ಶನಿವಾರ, ಫೆಬ್ರವರಿ 29, 2020
19 °C
ವರಿಷ್ಠರ ಮಾತು ಧಿಕ್ಕರಿಸಿಲ್ಲ, ನಾವೀಗಲೂ ಪಕ್ಷದ ಶಿಸ್ತಿನ ಸಿಪಾಯಿಗಳು - ಕೃಷ್ಣ ಹೇಳಿಕೆ

ಉಪಾಧ್ಯಕ್ಷ, ಸದಸ್ಯರಿಂದ ಮಾನಸಿಕ ಹಿಂಸೆ: ಶಿವಮ್ಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ‘ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಕೆ.ಎಸ್‌.ಮಹೇಶ್‌ ಹಾಗೂ ‍ಪಕ್ಷದ ಇತರ ಸದಸ್ಯರು ಮಾನಸಿಕ ನನಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ಮಹೇಶ್‌ ಅವರು ಉಪಾಧ್ಯಕ್ಷರಾದ ನಂತರ ನನಗೆ ಕೆಲಸ ಮಾಡುವುದಕ್ಕೆ ಅವಕಾಶ ಕೊಟ್ಟಿಲ್ಲ’ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಿವಮ್ಮ ಅವರು ಆರೋಪಿಸಿದರು. 

ಜಿಲ್ಲಾಡಳಿತ ಭವನದ ಆವರಣದಲ್ಲಿ ಬುಧವಾರ ನಡೆದ ಘಟನೆಗೆ ಸಂಬಂಧಿಸಿದಂತೆ ತಮ್ಮ ಪತಿ ಕೃಷ್ಣ ಅವರೊಂದಿಗೆ ಗುರುವಾರ ಪತ್ರಿಕಾಗೋಷ್ಠಿ ನಡೆಸಿದ ಅವರು, ‘ಅಂಬೇಡ್ಕರ್‌ ರಚಿಸಿರುವ ಸಂವಿಧಾನದ ಅಡಿಯಲ್ಲಿ ಸಿಕ್ಕಿರುವ ಮೀಸಲಾತಿಯಿಂದ ಅಧ್ಯಕ್ಷೆ ಆಗಿದ್ದೇನೆ. ನನಗೆ ರಾಜಕೀಯ ಗೊತ್ತಿಲ್ಲ. ಅಧಿಕಾರ ದುರ್ಬಳಕೆ ಮಾಡಿಕೊಂಡಿಲ್ಲ. ಸರ್ಕಾರಿ ಕಾರು ತೆಗೆದುಕೊಂಡು ಹೋಗುವಾಗ ಅಂದಿನ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ಹರೀಶ್‌ಕುಮಾರ್‌ ಅವರ ಅನುಮತಿ ಪಡೆದುಕೊಂಡಿದ್ದೆ. ಅನುದಾನ ಹಂಚಿಕೆಯಲ್ಲೂ ತಾರತಮ್ಯ ಮಾಡಿಲ್ಲ. ನನ್ನ ವಿರುದ್ಧ ಸದಸ್ಯರು ಮಾಡಿರುವ ಆರೋಪ ಸುಳ್ಳು’ ಎಂದು ಸ್ಪಷ್ಟನೆ ನೀಡಿದರು. 

‘ಉಪಾಧ್ಯಕ್ಷರು ಹಾಗೂ ಇತರ ಸದಸ್ಯರು ಸೇರಿ ನನಗೆ ಬರಬೇಕಾದ ಗೌರವ ಧನ, ಭತ್ಯೆಗಳನ್ನು ತಡೆ ಹಿಡಿದಿದ್ದರು. ಯಾವುದೇ ಕೆಲಸ ಮಾಡಲು ಅವಕಾಶ ನೀಡುತ್ತಿಲ್ಲ. ಚಿತ್ರ ವಿಚಿತ್ರ ರೀತಿಯಲ್ಲಿ ಹಿಂಸೆಗಳನ್ನು ನೀಡುತ್ತಿದ್ದಾರೆ’ ಎಂದರು. 

ಪಕ್ಷದ ಆಂತರಿಕ ಒಪ್ಪಂದಂತೆ ರಾಜೀನಾಮೆ ಕೊಟ್ಟಿಲ್ಲ ಎಂದು ಇತರ ಸದಸ್ಯರು ಹೇಳುತ್ತಿದ್ದಾರಲ್ಲಾ ಎಂದು ಕೇಳಿದ್ದಕ್ಕೆ, ‘ವರಿಷ್ಠರ ಸೂಚನೆಯಂತೆ ನಾನು ರಾಜೀನಾಮೆ ಕೊಟ್ಟಿದ್ದೆ. ಆದರೆ, ನನಗೆ ಬರಬೇಕಾದ ಭತ್ಯೆ, ಗೌರವಧನಕ್ಕೆ ತಡೆಯೊಡ್ಡಿದರು. ಹೀಗಾಗಿ ರಾಜೀನಾಮೆ ವಾಪಸ್‌ ಪಡೆದೆ’ ಎಂದು ಹೇಳಿದರು. 

‘ಇದನ್ನು ವರಿಷ್ಠರ ಗಮನಕ್ಕೆ ತಂದಾಗ, ಸರ್ಕಾರದಿಂದ ಬರಬೇಕಾದ ಮೊತ್ತವನ್ನು ತಾವು ಕೊಡುವುದಾಗಿ ಮುಖಂಡರು ಹೇಳಿದ್ದು ನಿಜ. ದುಡ್ಡು ಪಡೆದು ರಾಜೀನಾಮೆ ನೀಡಿದ್ದಾರೆ ಎಂಬ ಆರೋಪ ಬರಬಾರದು ಎಂಬ ಕಾರಣಕ್ಕೆ ನಾನು ಒಪ್ಪಲಿಲ್ಲ. ಮಾರ್ಚ್‌ 2ರಂದು ರಾಜೀನಾಮೆ ನೀಡುತ್ತೇನೆ ಎಂದು ವರಿಷ್ಠರಿಗೆ ತಿಳಿಸಿದ್ದೆ. ಆದರೆ, ಅಷ್ಟರಲ್ಲೇ ಸದಸ್ಯರು ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಹೊರಿಸಿದ್ದಾರೆ, ಕೆಟ್ಟದಾಗಿ ನಡೆದುಕೊಂಡಿದ್ದಾರೆ. ಏಕವಚನದಲ್ಲಿ ಬಾಯಿಗೆ ಬಂದಂತೆ ಬೈದಿದ್ದಾರೆ. ನಾನು ಅವರ ಮಟ್ಟಕ್ಕೆ ಇಳಿಯಬಾರದು ಎಂಬ ಕಾರಣಕ್ಕೆ ಬುಧವಾರ ಏನೂ ಮಾತನಾಡಿಲ್ಲ’ ಎಂದು ಹೇಳಿದರು. 

‘ತಡೆ ಹಿಡಿದಿದ್ದ ಭತ್ಯೆ, ಗೌರವಧನಗಳನ್ನು ಸರ್ಕಾರ ಬಿಡುಗಡೆ ಮಾಡಿದೆ. ಅಪಘಾತಗೊಂಡಿದ್ದ ಕಾರಿನ ದುರಸ್ತಿಗೆ ಆಗಿರುವ ವೆಚ್ಚವನ್ನು ನಾನೇ ಭರಿಸಬೇಕು ಎಂದು ಸರ್ಕಾರ ಹೇಳಿದರೆ, ಅದನ್ನು ಪಾವತಿಸಲು ಸಿದ್ಧ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. 

ಮಾರ್ಚ್‌ 2ರಂದು ರಾಜೀನಾಮೆ ಕೊಡುತ್ತೀರಾ ಎಂದು ಕೇಳಿದ್ದಕ್ಕೆ, ‘ವರಿಷ್ಠರು ನಾಳೆಯೇ ರಾಜೀನಾಮೆ ನೀಡಿ ಎಂದು ಸೂಚಿಸಿದರೆ ಕೊಡಲು ನಾನು ಸಿದ್ಧ. ಈ ಬಗ್ಗೆ ವರಿಷ್ಠರೊಂದಿಗೆ ಚರ್ಚಿಸುತ್ತೇನೆ’ ಎಂದು ಹೇಳಿದರು. 

ರಾಜೀ‌ನಾಮೆ ನೀಡಲು ಮಾರ್ಚ್‌ ತಿಂಗಳವರೆಗೆ ಅವಕಾಶ ಕೊಟ್ಟಿಲ್ಲ ಎಂದು ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಮರಿಸ್ವಾಮಿ ಅವರು ನೀಡಿರುವ ಹೇಳಿಕೆ ಬಗ್ಗೆ ಕೇಳಿದಾಗ, ‘ಮರಿಸ್ವಾಮಿ ಅವರು ಸುಳ್ಳು ಹೇಳುತ್ತಿದ್ದಾರೆ’ ಎಂದು ಉತ್ತರಿಸಿದರು. 

ಭ್ರಷ್ಟಾಚಾರ ಸಾಬೀತುಪಡಿಸಿದರೆ ರಾಜೀನಾಮೆ: ಕೃಷ್ಣ ಸವಾಲು
‘ನಾನು ರಾಜೂಗೌಡರ ಬಲಗೈ ಬಂಟನಾಗಿದ್ದೆ. ಈಗಲೂ ಪಕ್ಷದ ಶಿಸ್ತಿನ ಸಿಪಾಯಿ. ನಾವು ಪಕ್ಷದ ಶಿಸ್ತು ಉಲ್ಲಂಘಿಸಿಲ್ಲ. ನಮ್ಮ ವಿರುದ್ಧ ಮಾಡಿರುವ ಆರೋಪಗಳು ಸುಳ್ಳು’ ಎಂದು ಶಿವಮ್ಮ ಪತಿ ಕೃಷ್ಣ ಹೇಳಿದರು.

ಅಧ್ಯಕ್ಷರು ಅನುದಾನ ಹಂಚಿಕೆಯಲ್ಲಿ ಯಾವ ಕ್ಷೇತ್ರಕ್ಕೂ ತಾರತಮ್ಯ ಮಾಡಿಲ್ಲ. ಕುಡಿಯುವ ನೀರಿನ ಉದ್ದೇಶಕ್ಕಾಗಿ ₹1 ಕೋಟಿ ಬಿಡುಗಡೆಯಾಗಿತ್ತು. ಅದನ್ನು ಬಳಸುವುದು ಅಧ್ಯಕ್ಷರ ವಿವೇಚನೆಗೆ ಬಿಡಲಾಗಿತ್ತು. ನೀರಿನ ಸಮಸ್ಯೆ ಹೆಚ್ಚು ಇರುವ ಕಡೆಗಳಲ್ಲಿ ಆ ಮೊತ್ತವನ್ನು ಖರ್ಚು ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಸುರೇಶ್‌ ಕುಮಾರ್ ಅವರು ಸೂಚಿಸಿದ್ದರು. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅವರು ಈ ಬಗ್ಗೆಯೇ ಚರ್ಚಿಸಿದ್ದರು. ಅಗತ್ಯವಿರುವ ಕಡೆ ಬಳಸಲು ಸಿಇಒಗೆ ಅವಕಾಶ ನೀಡಲಾಗಿತ್ತು. ಪಾಳ್ಯ ಕ್ಷೇತ್ರಕ್ಕೆ ಕೇವಲ ₹7 ಲಕ್ಷ ಬಂದಿತ್ತು’ ಎಂದು ಅವರು ಹೇಳಿದರು. 

‘ಅಧ್ಯಕ್ಷರು ಭ್ರಷ್ಟಾಚಾರ ಮಾಡಿದ್ದಾರೆ, ಅಧಿಕಾರಿಗಳಿಗೆ ಕಿರುಕುಳ ನೀಡಿದ್ದಾರೆ ಎಂಬುದನ್ನು ಸಾಬೀತುಪಡಿಸಿದರೆ, ತಕ್ಷಣವೇ ಹುದ್ದೆಗೆ ರಾಜೀನಾಮೆ ನೀಡುತ್ತಾರೆ’ ಎಂದು ಸವಾಲು ಹಾಕಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು