ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಟ್ಕಲ್‌: ಹುತಾತ್ಮ ಪೊಲೀಸರಿಗೆ ಸ್ಮಾರಕದ ಗೌರವ

ವೀರಪ್ಪನ್‌ ಗುಂಡಿನ ದಾಳಿಯಲ್ಲಿ ಮೃತಪಟ್ಟಿದ್ದ ನಾಲ್ವರು ಪೊಲೀಸರು
Last Updated 16 ಆಗಸ್ಟ್ 2022, 16:31 IST
ಅಕ್ಷರ ಗಾತ್ರ

ಮಹದೇಶ್ವರ ಬೆಟ್ಟ: ಹೊಗೆನಕಲ್‌- ಗೋಪಿನಾಥಂ ನಡುವಿನ ಮೆಟ್ಕಲ್‌ ಬಳಿ ದಂತ ಚೋರ ವೀರಪ್ಪನ್‌ನಿಂದ ಹತ್ಯೆಗೀಡಾದ ನಾಲ್ವರು ಪೊಲೀಸ್‌ ಸಿಬ್ಬಂದಿಯ ಸ್ಮರಣಾರ್ಥ ಜಿಲ್ಲಾ ಪೊಲೀಸ್‌ ಇಲಾಖೆ, ಆ ಸ್ಥಳದಲ್ಲಿ ಸ್ಮಾರಕ ನಿರ್ಮಿಸಿ, ಹುತಾತ್ಮ ಸಿಬ್ಬಂದಿಯನ್ನು ಗೌರವಿಸಿದೆ.

ಸ್ವಾತಂತ್ರ್ಯ ದಿನವಾದ ಸೋಮವಾರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಟಿ.ಪಿ.ಶಿವಕುಮಾರ್‌ ಅವರು ಸ್ಮಾರಕವನ್ನು ಉದ್ಘಾಟನೆ ಮಾಡಿದ್ದಾರೆ. ವೀರಪ್ಪನ್‌ ಹೊಂಚು ಹಾಕಿ ನಡೆಸಿದ್ದ ದಾಳಿಯಲ್ಲಿ ಮೃತಪಟ್ಟಿದ್ದ ಹಾಗೂ ಗಾಯಗೊಂಡಿದ್ದ ಪೊಲೀಸ್‌ ಸಿಬ್ಬಂದಿ ಕುಟುಂಬಸ್ಥರೂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶಿವಕುಮಾರ್‌ ಅವರ ಆಸಕ್ತಿಯಿಂದಾಗಿ 15 ದಿನಗಳ ಅವಧಿಯಲ್ಲಿ ಸ್ಮಾರಕ ನಿರ್ಮಾಣ ಕಾರ್ಯ ಮುಗಿದಿದೆ.

1990ರ ಏಪ್ರಿಲ್‌ 9ರಂದು ಮೆಟ್ಕಲ್‌ ಬಳಿ ವೀರಪ್ಪನ್‌ ತಂಡ ನಡೆಸಿದ ಗುಂಡಿನ ದಾಳಿಯಲ್ಲಿ ಎಸ್‌ಐಗಳಾದಎಸ್.ದಿನೇಶ್, ಎಸ್.ಜಗನ್ನಾಥ್, ರಾಮಲಿಂಗು ಹಾಗೂ ಕಾನ್‌ಸ್ಟೆಬಲ್‌ ಆಗಿದ್ದ ಎನ್.ಶಂಕರ್ ರಾವ್ ಹುತಾತ್ಮರಾಗಿದ್ದರು. ಘಟನೆ ನಡೆದ 32 ವರ್ಷಗಳ ಬಳಿಕ ಅವರ ನೆನಪಿನಲ್ಲಿ ಸ್ಮಾರಕ ನಿರ್ಮಾಣವಾಗಿದೆ.

ಮಹದೇಶ್ವರ ಬೆಟ್ಟದಲ್ಲಿ ಎಸ್‌ಐ ಆಗಿದ್ದ ದಿನೇಶ್ ನೇತೃತ್ವದ ಪೊಲೀಸರ ತಂಡ ಹೊಗೆನಲ್‌ನಿಂದ ಗೋಪಿನಾಥಂನತ್ತ ಹಿಂದಿರುಗುವಾಗ, ಖಚಿತ ಮಾಹಿತಿಯನ್ನು ಪಡೆದ ವೀರಪ್ಪನ್ ತಂಡ ಮೆಟ್ಕಲ್‌ ಎಂಬಲ್ಲಿ ಬೆಟ್ಟದ ಮೇಲೆ ಹೊಂಚು ಹಾಕಿ ಕುಳಿತಿರುತ್ತದೆ. ಸಂಜೆ ಹೊತ್ತಿಗೆ ಪೊಲೀಸರಿದ್ದ ಜೀಪು ವಾಹನ ಮಾರ್ಗದಲ್ಲಿ ಬಂದಾಗ ಗುಂಡಿನ ದಾಳಿ ನಡೆಸುತ್ತದೆ.

‘ದಿನೇಶ್, ಜಗನ್ನಾಥ್, ರಾಮಲಿಂಗು, ಶಂಕರ್ ರಾವ್ ಸ್ಥಳದಲ್ಲೇ ಮೃತಪಡುತ್ತಾರೆ. ದಾಳಿಯಲ್ಲಿ ತೀವ್ರ ಗಾಯಗೊಂಡಿದ್ದ ಎಸ್‌ಐ ಚಂದ್ರಪ್ಪ ಅವರು ನಾಲ್ವರನ್ನು ಜೀಪ್‌ ಹಾಕಿಕೊಂಡು ಹೊಗೆನಕಲ್‌ಗೆ ಬರುತ್ತಾರೆ. ಸ್ಥಳೀಯರು ಗಾಯಗೊಂಡಿದ್ದ ಅವರನ್ನು ಧರ್ಮಪುರಿ ಆಸ್ಪತ್ರೆಗೆ ದಾಖಲಿಸುತ್ತಾರೆ. ಪೋಲೀಸ್ ಅಧಿಕಾರಿಗಳ ಮೇಲೆ ವೀರಪ್ಪನ್‌ ನಡೆಸಿದ ಮೊದಲ ದಾಳಿ ಇದಾಗಿತ್ತು’ ಎಂದು ನೆಲ್ಲೂರು ಮಾದಯ್ಯ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಸ್ಮಾರಕ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಎಸ್‌ಪಿ ಶಿವಕುಮಾರ್‌, ‘ಈ ಸ್ಥಳದ ಬಗ್ಗೆ ಸಾರ್ವಜನಿಕರಿಗೂ ಗೊತ್ತಾಗಲಿ ಎಂಬ ಉದ್ದೇಶದಿಂದ ಸ್ಮಾರಕ ಸ್ಥಾಪಿಸಲಾಗಿದೆ.32 ವರ್ಷಗಳ ಬಳಿಕ ಈ ಸ್ಮಾರಕವನ್ನು ನಿರ್ಮಾಣ ಮಾಡಿರುವುದು, ಅದು ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಮೃತ ಗಳಿಗೆಯಲ್ಲಿ ಉದ್ಘಾಟನೆಯಾಗಿದೆ. ಗುಂಡು ಬಿದ್ದಿದ್ದರೂ ನಾಲ್ವರ ಶವವನ್ನು ತಂದ ವೀರ ಪೋಲಿಸ್ ಅಧಿಕಾರಿಗಳಿಗೆ ನನ್ನ ಶ್ರದ್ದಾಂಜಲಿಯನ್ನು ಸಲ್ಲಿಸುತ್ತೇನೆ. ಸ್ಥಳೀಯರು ಹಾಗೂ ಅರಣ್ಯ ಇಲಾಖೆಯ ಸಹಕಾರದೊಂದಿಗೆ ಇಲ್ಲಿ ಸ್ಮಾರಕವನ್ನು ನಿರ್ಮಾಣ ಮಾಡಿರುವುದು ನನಗೆ ಹಾಗೂ ಜಿಲ್ಲೆಗೆ ಹೆಮ್ಮೆ ತರುವಂತಹ ಸಂಗತಿ’ ಎಂದರು.

ಕಾರ್ಯಕ್ರಮದಲ್ಲಿ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಎಸ್‌.ಸುಂದರ್ ರಾಜ್, ಡಿವೈಎಸ್‌ಪಿ ನಾಗರಾಜ್, ಮಹದೇಶ್ವರಬೆಟ್ಟದ ಇನ್‌ಸ್ಪೆಕ್ಟರ್‌ ಬಸವರಾಜು,ಎಸಿಎಫ್‌ ಅಂಕರಾಜು, ಘಟನೆಯಲ್ಲಿ ಗಾಯಗೊಂಡಿದ್ದ ಚಂದ್ರಪ್ಪ ಪತ್ನಿ ವನಜಾಚಂದ್ರಪ್ಪ, ಮಗ ರಕ್ಷಿತ್ ಚಂದ್ರಪ್ಪ, ದಿನೇಶ್ ಅವರ ಮಗ ದರ್ಶನ್, ಪೋಲೀಸ್ ಸಿಬ್ಬಂದಿ ವರ್ಗ ಇತರರು ಇದ್ದರು.

‘ನಿವೇಶನ ಮಂಜೂರು ಮಾಡಿ’

ಘಟನೆಯಲ್ಲಿ ಗುಂಡೇಟು ತಿಂದು ತೀವ್ರವಾಗಿ ಗಾಯಗೊಂಡಿದ್ದ ಚಂದ್ರಪ್ಪ ಅವರು ಈಗ್ಗೆ ಐದು ವರ್ಷಗಳ ಹಿಂದೆ ಮೃತಪಟ್ಟಿದ್ದಾರೆ. 22 ವರ್ಷಗಳ ಕಾಲ ದೇಹದಲ್ಲಿ ಗುಂಡು ಇತ್ತು.

ಪ್ರಜಾವಾಣಿ ಜೊತೆ ಮಾತನಾಡಿದ ಅವರ ಪತ್ನಿ ವನಜಾ ಚಂದ್ರಪ್ಪ, ‘ನಮ್ಮ ಯಜಮಾನರು ನಿಷ್ಠಾವಂತರಾಗಿ ಕೆಚ್ಚೆದೆಯಿಂದ ಕೆಲಸ ನಿರ್ವಹಿಸಿದ್ದರೂ ಪ್ರತಿಫಲ ಸಿಕ್ಕಿಲ್ಲ.ಸರ್ಕಾರ ಮಂಜೂರು ಮಾಡಿದ್ದ ನಿವೇಶನಕ್ಕಾಗಿ ಮೂರು ವರ್ಷಗಳಿಂದ ಅಲೆದಾಡುತಿದ್ದೇವೆ. ನಿಷ್ಠೆಯಿಂದ ಕೆಲಸ ಮಾಡಿದವರಿಗೆ ಈ ರೀತಿ ಅನ್ಯಾಯ ಮಾಡುತ್ತಿರುವುದು ಸರಿಯಲ್ಲ. ನಮಗೆ ಸೇರಬೇಕಾದ ನಿವೇಶನ ಶೀಘ್ರದಲ್ಲಿ ಮಂಜೂರು ಮಾಡಿಕೊಡಬೇಕು’ ಎಂದು ಅವರು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT