ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಂಡ್ಲುಪೇಟೆ: ಚಿಕ್ಕಕೆರೆ ಅಭಿವೃದ್ಧಿಗೆ ಯುವಕರ ತಂಡದ ಸಂಕಲ್ಪ

ಪ್ರತಿ ಭಾನುವಾರ ಉತ್ಸಾಹಿ ಯುವಕರಿಂದ ಶ್ರಮದಾನ, ದಾನಿಗಳ ನೆರವು
Last Updated 31 ಡಿಸೆಂಬರ್ 2022, 19:31 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ಪರಿಸರ ಮನುಷ್ಯನ ಅವಿಭಾಜ್ಯ ಅಂಗ. ಕೆರೆ ಕಟ್ಟೆ ನದಿಗಳನ್ನು ಜನರೇ ಉಳಿಸಬೇಕು ಎಂಬ ಸಂಕಲ್ಪದೊಂದಿಗೆ ತಾಲ್ಲೂಕಿನ ಜನರ ಜೀವ ಸೆಲೆಯಾಗಿದ್ದ ಚಿಕ್ಕಕರೆ ಪುನರುಜ್ಜೀವನಗೊಳಿಸುವ ಕಾರ್ಯಕ್ಕೆ ಗುಂಡ್ಲು ಪರಿಸರ ಬಳಗ ಮುಂದಾಗಿದೆ.

ಕೆರೆಯಂಗಳದಲ್ಲಿ ಬೆಳೆದಿದ್ದ ಕಸ, ಪ್ಲಾಸ್ಟಿಕ್ ಮತ್ತು ಕಳೆ ಗಿಡಗಳನ್ನು ತೆರವು ಮಾಡಿ ಕೆರೆಯಲ್ಲಿ ದಶಕಗಳಿಂದ ತುಂಬಿರುವ ತ್ಯಾಜ್ಯ ಹೊರ ತೆಗೆದಿದ್ದಾರೆ.

ಗುಂಡ್ಲು ಪರಿಸರ ಬಳಗದ ಸಮಾನ ಮನಸ್ಕ ಯುವಕರ ತಂಡವೊಂದು ಪಟ್ಟಣದ ಚಿಕ್ಕಕೆರೆ ಅಭಿವೃದ್ಧಿಯ ಸಂಕಲ್ಪ ತೊಟ್ಟಿದೆ.

ಬಳಗದ ಸಮಾನ ಮನಸ್ಕರು ಭಾನುವಾರದ ದಿನಗಳಲ್ಲಿ ದಾನಿಗಳ ಸಹಾಯದಿಂದ ಯಂತ್ರ ಹಾಗೂ ವಿವಿಧ ಸಲಕರಣೆ ಬಳಸಿಕೊಂಡು ಕೆರೆಗೆ ನೀರು ಹರಿಯುತ್ತಿದ್ದ ಕಾಲುವೆಗಳಲ್ಲಿ ತುಂಬಿ ಹೋಗಿದ್ದ ಹೂಳನ್ನು ಎತ್ತಿ ಕಲ್ಲಿನ ಮೆಟ್ಟಿಲು ಹಾಗೂ ಬಾವಿ ಸ್ವಚ್ಚ ಮಾಡಿದ್ದಾರೆ.

‘ಕೆರೆ ಖಾಲಿ ಇದ್ದುದರಿಂದ ಪುರಸಭೆ ಹಾಗೂ ಸ್ಥಳೀಯರು ವಿವಿಧ ತ್ಯಾಜ್ಯ ಸುರಿದಿದ್ದರು. ಇವುಗಳನ್ನು ಸ್ವಯಂ ಸೇವಕರು ಸ್ವಚ್ಛ ಮಾಡಿದ್ದಾರೆ. ಈಗಾಗಲೇ 150ಕ್ಕೂ ಹೆಚ್ಚಿನ ಟ್ರಾಕ್ಟರ್‌ಗಳಷ್ಟು ತ್ಯಾಜ್ಯ ಮತ್ತು ಅವಶೇಷ ಹೊರ ತೆಗೆಯಲಾಗಿದೆ’ ಎಂದು ವನ್ಯಜೀವಿ ಛಾಯಾಗ್ರಹಕ ಆರ್.ಕೆ.ಮಧು ಮಾಹಿತಿ ನೀಡಿದರು.

‘ಪಟ್ಟಣಕ್ಕೆ ಹೊಂದಿಕೊಂಡಿರುವ ಚಿಕ್ಕಕೆರೆ ಹಿಂದೆ ಪಟ್ಟಣದ ಕುಡಿಯುವ ನೀರಿನ ಮೂಲವೂ ಆಗಿತ್ತು. ಆದರೆ ಮಳೆಯ ಕೊರತೆ ಹಾಗೂ ಒತ್ತುವರಿಯಿಂದ ಬಹುತೇಕ ಮುಚ್ಚಿಹೋಗಿದೆ. ಎರಡು ಕಿ.ಮೀ ರಷ್ಟು ಸುತ್ತಳತೆಯಿರುವ ಚಿಕ್ಕಕೆರೆಯನ್ನು ಮೈಸೂರಿನ ಕುಕ್ಕರಹಳ್ಳಿ ಕೆರೆ ಮಾದರಿಯಲ್ಲಿ ಅಭಿವೃದ್ದಿಪಡಿಸಲು ಮುಂದಾಗಿದ್ದೇವೆ. ಏರಿಯ ಮೇಲೆ ಕಾಲ್ನಡಿಗೆ ಮಾರ್ಗ ನಿರ್ಮಿಸಿ ಸಸಿ ನೆಟ್ಟು, ಬೆಳೆಸುವ ಯೋಜನೆ ರೂಪಿಸಿದ್ದೇವೆ’ ಎಂದು ಗುಂಡ್ಲು ಪರಿಸರ ಬಳಗದ ಸಂಸ್ಥಾಪಕ ನಾಗರ್ಜುನ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಕೆರೆಯ ಪುನರುಜ್ಜೀವನ ಯೋಜನೆ ಎಲ್ಲೂ ದಾರಿ ತಪ್ಪಬಾರದು ಎಂಬ ಉದ್ದೇಶದಿಂದ ಪುರಸಭೆ ಎಂಜಿನಿಯರ್ ಸಹಾಯ ಪಡೆದು ಯೋಜನೆ ರೂಪಿಸಲಾಗುತ್ತಿದೆ. ಈಗಾಗಲೇ ಶಾಸಕ ಸಿ.ಎಸ್.ನಿರಂಜನ ಕುಮಾರ್ ಅವರು ಚಿಕ್ಕಕೆರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಉದ್ಯಾನವನ್ನಾಗಿ ಅಭಿವೃದ್ಧಿ ಪಡಿಸಲು ಅನುದಾನ ನೀಡುವ ಭರವಸೆ ನೀಡಿದ್ದಾರೆ.

ಕೆರೆಗೆ ಜೀವ ತರಬೇಕು ಎಂಬ ದೃಢ ತೀರ್ಮಾನದಲ್ಲಿ ಹೆಚ್ಚು ಆಸಕ್ತಿ ವಹಿಸಿ ಸ್ವಯಂ ಸೇವಕರು ಕೆಲಸ ಮಾಡುತ್ತಿದ್ದಾರೆ. ನಾಗರ್ಜುನ್, ಮಧು, ಶಂಕರ್ ಮತ್ತು ಸ್ನೇಹಿತರು ಪ್ರತಿದಿನ ಸ್ವಚ್ಛತಾ ಕೆಲಸದಲ್ಲಿ ತೊಡಗಿದ್ದಾರೆ. ಉಳಿದಂತೆ ಸ್ವಯಂ ಸೇವಕರ ತಂಡ ಬಿಡುವು ಮತ್ತು ವಾರದ ರಜೆ ದಿನಗಳಲ್ಲಿ ಕೆಲಸ ಮಾಡುತ್ತಿದೆ.

‘ಈ ಕೆರೆ ಹಿಂದಿನಂತೆ ಅನುಕೂಲವಾಗಬೇಕು ಎಂದು ಜನರಿಗೂ ಇದೆ. ಸ್ವಯಂ ಪ್ರೇರಿತರಾಗಿ ದಾನಿಗಳು ಸಹಾಯ ಮಾಡುತ್ತಿದ್ದಾರೆ’ ಎಂದು ಹೇಳುತ್ತಾರೆ ಬಳಗದ ಸದಸ್ಯರು.

***

ಪ್ರತಿ ಭಾನುವಾರ 20–30 ಜನರು ಶ್ರಮ ದಾನ ಮಾಡುತ್ತಿದ್ದೆವು. ಮುಂದಿನ ದಿನಗಳಲ್ಲಿ ನೂರಕ್ಕೂ ಹೆಚ್ಚು ಮಂದಿ ಶ್ರಮದಾನ ಮಾಡುವ ಮೂಲಕ ಕೆರೆಗೆ ಹೊಸ ರೂಪ ನೀಡುತ್ತೇವೆ
–ನಾಗರ್ಜುನ್, ಗುಂಡ್ಲು ಪರಿಸರ ಬಳಗ ಸಂಸ್ಥಾಪಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT