ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜ್ವಲ್‌, ರೇವಣ್ಣ ಬಂಧನಕ್ಕೆ ಎಸ್‌ಡಿಪಿಐ ಆಗ್ರಹ

Published 3 ಮೇ 2024, 16:16 IST
Last Updated 3 ಮೇ 2024, 16:16 IST
ಅಕ್ಷರ ಗಾತ್ರ

ಚಾಮರಾಜನಗರ: ಹಾಸನ ಜಿಲ್ಲೆಯಲ್ಲಿ ನಡೆದಿರುವ ಲೈಂಗಿಕ ಹಗರಣದ ಆರೋಪಿ ಪ್ರಜ್ವಲ್‌ ರೇವಣ್ಣ, ಅವರ ತಂದೆ ಎಚ್.ಡಿ.ರೇವಣ್ಣ ಅವರನ್ನು ಬಂಧಿಸಿ, ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಎಸ್‌ಡಿಪಿಐ ಪದಾಧಿಕಾರಿಗಳು ನಗರದಲ್ಲಿ ಶುಕ್ರವಾರ ರಾತ್ರಿ ಪ್ರತಿಭಟನೆ ನಡೆಸಿದರು. 

ಎನ್‌ಡಿಎ ಅಭ್ಯರ್ಥಿ ವಿರುದ್ಧ ಇಷ್ಟು ದೊಡ್ಡ ಆರೋಪ ಕೇಳಿ ಬಂದಿದ್ದರೂ, ಪ್ರಧಾನಿ ಮೋದಿ ಅವರು ಯಾಕೆ ಮೌನ ವಹಿಸಿದ್ದಾರೆ ಎಂದು ಪ್ರತಿಭಟನಕಾರರು ಪ್ರಶ್ನಿಸಿದರು. 

ನಗರದ ಭುವನೇಶ್ವರಿ ವೃತ್ತದಲ್ಲಿ ಸೇರಿದ ಪ್ರತಿಭಟನಕಾರರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. 

ಎಸ್‌ಡಿಪಿಐ ಜಿಲ್ಲಾ ಅಧ್ಯಕ್ಷ ಅಬ್ರಾರ್ ಅಹಮದ್‌ ಮಾತನಾಡಿ, ‘ಇದು ದೇಶದ ಅತಿ ದೊಡ್ಡ ಲೈಂಗಿಕ ಹಗರಣ ಎನ್ನುವುದರಲ್ಲಿ ಅನುಮಾನವಿಲ್ಲ. ಈ ನೀಚ ಕೃತ್ಯದಲ್ಲಿ ಜೆ.ಡಿ.ಎಸ್ ಹಿರಿಯ ನಾಯಕ ರೇವಣ್ಣ ಕೂಡ ಭಾಗಿಯಾಗಿರುವ ಆರೋಪ ಕೇಳಿ ಬಂದಿದೆ. ಕೋಮು ದ್ವೇಷವನ್ನು ಹರಡುವ ಏಕೈಕ ಉದ್ದೇಶದಿಂದ ಹುಬ್ಬಳ್ಳಿಯ ನೇಹಾ ಪ್ರೇಮ ವೈಫಲ್ಯ ಕೊಲೆ ಪ್ರಕರಣವನ್ನು ಹಿಂದೂ ಮುಸ್ಲಿಂ ಮಾಡಿ ರಾದ್ಧಾಂತ ಮಾಡಿದ ಮೋದಿ ತಂಡ ಪ್ರಜ್ವಲ್ ಕುರಿತು ಒಂದೇ ಒಂದು ಹೋರಾಟ ಮಾಡುತ್ತಿಲ್ಲ ಏಕೆ? ಈ ಪ್ರಕರಣದಲ್ಲಿ ನೊಂದಿರುವ ಸಾವಿರಾರು ಮಹಿಳೆಯರು ಹಿಂದೂಗಳಲ್ಲವೇ’ ಎಂದು ಪ್ರಶ್ನಿಸಿದರು. 

‘ಇದೊಂದು ಅಮಾನವೀಯ, ವಿಕೃತಕಾಮಿಯ ಮನಸ್ಥಿತಿಯನ್ನು ಪ್ರದರ್ಶಿಸುವ ಕೃತ್ಯವಾಗಿದ್ದು, ಇಂಥ ನೀಚ ಮನಃಸ್ಥಿತಿಯ ವ್ಯಕ್ತಿ ರಾಜಕಾರಣದಲ್ಲಿ ಮಾತ್ರವಲ್ಲ, ಸಮಾಜದಲ್ಲಿರಲೂ ನಾಲಾಯಕ್‌. ಇಂತಹ ಕ್ರಿಮಿ ದೇಶ ತೊರೆಯಲು ಸಹಕರಿಸಿದವರು ಯಾರು ಎಂಬ ಬಗ್ಗೆಯೂ ತನಿಖೆಯಾಗಬೇಕು. ಪ್ರಜ್ವಲ್ ಹಾಗೂ ರೇವಣ್ಣ ಪ್ರಭಾವಿ ವ್ಯಕ್ತಿಗಳಾಗಿರುವುದರಿಂದ ತಕ್ಷಣ ಅವರನ್ನು ಬಂಧಿಸಿ ಜೈಲಿಗೆ ಹಾಕಬೇಕು. ತದನಂತರ ತನಿಖೆ ಪ್ರಾರಂಭಿಸ ಬೇಕು’ ಎಂದು ಅಬ್ರಾರ್ ಆಗ್ರಹಿಸಿದರು.

ಎಸ್‌ಡಿಪಿಐ ಜಿಲ್ಲಾ ಉಪಾಧ್ಯಕ್ಷ ಸಿ.ಎಸ್‌.ಸೈಯದ್‌ ಆರೀಫ್‌, ಪ್ರಧಾನ ಕಾರ್ಯದರ್ಶಿ ಎಂ.ಮಹೇಶ್‌, ಕಾರ್ಯದರ್ಶಿ ಜಬಿನೂರ್‌, ಖಜಾಂಚಿ ಸಿ.ಕೆ.ನಯಾಜ್‌ ಉಪ್ಪಾ, ನಗರಸಭಾ ಸದಸ್ಯರಾದ ಕಲೀಲ್‌ ಉಲ್ಲಾ, ಮೊಹಮ್ಮದ್‌ ಅಮೀಕ್‌, ಮುಖಂಡರಾದ ಅಜೀಮ್‌ ಷರೀಫ್‌, ಇಸ್ರಾರ್ ಪಾಷ, ಸುಶೀಲಾ, ಸಂಘಸೇನಾ, ಬಂಗಾರಸ್ವಾಮಿ ಇತರರು ಪಾಲ್ಗೊಂಡಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT