ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ: ಚಿಗುರಿದ ಹಸಿರು, ಸಿಬ್ಬಂದಿ ನಿಟ್ಟುಸಿರು

ಬಂಡೀಪುರ ವ್ಯಾಪ್ತಿಯಲ್ಲಿ ಮಳೆ, ಕಾಳ್ಗಿಚ್ಚು ಆತಂಕ ದೂರ
Last Updated 12 ಏಪ್ರಿಲ್ 2022, 20:15 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ವಿವಿಧ ವಲಯಗಳು ಹಾಗೂ ಕಾಡಂಚಿನಲ್ಲಿ ಮುಂಗಾರು ಪೂರ್ವ ಮಳೆಯಾಗುತ್ತಿರುವುದರಿಂದ ಕಾಳ್ಗಿಚ್ಚಿನ ಆತಂಕ ದೂರವಾಗಿದೆ.

ಚದುರಿದಂತೆ ಬರುತ್ತಿರುವ ಮಳೆಯಿಂದಾಗಿ ಬೇಸಿಗೆಯಿಂದ ಬಾಡಿ ಹೋಗಿದ್ದ ಗಿಡಮರಗಳು ಹಾಗೂ ಬೆಂಕಿ ರೇಖೆ ನಿರ್ಮಾಣದ ಸಮಯದಲ್ಲಿ ಕುರುಚಲು ಗಿಡಗಳನ್ನು ತೆರವುಗೊಳಿಸಿದ್ದ ಸ್ಥಳದಲ್ಲಿ ಈಗ ಹಸಿರು ಚಿಗುರೊಡೆದಿದ್ದು, ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ನಿರಾಳರಾಗಿದ್ದಾರೆ.

ಬಂಡೀಪುರ, ಕುಂದುಕೆರೆ, ಗೋಪಾಲ ಸ್ವಾಮಿ ಬೆಟ್ಟ, ಮದ್ದೂರು, ಮೂಲೆಹೊಳೆ ಸೇರಿದಂತೆ ಹೆಡಿಯಾಲ ಉಪ ವಿಭಾಗದ ವಲಯಗಳಲ್ಲಿ ಮಳೆಯಾಗುತ್ತಿದೆ.

ಕಳೆದ ನಾಲ್ಕೈದು ತಿಂಗಳಿನಿಂದ ಅರಣ್ಯ ವೀಕ್ಷಕರು ಹಾಗೂ ಇತರ ಸಿಬ್ಬಂದಿಗೆ ರಜೆ ಇರಲಿಲ್ಲ. ಬೆಂಕಿ ಬೀಳುವ ಆತಂಕದಲ್ಲಿದ್ದರು. ಕುಂದುಕೆರೆ ಕೆರೆ ಹಾಗೂ ಬಂಡೀಪುರ ವಲಯದಲ್ಲಿ ನಡೆದ ಸಣ್ಣ ಪ್ರಕರಣಗಳು ಬಿಟ್ಟರೆ ಬೇರೆಲ್ಲೂ, ಕಾಳ್ಗಿಚ್ಚು ಸಂಭವಿಸಿಲ್ಲ. ಈ ಎರಡು ಪ್ರದೇಶಗಲ್ಲಿ ಕಿಡಿಗೇಡಿಗಳು ಹಚ್ಚಿದ್ದ ಬೆಂಕಿಯನ್ನು ಸಿಬ್ಬಂದಿ ಸಕಾಲದಲ್ಲಿ ಕಾರ್ಯಾಚರಣೆ ನಡೆಸಿ ನಂದಿಸಿದ್ದರು.

ಡಿಸೆಂಬರ್‌ 2021ರ ಡಿ.28ರಿಂದ 2022ರ ಫೆ. 21ರವರೆಗೆ ಬಂಡೀಪುರಕ್ಕೆ ಕಾಯಂ ಮುಖ್ಯಸ್ಥರಿರಲಿಲ್ಲ. ಬೆಂಕಿ ಬೀಳುವ ಸಮಯದಲ್ಲೇ ಸಂರಕ್ಷಿತ ಪ್ರದೇಶಕ್ಕೆ ಮುಖ್ಯಸ್ಥರು ಇಲ್ಲ ಎಂಬ ವಿಚಾರ ಭಾರಿ ಚರ್ಚೆಗೆ ಕಾರಣವಾಗಿತ್ತು. ನಂತರ ರಮೇಶ್‌ ಕುಮಾರ್‌ ಅವರು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದರು.

ಕಾಳ್ಗಿಚ್ಚು ತಡೆಯುವುದಕ್ಕಾಗಿರಾಷ್ಟ್ರೀಯ ಹೆದ್ದಾರಿಯಲ್ಲಿ ಗಸ್ತು ತಿರುಗುವುದು, ಚೆಕ್‌ಪೋಸ್ಟ್‌ ಬಳಿ ಸವಾರರಿಗೆ ಜಾಗೃತಿ ಮೂಡಿಸುವುದು ಸೇರಿದಂತೆ ಹಲವು ಕ್ರಮಗಳನ್ನು ಅಧಿಕಾರಿಗಳು ಕೈಗೊಂಡಿದ್ದರು.

ಮಾರ್ಚ್‌ ಎರಡನೇ ವಾರದಿಂದ ಒಂದೊಂದು ಮಳೆಯಾಗಲು ಆರಂಭವಾಗಿದ್ದು, ಸಸ್ಯ ಸಂಕುಲ ಮತ್ತೆ ಚಿಗುರೊಡೆಯಲು ಅನುಕೂಲವಾಗಿದೆ.

ಒಣಗಿದ ಹುಲ್ಲು, ಎಲೆಗಳು ಕೊಳೆತು, ಹೊಸ ಹುಲ್ಲು, ಚಿಗುರುಗಳು ಮೂಡಲು ಆರಂಭಿಸಿವೆ. ಹಾಗಾಗಿ, ಇನ್ನು ಬೆಂಕಿ ಬೀಳಲು ಸಾಧ್ಯವಿಲ್ಲ ಎಂಬುದು ಎಂಬುದು ಅರಣ್ಯ ವೀಕ್ಷಕರ ಅಭಿಪ್ರಾಯ.

ರಾಷ್ಟ್ರೀಯ ಹೆದ್ದಾರಿಯ ಎರಡು ಬದಿಯಲ್ಲಿ ಬೆಂಕಿ ರೇಖೆ ಮಾಡಿದ್ದ ಜಾಗದಲ್ಲೆಲ್ಲ ಹುಲ್ಲು ಬೆಳೆಯಲು ಆರಂಭಿಸಿದೆ.

ಮಳೆಯಾದರೆ ಕಾಡು ಚಿಗುರುತ್ತದೆ ಎಂಬುದು ಒಂದೆಡೆಯಾದರೆ, ಕಾಳ್ಗಿಚ್ಚು ಸಮಯದ ಸಂದರ್ಭದಲ್ಲಿ ತಾತ್ಕಾಲಿಕವಾಗಿ ನೇಮಕಗೊಂಡ ಬೆಂಕಿ ವೀಕ್ಷಕರಿಗೆ ಇನ್ನು ಕೆಲಸ ಇರುವುದಿಲ್ಲ ಎಂಬುದು ಚಿಂತೆ.

‘ಲಂಟಾನಾ ತೆರವು, ಹುಲ್ಲುಗಳನ್ನು ಬೆಳೆಸುವುದು ಇತ್ಯಾದಿ ಕೆಲಸಗಳನ್ನು ಗಿರಿಜನರಿಂದಲೇ ಮಾಡಿಸಲಾಗುತ್ತದೆ. ಏಪ್ರಿಲ್, ಮೇ ತಿಂಗಳು ಬಿಟ್ಟು, ಉಳಿದೆಲ್ಲ ತಿಂಗಳು ಕೆಲಸ ಇರುತ್ತದೆ’ ಎಂದು ವಲಯಾರಣ್ಯಾದಿಕಾರಿ ನವೀನ್‌ ಕುಮಾರ್ ಅವರು ತಿಳಿಸಿದರು.

–––

ಅರಣ್ಯದಲ್ಲಿ ಉತ್ತಮ ಮಳೆಯಾಗಿದೆ. ಸದ್ಯಕ್ಕೆ ಬೆಂಕಿ ಸಮಸ್ಯೆ ಇಲ್ಲ. ಇನ್ನು ಒಂದೆರಡು ಮಳೆಯಾದರೆ ಕೆರೆಗಳೂ ತುಂಬಲಿವೆ
–ಡಾ.ರಮೇಶ್ ಕುಮಾರ್, ಹುಲಿ ಯೋಜನೆ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT