ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೈಹಿಕ ಊನ ಮರೆತು ಕುಣಿದು ಕುಪ್ಪಳಿಸಿದ ಚಿಣ್ಣರು

ವಿಶೇಷ ಜಾತ್ರೆ: ಐದು ತಾಲ್ಲೂಕುಗಳ 600ಕ್ಕೂ ಹೆಚ್ಚು ಅಂಗವಿಕಲರು ಭಾಗಿ, ಆಟ, ಊಟದೊಂದಿಗೆ ಮನೋರಂಜನೆ
Last Updated 4 ಮಾರ್ಚ್ 2023, 16:24 IST
ಅಕ್ಷರ ಗಾತ್ರ

ಚಾಮರಾಜನಗರ: ದೈಹಿಕ, ಮಾನಸಿಕ ಊನದ ಕಾರಣಕ್ಕೆ ಮುಖ್ಯವಾಹಿನಿಯಿಂದ ದೂರ ಉಳಿದಿರುವ ಮಕ್ಕಳು ತಮ್ಮ ಪೋಷಕರೊಂದಿಗೆ ಅಲ್ಲಿಗೆ ಬಂದಿದ್ದರು. ಯಾವಾಗಲೂ ಕಳೆಗುಂದಿರುತ್ತಿದ್ದ ಅವರ ಮುಖದಲ್ಲಿ ಶನಿವಾರ ಗೆಲುವಿನ ನಗೆ ಇತ್ತು. ಹೊಸ ಜಗತ್ತನ್ನು ಕಂಡ ಅನುಭವ ಅವರಿಗೆ. ಪೋಷಕರು, ಸ್ನೇಹಿತರೊಂದಿಗೆ ಆಟವಾಡಿ ಕುಣಿದು ಕುಪ್ಪಳಿಸಿದರು, ಸಿಹಿ ಖಾರ ತಿಂದು ಸಂಭ್ರಮಿಸಿದರು.

ನಗರದ ರಾಮಸಮುದ್ರದ ಸಂತ ಫ್ರಾನ್ಸಿಸ್‌ ಶಾಲಾ ಆವರಣದಲ್ಲಿ ಶನಿವಾರ ಅಂಗವಿಕಲ ಮಕ್ಕಳಿಗಾಗಿ ನಡೆದ ವಿಶೇಷ ಜಾತ್ರೆಯಲ್ಲಿ ಕಂಡು ಬಂದ ದೃಶ್ಯಗಳಿವು.

3 ವರ್ಷದಿಂದ 16 ವರ್ಷ ಒಳಗಿನ ಅಂಗವಿಕಲ ಮಕ್ಕಳಿಗಾಗಿ ಮಾರ್ಗದರ್ಶಿ ಅಂಗವಿಕಲರ ಸೇವಾ ಸಂಸ್ಥೆಯು ನಾರ್ದರ್ನ್‌ ಟ್ರಸ್ಟ್‌, ಕೇರರ್ಸ್‌ ವರ್ಲ್ಡ್‌ ವೈಡ್‌, ರೋಟರಿ ಸಂಸ್ಥೆ, ಟೋಟರಿ ಸಿಲ್ಕ್‌ ಸಿಟಿ, ಇನ್ನರ್‌ವೀಲ್‌ ಕ್ಲಬ್, ವಾಸವಿ ಟ್ರಸ್ಟ್‌, ಯೂತ್‌ ಫಾರ್‌ ಸೇವಾ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಶಿಕ್ಷಣ ಇಲಾಖೆ, ಅಂಗವಿಕಲರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ಹಾಗೂ ನಗರದ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಅಂಗವಿಕಲ ಮಕ್ಕಳ ವಿಶೇಷ ಜಾತ್ರೆ ಹಮ್ಮಿಕೊಂಡಿತ್ತು.

2019ರಲ್ಲಿ ನಗರದ ಹೌಸಿಂಗ್‌ ಬೋರ್ಡ್‌ನಲ್ಲಿರುವ ಸರ್ಕಾರಿ ಶಾಲಾ ಆವರಣದಲ್ಲಿ ವಿಶೇಷ ಜಾತ್ರೆಯನ್ನು ಆಯೋಜಿಸಲಾಗಿತ್ತು. ಅದು ಯಶಸ್ವಿಯಾಗಿತ್ತು. ನಂತರದ ವರ್ಷದಲ್ಲಿ ಕೋವಿಡ್‌ ಹಾವಳಿ ಆರಂಭವಾಗಿದ್ದರಿಂದ ಜಾತ್ರೆ ನಡೆದಿರಲಿಲ್ಲ. ಮಾರ್ಗದರ್ಶಿ ಸಂಸ್ಥೆಯು ನಾಲ್ಕು ವರ್ಷಗಳ ಬಳಿಕ ಮತ್ತೆ ಈ ಜಾತ್ರೆಯನ್ನು ಆಯೋಜಿಸಿದ್ದು, ಜಿಲ್ಲೆಯ ಐದು ತಾಲ್ಲೂಕುಗಳ 600ಕ್ಕೂ ಹೆಚ್ಚು ಅಂಗವಿಕಲ ಮಕ್ಕಳು ಹಾಗೂ ಪೋಷಕರು ಪಾಲ್ಗೊಂಡಿದ್ದರು.

ಆಟದೊಂದಿಗೆ ಊಟ: ದೂರದ ಊರುಗಳಿಂದ ಮಕ್ಕಳನ್ನು ಕರೆತರುವುದಕ್ಕಾಗಿ ಬಸ್‌ಗಳ ವ್ಯವಸ್ಥೆ ಮಾಡಲಾಗಿತ್ತು. ತಮ್ಮ ಪೋಷಕರೊಂದಿಗೆ ಬಂದಿದ್ದ ಮಕ್ಕಳು ಜಾತ್ರೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡು, ತಮ್ಮಲ್ಲಿರುವ ದೈಹಿಕ ಊನಗಳನ್ನು ಮರೆತರು.

ಸಾಮಾನ್ಯ ಜಾತ್ರೆಗಳಲ್ಲಿರುವ ಸಂತೆಯ ಮಾದರಿಯಲ್ಲೇ ಇಲ್ಲೂ ಸಂತೆ ಇತ್ತು. ಮಕ್ಕಳು ಆಟವಾಡುವುದಕ್ಕಾಗಿ ಜಾರು ಬಂಡಿ, ತಿರುಗುವ ತೊಟ್ಟಿಲು ಸೇರಿದಂತೆ ಇತರೆ ವ್ಯವಸ್ಥೆಗಳನ್ನು ಮಾಡಲಾಗಿತ್ತು. ಆಹಾರ ಮಳಿಗೆಗಳನ್ನೂ ತೆರೆಯಲಾಗಿತ್ತು. ಕಲಾ ತಂಡಗಳ ಮೆರವಣಿಗೆ, ಎತ್ತಿನ ಬಂಡಿಯಲ್ಲಿ ಸುತ್ತಾಟ ಸೇರಿದಂತೆ ಮಕ್ಕಳಿಗೆ ಮುದ ಕೊಡುವ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿತ್ತು.

ಹೆಚ್ಚು ಅಂಗವೈಕಲ್ಯ ಹೊಂದಿ, ಆಟವಾಡಲು ಸಾಧ್ಯವಾಗದೇ ಇದ್ದ ಮಕ್ಕಳು, ತಮ್ಮ ಸ್ನೇಹಿತರ ಆಟವನ್ನು ಕಂಡು ಸಂತಸಪಟ್ಟರು.

ಮಕ್ಕಳಿಗಾಗಿ ಎಂಟಕ್ಕೂ ಹೆಚ್ಚು ಮಳಿಗೆಗಳನ್ನು ತೆರೆಯಲಾಗಿತ್ತು. ವಿವಿಧ ಸಂಸ್ಥೆಗಳು ಹಾಗೂ ವ್ಯಕ್ತಿಗಳು ಮಕ್ಕಳಿಗೆ ತಿಂಡಿ ತಿನಿಸುಗಳನ್ನು ಕೊಡಲು ಮುಂದೆ ಬಂದಿದ್ದರು. ಚುರುಮುರಿ, ಐಸ್‌ಕ್ರೀಂ, ಮಸಾಲೆ ಪುರಿ, ಹಣ್ಣುಗಳು, ಬಿಸ್ಕತ್ತುಗಳನ್ನು ಮಕ್ಕಳಿಗೆ ಉಚಿತವಾಗಿ ವಿತರಿಸಿದರು. ಉಚಿತವಾಗಿ ಆಟಿಕೆ ಸೆಟ್‌ಗಳನ್ನೂ ವಿತರಿಸಲಾಯಿತು.

ವೀರಗಾಸೆ, ಹುಲಿ ವೇಷ: ಮೈದಾನದ ಸುತ್ತ ವೀರಗಾಸೆ, ಹುಲಿ ವೇಷಧಾರಿಗಳು, ಡೊಳ್ಳು ಕುಣಿತದ ಕಲಾವಿದರು ನೃತ್ಯ ಮಾಡುತ್ತಾ ಹೆಜ್ಜೆ ಹಾಕುತ್ತಿದ್ದರು. ಅಲಂಕೃತ ಎತ್ತಿನ ಬಂಡಿಯಲ್ಲಿ ಕುಳಿತು ಮಕ್ಕಳು ಮೋಜು ಮಾಡಿದರು.

ಮಕ್ಕಳೊಂದಿಗೆ ತಾಯಂದಿರೇ ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು. ಮಕ್ಕಳಿಗೆ ಆಹಾರ ತಿನಿಸುತ್ತಾ, ಅವರನ್ನು ಆಟವಾಡಿಸುತ್ತಾ ಇಡೀ ದಿನ ಅವರೊಂದಿಗೆ ಕಳೆದರು.

‘ಕರುಣೆ ಬೇಡ, ಅವಕಾಶ ಬೇಕು’

ಇದಕ್ಕೂ ಮೊದಲು ನಡೆದ ಜಾತ್ರೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಿ.ಎಸ್‌.ರಮೇಶ್‌, ‘ನಾವು ದೈಹಿಕವಾಗಿ ಸಮರ್ಥರಿದ್ದೇವೆ ಎಂದು ಭಾವಿಸುತ್ತೇವೆ. ದೌರ್ಬಲ್ಯ ಮೇಲ್ನೋಟಕ್ಕೆ ಕಂಡು ಬರುವುದಿಲ್ಲ. ನಿಜವಾಗಿ ದೈಹಿಕ ಸಮಸ್ಯೆಗಳು ಇರುವವರಿಗೆ ನಮ್ಮ ಕರುಣೆ ಬೇಕಾಗಿಲ್ಲ. ಅವಕಾಶಗಳು ಬೇಕು. ನಾವು ಇತರರಿಗೆ ನೀಡುವ ಗೌರವ ನೀಡುವಂತೆಯೇ, ಅಂಗವಿಕಲರಿಗೂ ಗೌರವ ಕೊಡಬೇಕು. ವಿಶೇಷ ಜಾತ್ರೆ ಅದ್ಭುತ ಕಲ್ಪನೆ. ಇಂತಹ ಕಾರ್ಯಕ್ರಮಗಳು ಹೆಚ್ಚೆಚ್ಚು ನಡೆಯಬೇಕು’ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು ಮಾತನಾಡಿ, ‘ಇದು ಅತ್ಯಂತ ಉತ್ತಮ ಪ್ರಯತ್ನ. ಆದರೆ, ಒಂದು ದಿನಕ್ಕೆ ಸೀಮಿತವಾಗಬಾರದು. ನಿರಂತರವಾಗಿ ನಡೆಯುತ್ತಿರಬೇಕು. ನಮ್ಮ ಇಲಾಖೆ ಕೂಡ ಸಹಕಾರ ನೀಡಲಿದೆ’ ಎಂದರು.

ಶಾಸಕ ಸಿ.ಪುಟ್ಟರಂಗಶೆಟ್ಟಿ ಮಾತನಾಡಿ, ‘ಅಂಗವಿಕಲರಲ್ಲೂ ಪ್ರತಿಭಾವಂತರಾರಿದ್ದು, ದೊಡ್ಡ ದೊಡ್ಡ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಎಲ್ಲರೂ ಶಿಕ್ಷಣಕ್ಕೆ ಒತ್ತು ನೀಡಬೇಕು. ಅಂಗವಿಕಲರಿಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸೌಲಭ್ಯಗಳನ್ನು ನೀಡುತ್ತಿವೆ. ಅಂಗವಿಕಲರನ್ನು ನೋಡಿಕೊಳ್ಳುವ ಪೋಷಕರಿಗೆ ಧನ ಸಹಾಯ ಮಾಡುವ ಅಗತ್ಯವಿದೆ’ ಎಂದರು.

ಡಿಎಚ್‌ಒ ಕೆ.ಎಂ.ವಿಶ್ವೇಶ್ವರಯ್ಯ, ಜಿಲ್ಲಾಸ್ಪತ್ರೆ ಸ್ಥಾನಿಕ ವೈದ್ಯಾಧಿಕಾರಿ ಡಾ.ಮಹೇಶ್‌, ಗ್ರಾಮೀಣ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಉಪನಿರ್ದೇಶಕ ಕೆ.ಎ.ರಾಜೇಂದ್ರ ಪ್ರಸಾದ್‌, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಗೋವಿಂದರಾಜು, ಇನ್ನರ್‌ವೀಲ್‌ ಕ್ಲಬ್‌ ಅಧ್ಯಕ್ಷೆ ನಂದಿನಿ ಸುಮನ್‌, ರೋಟರಿ ಸಿಲ್ಕ್‌ ಸಿಟಿ ಅಧ್ಯಕ್ಷ ಮುರುಗೇಂದ್ರಸ್ವಾಮಿ, ಮೋಟಿವೇಶನ್‌ ಇಂಡಿಯಾದ ಪ್ರವೀಣ್‌ಕುಮಾರ್‌, ನಾರ್ದರ್ನ್‌ ಟ್ರಸ್ಟ್‌ನ ಇಬ್ರಾಹಿಂ, ಮಾರ್ಗದರ್ಶಿ ಸಂಸ್ಥೆಯ ಅಧ್ಯಕ್ಷೆ ಶಾಂತಲಕ್ಷ್ಮಿ ಇದ್ದರು.

–––

ಅಂಗವಿಕಲ ಮಕ್ಕಳೂ ಹೊರಗಡೆ ಬರಬೇಕು. ಅವರಿಗೆ ಜಾತ್ರೆಯ ಅನುಭವವಾಗಬೇಕು ಎಂದು ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. 600ಕ್ಕೂ ಹೆಚ್ಚು ಮಕ್ಕಳು ಬಂದಿದ್ದಾರೆ
ಕೆ.ವಿ.ರಾಜಣ್ಣ, ಮಾರ್ಗದರ್ಶಿ ಸಂಸ್ಥೆಯ ಮಾರ್ಗದರ್ಶಕ

––

ಅಂಗವಿಕಲ ಮಕ್ಕಳು ಮುಖ್ಯವಾಹಿನಿಗೆ ಬರಬೇಕು. ಉತ್ತಮ ಭವಿಷ್ಯವನ್ನು ಹೊಂದಬೇಕು ಎಂಬುದು ನಮ್ಮ ಸಂಸ್ಥೆಯ ಆಶಯ. ಆ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮ ಆಯೋಜಿಸುತ್ತಿದ್ದೇವೆ
ಕೆ.ಎಂ.ಗೀತಾಮೃತ, ಉಪಾಧ್ಯಕ್ಷೆ ಮಾರ್ಗದರ್ಶಿ ಸಂಸ್ಥೆ

–––––

ಮಾರ್ಗದರ್ಶಿ ಹಾಗೂ ಇತರ ಸಂಸ್ಥೆಯವರು ತುಂಬಾ ಚೆನ್ನಾಗಿ ಜಾತ್ರೆಯನ್ನು ಆಯೋಜಿಸಿದ್ದಾರೆ. ಮಕ್ಕಳಿಗೆ ಇಷ್ಟವಾಗುವ ಆಟ, ಊಟದ ವ್ಯವಸ್ಥೆ ಚೆನ್ನಾಗಿ ಮಾಡಿದ್ದಾರೆ.
ಈಶ್ವರಿ, ಪೋಷಕಿ, ಶಿಂಡನಪುರ, ಗುಂಡ್ಲುಪೇಟೆ ತಾಲ್ಲೂಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT