ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತ ಸಂಘದಿಂದ ಬಿಜೆಪಿ, ಮೈತ್ರಿ ಕೂಟ ಸೋಲಿಸಿ ಅಭಿಯಾನ

ಚಾಮರಾಜನಗರದ ಅಮೃತಭೂಮಿಯಲ್ಲಿ ಚಾಲನೆ, ರೈತರ ಉಳಿವಿಗಾಗಿ ಹೋರಾಟ–ಸಂಘದ ಹೇಳಿಕೆ
Published 23 ಏಪ್ರಿಲ್ 2024, 5:33 IST
Last Updated 23 ಏಪ್ರಿಲ್ 2024, 5:33 IST
ಅಕ್ಷರ ಗಾತ್ರ

ಚಾಮರಾಜನಗರ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಮೈತ್ರಿಕೂಟವನ್ನು ಸೋಲಿಸಿ, ರೈತ ಸಮುದಾಯವನ್ನು ಉಳಿಸಿ ಎಂಬ ಅಭಿಯಾನವನ್ನು ಕರ್ನಾಟಕ ರಾಜ್ಯ ರೈತ ಸಂಘ ಹಮ್ಮಿಕೊಂಡಿದ್ದು, ತಾಲ್ಲೂಕಿನ ಹೊಂಡರಬಾಳುವಿನಲ್ಲಿರುವ ಅಮೃತಭೂಮಿಯಲ್ಲಿರುವ ರೈತ ನಾಯಕ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ ಸ್ಮಾರಕ ಸ್ಥಳದಲ್ಲಿ ಅಭಿಯಾನಕ್ಕೆ ಬುಧವಾರ ಚಾಲನೆ ನೀಡಲಾಯಿತು. 

ಪಂಜಾಬ್‌ನ ಕ್ರಾಂತಿಕಾರಿ ಕಿಸಾನ್‌ ಯೂನಿಯನ್ನಿನ ಅವತಾರ್‌ ಸಿಂಗ್‌ ಮೆಹ್ಮಾ ಅವರು ಅಭಿಯಾನಕ್ಕೆ ಚಾಲನೆ ನೀಡಿದರು. 

ನಂತರ ಮಾತನಾಡಿದ ಅವತಾರ್ ಸಿಂಗ್‌ ಮೆಹ್ಮಾ ಅವರು, ‘ದೇಶದ ರೈತರ ಶಕ್ತಿ ಏನು ಎಂಬುದು ಮೋದಿಯವರಿಗೆ ನಾವು ಈಗಾಗಲೇ ತೋರಿಸಿದ್ದೇವೆ. ಮೋದಿ ಇದ್ದರೆ ಎಲ್ಲವೂ ಸಾಧ್ಯ ಎಂದು ಬಿಜೆಪಿ ಹೇಳುತ್ತಾ ಬಂದಿತ್ತು. ಆದರೆ, ರೈತರು ಹಟಬಿಡದೆ ಹೋರಾಟ ಮಾಡಿದ್ದರಿಂದ ಕೇಂದ್ರ ಸರ್ಕಾರ ಮೂರು ರೈತ ವಿರೋಧಿ ಕಾಯ್ದೆಗಳನ್ನು ವಾಪಸ್‌ ತೆಗೆದುಕೊಳ್ಳಬೇಕಾಯಿತು. ಪ್ರಧಾನಿ ಮೋದಿಯವರ ಅಹಂಕಾರವನ್ನು ನಾವು ಮುರಿದಿದ್ದೇವೆ’ ಎಂದು ಹೇಳಿದರು. 

‘ಪಂಜಾಬ್‌ನಲ್ಲಿ ಬಿಜೆಪಿಯನ್ನು ನಾವು ಸಂಪೂರ್ಣವಾಗಿ ಬಹಿಷ್ಕರಿಸಿದ್ದೇವೆ. ಶಿರೋಮಣಿ ಅಕಾಲಿದಳದೊಂದಿಗೆ ಮೈತ್ರಿ ಮಾಡಲು ಹೋರಾಟಗಲೂ ನಾವು ಹೋರಾಟ ಮಾಡಿ, ಅಕಾಲಿದಳದವನ್ನು ಬಹಿಷ್ಕರಿಸುವ ಎಚ್ಚರಿಕೆ ನೀಡಿದ್ದೆವು. ಹಾಗಾಗಿ, ಆ ಪಕ್ಷ ಏಕಾಂಗಿಯಾಗಿ ಸ್ಪರ್ಧಿಸಿಸುತ್ತಿದೆ. ರೈತ ಸಂಘಗಗಳು ವಿವಿಧ ಸಂಘಟನೆಗಳೊಂದಿಗೆ ಒಟ್ಟಾಗಿ ಹೋರಾಟ ಮಾಡುತ್ತಿದ್ದು, ಅದರ ಪರಿಣಾಮ ಜಮ್ಮ ಕಾಶ್ಮೀರ, ಹರಿಯಾಣ, ಉತ್ತರ ಪ್ರದೇಶದಲ್ಲಿ ಆಗಲಿದೆ. ಉತ್ತರ ಭಾರತದಲ್ಲಿ ಬಿಜೆಪಿಗೆ ಈ ಬಾರಿ ಹೆಚ್ಚು ಸ್ಥಾನಗಳು ಸಿಗುವುದಿಲ್ಲ. ರೈತ ಸಂಘಗಳು ಒಟ್ಟಾಗಿ ಹೋರಾಟ ಮಾಡಿದರೆ ರೈತ, ಸಂವಿಧಾನ ವಿರೋಧಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಬಹುದು’ ಎಂದರು. 

ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ‘ನಮ್ಮ ಹೋರಾಟ ಯಾವುದೇ ಪಕ್ಷದ ವಿರುದ್ಧ ಅಲ್ಲ. ಸಂಘವನ್ನು ಕಾಂಗ್ರೆಸ್‌ಗೆ ನಾವು ಅಡಮಾನ ಇಟ್ಟಿಲ್ಲ. ಮೋದಿ ಸರ್ಕಾರ ರೈತ ವಿರೋಧಿಯಾಗಿ ನಡೆದುಕೊಂಡಿದೆ. ಎಂಎಸ್‌ಪಿ ಜಾರಿ, ಸಾಲ ಮನ್ನಾ ಸೇರಿದಂತೆ ಚುನಾವಣೆಗೂ ಮುನ್ನ ನೀಡಿದ ಭರವಸೆಯನ್ನು ಈಡೇರಿಸಿಲ್ಲ. ರೈತ ವಿರೋಧಿ, ಸಂವಿಧಾನ ವಿರೋಧಿಯಾಗಿ ನಡೆದುಕೊಂಡಿದೆ. ಹಾಗಾಗಿ, ಎನ್‌ಡಿಎ ಮತ್ತೆ ಅಧಿಕಾರಕ್ಕೆ ಬಾರದಂತೆ ನೋಡಿಕೊಳ್ಳಬೇಕು. ಆ ಶಕ್ತಿ ರೈತರಿಗಿದೆ. ಕಾಂಗ್ರೆಸ್‌ ಅಥವಾ ಬೇರೆ ಯಾವುದೇ ಪಕ್ಷಗಳು ಅಧಿಕಾರಕ್ಕೆ ಬಂದು, ರೈತರ ವಿರುದ್ಧವಾಗಿ ನಡೆದುಕೊಂಡರೆ ಅವರ ವಿರುದ್ಧವೂ ನಾವೂ ಹೋರಾಟ ಮಾಡುತ್ತೇವೆ’ ಎಂದರು. 

‘ಅಭಿಯಾನದಲ್ಲಿ ರೈತ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ರೈತರ ಮನೆ ಮನೆಗೆ ತೆರಳಿ, ಮೋದಿ ಅವರು ಅಧಿಕಾರಕ್ಕೂ ಬರುವುದಕ್ಕೆ ಮೊದಲು ಹೇಳಿದ್ದೇನು? 10 ವರ್ಷಗಳಲ್ಲಿ ಮಾಡಿದ್ದೇನು? ಮೋದಿ ಸರ್ಕಾರದಲ್ಲಿ ರೈತರಿಗೆ ಆದ ತೊಂದರೆಗಳ ಬಗ್ಗೆ ವಿವರಿಸಬೇಕು. ದೆಹಲಿಯಲ್ಲಿ ವರ್ಷದ ಕಾಲ ನಡೆದ ಹೋರಾಟ, ಅದನ್ನು ಹತ್ತಿಕ್ಕಲು ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ತಿಳಿಸಬೇಕು’ ಎಂದು ತಿಳಿಸಿದರು. 

ಸಂಘದ ಗೌರವಾಧ್ಯಕ್ಷ ಚಾಮರಸ ಮಾಲೀ ಪಾಟೀಲ, ರಾಜ್ಯ ಕಾರ್ಯಾಧ್ಯಕ್ಷ ಜೆ.ಎಂ.ವೀರಸಂಗಯ್ಯ, ಪ್ರಧಾನ ಕಾರ್ಯದರ್ಶಿ ರವಿಕಿರಣ್‌ ಪುಣಚ, ಸಾಮಾಜಿಕ ಕಾರ್ಯಕರ್ತ, ಜನಶಕ್ತಿ ಸಂಘಟನೆಯ ನೂರ್‌ ಶ್ರೀಧರ್‌ ಇತರರು ಪಾಲ್ಗೊಂಡಿದ್ದರು.

ಚಾಮರಾಜನಗರದ ಅಮೃತಭೂಮಿಯಲ್ಲಿರುವ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ ಸಮಾಧಿ ಸ್ಥಳದಲ್ಲಿ ರೈತ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಅಭಿಯಾನ ಪ್ರತಿಜ್ಞಾ ವಿಧಿ ಸ್ವೀಕರಿಸಿದರು
ಚಾಮರಾಜನಗರದ ಅಮೃತಭೂಮಿಯಲ್ಲಿರುವ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ ಸಮಾಧಿ ಸ್ಥಳದಲ್ಲಿ ರೈತ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಅಭಿಯಾನ ಪ್ರತಿಜ್ಞಾ ವಿಧಿ ಸ್ವೀಕರಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT