತ್ತಾರೆಯೇ’

ಸಂಸದ ವಿ.ಶ್ರೀನಿವಾಸ ಪ್ರಸಾದ್‌ ಅವರ ಭೇಟಿ ಅವರ ಬೆಂಬಲಿಗರು ಕಾಂಗ್ರೆಸ್‌ ಸೇರ್ಪಡೆಯಾಗುತ್ತಿರುವ ಬಗ್ಗೆ ಕೇಳಿದ್ದಕ್ಕೆ ‍ಪ್ರತಿಕ್ರಿಯಿಸಿದ ಬೋಸ್‌ ‘ಶ್ರೀನಿವಾಸ ಪ್ರಸಾದ್‌ ಅವರು 50  ವರ್ಷಗಳ ಕಾಲ ಚುನಾವಣಾ ರಾಜಕೀಯದಲ್ಲಿದ್ದು ಈಗ ನಿವೃತ್ತಿಯಾಗಿದ್ದಾರೆ. ಈ ಭಾಗದ ಹಿರಿಯ ನಾಯಕ. ಅವರ ಆಶೀರ್ವಾದ ಪಡೆಯಲು ಹೋಗಿದ್ದೆ. ಒಳ್ಳೆಯದಾಗಲಿ ಎಂದು ಹೇಳಿದ್ದಾರೆ. ಆ ಬಳಿಕ ಅವರ ಬೆಂಬಲಿಗರು ಕೂಡ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಅವರ ನಿಲುವು ಏನು ಎಂಬುದು ಎಲ್ಲರಿಗೂ ಗೊತ್ತಾಗಿದೆ. ಸಂಸದರ ಒಪ್ಪಿಗೆ ಇಲ್ಲದೆ ಅವರ ಬೆಂಬಲಿಗರು ಕಾಂಗ್ರೆಸ್‌ಗೆ ಸೇರ್ಪಡೆಗೊಳ್ಳಲು ಸಾಧ್ಯವೇ? ಅವರು ತಮ್ಮ ಸ್ಪಷ್ಟವಾದ ಸಂದೇಶ ನೀಡಿದ್ದಾರೆ’ ಎಂದು ಹೇಳಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT