ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಯಲಲ್ಲೇ ವಿದ್ಯಾರ್ಥಿಗಳಿಗೆ ಪಾಠ..!

ಬೀಳುವ ಸ್ಥಿತಿಯಲ್ಲಿ ಶಾಲಾ ಚಾವಣಿ, ಕಟ್ಟಡ: ಆತಂಕದಲ್ಲಿ ಶಿಕ್ಷಕರು, ಮಕ್ಕಳು
Last Updated 25 ಜೂನ್ 2018, 17:07 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಜಕ್ಕಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ಮತ್ತು ಚಾವಣಿ ಶಿಥಿಲವಾಗಿದ್ದು, ಯಾವುದೇ ಸಮಯದಲ್ಲಿ ಬೀಳುವ ಸಾಧ್ಯತೆ ಇದೆ. ಇದರಿಂದ ಮಕ್ಕಳು ಬಯಲಿನಲ್ಲಿ ಪಾಠ ಕೇಳಬೇಕಾದ ಪರಿಸ್ಥಿತಿ ಬಂದಿದೆ.

ಕಳೆದ ಶೈಕ್ಷಣಿಕ ವರ್ಷವೇ ಕಟ್ಟಡದ ದುಃಸ್ಥಿತಿಯನ್ನು ಶಿಕ್ಷಣ ಇಲಾಖೆಯ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಈ ವರ್ಷದ ಶೈಕ್ಷಣಿಕ ಚಟುವಟಿಕೆಗಳು ಆರಂಭವಾಗಿರುವುರಿಂದ ಅನೇಕ ವಿದ್ಯಾರ್ಥಿಗಳು ಶಾಲೆಗೆ ದಾಖಲಾಗಿದ್ದಾರೆ. ಅಲ್ಲದೇ,ಮಳೆ ಕೂಡ ಹೆಚ್ಚಿನ ಪ್ರಮಾಣದಲ್ಲಿ ಆಗುತ್ತಿರುವುದರಿಂದ ತರಗತಿ ಒಳಗೆ ನೀರು ಸುರಿಯುತ್ತಿದೆ. ಆಗಾಗ ಮಣ್ಣು ಕುಸಿಯುತ್ತಿದೆ.

ತರಗತಿಯ ಸ್ಥಿತಿಯನ್ನು ಪರಿಶೀಲಿಸಿದಶಿಕ್ಷಕರು ಮತ್ತು ಎಸ್‌ಡಿಎಂಸಿ ಸದಸ್ಯರು ತರಗತಿಯೊಳಗೆ ಕುಳಿತು ಪಾಠ ಕೇಳುವುದು ಸೂಕ್ತವಲ್ಲ ಎಂದು ನಿರ್ಧರಿಸಿದ್ದಾರೆ. ಅಪಾಯ ಎದುರಾಗುವ ಸಾಧ್ಯತೆ ಇರುವುದರಿಂದಹಾಲು ಉತ್ಪಾದಕರ ಸಂಘದ ಆವರಣದಲ್ಲಿ ಮಕ್ಕಳಿಗೆ ಪಾಠ ಮಾಡಲು ತೀರ್ಮಾನಿಸಿದ್ದಾರೆ.

ಹಾಲು ಉತ್ಪಾದಕರ ಕಟ್ಟಡವನ್ನು ಶಾಲೆಗೆ ಬಳಸಿಕೊಳ್ಳಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಗ್ರಾಮಸ್ಥರು ತಿಳಿಸಿದ್ದಾರೆ. ಆದರೆ,ಈ ಕಟ್ಟಡದಲ್ಲೂ ಮಳೆ ಬಂದಾಗ ನೀರು ಸೋರುತ್ತದೆ.ಮಳೆ ಇಲ್ಲದೇ ಇದ್ದರೆ, ಇಲ್ಲೇ ಪಾಠ ಮಾಡಬಹುದು. ಆದರೆ, ಈ ಭಾಗದಲ್ಲಿ ಮಳೆಯಾಗುತ್ತಲೇ ಇದೆ. ಇದರಿಂದ ಈ ಕಟ್ಟಡವೂ ಮಕ್ಕಳಿಗೆ ಉಪಯೋಗಕ್ಕೆ ಬರುವುದಿಲ್ಲ.

ಪಶು ವೈದ್ಯಕೀಯ ಕಟ್ಟಡದಲ್ಲಿ ಪಾಠ ಮಾಡಿದರೆ ಅಲ್ಲಿ ಪಶುಗಳ ಔಷಧಿಗಳಿದ್ದು ಇವುಗಳ ವಾಸನೆ ಬರುತ್ತದೆ. ಮುಂದೆ ತೊಂದರೆಯಾದರೆ ಯಾರು ಹೊಣೆ ಎಂದು ಅಲ್ಲಿನ ವೈದ್ಯರು ತಿಳಿಸಿದರು.

‘ಸದ್ಯ ಮಕ್ಕಳನ್ನು ಎಲ್ಲಿ ಕೂರಿಸಿ ಪಾಠ ಮಾಡುವುದು ಎಂಬ ಗೊಂದಲದಲ್ಲಿದ್ದೇವೆ’ ಎಂದು ಶಿಕ್ಷಕರು ಮತ್ತು ಎಸ್‌ಡಿಎಂಸಿ ಅಧ್ಯಕ್ಷರು ತಮ್ಮ ಅಸಹಾಯಕತೆ ತೊಡಿಕೊಂಡರು.

ಹಾಡಿಗಳ ಮಕ್ಕಳು: ಕಾಡಂಚಿನಲ್ಲಿರುವುದರಿಂದ ಅನಂಜಿಹುಂಡಿ, ಬೂರದರಹುಂಡಿ, ಜಕ್ಕಹಳ್ಳಿ ಸೇರಿದಂತೆ ಐದಾರು ಬುಡಕಟ್ಟು ಹಾಡಿಗಳಿಂದ ಸುಮಾರು 20ಕ್ಕೂ ಹೆಚ್ಚು ಮಕ್ಕಳು ಇಲ್ಲಿಗೆ ಕಲಿಯಲು ಬರುತ್ತಾರೆ.

‘ಇಲ್ಲಿಗೆ ಬರುತ್ತಾರೆ. ಇಲ್ಲಿಗೆ ಬರುವವರು ಕಡು ಬಡವರ ಮತ್ತು ಬುಡಕಟ್ಟು ಜನರ ಮಕ್ಕಳು, ಸೌಲಭ್ಯವಿಲ್ಲದಿದ್ದರೂ ಯಾರೂ ಕೇಳುವುದಿಲ್ಲ ಎಂದು ಇಲ್ಲಿನ ಜನಪ್ರತಿನಿಧಿಗಳಾಗಲೀ, ಅಧಿಕಾರಿಗಳಾಗಲೀ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ’ ಎಂದು ಎಸ್‌ಡಿಎಂಸಿ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.

‘ಈಗಾಗಲೇ, ಕಾಡಂಚಿನಲ್ಲಿರುವ ಅನೇಕ ಗ್ರಾಮಗಳಲ್ಲಿರುವ ಶಾಲೆಗಳಲ್ಲಿ ಶಿಕ್ಷಕರಿಲ್ಲ, ಸೂಕ್ತ ಮೂಲ ಸೌಕರ್ಯಗಳಿಲ್ಲ ಎಂದು ಪೋಷಕರು ಪಟ್ಟಣದ ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಕಳುಹಿಸುತ್ತಿದ್ದಾರೆ. ಈ ಭಾಗಗಳಿಂದ 30ಕ್ಕೂ ಹೆಚ್ಚಿನ ಮಕ್ಕಳು ಪಟ್ಟಣಕ್ಕೆ ಹೋಗುತ್ತಿದ್ದಾರೆ. ಸರ್ಕಾರಿ ಶಾಲೆಗಳನ್ನು ಇದೇ ರೀತಿಕಡೆಗಣಿಸಿದ್ದೇ ಆದರೆ, ಇರುವ ಮಕ್ಕಳೆಲ್ಲವನ್ನು ಕಳುಹಿಸಿ ಶಾಲೆಯನ್ನು ಮುಚ್ಚಬೇಕಾಗುತ್ತದೆ’ ಎಂದು ಸ್ವಯಂ ಸೇವಾ ಸಂಸ್ಥೆಯೊಂದರಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ರೀಕಂಠ ಅವರು ತಿಳಿಸಿದರು.

ಶೀಘ್ರವಾಗಿ ಮಕ್ಕಳಿಗೆ ಕಟ್ಟಡದ ವ್ಯವಸ್ಥೆ ಮಾಡದಿದ್ದರೆ, ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ; ಇಲಾಖೆಯ ಮುಂದೆ ಮಕ್ಕಳೊಂದಿಗೆ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.

ಹೊಸ ಕಟ್ಟಡದ ನಿರ್ಮಾಣಕ್ಕಾಗಿ ₹ 2 ಲಕ್ಷವನ್ನು ಕಳೆದ ಸರ್ಕಾರ ಮಂಜೂರು ಮಾಡಿತ್ತು. ಬಳಿಕ ಹಣವೇ ಬಿಡುಗಡೆಯಾಗಲಿಲ್ಲ. ಶಾಲಾ ಕಟ್ಟಡ ಬಹಳ ಹಾಳಾಗಿರುವುದರಿಂದ ಪಶು ಆಸ್ಪತ್ರೆಯ ಹೊಸ ಕಟ್ಟಡವನ್ನು ಬಳಕೆ ಮಾಡಿಕೊಳ್ಳುವಂತೆ ಶಿಕ್ಷಕರಿಗೆ ತಿಳಿಸಲಾಗಿದೆ
- ಸೋಮಶೇಖರಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT