ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌ಎಸ್‌ಎಲ್‌ಸಿ: ಶೇ 75.66 ರಷ್ಟು ಫಲಿತಾಂಶ

Last Updated 13 ಮೇ 2017, 11:14 IST
ಅಕ್ಷರ ಗಾತ್ರ

ಚಾಮರಾಜನಗರ: ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶದಲ್ಲಿ ಗಡಿಜಿಲ್ಲೆ ಚಾಮರಾಜನಗರ ಈ ಸಾಲಿನಲ್ಲಿ 15 ಸ್ಥಾನಗಳಷ್ಟು ಜಿಗಿತ ಕಂಡಿದೆ. ರಾಜ್ಯದ ಜಿಲ್ಲಾವಾರು ಪಟ್ಟಿಯಲ್ಲಿ 12ನೇ ಸ್ಥಾನ ಪಡೆದಿದ್ದು, ಶೈಕ್ಷಣಿಕ ಪ್ರಗತಿ ಖುಷಿ ತಂದಿದೆ. ಆದರೆ, ಶೇಕಡಾವಾರು ಫಲಿತಾಂಶ ಕುಸಿದಿದೆ.

ಕಳೆದ ಶೈಕ್ಷಣಿಕ ವರ್ಷದ ಫಲಿತಾಂಶ ಪಟ್ಟಿಯಲ್ಲಿ ಜಿಲ್ಲೆ 27ನೇ ಸ್ಥಾನ ಪಡೆದಿತ್ತು. ಆಗ ಶೇ 76.19ರಷ್ಟು ಫಲಿತಾಂಶ ದೊರಕಿತ್ತು. ಈ ಬಾರಿ ಶೇ 75.66ರಷ್ಟು ಫಲಿತಾಂಶ ಬಂದಿದೆ. ಪ್ರಸಕ್ತ ವರ್ಷ ಜಿಲ್ಲೆಯಲ್ಲಿ 10,402 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಈ ಪೈಕಿ 7,823 ಮಂದಿ ಉತ್ತೀರ್ಣರಾಗಿದ್ದಾರೆ.

ಒಟ್ಟಾರೆ ಫಲಿತಾಂಶದಲ್ಲಿ ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಆದರೆ, ಜಿಲ್ಲೆಯ ಮೊದಲ ಮೂರೂ ಸ್ಥಾನಗಳು ಬಾಲಕರ ಪಾಲಾಗಿರುವುದು ವಿಶೇಷ. ‘ಸ್ಮಾರ್ಟ್‌’ ಪರಿಣಾಮ:  ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ಆಗಿನ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹೆಫ್ಸಿಬಾ ರಾಣಿ ಕೊರ್ಲಪಾಟಿ ಅವರು ಅನುಷ್ಠಾನಗೊಳಿಸಿದ ‘ಸ್ಮಾರ್ಟ್’ ಕಾರ್ಯಕ್ರಮದ ಫಲವಾಗಿ ಎರಡೂ ಪರೀಕ್ಷೆಗಳಲ್ಲಿ ಜಿಲ್ಲೆ ಉತ್ತಮ ಫಲಿತಾಂಶ ಪಡೆದುಕೊಂಡಿದೆ ಎಂದು ಪೋಷಕರು ಹೇಳುತ್ತಾರೆ.

ಪರಿಹಾರ ಬೋಧನೆ, ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಗುರುತಿಸಿ ವಿಶೇಷ ಒತ್ತು ನೀಡುವುದು, ಶಿಕ್ಷಕರಿಗೆ ವಿಶೇಷ ತರಬೇತಿ ಹಾಗೂ ಶಾಲೆಗಳಿಗೆ ಅಗತ್ಯ ಶಿಕ್ಷಕರ ನೇಮಕ ಮೂಲಕ ಮಕ್ಕಳಿಗೆ ಬೋಧಿಸುವುದು ‘ಸ್ಮಾರ್ಟ್’ ಕಾರ್ಯಕ್ರಮದ ಉದ್ದೇಶಗಳಾಗಿದ್ದವು. ಇದು ಪರಿಣಾಮಕಾರಿಯಾಗಿ ಕೆಲಸ ಮಾಡಿದೆ ಎನ್ನಲಾಗಿದೆ.

ಪಂಚಾಯಿತಿ ಅಧ್ಯಕ್ಷರ ಪ್ರಯತ್ನ: ಜಿಲ್ಲೆ ಶೈಕ್ಷಣಿಕವಾಗಿ ಪ್ರಗತಿ ಹೊಂದಬೇಕು. ಮುಖ್ಯವಾಗಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ವಿದ್ಯಾರ್ಥಿಗಳು ಭಯವಿಲ್ಲದೆ ಎದುರಿಸುವಂತಾಗಬೇಕು ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಚ್‌.ವಿ. ಚಂದ್ರು, ವಿದ್ಯಾರ್ಥಿಗಳಿಗೆ ಕೈಪಿಡಿ ತಯಾರಿಸಿದ್ದರು.

ಪರಿಣತರು, ಜಿಲ್ಲೆಯ ಶಿಕ್ಷಣ ಅಧಿಕಾರಿಗಳು ಮತ್ತು ಶಿಕ್ಷಕರ ನೆರವಿನಿಂದ ಸುಮಾರು 7–8 ವರ್ಷದ ಪ್ರಶ್ನೆ ಪತ್ರಿಕೆ ಗಳನ್ನು ಸಂಗ್ರಹಿಸಿ, ಅದಕ್ಕೆ ಉತ್ತರ ವನ್ನು ನೀಡುವ ಪುಸ್ತಕ ತಯಾರಿ ಸಿದ್ದರು. ಅದನ್ನು ಎಲ್ಲ ಶಾಲೆಗಳ ವಿದ್ಯಾರ್ಥಿಗಳಿಗೆ ವಿತರಿ ಸಿದ್ದರು. ತಮ್ಮ ಪರಿಶ್ರಮ ಕೆಲಸ ಮಾಡಿದೆ ಎಂದು ಖುಷಿಯಿಂದ ಅವರು ಹೇಳಿಕೊಳ್ಳುತ್ತಾರೆ.

‘ಸಂಭಾವ್ಯ ಪ್ರಶ್ನೆಗಳು ಮತ್ತು ಉತ್ತರವನ್ನು ನೀಡುವುದು ಮಕ್ಕಳಿಗೆ ಪರೀಕ್ಷೆಯನ್ನು ಸುಲಭವಾಗಿ ಎದುರಿಸಲು ನೆರವಾಗಿದೆ. ಜಿಲ್ಲೆಯನ್ನು 15 ಸ್ಥಾನದ ಒಳಗೆ ತರುವುದು ಗುರಿಯಾಗಿತ್ತು’ ಎಂದರು.
ಮುಂದಿನ ಶೈಕ್ಷಣಿಕ ವರ್ಷದಿಂದ ಮೂರು ವರ್ಷದ ಯೋಜನೆಯನ್ನು ಹಮ್ಮಿಕೊಳ್ಳುವ ಉದ್ದೇಶವಿದೆ. ಅದರಂತೆ 8ನೇ ತರಗತಿಯಿಂದಲೇ ಮಕ್ಕಳನ್ನು ಎಸ್ಎಸ್‌ಎಲ್‌ಸಿ ಪರೀಕ್ಷೆಗೆ ಸಿದ್ಧಗೊಳಿಸಬೇಕು’ ಎಂದರು.

ಇದರಿಂದ ಮಕ್ಕಳು, ಪೋಷಕರು ಮತ್ತು ಶಿಕ್ಷಕರ ಮೇಲಿನ ಒತ್ತಡ ಕಡಿಮೆಯಾಗುತ್ತದೆ. ಜಿಲ್ಲೆಯನ್ನು 10ನೇ ಸ್ಥಾನದ ಒಳಗೆ ತರುವುದು ತಮ್ಮ ಈಗಿನ ಗುರಿ’ ಎಂದು ಚಂದ್ರು ತಿಳಿಸಿದರು. ‘ದಿನಕ್ಕೆ ನಾಲ್ಕು ಗಂಟೆ ಅಭ್ಯಾಸ ನಡೆಸುತ್ತಿದ್ದೆ’:   ‘ದಿನಕ್ಕೆ 4ರಿಂದ 5ಗಂಟೆಗಳ ಕಾಲ ಅಭ್ಯಾಸ ಮಾಡುತ್ತಿದ್ದೆ. ಮನೆಯಲ್ಲಿ ಅಮ್ಮ ಯಾವುದೇ ಕೆಲಸ ಹೇಳದೆ ಓದಲು ಅನುಕೂಲಕರ ವಾತಾವರಣ ಕಲ್ಪಿಸಿಕೊಟ್ಟಿದ್ದರು.

ಕಾಲೇಜಿನಲ್ಲಿ ಶಿಕ್ಷಕರು ಕೂಡ ಪ್ರೋತ್ಸಾಹ ನೀಡುತ್ತಿದ್ದರು. ನನ್ನ ಈ ಸಾಧನೆಗೆ ಅವರ ಕೊಡುಗೆಯೂ ಇದೆ’ ಎಂದು ವಿದ್ಯಾರ್ಥಿನಿ ಚಂದನಾ ಜಿ. ಖುಷಿ ಹಂಚಿಕೊಂಡರು.ನಗರದ ಜೆಎಸ್‌ಎಸ್‌ ಮಹಿಳಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಚಂದನ ಕಲಾ ವಿಭಾಗದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ (584) ಪಡೆದುಕೊಂಡಿದ್ದಾರೆ.

‘ಟ್ಯೂಷನ್‌ಗೆ ಹೋದರೆ ಮಾತ್ರ ಹೆಚ್ಚು ಅಂಕ ಪಡೆಯಬಹುದು ಎಂಬುದು ತಪ್ಪು ಕಲ್ಪನೆ. ನಮ್ಮ ಕಾಲೇಜಿನಲ್ಲಿ ಉಪನ್ಯಾಸಕರು ಉತ್ತಮ ಬೋಧನೆ ಮಾಡುತ್ತಿದ್ದರು. ಪಾಠವನ್ನು ಸರಿಯಾಗಿ ಕೇಳಿ ಮನನ ಮಾಡಿಕೊಳ್ಳುತ್ತಿದೆ. ಹಾಗಾಗಿ, ಹೆಚ್ಚು ಅಂಕ ಬಂದಿದೆ. ಐಎಎಸ್ ಆಗುವುದು ನನ್ನ ಆಸೆ’ ಎಂದರು.

‘ನಾನು ರೈತ. ಮಗಳ ಸಾಧನೆ ನನಗೆ ತೃಪ್ತಿ ತಂದಿದೆ. ಅವಳ ಆಸೆಯಂತೆ ಹೆಚ್ಚಿನ ವಿದ್ಯಾಭ್ಯಾಸ ಮಾಡಿಸುತ್ತೇನೆ’ ಎಂದು ಆಕೆಯ ತಂದೆ ಗುರುಸ್ವಾಮಿ ತಿಳಿಸಿದರು. ಚಂದನಾ ಕನ್ನಡದಲ್ಲಿ 100, ಇಂಗ್ಲಿಷ್‌ನಲ್ಲಿ 85, ಇತಿಹಾಸದಲ್ಲಿ 95, ಅರ್ಥಶಾಸ್ತ್ರದಲ್ಲಿ 98, ರಾಜ್ಯಶಾಸ್ತ್ರದಲ್ಲಿ 98, ಭೂಗೋಳಶಾಸ್ತ್ರದಲ್ಲಿ 90 ಅಂಕ ಪಡೆದಿದ್ದಾರೆ.

ಉತ್ತಮ ಫಲಿತಾಂಶ
ಕೊಳ್ಳೇಗಾಲ: ಪಟ್ಟಣದ ಸಂತ ಫ್ರಾನ್ಸಿಸ್ ಅಸ್ಸಿಸಿ ಪ್ರೌಢಶಾಲೆಗೆ  ಎಸ್ಎಸ್ಎಲ್‌ಸಿ  ಪರೀಕ್ಷೆಯಲ್ಲಿ ಆಂಗ್ಲಮಾಧ್ಯಮ ವಿಭಾಗದಲ್ಲಿ ಶೇ 100 ಹಾಗೂ ಕನ್ನಡ ಮಾಧ್ಯಮದಲ್ಲಿ ಶೇ 83.3 ಫಲಿತಾಂಶ ಬಂದಿದೆ.

ಆಂಗ್ಲ ಮಾಧ್ಯಮದಲ್ಲಿ 44 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಶಕುಂತಲಾ (571), ಮಹಮ್ಮದ್ ರೆಹಾನ್(553), ದೀಕ್ಷಿತ(539), ಅಜಿತ್(539) ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಕನ್ನಡ ಮಾಧ್ಯಮದಲ್ಲಿ 96 ವಿದ್ಯಾರ್ಥಿಗಳ ಪೈಕಿ 80 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು  ಶಾಲಾ ವ್ಯವಸ್ಥಾಪಕ ಫಾದರ್ ಕ್ಷೇವಿಯರ್ ತಿಳಿಸಿದ್ದಾರೆ.

ನಿಸರ್ಗ ಕಾಲೇಜಿಗೆ ಶೇ 89: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕೊಳ್ಳೇಗಾಲದ ನಿಸರ್ಗ ಸ್ವತಂತ್ರ ಪದವಿಪೂರ್ವ ಕಾಲೇಜು ಶೇ 89 ಫಲಿತಾಂಶ ಪಡೆದಿದೆ. 366 ವಿದ್ಯಾರ್ಥಿಗಳ ಪೈಕಿ 324 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

48 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ, 231 ಮಂದಿ ಪ್ರಥಮ ದರ್ಜೆ, 35 ಮಂದಿ ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಶೇ 85 ರಷ್ಟು ಫಲಿತಾಂಶ ಲಭಿಸಿದೆ. 22 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಪಾಸಾಗಿದ್ದಾರೆ.

ಎಸ್‌. ಬಾಲಸುಬ್ರಮಣ್ಯಂ 600ಕ್ಕೆ  578 ಅಂಕ ಗಳಿಸಿ ಕಾಲೇಜಿಗೆ ಮೊದಲಿಗನಾಗಿದ್ದಾನೆ. ವಾಣಿಜ್ಯ ವಿಭಾಗದಲ್ಲಿ ಶೇ 92ರಷ್ಟು ಫಲಿತಾಂಶ ಬಂದಿದ್ದು, 22 ಮಂದಿ ಅತ್ಯುನ್ನತ ಶ್ರೇಣಿಯಲ್ಲಿ 123 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ  22 ವಿದ್ಯಾರ್ಥಿಗಳು ದ್ವಿತೀಯ ದರ್ಜೆ, 8 ವಿದ್ಯಾರ್ಥಿ ತೃತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.

ಕಲಾ ವಿಭಾಗದಲ್ಲಿ ಶೇ 88 ರಷ್ಟು ಫಲಿತಾಂಶ ಬಂದಿದೆ. ಮೂವರು ಅತ್ಯುನ್ನತ ದರ್ಜೆಯಲ್ಲಿ, 22 ವಿದ್ಯಾರ್ಥಿಗಳು ಪ್ರಥಮ , 7 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ, ಇಬ್ಬರು  ಸಾಮಾನ್ಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಎಸ್.ನಾಗರಾಜು, ಕಾರ್ಯದರ್ಶಿ ಡಾ.ಎಸ್.ದತ್ತೇಶ್‌ಕುಮಾರ್ ಹಾಗೂ ಪ್ರಾಂಶುಪಾಲ  ಡಿ.ಕೃಷ್ಣೇಗೌಡ ಅಭಿನಂದಿಸಿದ್ದಾರೆ.

ಶೇ 100 ಫಲಿತಾಂಶ
ಹನೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ  ಪಟ್ಟಣದ ವಿವೇಕಾನಂದ ಪ್ರೌಢಶಾಲೆಗೆ ಶೇ 100 ಫಲಿತಾಂಶ ಬಂದಿದೆ. 21 ವಿದ್ಯಾರ್ಥಿಗಳು ಅತ್ಯುನ್ನತ ದರ್ಜೆ, 46 ವಿದ್ಯಾರ್ಥಿಗಳು ಪ್ರಥಮ ದರ್ಜೆ, 3 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾರೆ ಎಂದು  ಸಂಸ್ಥೆಯ ಅಧ್ಯಕ್ಷೆ  ಉಮಾ, ಕಾರ್ಯದರ್ಶಿ ಸುರೇಶ್‌ನಾಯ್ಡು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT