ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭಾ ಚುನಾವಣೆ: ಮತದಾನ ಜಾಗೃತಿಗೆ ಕಾರ್ಯಕ್ರಮ ವೈವಿಧ್ಯ

ಸ್ವೀಪ್‌ ಸಮಿತಿಯ ಚಟುವಟಿಕೆಗಳು ಚುರುಕು, 13 ಮತಗಟ್ಟೆಗಳ ಮೇಲೆ ಹೆಚ್ಚು ಗಮನ
ಸೂರ್ಯನಾರಾಯಣ ವಿ.
Published 26 ಮಾರ್ಚ್ 2024, 6:07 IST
Last Updated 26 ಮಾರ್ಚ್ 2024, 6:07 IST
ಅಕ್ಷರ ಗಾತ್ರ

ಚಾಮರಾಜನಗರ: ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಜನರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜಿಲ್ಲಾ ಸ್ವೀಪ್‌ ಸಮಿತಿ ತನ್ನ ಚಟುವಟಿಕೆಗಳನ್ನು ಚುರುಕುಗೊಳಿಸಿದ್ದು, ಈ ಬಾರಿ ಕ್ಷೇತ್ರದಲ್ಲಿ ಗರಿಷ್ಠ ಪ್ರಮಾಣದ ಮತದಾರರನ್ನು ಮತಗಟ್ಟೆಗೆ ಸೆಳೆಯಲು ಹಲವು ಕಾರ್ಯಕ್ರಮಗಳನ್ನು ರೂಪಿಸಿದೆ. 

ಈಗಾಗಲೇ ತಾಲ್ಲೂಕು, ಹೋಬಳಿ, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜಾಗೃತಿ ಚಟುವಟಿಕೆಗಳು ಆರಂಭವಾಗಿದೆ. ಜಾಥಾ, ಮಾನವ ಸರಪಳಿ, ಪಂಜಿನ ಮೆರವಣಿಗೆಯಂತಹ ಕಾರ್ಯಕ್ರಮಗಳು ನಡೆಯುತ್ತಿವೆ. 

2019ರ ಲೋಕಸಭಾ ಚುನಾವಣೆಯಲ್ಲಿ ಚಾಮರಾಜನಗರ ಮೀಸಲು ಕ್ಷೇತ್ರದಲ್ಲಿ ಶೇ 75.22ರಷ್ಟು ಮತದಾನವಾಗಿತ್ತು. ಜಿಲ್ಲೆಯ 13 ಮತಗಟ್ಟೆಗಳಲ್ಲಿ ಮತದಾನದ ಪ್ರಮಾಣ ರಾಜ್ಯ ಸರಾಸರಿಗಿಂತ (67.40%) ಕಡಿಮೆ ದಾಖಲಾಗಿದ್ದು, ಆ ಮತಗಟ್ಟೆಗಳಲ್ಲಿ ಈ ಬಾರಿ ಹೆಚ್ಚು ಮಂದಿ ಹಕ್ಕು ಚಲಾಯಿಸುವಂತೆ ಮಾಡಲು ವಿವಿಧ ಕಾರ್ಯಕ್ರಮಗಳನ್ನು ರೂಪಿಸಿದೆ. 

ಎಲ್ಲೆಲ್ಲಿ ಕಡಿಮೆ ಮತದಾನ?: ಹನೂರು ತಾಲ್ಲೂಕಿನ ದಂಟಳ್ಳಿ ಸರ್ಕಾರಿ ಶಾಲೆ (ಶೇ 43.06), ದೊಡ್ಡ ಆಲತ್ತೂರಿನ ಸರ್ಕಾರಿ ಶಾಲೆ (ಶೇ 48.26), ಚೆನ್ನೂರಿನ ಸರ್ಕಾರಿ ಶಾಲೆ (ಶೇ 51.60), ಕೊಳ್ಳೇಗಾಲ ತಾಲ್ಲೂಕಿನ ವಸಂತ ಕುಮಾರಿ ಜ್ಯೂನಿಯರ್‌ ಕಾಲೇಜು (ಹೊಸ ಕಟ್ಟಡ) (ಶೇ 43.15), ಎಂಪಿಎಂಸಿ ಹಾಲ್‌ (ಶೇ 49.52), ಸರ್ಕಾರಿ ಎಂಜಿಎಸ್‌ವಿ ಜ್ಯೂನಿಯರ್‌ ಕಾಲೇಜು (ಹಿಂಭಾಗ) (ಶೇ 53.31), ಚಾಮರಾಜನಗರ ತಾಲ್ಲೂಕಿನ ಆಲೂರು (ಪೂರ್ವ ಘಟಕ) (ಶೇ 18.90), ಚಾಮರಾಜನಗರದ ಪಿಡಬ್ಲ್ಯುಡಿ ಕಾಲೊನಿ ಹಿರಿಯ ಪ್ರಾಥಮಿಕ ಶಾಲೆ (ಪೂರ್ವ ಘಟಕ) (ಶೇ 55.71) ಚಾಮರಾಜನಗರದ ನಗರ ಪ್ರದೇಶದ ಕಿರಿಯ ಪ್ರಾಥಮಿಕ ಶಾಲೆ (ಶೇ 57.38), ಗುಂಡ್ಲುಪೇಟೆ ತಾಲ್ಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ( ಉತ್ತರ ಘಟಕ) (ಶೇ ‌57.10), ಗುಂಡ್ಲುಪೇಟೆ ತಾಲ್ಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ( ಪಶ್ಚಿಮ ಘಟಕ) (ಶೇ 60.47), ಗುಂಡ್ಲುಪೇಟೆ ಕೆ.ಎಸ್‌.ನಾಗರತ್ನಮ್ಮ ‍ಪ್ರೌಢಶಾಲೆ ಮತ್ತು ಅಬ್ದುಲ್‌ ನಜೀರ್‌ ಸಾಬ್‌ ಹಿರಿಯ ಪ್ರಾಥಮಿಕ ಶಾಲೆ (ಶೇ 61.24), ಗೋಪಾಲಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ (ಶೇ 61.1) ಮತಗಟ್ಟೆಗಳಲ್ಲಿ ಕಡಿಮೆ ಮತದಾನವಾಗಿತ್ತು. 

‘ಈ ಮತಗಟ್ಟೆಗಳ ವ್ಯಾಪ್ತಿಯಲ್ಲಿ ವಲಸೆ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಪ್ರತಿ ಮನೆ ಮನೆಗೆ ಭೇಟಿ ನೀಡಿ ಜಾಗೃತಿ ಮೂಡಿಸುವುದು, ಕಡ್ಡಾಯವಾಗಿ ಮತದಾನ ಮಾಡುವಂತೆ ಸಂದೇಶ ಸಾರುವ ವಿಡಿಯೊಗಳನ್ನು ಪ್ರದರ್ಶಿಸುವುದು, ವಾಟ್ಸ್‌ಆ್ಯಪ್‌ ಸಂದೇಶ ಕಳುಹಿಸುವುದು, ಭಿತ್ತಿಪತ್ರ ಅಳವಡಿಕೆ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು’ ಎಂದು ಜಿಲ್ಲಾ ಸ್ವೀಪ್‌ ಸಮಿತಿ ನೋಡೆಲ್‌ ಅಧಿಕಾರಿ ಮತ್ತು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ‍‍ಪಿ.ಲಕ್ಷ್ಮಿ ‘ಪ್ರಜಾವಾಣಿ’ಗೆ ತಿಳಿಸಿದರು. 

ವೈವಿಧ್ಯಮಯ ಕಾರ್ಯಕ್ರಮಗಳು: ಮಹಿಳೆಯರು, ಯುವಜನರು, ಲೈಂಗಿಕ ಅಲ್ಪಸಂಖ್ಯಾತರು, ಅಂಗವಿಕಲರು, ಹಿರಿಯನಾಗರಿಕರು, ಗಿರಿಜನರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರು, ಸರ್ಕಾರಿ ನೌಕರರು ಸೇರಿದಂತೆ ವಿವಿಧ ವರ್ಗ, ವಯೋಮಾನದ ಮತದಾರರನ್ನು ಗುರುತಿಸಿ, ಅವರಲ್ಲಿ ಜಾಗೃತಿ ಮೂಡಿಸಲು ಸ್ವೀಪ್‌ ಸಮಿತಿ ವಿವಿಧ ಕಾರ್ಯಕ್ರಮಗಳನ್ನು ರೂಪಿಸಿದೆ. 

‘ಸಖಿ ಸೌರಭ ಕಾರ್ಯಕ್ರಮದ ಅಡಿಯಲ್ಲಿ ಪ್ರತಿ ತಾಲ್ಲೂಕಿನಲ್ಲೂ ನಾಲ್ಕು ಮಹಿಳಾ ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು. ಮಹಿಳಾ ಸಾಧಕರ ಮೂಲಕ ಜಾಗೃತಿ ಮೂಡಿಸಲಿದ್ದೇವೆ.  ಯುವಜನರಲ್ಲಿ ಮತದಾನಕ್ಕೆ ಪ್ರೋತ್ಸಾಹ ನೀಡಲು ಯುವ ಸೌರಭ ಎಂಬ ಕಾರ್ಯಕ್ರಮ ರೂಪಿಸಿದ್ದೇವೆ. ವಿವಿಧ ಇಲಾಖೆಗಳ ಸಹಯೋಗದೊಂದಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗುವುದು’ ಎಂದು ಲಕ್ಷ್ಮಿ ಹೇಳಿದರು. 

‘ಲೈಂಗಿಕ ಅಲ್ಪಸಂಖ್ಯಾತ ಮತದಾರರನ್ನು ಗುರಿಯಾಗಿಸಿಕೊಂಡು ಹೆಜ್ಜೆ ಎಂಬ ಕಾರ್ಯಕ್ರಮ ರೂಪಿಸಲಾಗಿದ್ದು, ಅವರ ಸಮುದಾಯದವರನ್ನೇ ಒಬ್ಬರನ್ನು (ದೀಪಾ) ಐಕಾನ್‌ ಆಗಿ ಮಾಡಲಾಗಿದೆ. ಗಿರಿಜನರಿಗಾಗಿ ‘ಸಂಕಲ್ಪ’ ಅಂಗವಿಕಲರಿಗಾಗಿ ‘ಹೊಂಬೆಳಕು’, ಸರ್ಕಾರಿ ನೌಕರಿಗಾಗಿ ‘ಕರ್ತವ್ಯ’, ಸೈನಿಕರಿಗಾಗಿ ‘ಸ್ಥೈರ್ಯ’ ಎಂಬ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ’ ಎಂದು ಅವರು ವಿವರಿಸಿದರು. 

ಚಾಮರಾಜನಗರದಲ್ಲಿ ಗುರುವಾರ ನಡೆದ ಸ್ವೀಪ್‌ ಜಾಗೃತಿ ಕಾರ್ಯಕ್ರಮದ ನೋಟ
ಚಾಮರಾಜನಗರದಲ್ಲಿ ಗುರುವಾರ ನಡೆದ ಸ್ವೀಪ್‌ ಜಾಗೃತಿ ಕಾರ್ಯಕ್ರಮದ ನೋಟ
ಆನಂದ್‌ ಪ್ರಕಾಶ್‌ ಮೀನಾ
ಆನಂದ್‌ ಪ್ರಕಾಶ್‌ ಮೀನಾ

ಜಾಥಾ, ಶ್ರಮದಾನ ವಿವಿಧ ಕಾರ್ಯಕ್ರಮ ವಿವಿಧ ಸ್ಪರ್ಧೆಗಳ ಆಯೋಜನೆ ಪೋಷಕರಿಗೆ ಮಕ್ಕಳಿಂದ ಪತ್ರ

ಕಡಿಮೆ ಮತದಾನವಾಗಿರುವ 13 ಮತಗಟ್ಟೆಗಳು ಸೇರಿದಂತೆ ಜಿಲ್ಲೆಯಾದ್ಯಂತ ಮತದಾನದ ಬಗ್ಗೆ ಜಾಗೃತಿ ಮೂಡಿಸಲು ಕ್ರಮ ಕೈಗೊಂಡಿದ್ದೇವೆ

-ಆನಂದ್‌ ಪ್ರಕಾಶ್‌ ಮೀನಾ ಜಿಲ್ಲಾ ಸ್ವೀಪ್‌ ಸಮಿತಿ ಅಧ್ಯಕ್ಷ

ಮಕ್ಕಳಿಂದ ಪೋಷಕರಿಗೆ ಪತ್ರ ಜನರಲ್ಲಿ ಮತದಾನದ ಬಗ್ಗೆ ಅರಿವು ಮೂಡಿಸುವುದರ ಜೊತೆಗೆ ಹಣದ ಆಸೆಗೆ ಒಳಗಾಗಿ ಮತವನ್ನು ಮಾರಿಕೊಳ್ಳದಂತೆ ಮತದಾರರಿಗೆ ತಿಳಿಸುವುದಕ್ಕಾಗಿ ಸ್ವೀಪ್‌ ಸಮಿತಿಯು  ಶಾಲಾ ಮಕ್ಕಳಿಂದ ಅವರ ಪೋಷಕರಿಗೆ ಪತ್ರ ಬರೆಸುತ್ತಿದೆ.  ಹಾಸ್ಟೆಲ್‌ ಪ್ರೌಢಶಾಲಾ ವಿದ್ಯಾರ್ಥಿಗಳಿಗಳು ಅಂಚೆ ಕಾರ್ಡ್‌ ಮೂಲಕ ತಮ್ಮ ತಂದೆ ತಾಯಿಯರಿಗೆ ಪತ್ರ ಬರೆಯುವ ಅಭಿಯಾನ ಜಿಲ್ಲೆಯಲ್ಲಿ ನಡೆಯುತ್ತಿದೆ.  ‘ಮಕ್ಕಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಇದು. ಸರ್ಕಾರಿ ನೌಕರರಿಗೆ ಕಡ್ಡಾಯವಾಗಿ ಮತದಾನ ಮಾಡುವಂತೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯಿತಿ ಸಿಇಒ ಅವರು ಪತ್ರ ಬರೆಯಲಿದ್ದಾರೆ. ಎನ್‌ಆರ್‌ಐಗಳಿಗೂ ಪತ್ರ ಬರೆಯಲಿದ್ದಾರೆ’ ಎಂದು ಸ್ವೀಪ್‌ ಸಮಿತಿ ನೋಡೆಲ್‌ ಅಧಿಕಾರಿ ಲಕ್ಷ್ಮಿ ಹೇಳಿದರು. 

ಪ್ರಚಾರಕ್ಕೆ ರಾಯಭಾರಿಗಳು ಜಿಲ್ಲಾ ವ್ಯಾಪ್ತಿಯಲ್ಲಿ ಜನರಲ್ಲಿ ಮತದಾನ ಜಾಗೃತಿ ಮೂಡಿಸುವ ಸಲುವಾಗಿ ಜಿಲ್ಲಾಡಳಿತವು ನಟ ನಿರ್ದೇಶಕ ನಾಗಭೂಷಣ ಮತ್ತು ಬಿಗ್‌ಬಾಸ್‌ ರಿಯಾಲಿಟಿ ಶೋ ವಿಜೇತ ಕಾರ್ತಿಕ್‌ ಮಹೇಶ್‌ ಅವರನ್ನು ಪ್ರಚಾರ ರಾಯಭಾರಿಗಳನ್ನಾಗಿ ಗುರುತಿಸಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT