ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೇಲದಕುಪ್ಪೆ ಜಾತ್ರೆ ಸ್ಥಳಾಂತರಿಸಲು ಶಿಫಾರಸು

ಅಕ್ರಮ ರೆಸಾರ್ಟ್‌ ವಿರುದ್ಧ ಕ್ರಮ, ನುಗು ಜಲಾಶಯದಲ್ಲಿ ಮೀನುಗಾರಿಕೆ ನಿರ್ಬಂಧಿಸಿ: ಎನ್‌ಟಿಸಿಎ
Published 22 ನವೆಂಬರ್ 2023, 5:54 IST
Last Updated 22 ನವೆಂಬರ್ 2023, 5:54 IST
ಅಕ್ಷರ ಗಾತ್ರ

ಮೈಸೂರು/ಚಾಮರಾಜನಗರ: ‘ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕೋರ್‌ ವಲಯದಲ್ಲಿರುವ, ಸರಗೂರು ತಾಲ್ಲೂಕಿನ ಬೇಲದಕುಪ್ಪೆ ಮಹದೇಶ್ವರಸ್ವಾಮಿ ದೇವಾಲಯವನ್ನು ಮುಜರಾಯಿ ಇಲಾಖೆಗೆ ಹಸ್ತಾಂತರ ಮಾಡಿರುವುದು ಅರಣ್ಯ, ವನ್ಯಜೀವಿ ಸಂರಕ್ಷಣಾ ಕಾನೂನು, ಎನ್‌ಟಿಸಿಎ ನಿಯಮಗಳಿಗೆ ವಿರುದ್ಧವಾಗಿದೆ. ಹುಲಿಗಳ ಆವಾಸ ಸ್ಥಾನದಲ್ಲಿರುವ ದೇವಾಲಯದಲ್ಲಿ ನಡೆಯುವ ವಾರ್ಷಿಕ ಜಾತ್ರೆಯನ್ನು ಕೋರ್‌ ವಲಯದ ಹೊರಗಡೆಗೆ ಸ್ಥಳಾಂತರಿಸಬೇಕು’ ಎಂದು ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್‌ಟಿಸಿಎ) ಶಿಫಾರಸು ಮಾಡಿದೆ.  

ಇದಲ್ಲದೇ, ‘ಬಂಡೀಪುರ ವ್ಯಾಪ್ತಿಯ ಪರಿಸರ ಸೂಕ್ಷ್ಮ ವಲಯದಲ್ಲಿರುವ ಅಕ್ರಮ ರೆಸಾರ್ಟ್‌, ಹೋಂ ಸ್ಟೇ, ಹೋಟೆಲ್‌ಗಳು ಹಾಗೂ ಇತರೆ ವಾಣಿಜ್ಯ ಉದ್ದೇಶದ ಕಟ್ಟಡಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಅಭಿಪ್ರಾಯ ಪಟ್ಟಿರುವ ಪ್ರಾಧಿಕಾರ, ‘ನುಗು ವನ್ಯಜೀವಿ ಧಾಮವನ್ನು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕೋರ್‌ ಹುಲಿಗಳ ಆವಾಸ ಎಂದು ಸರ್ಕಾರ ಘೋಷಿಸಬೇಕು, ನುಗು ಜಲಾಶಯದಲ್ಲಿ ಮೀನುಗಾರಿಕೆಯನ್ನು ನಿಷೇಧಿಸಬೇಕು ಹಾಗೂ ಬಂಡೀಪುರದ ಕುಂದುಕೆರೆ ಮತ್ತು ಗುಂಡ್ಲುಪೇಟೆ ಬಫರ್‌ ವಲಯಗಳಿಗೆ ಸೇರಿದ ಪ್ರದೇಶಗಳನ್ನು ಮೀಸಲು ಅರಣ್ಯ ಎಂದು ಘೋಷಿಸಲು ಕ್ರಮ ವಹಿಸಬೇಕು’ ಎಂದು ಪ್ರತಿಪಾದಿಸಿದೆ.   

ಬೆಳಗಾವಿಯ ವನ್ಯಜೀವಿ ಸಂರಕ್ಷಣಾವಾದಿ ಗಿರಿಧರ್‌ ಕುಲಕರ್ಣಿ ಅವರು, ‘ಬೇಲದಕುಪ್ಪೆ ಮಹದೇಶ್ವರ ಸ್ವಾಮಿಯ ವಾರ್ಷಿಕ ಜಾತ್ರೆಗೆ ನಿರ್ಬಂಧ ವಿಧಿಸಬೇಕು, ಬಂಡೀಪುರ ಪರಿಸರ ಸೂಕ್ಷ್ಮ ಪ್ರದೇಶದಲ್ಲಿರುವ ಅಕ್ರಮ ರೆಸಾರ್ಟ್‌, ಹೋಂಸ್ಟೇಗಳ ವಿರುದ್ಧ ಕ್ರಮ ಕೈಗೊಳ್ಳಬೇಕು, ನುಗು ವನ್ಯಧಾಮವನ್ನು ಹುಲಿಗಳ ಆವಾಸ ಸ್ಥಾನ ಎಂದು ಘೋಷಿಸಬೇಕು, ನುಗು ಜಲಾಶಯದಲ್ಲಿ ಮೀನುಗಾರಿಕೆಗೆ ನಿರ್ಬಂಧ ವಿಧಿಸಬೇಕು ಮತ್ತು ಕುಂದುಕೆರೆ, ಗುಂಡ್ಲುಪೇಟೆ ಬಫರ್‌ ವಲಯಕ್ಕೆ ಹೊಂದಿಕೊಂಡಿರುವ ಜಮೀನುಗಳನ್ನು ಮೀಸಲು ಅರಣ್ಯ ಎಂದು ಘೋಷಿಸಬೇಕು’ ಎಂದು ಮನವಿ ಮಾಡಿ ದೆಹಲಿಯ ಹುಲಿ ಸಂರಕ್ಷಣಾ ಪ್ರಾಧಿಕಾರಕ್ಕೆ  ಮನವಿ ಮಾಡಿದ್ದರು. 

ಇದರ ಆಧಾರದಲ್ಲಿ ಈ ಎಲ್ಲ ವಿಷಯಗಳ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡುವಂತೆ ಪ್ರಾಧಿಕಾರವು, ಬೆಂಗಳೂರಿನಲ್ಲಿರುವ ತನ್ನ ಪ್ರಾದೇಶಿಕ ಕಚೇರಿಗೆ ಸೂಚಿಸಿತ್ತು. ಎನ್‌ಟಿಸಿಎಯ ಸಹಾಯಕ ಐಜಿಎಫ್‌ ಹರಿಣಿ ವೇಣುಗೋಪಾಲ್‌ ಅವರು ಇದೇ 1 ಮತ್ತು 2ರಂದು ಸಂರಕ್ಷಿತ ಪ್ರದೇಶಕ್ಕೆ ಭೇಟಿ ನೀಡಿ ಎನ್‌ಟಿಸಿಎ ಪ್ರಾಧಿಕಾರಕ್ಕೆ 17ರಂದು ವರದಿ ನೀಡಿದ್ದಾರೆ.

ವರದಿಯಲ್ಲಿ ಹಲವು ಶಿಫಾರಸುಗಳನ್ನು ಮಾಡಿದ್ದು, ಪ್ರತಿಯು ‘ಪ್ರಜಾವಾಣಿ’ಗೆ ಲಭ್ಯವಾಗಿದೆ. 

ಜಾತ್ರೆ ಸ್ಥಳಾಂತರಿಸಿ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಹೆಡಿಯಾಲ ವಲಯದಲ್ಲಿ ಸರಗೂರು ತಾಲ್ಲೂಕಿನ ಕಂದಲಿಕೆ ಹೋಬಳಿಯ ಆಳಲಹಳ್ಳಿ ಚೆಕ್‌ ಪೋಸ್ಟ್‌ನಿಂದ 6 ಕಿ.ಮೀ ಕಾಡಿನ ಒಳಗೆ ಬೇಲದಕುಪ್ಪೆ ಮಹದೇಶ್ವರ ಸ್ವಾಮಿ ದೇವಾಲಯವಿದೆ. ಮೊದಲು ಗ್ರಾಮಸ್ಥರೇ ಸೇರಿ ರಚಿಸಿಕೊಂಡಿದ್ದ ಬೇಲದಕುಪ್ಪೆ ಶ್ರೀ ಮಹದೇಶ್ವರ ದೇವಸ್ಥಾನ ಟ್ರಸ್ಟ್‌ ದೇವಾಲಯದ ಆಡಳಿತ ನಿರ್ವಹಿಸುತ್ತಿತ್ತು.   

‘ಪ್ರತಿ ವರ್ಷ ಕಾರ್ತಿಕ ಮಾಸದ ಕಡೆಯ ಸೋಮವಾರದಂದು ಜಾತ್ರೆ ನಡೆಯುತ್ತದೆ. 2017–18ರವರೆಗೂ ನಾಲ್ಕು ದಿನಗಳ ಜಾತ್ರೆಯ ಸಂದರ್ಭದಲ್ಲಿ1,800 ರಿಂದ 2000 ಎತ್ತಿನಗಾಡಿಗಳಲ್ಲಿ ಬರುತ್ತಿದ್ದರು. 2 ಲಕ್ಷದಿಂದ 3 ಲಕ್ಷ ಜನರು ದೇವಾಲಯಕ್ಕೆ ಭೇಟಿ ನೀಡುತ್ತಿದ್ದರು. ದೇವಾಲಯದ ಆವರಣದಲ್ಲೇ ಅಂಗಡಿಗಳು, ಹೋಟೆಲ್‌ಗಳನ್ನು ಹಾಕಲು ಅವಕಾಶ ನೀಡಲಾಗಿತ್ತು. ಭಕ್ತರು ರಾತ್ರಿಯೂ ಅಲ್ಲೇ ಉಳಿಯುತ್ತಿದ್ದರು’ ಎಂದು ಹರಿಣಿ ವೇಣುಗೋಪಾಲ್‌ ವರದಿಯಲ್ಲಿ ಉಲ್ಲೇಖಿಸಿದ್ದಾರೆ.  

‘2019–20ರ ಜಾತ್ರೆಯ ವೇಳೆ ಕೆಲವು ನಿರ್ಬಂಧಗಳನ್ನು ವಿಧಿಸಲಾಗಿತ್ತು. 2021–21ರಂದು ಕೋವಿಡ್‌ ಸಂದರ್ಭದಲ್ಲಿ ಮತ್ತಷ್ಟು ನಿರ್ಬಂಧಗಳನ್ನು ವಿಧಿಸಲಾಗಿತ್ತು. 2021–22ರಲ್ಲಿ ಕೋವಿಡ್‌ ಕಾರಣಕ್ಕೆ ಸುತ್ತಮುತ್ತಲಿನ ಗ್ರಾಮದವರಿಗೆ 1000 ಪಾಸ್‌ಗಳನ್ನು ಮಾತ್ರ ವಿತರಿಸಿ, ಪೂಜೆಗೆ ಮಾತ್ರ ಅವಕಾಶ ನೀಡಲಾಗಿತ್ತು. 2022–23ರ ಜಾತ್ರೆಯಲ್ಲಿ ಸಾರ್ವನಿಕರಿಗೆ ಮುಕ್ತ ಅವಕಾಶ ನೀಡಲಾಗಿತ್ತು. ಖಾಸಗಿ ವಾಹನಗಳನ್ನು ನಿರ್ಬಂಧಿಸಿ, ಕೆಎಸ್‌ಆರ್‌ಟಿಸಿ ಬಸ್‌ ವ್ಯವಸ್ಥೆ ಮಾಡಲಾಗಿತ್ತು’ ಎಂದು ಅವರು ವಿವರಿಸಿದ್ದಾರೆ. 

‘ದೇವಾಲಯ ಇರುವ ಪ್ರದೇಶ ಹುಲಿಗಳ ಆವಾಸ ಸ್ಥಾನವಾಗಿದೆ. ಜಾತ್ರೆಯ ಸಂದರ್ಭದಲ್ಲಿ ಕೆರೆ ಹಾಗೂ ಜಲಮೂಲಗಳು ಮಲಿನವಾಗುತ್ತಿವೆ. ದೇವಾಲಯದ ಸುತ್ತಮುತ್ತ ಅನೈರ್ಮಲ್ಯ ಉಂಟಾಗುತ್ತಿದೆ. ಜನರೇಟರ್‌, ದೀಪಾಲಂಕಾರದಿಂದ ವನ್ಯಜೀವಿಗಳಿಗೆ ತೊಂದರೆಯಾಗುತ್ತದೆ. ಕೆಎಸ್‌ಆರ್‌ಟಿಸಿ ಬಸ್‌ ವ್ಯವಸ್ಥೆ ಮಾಡಿದ್ದರೂ, ಭಕ್ತರು ಕಾಲ್ನಡಿಗೆಯಲ್ಲಿ ಬರುವ ಸಾಧ್ಯತೆ ಇದೆ. ಈ ಸಂದರ್ಭದಲ್ಲಿ ವನ್ಯಪ್ರಾಣಿಗಳ ದಾಳಿಗೆ ತುತ್ತಾಗಲೂ ಬಹುದು’ ಎಂದು ವರದಿಯಲ್ಲಿ ಹರಿಣಿ ಅವರು ಕಳವಳ ವ್ಯಕ್ತಪಡಿಸಿದ್ದಾರೆ.  

ನಾಳೆ: ಅಕ್ರಮ ರೆಸಾರ್ಟ್‌ ವಿರುದ್ಧ ಕ್ರಮ ಕೈಗೊಳ್ಳಿ

ಪಿ.ರಮೇಶ್‌ಕುಮಾರ್‌
ಪಿ.ರಮೇಶ್‌ಕುಮಾರ್‌
ಗಿರಿಧರ್‌ ಕುಲಕರ್ಣಿ
ಗಿರಿಧರ್‌ ಕುಲಕರ್ಣಿ
ವರದಿಯ ವಿವರಗಳು ನಮಗೆ ತಿಳಿದಿಲ್ಲ. ಅರಣ್ಯ ಸಂರಕ್ಷಣೆ ವಿಚಾರದಲ್ಲಿ ಕಾನೂನು ಪ್ರಕಾರವಾಗಿ ಎಲ್ಲ ಕ್ರಮಗಳನ್ನೂ ನಾವು ಕೈಗೊಳ್ಳುತ್ತೇವೆ.
- ಪಿ.ರಮೇಶ್‌ಕುಮಾರ್‌ ಬಂಡೀಪುರ ಹುಲಿ ಯೋಜನೆ ನಿರ್ದೇಶಕ
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ರಕ್ಷಣೆಯ ನಿಟ್ಟಿನಲ್ಲಿ ಎನ್‌ಟಿಸಿಎ ಮಾಡಿರುವ ಎಲ್ಲ ಶಿಫಾರಸುಗಳನ್ನು ಜಾರಿಗೆ ತರಬೇಕು.
-ಗಿರಿಧರ್‌ ಕುಲಕರ್ಣಿ ವನ್ಯಜೀವಿ ಸಂರಕ್ಷಣಾವಾದಿ

ಶಿಫಾರಸಿನಲ್ಲೇನಿದೆ?

‘2019ರ ಡಿಸೆಂಬರ್‌ 24ರಂದು ಹುಲಿ ಯೋಜನೆ ನಿರ್ದೇಶಕರ ಪ್ರಸ್ತಾವದ ಮೇರೆಗೆ ದೇವಾಲಯವನ್ನು 2022ರ ಡಿಸೆಂಬರ್‌ 2ರಂದು ಮುಜರಾಯಿ ಇಲಾಖೆಗೆ ಹಸ್ತಾಂತರಿಸಲಾಗಿತ್ತು. ಸಂರಕ್ಷಿತ ಪ್ರದೇಶದ ಒಳಗಡೆಯೇ ಇರುವ ಹಿಮವದ್‌ ಗೋಪಾಲಸ್ವಾಮಿ ಬೆಟ್ಟದಲ್ಲಿರುವ ದೇವಸ್ಥಾನ ಮತ್ತು ಅದರ ಸುತ್ತಲಿನ 0.3 ಚದರ ಕಿ.ಮೀ ಪ್ರದೇಶವನ್ನು ಹೊರಗಿಟ್ಟು ಸಂರಕ್ಷಿತ ಪ್ರದೇಶದ ಅಧಿಸೂಚನೆ ಹೊರಡಿಸಲಾಗಿದೆ. ಆದರೆ ಬೇಲದಕುಪ್ಪೆ ಮಹದೇಶ್ವರ ಸ್ವಾಮಿ ದೇವಾಲಯದ ಜಾಗವು ಅರಣ್ಯ ಇಲಾಖೆಗೆ ಸೇರಿದೆ’ ಎಂದು ವರದಿಯಲ್ಲಿ ಉಲ್ಲೇಖಿಸಿದ್ದಾರೆ.      ‘ದೇವಾಲಯದ ಆಡಳಿತವನ್ನು ಮುಜರಾಯಿ ಇಲಾಖೆಗೆ ಹಸ್ತಾಂತರ ಮಾಡಿರುವುದು 1972ರ ವನ್ಯಜೀವಿ ಸಂರಕ್ಷಣೆ ಕಾಯ್ದೆ 1980ರ ಅರಣ್ಯ ಸಂರಕ್ಷಣಾ ಕಾಯ್ದೆ ಮತ್ತು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ನಿಯಮಗಳಿಗೆ ವಿರುದ್ಧವಾದುದು. ವನ್ಯಪ್ರಾಣಿಗಳ ಹಿತದೃಷ್ಟಿಯಿಂದ ದೇವಾಲಯದಲ್ಲಿ ನಡೆಯುವ ವಾರ್ಷಿಕ ಜಾತ್ರೆಯನ್ನು ಕೋರ್‌ ವಲಯದಿಂದ ಹೊರಗಡೆ ಸ್ಥಳಾಂತರಿಸುವುದು ಶಾಶ್ವತ ಪ‍ರಿಹಾರ’ ಎಂದು ಹರಿಣಿ ವೇಣುಗೋಪಾಲ್‌ ಶಿಫಾರಸಿನಲ್ಲಿ ಹೇಳಿದ್ದಾರೆ.   ‘ಸ್ಥಳೀಯ ಸಲಹಾ ಸಮಿತಿಯ ಸದಸ್ಯ ಕಾರ್ಯದರ್ಶಿಯಾಗಿರುವ ಹುಲಿ ಯೋಜನೆ ನಿರ್ದೇಶಕರು ಸಮಿತಿಯ ಸಭೆ ಕರೆದು ಎಲ್ಲರ ವಿಶ್ವಾಸವನ್ನು ಗಳಿಸಿ ಎನ್‌ಟಿಸಿಎ ನಿಯಮಗಳ ಅನ್ವಯ ವಾರ್ಷಿಕ ಜಾತ್ರೆಯನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕು. ಈಗ ಹೇರಿರುವ ನಿರ್ಬಂಧಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು’ ಎಂದು ಹರಿಣಿ ಹೇಳಿದ್ದಾರೆ.    

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT