ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಿನ ಬವಣೆ ನೀಗುವ ನಿರೀಕ್ಷೆ

ಬಹುಗ್ರಾಮ ಕುಡಿಯುವ ನೀರಿನ ಯೋಜನೆ: ಪ್ರಾಯೋಗಿಕ ಪೂರೈಕೆಗೆ ಚಾಲನೆ
Last Updated 14 ಡಿಸೆಂಬರ್ 2017, 6:41 IST
ಅಕ್ಷರ ಗಾತ್ರ

ಸಂತೇಮರಹಳ್ಳಿ: ಬಹು ದಿನಗಳಿಂದ ನಿರೀಕ್ಷೆ ಇಟ್ಟುಕೊಂಡಿದ್ದ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಬಹುತೇಕ ಕಾಮಗಾರಿ ಮುಗಿದಿದ್ದು, ಗ್ರಾಮೀಣ ಭಾಗಗಳಿಗೆ ಕಬಿನಿ ನದಿಯಿಂದ ಕುಡಿಯುವ ನೀರು ಕೆಲವೇ ದಿನಗಳಲ್ಲಿ ಲಭ್ಯವಾಗಲಿದೆ.

ಪ್ರತಿ ಬೇಸಿಗೆಯಲ್ಲಿ ಚಾಮರಾಜನಗರ ತಾಲ್ಲೂಕಿನ ಬಹುತೇಕ ಗ್ರಾಮಗಳು ಕುಡಿಯುವ ನೀರಿಗಾಗಿ ಪರದಾಡುವ ಪರಿಸ್ಥಿತಿ ಉಂಟಾಗುತ್ತಿದ್ದು, ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಆ ಸಮಸ್ಯೆಯನ್ನು ನೀಗಿಸಲಿದೆ ಎನ್ನುವ ನಿರೀಕ್ಷೆಯಲ್ಲಿ ಈ ಭಾಗದ ಜನರಿದ್ದಾರೆ.

ಈಗಾಗಲೇ ಕಾವೇರಿ ನೀರು ಪಡೆದುಕೊಳ್ಳುತ್ತಿರುವ ಗ್ರಾಮಗಳು ಹಾಗೂ ಚಾಮರಾಜನಗರ ಪಟ್ಟಣ ಹೊರತುಪಡಿಸಿ ಚಾಮರಾಜನಗರ ತಾಲ್ಲೂಕಿನ 166 ಗ್ರಾಮಗಳು ಹಾಗೂ 232 ಜನ ವಸತಿ ಪ್ರದೇಶಗಳು ಕಬಿನಿ ನದಿಯಿಂದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಸೌಲಭ್ಯವನ್ನು ಪಡದುಕೊಳ್ಳಲಿವೆ.

₹292 ಕೋಟಿ ವೆಚ್ಚದಲ್ಲಿ ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಗೆ ಈಗಾಗಲೇ ಉಮ್ಮತ್ತೂರು ಹಾಗೂ ಜನ್ನೂರು ನಡುವೆ ಇರುವ ಬೆಟ್ಟದಲ್ಲಿ ಟ್ಯಾಂಕ್ ಗಳನ್ನು ನಿರ್ಮಿಸಿ ಕಬಿನಿ ನದಿಮೂಲದಿಂದ ನೀರು ಸಂಗ್ರಹಣ ಘಟಕ ಸ್ಥಾಪಿಸಲಾಗಿದೆ. ಕಳೆದ 3 ವರ್ಷದಿಂದ ಮೆಘಾವತ್ ಕಂಪನಿ ಈ ಯೋಜನೆಯ ನಿರ್ಮಾಣದ ಜವಾಬ್ದಾರಿಯನ್ನು ನಿರ್ವಹಿಸುತ್ತಿದೆ.

‘ಕಬಿನಿ ನದಿಯಿಂದ ತಾಯೂರು ಮಾರ್ಗವಾಗಿ 18 ಕಿಮೀ ದೂರದಿಂದ ನೀರು ಸಂಗ್ರಹಣ ಘಟಕಕ್ಕೆ ಪೈಪ್ ಲೈನ್ ಅಳವಡಿಸಿ ನೀರನ್ನು ಸಂಗ್ರಹಿಸಲಾಗುತ್ತಿದೆ. ಈ ಘಟಕದಲ್ಲಿ ನದಿ ನೀರನ್ನು ಶುದ್ಧೀಕರಿಸಿ, ಗ್ರಾಮಗಳಿಗೆ ನೀರನ್ನು ಸರಬರಾಜು ಮಾಡಲಾಗುತ್ತದೆ. ತಾಲ್ಲೂಕಿನ ಪ್ರತಿ ಗ್ರಾಮಗಳು ಹಾಗೂ ಜನವಸತಿ ಪ್ರದೇಶಗಳು ಸೇರಿದಂತೆ 480 ಕಿ.ಮೀ ವ್ಯಾಪ್ತಿಯಲ್ಲಿ ಪೈಪ್ ಲೈನ್ ಅಳವಡಿಸಲಾಗಿದೆ’ ಎಂದು ಕಾರ್ಯಪಾಲಕ ಎಂಜಿನಿಯರ್ ದೇವರಾಜು ತಿಳಿಸಿದರು.

‘ಪ್ರತಿ ಗ್ರಾಮಗಳಲ್ಲೂ ಪ್ರತ್ಯೇಕವಾಗಿ ಪೈಪ್ ಲೈನ್ ಮೂಲಕ ನಲ್ಲಿಗಳನ್ನು ಅಳವಡಿಸಲಾಗಿದ್ದು, ಓವರ್ ಹೆಡ್ ಟ್ಯಾಂಕ್ ಗಳಿಗೆ ಪ್ರಾಯೋಗಿಕವಾಗಿ ನೀರನ್ನು ತುಂಬಿಸಲಾಗುತ್ತಿದೆ. ನೀರು ತುಂಬಿಸಿದ ನಂತರ ಕುಂದು–ಕೊರತೆಗಳನ್ನು ಈ ಯೋಜನೆಯ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಮುಂದಿನ 5 ವರ್ಷಗಳ ವರೆಗೂ ಯೋಜನೆಯ ಕಾಮಗಾರಿ ನಿರ್ವಹಿ ಸುತ್ತಿರುವ ಕಂಪೆನಿ ಪ್ರತಿ ಗ್ರಾಮಗಳಿಗೆ ನೀರು ಸರಬರಾಜು ಮಾಡುವ ಜವಾಬ್ದಾರಿಯನ್ನು ಹೊತ್ತಿದೆ’ ಎಂದು ಅವರು ಮಾಹಿತಿ ನೀಡಿದರು.

‘ಕಾಮಗಾರಿ ಹಂತ ಮುಗಿದಿದ್ದು, ಪ್ರಾಯೋಗಿಕವಾಗಿ ನೀರು ಬಿಡಲಾಗಿದೆ. ಪೈಪ್ ಲೈನ್ ನಲ್ಲಿ ಕೆಲವು ಗ್ರಾಮಗಳಲ್ಲಿ ಸಣ್ಣ ಪುಟ್ಟ ತೊಂದರೆಗಳು ಉಂಟಾಗಿದೆ. ಇವುಗಳನ್ನು ಸರಿಪಡಿಸಲಾಗುತ್ತಿದೆ. ಮುಂದಿನ ತಿಂಗಳಲ್ಲಿ ಸಂಪೂರ್ಣವಾಗಿ ಕುಡಿಯುವ ನೀರಿಗೆ ಚಾಲನೆ ನೀಡಲಾಗುವುದು’ ಎಂದು ತಿಳಿಸಿದರು.

‘ಈಗಾಗಲೇ ಕಾಮಗಾರಿ ಹಂತ ಮುಗಿದಿದೆ. ಗ್ರಾಮಗಳ ಟ್ಯಾಂಕ್ ಗಳಿಗೆ ಪ್ರಾಯೋಗಿಕವಾಗಿ ನೀರು ಹರಿಸಲಾಗುತ್ತಿದೆ. ಜನವರಿ 10 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಲಿದ್ದು, ತಾಲ್ಲೂಕಿನಲ್ಲಿರುವ ಕುಡಿಯುವ ನೀರಿನ ಸಮಸ್ಯೆ ಬಗೆ ಹರಿಯಲಿದೆ’ ಎಂದು ಶಾಸಕ ಎಸ್. ಜಯಣ್ಣ ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT