ಶನಿವಾರ, ಅಕ್ಟೋಬರ್ 1, 2022
20 °C
ಮೂಡಲಪಾಯ ಯಕ್ಷಗಾನ, ಹಾರ್ಮೋನಿಯಂ, ನಾಟಕ, ಗಾಯನ ಪ್ರವೀಣ ಮಹದೇವಪ್ಪ

ಗುಂಡ್ಲುಪೇಟೆ: ಕೊಡಗಾಪುರದಲ್ಲಿ ಅರಳಿದ ಕಲಾ ಕುಸುಮ

ಮಲ್ಲೇಶ ಎಂ.‌ Updated:

ಅಕ್ಷರ ಗಾತ್ರ : | |

Prajavani

ಗುಂಡ್ಲುಪೇಟೆ: ತಾಲ್ಲೂಕಿನ ಕೊಡಗಾಪುರ ಗ್ರಾಮದ ಪ್ರತಿ ಮನೆಯಲ್ಲೂ ಒಬ್ಬರು ಕಲಾವಿದರಿದ್ದಾರೆ‌. ಭಜನೆ, ಗಮಕ, ಮೂಡಲಪಾಯ ಯಕ್ಷಗಾನ, ನಂದಿಧ್ವಜ ಕುಣಿತ, ಗಾರುಡಿಗೊಂಬೆ‌ ಕುಣಿತ.. ಮೊದಲಾದ ಜಾನಪದ ಕಲಾಪ್ರಕಾರಗಳಲ್ಲಿ ಇಲ್ಲಿನ ಜನರು ಗುರುತಿಸಿಕೊಂಡಿದ್ದಾರೆ. 

ಈ ಗ್ರಾಮದ ಶಿವಮ್ಮ ಮತ್ತು ಶಿವಪ್ಪ ದಂಪತಿ ಮಗ ಕೆ.ಎಸ್.ಮಹದೇವಪ್ಪ ಅವರು ಹಲವು ಕಲೆಗಳಲ್ಲಿ ಪ್ರಾವಿಣ್ಯ ಪಡೆದವರು. ಮೂಡಲಪಾಯ ಯಕ್ಷಗಾನ ಭಾಗವತಿಕೆ ಮಾಡುತ್ತಾರೆ.  ಹಾರ್ಮೋನಿಯಂ ನುಡಿಸುವುದರಲ್ಲೂ ಪರಿಣತಿ ಇದೆ. 150 ಕ್ಕೂ ಹೆಚ್ಚು ಸಾಮಾಜಿಕ ಮತ್ತು ಪೌರಾಣಿಕ ನಾಟಕಗಳನ್ನು ನಿರ್ದೇಶಿಸಿದ್ದಾರೆ.  ತಾಲ್ಲೂಕಿನಲ್ಲಿ ಮಹದೇವಪ್ಪ ಅವರು ಕಲಾಚತುರ ಎಂದೇ ಗುರುತಿಸಿಕೊಂಡಿದ್ದಾರೆ. 

1960ರಲ್ಲಿ ಜನಿಸಿದ ಕೆ.ಎಸ್.ಮಹದೇವಪ್ಪ ಓದಿದ್ದು ಪ್ರಾಥಮಿಕ ಶಿಕ್ಷಣದವರೆಗೆ ಮಾತ್ರ. ಬಡತನದ ಕಾರಣದಿಂದ ವಿದ್ಯಾಭ್ಯಾಸ ಮೊಟಕುಗೊಳಿಸಿ ಕಲಾಸೇವೆಯಲ್ಲಿ ತೊಡಗಿದರು. 

1985ರಲ್ಲಿ ದಕ್ಷಯಜ್ಞ ನಾಟಕದ ಭೃಗುಮುನಿಯ‌ ಪಾತ್ರಕ್ಕೆ ಬಣ್ಣ ಹಚ್ಚುವ ಮೂಲಕ ರಂಗಭೂಮಿಗೆ ಪಾದರ್ಪಣೆ ಮಾಡಿದರು. 1988ರಲ್ಲಿ ಸೀತಾಕಲ್ಯಾಣ ಎಂಬ ಮೂಡಲಪಾಯ ಯಕ್ಷಗಾನದ ಭಾಗವತರಾಗಿ ಯಶಸ್ಸುಗಳಿಸಿದರು. 

ಸಂಗೀತ ವಿದ್ವಾನ್ ಮಂಗಲ ಶಿವಣ್ಣ ಅವರ ಗರಡಿಯಲ್ಲಿ‌ ಹಾರ್ಮೋನಿಯಂ ಕಲಿತರು. ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ ಅನೇಕ ಗ್ರಾಮಗಳಲ್ಲಿ ಭಜನಾ ತರಬೇತಿಯನ್ನು ನೀಡಿ ಅನೇಕ ಭಜನಾ ತಂಡಗಳನ್ನು ಹುಟ್ಟುಹಾಕಿದ್ದಾರೆ.

ನಾಟಕ ನಿರ್ದೇಶನ: ನಾಟಕದ ಬಗ್ಗೆಯೂ ಆಕರ್ಷಿತರಾಗಿದ್ದ ಮಹದೇವಪ್ಪ ಅವರು ಆರಂಭದಲ್ಲಿ ಶಾಲಾ ಮಕ್ಕಳಿಗೆ ನಾಟಕ ಹೇಳಿಕೊಡಲು ಆರಂಭಿಸಿದರು. ಆ ಬಳಿಕ ದೊಡ್ಡವರಿಗೂ ನಾಟಕ ನಿರ್ದೇಶನ ಮಾಡಿದರು. 100ಕ್ಕೂ ಹೆಚ್ಚು ಸಾಮಾಜಿಕ ನಾಟಕಗಳು, 50ಕ್ಕೂ ಹೆಚ್ಚು ಐತಿಹಾಸಿಕ, ಪೌರಾ‌ಣಿಕ ನಾಟಕಗಳನ್ನು ರಂಗಕ್ಕಿಳಿಸಿದ್ದಾರೆ. ಶಿವಕಥಾ ವಿದ್ವಾನರಾಗಿಯೂ ತಮ್ಮ ಛಾಪನ್ನು ಮೂಡಿಸಿದ್ದಾರೆ. 

ಗುರುಗಳಾದ ಪಿಟೀಲು ವಿದ್ವಾನ್ ದಿವಂಗತ ಎಲ್.ನಾಗರಾಜು ಮಾರ್ಗದರ್ಶನದಲ್ಲಿ ಶನಿಮಹಾತ್ಮೆ ಎಂಬ ಶಿವಕಥೆಯ ಪುಸ್ತಕವನ್ನು ಪ್ರಕಟಿಸಿದ್ದಾರೆ. ವಚನಗಾಯನ, ರಂಗಗೀತೆ, ತತ್ವಪದ, ಜಾನಪದಗೀತೆಗಳ ಗಾಯಕರಾಗಿಯೂ ಸೈ ಎನಿಸಿಕೊಂಡಿದ್ದಾರೆ. ಉತ್ತಮ ಗಮಕಿಗಳಾದ ಇವರು ಕೀಬೋರ್ಡ್ ವಾದಕರಾಗಿಯೂ ಕಲಾಸೇವೆಯನ್ನು ಮುಂದುವರೆಸುತ್ತಿದ್ದಾರೆ.

ಇವರ ಕಲಾಸೇವೆಯನ್ನು ಗುರುತಿಸಿ ತಾಲ್ಲೂಕು ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ತಾಲ್ಲೂಕು ಪತ್ರಕರ್ತರ ಸಂಘ, ಜೆ.ಎಸ್.ಎಸ್. ಸಂಸ್ಥೆ ಹಾಗೂ ಅನೇಕ ಸಂಘ ಸಂಸ್ಥೆಗಳು ಗೌರವಿಸಿವೆ. ಕೊಡಗಾಪುರದ ಶ್ರೀ ಶಿವೇಶ್ವರ ನಾಟಕ ಕಲಾಸಂಘ ‘ಕಲಾಚತುರ’ ಎಂಬ ಬಿರುದನ್ನು ನೀಡಿ ಸನ್ಮಾನಿಸಿದೆ. 

‘ಉಸಿರಿರುವ ತನಕ ಕಲಾಸೇವೆ’
63 ವರ್ಷ ವಯಸ್ಸಿನ ಕೆ.ಎಸ್.ಮಹದೇವಪ್ಪ ಅವರು ನಾಲ್ಕು ದಶಕಗಳಿಂದ ಕಲಾ ಸೇವೆಯಲ್ಲಿ ತೊಡಗಿದ್ದಾರೆ. ಅದನ್ನೇ ಬದುಕಾಗಿಸಿದ್ದಾರೆ. 

40 ವರ್ಷಗಳು ಸಂದರೂ ಅವರಿಗೆ ದಣಿವಾಗಿಲ್ಲ. ಈಗಲೂ ನಾಟಕ, ಹಾರ್ಮೊನಿಯಂ ನುಡಿಸುವುದು, ಗಾಯನ ಸೇರಿದಂತೆ ವಿವಿಧ ಕಲಾ ಚಟುವಟಿಕೆಗಳಲ್ಲಿ ತೊಡಗಿಕೊಂಡು ಇರುತ್ತಾರೆ. ಆಸಕ್ತರಿಗೆ ತಮ್ಮ ಕಲಾ ಜ್ಞಾನವನ್ನು ಧಾರೆ ಎರೆಯುತ್ತಲೂ ಇದ್ದಾರೆ. 

‘ಕಲಿತ ಕಲೆಯನ್ನು ಸುಲಭವಾಗಿ ಬಿಡಲು ಆಗುವುದಿಲ್ಲ. ದೇಹದಲ್ಲಿ ಶಕ್ತಿ,  ಉಸಿರು ಇರುವ ತನಕವೂ ಈ ಕ್ಷೇತ್ರದಲ್ಲೇ ಮುಂದುವರಿಯುತ್ತೇನೆ’ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ ಮಹದೇವಪ್ಪ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು