ಹನೂರು (ಚಾಮರಾಜನಗರ): ಮಹದೇಶ್ವರ ಬೆಟ್ಟ ವ್ಯಾಪ್ತಿಯ ನಾಗಮಲೆಯಲ್ಲಿ ಮಹಿಳೆಯೊಬ್ಬಳ ಮುಖದ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ ವ್ಯಕ್ತಿಯೊಬ್ಬ ನಂತರ ತಾನೂ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮಹಿಳೆ ಮೇಲೆ ಕಲ್ಲು ಎತ್ತಿ ಹಾಕಿದ ನಂತರ ಆಕೆಯನ್ನು ತೊಡೆ ಮೇಲೆ ಮಲಗಿಸಿ, ವಿಡಿಯೊ ಚಿತ್ರೀಕರಿಸಿ ಫೇಸ್‌ಬುಕ್ ಸ್ಟೋರಿಯಾಗಿ ಅಪ್‌ಲೋಡ್ ಮಾಡಿದ್ದಾನೆ. ನಾನೇ ಕೊಲೆ ಮಾಡಿರುವುದಾಗಿ ವಿಡಿಯೊದಲ್ಲಿ ಆತ ಹೇಳಿಕೊಂಡಿದ್ದಾನೆ. ವಿಡಿಯೊ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಮಂಗಳವಾರ ಈ ಘಟನೆ ನಡೆದಿದೆ. ನಾಗಮಲೆಯಲ್ಲಿ ವಾಸವಿದ್ದ ಲಕ್ಷ್ಮಿ (35) ಹತ್ಯೆಗೀಡಾದ ಮಹಿಳೆ. ಆಕೆಯನ್ನು ಕೊಂದು, ಆತ್ಮಹತ್ಯೆ ಮಾಡಿಕೊಂಡವನ್ನು ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ವೀರಭದ್ರಯ್ಯಚಯನ ಹಳ್ಳಿಯ ಮುನಿರಾಜು (40) ಎಂದು ಗುರುತಿಸಲಾಗಿದೆ.
ಘಟನೆಯ ವಿವರ: ತಮಿಳುನಾಡಿನ ಪೆನ್ನಾಗರಂ ಚೆಕ್ ಪೋಸ್ಟ್‌ನಲ್ಲಿ ವಾಸವಿದ್ದ ಲಕ್ಷ್ಮಿಗೆ ಈ ಹಿಂದೆಯೇ ಮದುವೆಯಾಗಿತ್ತು. ಹಲವು ವರ್ಷಗಳ ಹಿಂದೆಯೇ ಗಂಡನನ್ನು ಬಿಟ್ಟಿದ್ದಳು. ಬಳಿಕ ಮುನಿರಾಜುನೊಂದಿಗೆ ಸಂಬಂಧ ಹೊಂದಿದ್ದಳು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಲಕ್ಷ್ಮಿಯು ತನ್ನಿಂದ ದೂರವಾಗಿದ್ದಕ್ಕೆ ಕೋಪಗೊಂಡು ಈ ಕೃತ್ಯ ಎಸಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ನಾಗಮಲೆಯ ರಮೇಶ್ ಎಂಬುವವರು ಏಳು ತಿಂಗಳ ಹಿಂದೆ ಲಕ್ಷ್ಮಿಯೊಂದಿಗೆ ಕೂಡಾವಳಿ (ಪುನರ್ ವಿವಾಹ) ಮಾಡಿಕೊಂಡಿದ್ದರು. ಲಕ್ಷ್ಮಿಯು ರಮೇಶ್ ಅವರ ಮಾವ–ಅತ್ತೆಯ ಮಗಳು. ತಿಂಗಳ ಹಿಂದೆ ಆಕೆಯನ್ನು ಪೆನ್ನಾಗರಂನಿಂದ ಕರೆದುಕೊಂಡು ಬಂದು ನಾಗಮಲೆಯ ತಮ್ಮ ಮನೆಯಲ್ಲಿ ಇರಿಸಿಕೊಂಡಿದ್ದರು.
ಮಂಗಳವಾರ ಲಕ್ಷ್ಮಿಯನ್ನು ಹುಡುಕಿಕೊಂಡು ಬಂದಿದ್ದ ಮುನಿರಾಜು ನಾಗಮಲೆಯಲ್ಲಿ ಆಕೆಯನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾನೆ. ಈ ಸಂದರ್ಭದಲ್ಲಿ ಆಕೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾನೆ. ನಂತರ ಬೊಮ್ಮ ಎಂಬುವವರ ಜಮೀನಿನಲ್ಲಿ ಬೇವಿನ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ರಮೇಶ್ ಬೆಟ್ಟದ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮುಖದ ಮೇಲೆ ಕಲ್ಲು ಎತ್ತಿಹಾಕಿದ್ದರಿಂದ ತೀವ್ರವಾಗಿ ಗಾಯಗೊಂಡಿದ್ದ ಲಕ್ಷ್ಮಿಯನ್ನು ತನ್ನ ತೊಡೆ ಮೇಲೆ ಮಲಗಿಸಿಕೊಂಡು ಸೆಲ್ಫಿ ವಿಡಿಯೊವನ್ನು ಮುನಿರಾಜು ಮಾಡಿದ್ದಾನೆ. ಅದನ್ನು ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಿದ್ದಾನೆ.
ಮುಖವೆಲ್ಲ ರಕ್ತಸಿಕ್ತವಾಗಿದ್ದ ಲಕ್ಷ್ಮಿ ಉಸಿರಾಡಲು ಕಷ್ಟಪಡುತ್ತಾ ಕೊನೆಯುಸಿರೆಳೆಯುವ ದೃಶ್ಯವೂ ವಿಡಿಯೊದಲ್ಲಿದೆ. ‘ನನ್ನ ಲಕ್ಷ್ಮಿಯನ್ನು ನಾನೇ ಕಲ್ಲು ಹಾಕಿ ಕೊಂದೆ, ನನ್ನನ್ನು ಕೊಲೆಗಾರರನ್ನಾಗಿ ಮಾಡಿ ಹೋಗಿ ಬಿಟ್ಟಳು’ ಎಂದು ಮುನಿರಾಜು ಗೋಳಾಡುವ ದೃಶ್ಯಾವಳಿಯೂ ಅದರಲ್ಲಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.