ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರೀಡಾ ಸಾಧನೆಗೆ ‘ಸಾಯ್‌’ ತರಬೇತಿ ಬಲ

ಗುಂಡ್ಲುಪೇಟೆ: ಪಟ್ಟಣದ ಸೇಂಟ್‌ ಜಾನ್ ಇಂಗ್ಲಿಷ್‌ ಮಾದ್ಯಮ ಶಾಲೆಯ ಮೂವರು ಮಕ್ಕಳು ಆಯ್ಕೆ
Last Updated 26 ಫೆಬ್ರುವರಿ 2020, 15:16 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ಪಟ್ಟಣದ ಸೇಂಟ್‌ ಜಾನ್ ಇಂಗ್ಲಿಷ್‌ ಮಾದ್ಯಮ ಶಾಲೆಯ ಮೂವರು ವಿದ್ಯಾರ್ಥಿಗಳು ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್‌) ನೀಡುವ ಕ್ರೀಡಾ ತರಬೇತಿಗಾಗಿ ಆಯ್ಕೆಯಾಗಿದ್ದಾರೆ.

ಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಾದ ಪಿ.ನಾಗೇಂದ್ರ, ಸೋನಾಲ್ ಶರ್ಮ ಅವರು ಪುಟ್ಬಾಲ್ ಮತ್ತು ವಾಲಿಬಾಲ್ ತರಬೇತಿಗಾಗಿ ಆಯ್ಕೆಯಾಗಿದ್ದಾರೆ. ಕಳೆದ ವರ್ಷ ಮೆರ್ಲಿನ್ ವರ್ಗೀಸ್‌ ಎಂಬ ವಿದ್ಯಾರ್ಥಿನಿ ಅಥ್ಲೆಟಿಕ್ಸ್‌ಗೆ ಆಯ್ಕೆಯಾಗಿ ಬೆಂಗಳೂರಿನ ಪ್ರಾಧಿಕಾರದ ತರಬೇತಿ ಕೇಂದ್ರದಲ್ಲಿ ಹೆಚ್ಚಿನ ತರಬೇತಿ ಪಡೆಯುತ್ತಿದ್ದಾರೆ. ಈಗ ಆಯ್ಕೆಯಾಗಿರುವ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯ ನಂತರ ತರಬೇತಿಗೆ ಹಾಜರಾಗಲಿದ್ದಾರೆ.

‘ಸಾಯ್ ತರಬೇತಿ ಕೇಂದ್ರದಲ್ಲಿ ಕ್ರೀಡಾ ಪಟುಗಳ ಆಯ್ಕೆಗೆ ಶೋಧನೆ ನಡೆಸುವಾಗ ವಿದ್ಯಾರ್ಥಿಗಳನ್ನು ಅಲ್ಲಿಗೆ ಕರೆದುಕೊಂಡು ಹೋಗುತ್ತೇನೆ. ಶಾಲೆಯಲ್ಲಿರುವ ಮಕ್ಕಳಿಗೆ ಯಾವ ಕ್ರೀಡೆಯಲ್ಲಿ ಆಸಕ್ತಿ ಇದೆ? ಅವರ ದೈಹಿಕ ಸದೃಢತೆ, ಕೌಶಲಗಳನ್ನು ಗುರುತಿಸಿ, ಆ ಮಕ್ಕಳಿಗೆ ವಿಶೇಷ ತರಬೇತಿ ನೀಡುತ್ತೇವೆ. ಅವರನ್ನು ಆಯ್ಕೆಗಾಗಿ ಕಳುಹಿಸುತ್ತೇವೆ’ ಎಂದು ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಪ್ರಕಾಶ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಪಿ.ನಾಗೇಂದ್ರ ಪುಟ್ಬಾಲ್‌ನಲ್ಲಿ ಮತ್ತು ಸೋನಾಲ್ ಶರ್ಮ ವಾಲಿಬಾಲ್‌ನಲ್ಲಿ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಇಬ್ಬರು ಉತ್ತಮ ಕ್ರೀಡಾಪಟುಗಳು. ಸಾಯ್ ಕ್ರೀಡಾ ತರಬೇತಿ ಕೇಂದ್ರದಲ್ಲಿ ಉತ್ತಮ ತರಬೇತಿ ಪಡೆದು ಜಿಲ್ಲೆಗೆ ಓದಿದ ಶಾಲೆಗೆ, ಪೋಷಕರಿಗೆ ಕೀರ್ತಿ ತರಲಿದ್ದಾರೆ’ ಎಂಬ ಆಶಯವನ್ನು ಶಾಲಾ ಶಿಕ್ಷಕರು ವ್ಯಕ್ತಪಡಿಸುತ್ತಾರೆ.

ವಿವಿಧ ಶಾಲೆಗಳ ಮಕ್ಕಳು ಕೂಡ ತರಬೇತಿ ಕೇಂದ್ರದ ಆಯ್ಕೆ ಬರುತ್ತಾರೆ. ಬಂದವರೆಲ್ಲರೂ ಆಯ್ಕೆಯಾಗುವುದಿಲ್ಲ. ಮಕ್ಕಳಲ್ಲಿರುವ ಕ್ರೀಡಾ ಕೌಶಲ,ವೇಗ, ಎತ್ತರ, ತೂಕ, ಚಾಕಚಾಕ್ಯತೆ ಇವೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿ ಹೆಚ್ಚಿನ ತರಬೇತಿಗಾಗಿ ಆಯ್ಕೆ ಮಾಡಲಾಗುತ್ತದೆ.

‘ಶಾಲಾ ತಂಡದ ಭಾಗವಾಗಿ ವಿವಿಧ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುತ್ತಾ ಜಿಲ್ಲಾ ಮಟ್ಟದವರೆಗೆ ಭಾಗವಹಿಸಿದ್ದೆವು. ನಮ್ಮ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಹಾಗೂ ಇತರ ಶಿಕ್ಷಕರ ಪ್ರೇರಣೆಯಿಂದ ಸಾಯ್ ಆಯ್ಕೆಗೆ ಹೋಗಿದ್ದೆವು. ಅಲ್ಲಿ ಕ್ರೀಡಾ ತರಬೇತಿಗೆ ಆಯ್ಕೆಯಾಗಿರುವುದು ಸಂತಸ ತಂದಿದೆ. ಶಾಲೆಯಲ್ಲಿ ಪಡೆದ ತರಬೇತಿ ಮತ್ತು ಸಾಧಿಸಬೇಕು ಎಂಬ ಛಲದಿಂದ ಇದು ಸಾಧ್ಯವಾಗಿದೆ’ ಎಂದು ವಿದ್ಯಾರ್ಥಿಗಳಾದ ಪಿ.ನಾಗೇಂದ್ರ ಮತ್ತು ಸೋನಾಲ್ ಶರ್ಮ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಮೂರು ದಶಕಗಳ ಅನುಭವ: ಪ್ರಕಾಶ್‌ ಅವರಿಗೆ ದೈಹಿಕ ಶಿಕ್ಷಣದಲ್ಲಿ ಮೂರು ವರ್ಷಗಳ ಅನುಭವವಿದೆ.ಅನೇಕ ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿವಂತೆ ಮಾಡಿದ್ದಾರೆ. ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಅತ್ಯುತ್ತಮ ದೈಹಿಕ ಶಿಕ್ಷಣ ಶಿಕ್ಷಕ ಎಂಬ ಪುರಸ್ಕಾರಕ್ಕೂ ಅವರು ಭಾಜನರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT