ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಂತೇಮರಹಳ್ಳಿ | ಅಕಾಲಿಕ ಮಳೆ; ಒಕ್ಕಣೆಗೆ ತೊಂದರೆ

ಮಹಾದೇವ ಹೆಗ್ಗವಾಡಿಪುರ
Published 6 ಜನವರಿ 2024, 5:38 IST
Last Updated 6 ಜನವರಿ 2024, 5:38 IST
ಅಕ್ಷರ ಗಾತ್ರ

ಸಂತೇಮರಹಳ್ಳಿ: ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಕಾರಣಕ್ಕೆ ಮೂರು ದಿನಗಳಿಂದ ಜಿಲ್ಲೆಯಾದ್ಯಂತ ಆವರಿಸಿರುವ ಮೋಡ ಕವಿದ ವಾತಾವರಣ, ಆಗಾಗ ಬೀಳುತ್ತಿರುವ ಮಳೆಯಿಂದ ಹಿಂಗಾರು ಬೆಳೆಗಳ ಒಕ್ಕಣೆಗೆ ಅಡ್ಡಿಪಡಿಸಿದೆ. ಫಸಲಿನ ರಕ್ಷಣೆಗಾಗಿ ರೈತರು ಪರದಾಡುವಂತಾಗಿದೆ.

ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿ ಸರಿಯಾಗಿ ಮಳೆ ಬೀಳದ ಕಾರಣ ಬೆಳೆ ನಷ್ಟವಾಗಿದೆ. ಹಿಂಗಾರು ಹಂಗಾಮಿನಲ್ಲಾದರೂ ಫಸಲು ತೆಗೆಯೋಣ ಎಂದು ಕೊಂಡಿದ್ದವರ ಆಸೆಗೆ ಈ ಮಳೆ ನಿರಾಸೆ ಮೂಡಿಸಿದೆ.

ಹೋಬಳಿಯಾದ್ಯಂತ ಹಿಂಗಾರು ಹಂಗಾಮಿನಲ್ಲಿ ನೂರಾರು ಎಕರೆಯಲ್ಲಿ ಹುರುಳಿ ಹಾಗೂ ಹಸಿಕಡಲೆ ಬಿತ್ತನೆ ಮಾಡಿದ್ದರು. ಈಗ ಕಟಾವು ನಡೆಯುತ್ತಿದೆ. ಧಾನ್ಯಗಳ ಒಕ್ಕಣೆಗಾಗಿ ಒಕ್ಕಣೆ ಸ್ಥಳಗಳು ಹಾಗೂ ರಸ್ತೆಗಳಲ್ಲಿ ಹುರುಳಿ ಹಾಗೂ ಹಸಿಕಡಲೆಯನ್ನು ಶೇಖರಿಸಿಟ್ಟಿದ್ದಾರೆ. ಕೆಲವು ರೈತರು ಒಕ್ಕಣೆ ಮುಗಿಸಿ ಧಾನ್ಯಗಳನ್ನು ಮನೆಗಳಲ್ಲಿ ಶೇಖರಿಸಿಕೊಂಡಿದ್ದಾರೆ. ಬಹುತೇಕರ ಫಸಲು ಇನ್ನೂ ಜಮೀನಿನಲ್ಲೇ ಉಳಿದಿದೆ. ಇದರೊಂದಿಗೆ ಈವರೆಗೆ ಕಟಾವು ಆಗಿರುವ ಫಸಲು ಒಕ್ಕಣೆಯಾಗಿಲ್ಲ.

ಮೋಡದ ವಾತಾವರಣ ಹಾಗೂ ಜಿಟಿ, ಜಿಟಿಯಾಗಿ ಮತ್ತು ಅಲ್ಲಲ್ಲಿ ಚದುರಿದಂತೆ ಸುರಿಯುತ್ತಿರುವ ಮಳೆಯಿಂದಾಗಿ ರೈತರು ಕ‌ಟಾವು ಮಾಡಿರುವ ಫಸಲನ್ನು ರಾಶಿ ಹಾಕಿ ಟಾರ್ಪಾಲ್‌ನಿಂದ ಮುಚ್ಚಿದ್ದಾರೆ.

ಶುಕ್ರವಾರ ಜಿಲ್ಲೆಯಲ್ಲಿ ಮಳೆಯಾಗಿಲ್ಲ. ಆದರೆ, ಮೋಡಕವಿದ ವಾತಾವರಣ ಇತ್ತು. ಗುರುವಾರ ಮಳೆಯಾಗಿದ್ದರಿಂದ ರಸ್ತೆ, ಕಣಗಳು ಒಣಗಿರಲಿಲ್ಲ. ರೈತರು ಮನೆಗಳ ಮುಂಭಾಗ ಹಾಗೂ ಒಕ್ಕಣೆ ಸ್ಥಳ, ರಸ್ತೆಗಳ ಬದಿ ಫಸಲುಗಳನ್ನು ಟಾರ್ಪಾಲ್‌ ಹಾಗೂ ಚೀಲಗಳಿಂದ ಮುಚ್ಚಿ ಹಗಲು ರಾತ್ರಿ ಕಾಯಬೇಕಾಗಿದೆ. 

‘ನಮ್ಮಲ್ಲಿ ಇನ್ನೂ ಕಟಾವು ಆಗಿಲ್ಲ. ಮಳೆ ಒಮ್ಮೆ ಜೋರಾಗಿ ಬಂದು ಹೋದರೆ ತೊಂದರೆ ಇಲ್ಲ. ಪ್ರತಿದಿನ ತುಂತುರು ಹನಿ ಫಸಲಿನ ಮೇಲೆ ಬಿದ್ದಾಗ ಕಾಳುಗಳು ನೀರು ಕುಡಿದು ನೆನೆಯುವುದರಿಂದ ಮೊಳಕೆಯೊಡದರೆ ನಷ್ಟವಾಗುತ್ತದೆ’ ಎಂದು ಅಳಲು ತೋಡಿಕೊಳ್ಳುತ್ತಾರೆ ರೈತರು. 

‘ಕಡಲೆ ಫಸಲು ಕಟಾವು ಹಂತಕ್ಕೆ ಬಂದಿದೆ. ಕಟಾವು ಮಾಡುವ ಸಮಯದಲ್ಲಿ ಮಳೆ ಬಂದಿದೆ. ಮಳೆ ಹನಿ ಹಸಿಕಡಲೆಯ ಮೇಲೆ ಬಿದ್ದು ಕಡಲೆಯು ಊದಿಕೊಳ್ಳಲು ಆರಂಭಿಸಿದೆ. ಇನ್ನೂ ಎರಡು ಮೂರು ದಿನ ಮಳೆ ಬಂದರೆ ಕಡಲೆ ಚಿಗುರು ಒಡೆಯುತ್ತದೆ. ಇದರಿಂದ ಕೈಗೆ ಬಂದ ಫಸಲು ಮನೆ ಸೇರದಂತಾಗುತ್ತದೆ’ ಎಂದು ರೈತ ಮಾದಯ್ಯ ಆತಂಕ ವ್ಯಕ್ತಪಡಿಸಿದರು. 

‘ಕಟಾವು ಆಗಿರುವ ಹುರುಳಿಗೆ ಮಳೆ ನೀರು ಬಿದ್ದಿದೆ. ಒಕ್ಕಣೆಗೆ ತೊಂದರೆಯಾಗಿರುವುದರಿಂದ ಬಿಸಿಲು ಬರುವವರೆಗೂ ಕಾಯಬೇಕು. ಮೂರ್ನಾಲ್ಕು ದಿನ ಬಿಸಿಲು ಬಾರದಿದ್ದರೆ, ಫಸಲು ಕೊಳೆಯಬಹುದು’ ಎಂದು ಮತ್ತೊಬ್ಬ ರೈತ ಮಹದೇವಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ಕಟಾವು ಮುಂದೂಡಲು ಸಲಹೆ

ಶುಕ್ರವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ 24 ಗಂಟೆಗಳ ಅವಧಿಯಲ್ಲಿ 0.41 ಸೆಂ.ಮೀ ಮಳೆಯಾಗಿದೆ.   ‘ಇನ್ನೂ ಎರಡು ಮೂರು ದಿನಗಳ ಇದೇ ರೀತಿ ವಾತಾವರಣ ಇರುವುದರಿಂದ ರೈತರು ಒಕ್ಕಣೆ ಮತ್ತು ಕಟಾವನ್ನು ಮುಂದೂಡಬೇಕು’ ಎಂದು ಸಂತೇಮರಹಳ್ಳಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಮಹದೇವಪ್ರಸಾದ್ ಸಲಹೆ ನೀಡಿದರು. 

ಒಕ್ಕಣೆಗಾಗಿ ರಸ್ತೆ ಬದಿ ರಾಶಿ ಹಾಕಿರುವ ಫಸಲನ್ನು ಮಳೆಯಿಂದ ರಕ್ಷಿಸಲು ಟಾರ್ಪಾಲ್‌ನಿಂದ ಮುಚ್ಚಲಾಗಿದೆ
ಒಕ್ಕಣೆಗಾಗಿ ರಸ್ತೆ ಬದಿ ರಾಶಿ ಹಾಕಿರುವ ಫಸಲನ್ನು ಮಳೆಯಿಂದ ರಕ್ಷಿಸಲು ಟಾರ್ಪಾಲ್‌ನಿಂದ ಮುಚ್ಚಲಾಗಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT