ಜಿ.ಪಂ. ಮೀಸಲಾತಿ: ಟಿಕೆಟ್‌ಗೆ ಪೈಪೋಟಿ ಶುರು

ಚಾಮರಾಜನಗರ: ಜಿಲ್ಲಾ ಪಂಚಾಯಿತಿಯ 27 ಕ್ಷೇತ್ರಗಳಿಗೆ ಮೀಸಲಾತಿ ನಿಗದಿ ಪಡಿಸಿ ರಾಜ್ಯ ಚುನಾವಣಾ ಆಯೋಗ ಕರಡು ಅಧಿಸೂಚನೆ ಹೊರಡಿಸಿದ ಬೆನ್ನಲ್ಲೇ ಪಕ್ಷಗಳಲ್ಲಿ ಆಂತರಿಕವಾಗಿ ರಾಜಕೀಯ ಚಟುವಟಿಕೆಗಳು ಆರಂಭವಾಗಿದ್ದು, ಟಿಕೆಟ್ ಆಕಾಂಕ್ಷಿಗಳು ಲೆಕ್ಕಾಚಾರ ಆರಂಭಿಸಿದ್ದಾರೆ.
ಈ ಹಿಂದೆ ಇದ್ದ 23 ಕ್ಷೇತ್ರಗಳ ಜೊತೆಗೆ ಹೊಸದಾಗಿ ಈ ಬಾರಿ ನಾಲ್ಕು ಕ್ಷೇತ್ರಗಳು (ಚಾಮರಾಜನಗರ ತಾಲ್ಲೂಕಿನಲ್ಲಿ ಹೊಂಗನೂರು, ಕೊಳ್ಳೇಗಾಲ ತಾಲ್ಲೂಕಿನಲ್ಲಿ ಕೊಂಗರಹಳ್ಳಿ, ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಅಣ್ಣೂರು (ಬನ್ನಿತಾಳಪುರ) ಹಾಗೂ ಯಳಂದೂರು ತಾಲ್ಲೂಕಿನಲ್ಲಿ ಕೆಸ್ತೂರು) ಸೇರ್ಪಡೆಯಾಗಿವೆ.
ಇದುವರೆಗೆ ಇದ್ದ ಕ್ಷೇತ್ರ ಮೀಸಲಾತಿಗೆ ಹೋಲಿಸಿದರೆ, ಈ ಬಾರಿ ಎರಡು ಕ್ಷೇತ್ರಗಳನ್ನು ಬಿಟ್ಟು ಉಳಿದೆಲ್ಲ ಕ್ಷೇತ್ರಗಳ ಮೀಸಲಾತಿ ಬದಲಾಗಿದೆ. ಚಾಮರಾಜನಗರ ತಾಲ್ಲೂಕಿನ ಹರವೆ ಹಾಗೂ ಗುಂಡ್ಲುಪೇಟೆ ತಾಲ್ಲೂಕಿನ ಕೂತನೂರು (ಬರಗಿ) ಕ್ಷೇತ್ರಗಳ ಮೀಸಲಾತಿ ಮಾತ್ರ ಬದಲಾಗಿಲ್ಲ. ಇವೆರಡೂ ಸಾಮಾನ್ಯ ವರ್ಗಕ್ಕೆ ಮೀಸಲಾಗಿವೆ. ಈವರೆಗೆ ಪರಿಶಿಷ್ಟ ಜಾತಿಯ ಮಹಿಳೆಗೆ ಮೀಸಲಾಗಿದ್ದ ಚಾಮರಾಜನಗರ ತಾಲ್ಲೂಕಿನ ಉಡಿಗಾಲ, ಕೊಳ್ಳೇಗಾಲ ತಾಲ್ಲೂಕಿನ ಸತ್ತೇಗಾಲ ಹಾಗೂ ಯಳಂದೂರು ತಾಲ್ಲೂಕಿನ ಅಗರ (ಈಗ ಮದ್ದೂರು) ಕ್ಷೇತ್ರಗಳು ಈಗ ಸಾಮಾನ್ಯ ವರ್ಗಕ್ಕೆ ಮೀಸಲಾಗಿವೆ. ಈ ಐದು ಕ್ಷೇತ್ರಗಳಲ್ಲಿ ಹಿಂದಿನ ಅವಧಿಯ ಸದಸ್ಯರು ಟಿಕೆಟ್ ಸಿಕ್ಕಿದರೆ ಸ್ಪರ್ಧಿಸಬಹುದು. ಉಳಿದ 18 ಜನರಿಗೆ ತಮ್ಮದೇ ಕ್ಷೇತ್ರದಲ್ಲಿ ಈ ಬಾರಿ ಸ್ಪರ್ಧಿಸಲು ಅವಕಾಶ ಇಲ್ಲ.
ಆಕಾಂಕ್ಷಿಗಳ ನಡುವೆ ಪೈಪೋಟಿ: ಈ ಬಾರಿಯ ಚುನಾವಣೆಯು ಕಾಂಗ್ರೆಸ್ ಹಾಗೂ ಬಿಜೆಪಿಗೆ ಪ್ರತಿಷ್ಠೆಯ ಕಣವಾಗಲಿದೆ. ಇದುವರೆಗೂ ಜಿಲ್ಲಾ ಪಂಚಾಯಿತಿಯ ಆಡಳಿತ ಚುಕ್ಕಾಣಿ ಹಿಡಿದಿದ್ದ ಕಾಂಗ್ರೆಸ್, ಮತ್ತೆ ಬಹುಮತ ಪಡೆದು ಜಿಲ್ಲೆಯಲ್ಲಿ ಪಕ್ಷದ ಸಾಮರ್ಥ್ಯವನ್ನು ಸಾಬೀತು ಪಡಿಸಲು ಯೋಚಿಸುತ್ತಿದೆ. ರಾಜ್ಯ ಹಾಗೂ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ, ಜಿಲ್ಲಾ ಪಂಚಾಯಿತಿಯಲ್ಲೂ ಅಧಿಕಾರ ಹಿಡಿಯಬೇಕು ಎಂಬ ಲೆಕ್ಕಾಚಾರದಲ್ಲಿ ಚುನಾವಣಾ ಸಿದ್ಧತೆಯಲ್ಲಿ ತೊಡಗಿದೆ.
ಇದರ ನಡುವೆಯೇ, ಎರಡೂ ಪಕ್ಷಗಳಲ್ಲಿ ಮುಖಂಡರು ಜಿಲ್ಲಾ ಪಂಚಾಯಿತಿ ಟಿಕೆಟ್ ಪಡೆಯಲು ಕಸರತ್ತು ಆರಂಭಿಸಿದ್ದಾರೆ. ಕಳೆದ ಬಾರಿಯ ಚುನಾವಣೆಯಲ್ಲಿ ಮೀಸಲಾತಿಯ ಕಾರಣಕ್ಕೆ ತಮ್ಮ ಪತ್ನಿಯರನ್ನು ಕಣಕ್ಕಿಳಿಸಿದ್ದ ಬಹುತೇಕ ಮುಖಂಡರು ಈ ಬಾರಿ ಟಿಕೆಟ್‌ಗಾಗಿ ಪ್ರಯತ್ನಿಸುತ್ತಿದ್ದಾರೆ. ಪಕ್ಷದ ಜಿಲ್ಲಾ ಘಟಕಗಳಲ್ಲಿ ಗುರುತಿಸಿಕೊಂಡಿರುವ ಮುಖಂಡರು ಕೂಡ, ಚುನಾವಣೆಗೆ ಸ್ಪರ್ಧಿಸಲು ತುದಿಗಾಲಿನಲ್ಲಿ ನಿಂತಿದ್ದಾರೆ.
ಪ್ರತಿಯೊಂದು ಕ್ಷೇತ್ರದಲ್ಲೂ ಟಿಕೆಟ್‌ಗಾಗಿ ನಾಲ್ಕೈದು ಮಂದಿ ಆಕಾಂಕ್ಷಿಗಳಿದ್ದಾರೆ ಎಂದು ಎರಡೂ ಪಕ್ಷಗಳ ಮುಖಂಡರು ಹೇಳುತ್ತಿದ್ದಾರೆ. ಗೆಲ್ಲುವ ಸಾಮರ್ಥ್ಯವಿರುವ, ಜನರೊಂದಿಗೆ ಹೆಚ್ಚು ಸಂಪರ್ಕದಲ್ಲಿರುವ, ಜನರ ಮೇಲೆ ಪ್ರಭಾವ ಬೀರುವ ಸಾಮರ್ಥ್ಯ ಹೊಂದಿರುವವರನ್ನೇ ಅಂತಿಮವಾಗಿ ಆಯ್ಕೆ ಮಾಡಲಾಗುತ್ತದೆ ಎಂಬುದು ಅವರ ಹೇಳಿಕೆ.
ಬದಲಾವಣೆಯ ಸಾಧ್ಯತೆ: ಚುನಾವಣಾ ಆಯೋಗವು ಮೀಸಲಾತಿ ನಿಗದಿ ಪಡಿಸಿ ಕರಡು ಅಧಿಸೂಚನೆಯಷ್ಟೇ ಹೊರಡಿಸಿದೆ. ಇದೇ 8ರವರೆಗೆ ಆಕ್ಷೇಪ ಸಲ್ಲಿಸಲು ಅವಕಾಶ ನೀಡಲಾಗಿದೆ. ಕೆಲವು ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಲು ಬಿಜೆಪಿ ಸಿದ್ಧತೆ ನಡೆಸಿದೆ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಸುಂದರ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
ಸಲ್ಲಿಕೆಯಾಗುವ ಆಕ್ಷೇಪಣೆಗಳನ್ನು ಪರಿಶೀಲಿಸಿ, ಈಗಿನ ಮೀಸಲಾತಿ ಪಟ್ಟಿಯಲ್ಲಿ ಚುನಾವಣಾ ಆಯೋಗ ಸಣ್ಣ ಪುಟ್ಟ ಬದಲಾವಣೆಗಳನ್ನೂ ಮಾಡುವ ಸಾಧ್ಯತೆ ಇದೆ.
ವರಿಷ್ಠರೊಂದಿಗೆ ಚರ್ಚಿಸಿ ತೀರ್ಮಾನ: ಸುಂದರ್
ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಸುಂದರ್, ‘ಒಂದೊಂದು ಕ್ಷೇತ್ರಕ್ಕೂ ಮೂರ್ನಾಲ್ಕು ಮಂದಿ ಆಕಾಂಕ್ಷಿಗಳಿರುವುದು ನಿಜ. ಆದರೆ, ಮೀಸಲಾತಿಗೆ ಸಂಬಂಧಿಸಿದಂತೆ ಕರಡು ಅಧಿಸೂಚನೆಯಷ್ಟೇ ಬಂದಿದೆ. ಅಂತಿಮ ಅಧಿಸೂಚನೆ ಬಂದ ನಂತರ, ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಿಸಿದಂತೆ ಜಿಲ್ಲಾ ಮಟ್ಟದಲ್ಲಿ ಚರ್ಚಿಸಲಾಗುತ್ತದೆ. ನಂತರ ವರಿಷ್ಠರೊಂದಿಗೂ ಸಭೆ ನಡೆಸಿ, ಅವರ ಸೂಚನೆಯ ಮೇರೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು’ ಎಂದು ಹೇಳಿದರು.
ಗೆಲ್ಲುವ ಅಭ್ಯರ್ಥಿಗೆ ಟಿಕೆಟ್: ಮರಿಸ್ವಾಮಿ
‘ಟಿಕೆಟ್‌ಗಾಗಿ ಪೈಪೋಟಿ ಸಹಜ. ಚುನಾವಣೆಗೆ ಇನ್ನೂ ಸಮಯವಿದೆ. ಟಿಕೆಟ್ ಆಕಾಂಕ್ಷಿಗಳಿಂದ ಅರ್ಜಿ ಆಹ್ವಾನಿಸುತ್ತೇವೆ. ಆ ಬಳಿಕ ಮುಖಂಡರೆಲ್ಲ ಸೇರಿ ಚರ್ಚಿಸಿ ಅಭ್ಯರ್ಥಿಯ ಬಗ್ಗೆ ಕೂಲಂಕಷ ಪರಿಶೀಲನೆ ನಡೆಸುತ್ತೇವೆ. ಜನರೊಂದಿಗೆ ಅವರಿಗಿರುವ ಒಡನಾಟ, ಗೆಲ್ಲುವ ಸಾಮರ್ಥ್ಯ ಎಲ್ಲವನ್ನೂ ಒರೆಗೆ ಹಚ್ಚಲಾಗುತ್ತದೆ. ಅಂತಿಮವಾಗಿ ಎಲ್ಲರ ಸಲಹೆ ಪಡೆದು, ಪಕ್ಷಕ್ಕೆ ಗೆಲುವು ತರಬಲ್ಲಂತಹ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತೇವೆ’ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪಿ.ಮರಿಸ್ವಾಮಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.