ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಜಿಲ್ಲೆಗೆ ಮತ್ತೆರಡು ನಿಗಮ, ಮಂಡಳಿ ಸ್ಥಾನ

ಸೂರ್ಯನಾರಾಯಣ ವಿ/ಅವಿನ್‌ ಪ್ರಕಾಶ್‌ ವಿ.
Published 1 ಮಾರ್ಚ್ 2024, 7:04 IST
Last Updated 1 ಮಾರ್ಚ್ 2024, 7:04 IST
ಅಕ್ಷರ ಗಾತ್ರ

ಚಾಮರಾಜನಗರ: ರಾಜ್ಯ ಸರ್ಕಾರ ಮತ್ತೆ 44 ನಿಗಮ ಮಂಡಳಿಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಿದ್ದು, ಜಿಲ್ಲೆಯ ಇಬ್ಬರು ಮುಖಂಡರಿಗೆ ಸ್ಥಾನ ಸಿಕ್ಕಿದೆ. 

ಕೊಳ್ಳೇಗಾಲದ ಮಾಜಿ ಶಾಸಕ ಎಸ್‌.ಜಯಣ್ಣ ಅವರನ್ನು ಕರ್ನಾಟಕ ರಾಜ್ಯ ಅನುಸೂಚಿತ ಜಾತಿ (ಎಸ್‌ಸಿ) ಮತ್ತು ಅನುಸೂಚಿತ ಬುಡಕಟ್ಟುಗಳ (ಎಸ್‌ಟಿ) ಆಯೋಗದ ಅಧ್ಯಕ್ಷರನ್ನಾಗಿ ಮತ್ತು ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಪಿ.ಮರಿಸ್ವಾಮಿ ಅವರನ್ನು ಮೈಸೂರಿನ ಕಾವೇರಿ ಅಚ್ಚುಕಟ್ಟು ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ (ಕಾಡಾ) ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. 

ಇದಕ್ಕೂ ಮೊದಲು ನಡೆದಿದ್ದ ನಿಗಮ– ಮಂಡಳಿ ನೇಮಕದಲ್ಲಿ ಚಾಮರಾಜನಗರ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರಿಗೆ ಅವಕಾಶ ನೀಡಲಾಗಿತ್ತು. ಎಂಎಸ್‌ಐಎಲ್‌ನ ಅಧ್ಯಕ್ಷರನ್ನಾಗಿ ಮಾಡಲಾಗಿತ್ತು. 

ಇದರೊಂದಿಗೆ ನಿಗಮ ಮಂಡಳಿಗಳಲ್ಲಿ ಜಿಲ್ಲೆಯ ಮೂವರಿಗೆ ಸ್ಥಾನ ಸಿಕ್ಕಿದಂತಾಗಿದೆ. 

ನಿರೀಕ್ಷಿತ ನೇಮಕ: ಪಕ್ಷದ ಕಾರ್ಯಕರ್ತರ ಕೋಟಾದಲ್ಲಿ ಜಯಣ್ಣ ಮತ್ತು ಮರಿಸ್ವಾಮಿ ಅವರಿಗೆ ಅವಕಾಶ ಸಿಗಲಿದೆ ಎಂಬ ಚರ್ಚೆ ಪಕ್ಷದೊಳಗೆ ನಡೆದಿತ್ತು. 

ಮೊದಲ ಹಂತದಲ್ಲಿ ಪುಟ್ಟರಂಗಶೆಟ್ಟಿಯವರಿಗೆ ಅವಕಾಶ ಸಿಕ್ಕಿದ್ದರಿಂದ, ಜಯಣ್ಣ ಅವರನ್ನು ಮಾತ್ರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪರಿಗಣಿಸಬಹುದು ಎಂದು ಹೇಳಲಾಗಿತ್ತು. ಆದರೆ, ಮೊದಲಿದ್ದ ನಿರೀಕ್ಷೆಯಂತೆ ಮರಿಸ್ವಾಮಿ ಅವರನ್ನೂ ನೇಮಕ ಮಾಡಲಾಗಿದೆ. 

ಭರವಸೆ ನೀಡಿದ್ದ ಸಿದ್ದರಾಮಯ್ಯ: ಜಯಣ್ಣ ಅವರಿಗೆ ನಿಗಮ ಮಂಡಳಿಗೆ ನೇಮಕವಾಗುವುದು ಮೊದಲೇ ಖಚಿತವಾಗಿತ್ತು. ಸಿದ್ದರಾಮಯ್ಯ ಅವರೊಂದಿಗೆ ಆಪ್ತ ಒಡನಾಟ ಹೊಂದಿರುವ ಜಯಣ್ಣ ಅವರು ವಿಧಾನಸಭಾ ಚುನಾವಣೆಯಲ್ಲಿ ಕೊಳ್ಳೇಗಾಲ ಮೀಸಲು ಕ್ಷೇತ್ರದಿಂದ ಟಿಕೆಟ್‌ ಆಕಾಂಕ್ಷಿಯಾಗಿದ್ದರು. 

ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು, ಸರ್ಕಾರ ಬಂದರೆ ನಿಗಮ ಮಂಡಳಿಗೆ ನೇಮಕ ಮಾಡಿ ಸಚಿವ ಸ್ಥಾನ ಮಾನ ನೀಡಲಾಗುವುದು ಎಂದು ಜಯಣ್ಣ ಅವರಿಗೆ ಭರವಸೆ ನೀಡಿದ್ದರು. ಆ ಬಳಿಕವಷ್ಟೇ ಅವರು, ಎ.ಆರ್.ಕೃಷ್ಣಮೂರ್ತಿ ಅವರಿಗೆ ಟಿಕೆಟ್‌ ನೀಡಲು ಒಪ್ಪಿಕೊಂಡಿದ್ದರು. 

1994ರ ವಿಧಾನಸಭಾ ಚುನಾವಣೆಯಲ್ಲಿ ಜನತಾದಳದಿಂದ ಸ್ಪರ್ಧಿಸಿ ಜಯಣ್ಣ ಶಾಸಕರಾಗಿದ್ದರು. 1999ರಲ್ಲಿ ಸೋಲು ಅನುಭವಿಸಿದ್ದರು. ಸಿದ್ದರಾಮಯ್ಯ ಅವರು ಜಾತ್ಯತೀತ ದಳದಿಂದ ದೂರವಾಗಿ ಕಾಂಗ್ರೆಸ್‌ ಜೊತೆ ಹೋದಾಗ, ಜಯಣ್ಣ ಅವರು ನಾಯಕನನ್ನು ಹಿಂಬಾಲಿಸಿದ್ದರು. 2009ರಲ್ಲಿ, 2010ರ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸೋಲುಂಡ ಅವರು 2013ರಲ್ಲಿ ಜಯಗಳಿಸಿ ಶಾಸಕರಾಗಿದ್ದರು. 2018ರಲ್ಲಿ ಅವರಿಗೆ ಟಿಕೆಟ್‌ ಸಿಕ್ಕಿರಲಿಲ್ಲ. ಈ ಬಾರಿಯೂ ಅವರ ಬದಲಿಗೆ ಎ.ಆರ್‌.ಕೃಷ್ಣಮೂರ್ತಿಯವನ್ನು ಕಾಂಗ್ರೆಸ್‌ ಕಣಕ್ಕಿಳಿಸಿತ್ತು. 

ಪಕ್ಷ ನಿಷ್ಠೆಗೆ ಸಿಕ್ಕ ಸ್ಥಾನ: ಏಳೂವರೆ ವರ್ಷಗಳಿಂದ ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷರಾಗಿರುವ ಪಿ.ಮರಿಸ್ವಾಮಿ ಅವರು, 1982ರಿಂದಲೂ ಕಾಂಗ್ರೆಸ್‌ನೊಂದಿಗೆ ಗುರುತಿಸಿಕೊಂಡಿದ್ದಾರೆ.

ಜಿಲ್ಲಾ ಪಂಚಾಯಿತಿ ಸದಸ್ಯರಾಗಿ, ಜಿಲ್ಲಾ ಕಾಂಗ್ರೆಸ್‌ ಖಜಾಂಚಿಯಾಗಿ ಆ ಬಳಿಕ ಅಧ್ಯಕ್ಷರಾಗಿ ಸಕ್ರಿಯವಾಗಿ ರಾಜಕೀಯದಲ್ಲಿ ತೊಡಗಿಕೊಂಡಿರುವ ಮರಿಸ್ವಾಮಿ ಅವರ ಪಕ್ಷ ನಿಷ್ಠೆಗೆ ನಿಗಮ ಸ್ಥಾನ ಒಲಿದಿದೆ ಎಂದು ಹೇಳುತ್ತಾರೆ ಮುಖಂಡರು. 

‘ಪಕ್ಷ ಸಂಘಟನೆಗೆ ಸಿಕ್ಕ ಪ್ರತಿಫಲ’
ಕಾಡಾ ಅಧ್ಯಕ್ಷರಾಗಿ ನೇಮಕವಾಗಿದ್ದಕ್ಕೆ ‘ಪ್ರಜಾವಾಣಿ’ಯೊಂದಿಗೆ ಸಂತಸ ಹಂಚಿಕೊಂಡ ಪಿ.ಮರಿಸ್ವಾಮಿ ‘ಏಳೂವರೆ ವರ್ಷಗಳಿಂದ ಪಕ್ಷ ಸಂಘಟಿಸಿದ್ದಕ್ಕೆ ವರಿಷ್ಠರು ನೀಡಿದ ಕೆಲಸಗಳನ್ನು ಚಾಚೂ ತಪ್ಪದೆ ಪಾಲಿಸಿದ್ದಕ್ಕೆ ಸಿಕ್ಕ ಪ್ರತಿಫಲ ಇದು. ಸಿ.ಎಂ‌ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ನನಗೆ ಜಿಲ್ಲೆಯ ಮೂವರೂ ಶಾಸಕರು ನಂಜನಗೂಡು ಶಾಸಕ ದರ್ಶನ್‌ ಧ್ರುವನಾರಾಯಣ ಮಾಜಿ ಶಾಸಕರು ಮುಖಂಡರು ಎಲ್ಲರೂ ಸಹಕಾರ ನೀಡಿದ್ದಾರೆ’ ಎಂದರು.  ‘ಪಕ್ಷದ ಕೆಲಸಗಳನ್ನು ಪ್ರಾಮಾಣಿಕವಾಗಿ ನಡೆಸುತ್ತಾ ಬಂದಿದ್ದೇನೆ. ಈಗ ಕಾಡಾ ಅಧ್ಯಕ್ಷನ ಜವಾಬ್ದಾರಿ ಸಿಕ್ಕಿದೆ. ಕಾಡಾ ವ್ಯಾಪ್ತಿಯ ಎಲ್ಲ ಕಡೆಗಳಿಗೂ ಭೇಟಿ ನೀಡಿ ಆಗ ಬೇಕಿರುವ ಕೆಲಸಗಳನ್ನು ಪಟ್ಟಿ ಮಾಡಿ ರೈತರಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ಶಕ್ತಿ ಮೀರಿ ಪ್ರಯತ್ನಿಸುವೆ. ಮಾರ್ಚ್‌ 4ರಂದು ಅಧಿಕಾರ ಸ್ವೀಕರಿಸುವೆ’ ಎಂದರು. 
ಎಸ್‌.ಜಯಣ್ಣ ಅತೃಪ್ತಿ?
ಈ ಮಧ್ಯೆ ಕರ್ನಾಟಕ ರಾಜ್ಯ ಅನುಸೂಚಿತ ಜಾತಿ (ಎಸ್‌ಸಿ) ಮತ್ತು ಅನುಸೂಚಿತ ಬುಡಕಟ್ಟುಗಳ (ಎಸ್‌ಟಿ) ಆಯೋಗದ ಅಧ್ಯಕ್ಷರನ್ನಾಗಿ ನೇಮಕ ಮಾಡಿರುವುದು ಜಯಣ್ಣ ಅವರಿಗೆ ಸಮಾಧಾನ ತಂದಿಲ್ಲ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.  ‘ಜಯಣ್ಣ ಅವರು ಗುರುವಾರ ಬೆಳಿಗ್ಗೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲು ಬೆಂಗಳೂರಿಗೆ ತೆರಳಿದ್ದು  ಬೇರೆ ನಿಗಮ–ಮಂಡಳಿಗೆ ನೇಮಕ ಮಾಡುವಂತೆ ಮನವಿ ಮಾಡಲಿದ್ದಾರೆ’ ಎಂದು ಆಪ್ತರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.     ‘ಜಯಣ್ಣ ಸಿದ್ದರಾಮಯ್ಯ ಅವರ ಕಟ್ಟಾ ಬೆಂಬಲಿಗ. ಉತ್ತಮ ನಿಗಮ–ಮಂಡಳಿಯನ್ನು ನೀಡದೆ ಅವರಿಗೆ ಅನ್ಯಾಯ ಮಾಡಲಾಗಿದೆ. ಇದು ಬೆಂಬಲಿಗರು ಅಭಿಮಾನಿಗಳಿಗೆ ನೋವು ತಂದಿದೆ. ಎಸ್‌ಸಿ ಎಸ್‌ಟಿ ಆಯೋಗದ ಅಧ್ಯಕ್ಷರಾಗಲು ಅವರಿಗೆ ಇಷ್ಟವಿಲ್ಲ’ ಎಂದು ಅವರ ಆಪ್ತರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.  ಪ್ರತಿಕ್ರಿಯೆ ಪಡೆಯಲು ಜಯಣ್ಣ ಅವರು ಸಂಪರ್ಕಕ್ಕೆ ಸಿಕ್ಕಿಲ್ಲ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT