ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಬಡಾವಣೆಗೆ ಚರಂಡಿಯೇ ಇಲ್ಲ

ಮೂಲ ಸೌಲಭ್ಯಗಳಿಲ್ಲದೇ ನರಳುತ್ತಿರುವ ಜನ್ನೂರು
Last Updated 16 ಮಾರ್ಚ್ 2016, 10:25 IST
ಅಕ್ಷರ ಗಾತ್ರ

ಸಂತೇಮರಹಳ್ಳಿ: ಸಮೀಪದ ಜನ್ನೂರು ಗ್ರಾಮದ ಹೊಸ ಬಡಾವಣೆಯಲ್ಲಿ ಚರಂಡಿ ವ್ಯವಸ್ಥೆ ಇಲ್ಲದ್ದರಿಂದ ನಿವಾಸಿಗಳು ತಮ್ಮ ಮನೆಗಳಿಂದ ಹೊರ ಹೋಗುವ ತ್ಯಾಜ್ಯ ನೀರನ್ನು ಮನೆಗಳ ಮುಂಭಾಗ ಹರಿ  ಬಿಡುವಂತಾಗಿದೆ. 

ಗ್ರಾಮದಲ್ಲಿ ಹೊಸ ಬಡಾವಣೆ ನಿರ್ಮಾಣಗೊಂಡು ಹಲವು ವರ್ಷಗಳು ಕಳೆದಿವೆ. ಆದರೆ, ನಿವಾಸಿಗಳ ಅನುಕೂಲಕ್ಕೆ ತಕ್ಕಂತೆ ಮನೆಗಳ ಮುಂಭಾಗ ಚರಂಡಿ ನಿರ್ಮಿಸಿಲ್ಲ. ಪರಿಣಾಮವಾಗಿ ಮನೆಗಳ ಮುಂಭಾಗ ಹರಿಯುವ ಕೊಳಚೆ ನೀರನ್ನು ನಿವಾಸಿಗಳು ತುಳಿದುಕೊಂಡು ತಿರುಗಾಡಬೇಕಾಗಿದೆ.

ಕೆಲವು ಮನೆಗಳ ಮುಂಭಾಗ ಕೊಳಚೆ ನೀರು ನಿಂತಲ್ಲಿಯೇ ನಿಂತಿರುವುದರಿಂದ ಸೊಳ್ಳೆ, ಕ್ರಿಮಿ ಕೀಟಗಳು ವಾಸಸ್ಥಾನ ಮಾಡಿಕೊಂಡಿವೆ. ಹೀಗಾಗಿ ನಿವಾಸಿಗಳು ರೋಗ ರುಜಿನಗಳ ಭೀತಿಯನ್ನು ಎದುರಿಸುವಂತಾಗಿದೆ. ಕೆಲವು ನಿವಾಸಿಗಳು ತಮ್ಮ ಮನೆಗಳ ಮುಂಭಾಗ ಗುಂಡಿ ತೆಗೆದು ಮನೆಗಳಿಂದ ಹೊರ ಬಿಡುವ ಕಲ್ಮಶ ನೀರನ್ನು ತುಂಬಿಸುತ್ತಿದ್ದಾರೆ.

ಬಡಾವಣೆಗೆ ಸಮರ್ಪಕ ಚರಂಡಿ ನಿರ್ಮಿಸಿ ನೀರು ಸರಾಗವಾಗಿ ಹರಿದು ಹೋಗುವಂತಹ ವ್ಯವಸ್ಥೆ ಕಲ್ಪಿಸಿ ಎಂಬ ಮನವಿಗೆ ಯಾರೂ ಗಮನಹರಿಸಿಲ್ಲ ಎಂಬುದು ಇಲ್ಲಿನ ನಿವಾಸಿಗಳ ದೂರು. ಗ್ರಾಮದ ಹಳೆ ಬಡಾವಣೆಯಲ್ಲಿ ಎಷ್ಟೋ ವರ್ಷಗಳ ಹಿಂದೆ ನಿರ್ಮಿಸಿರುವ ಚರಂಡಿ ದುರಸ್ತಿಗೊಂಡಿದೆ. ಈ ಚರಂಡಿಯಲ್ಲಿ ಹೂಳು ತೆಗೆಸಿಲ್ಲ.

ಪರಿಣಾಮವಾಗಿ ಚರಂಡಿಯಲ್ಲಿ ನಿಂತ ನೀರಿನ ಜೊತೆಗೆ ಕಸ ಕಡ್ಡಿಗಳು, ಪ್ಲಾಸ್ಟಿಕ್ ಬಾಟಲ್‌ಗಳು ತುಂಬಿಕೊಂಡಿವೆ. ಇದರಿಂದ ಚರಂಡಿಯಲ್ಲಿ ಸರಾಗವಾಗಿ ಹರಿಯಬೇಕಾಗಿರುವ ಕೊಳಚೆ ನೀರು ನಿಂತಲ್ಲಿಯೇ ನಿಲ್ಲುತ್ತಿದೆ. ಚರಂಡಿಯ ಸುತ್ತಲೂ ಕಳೆಗಿಡಗಳು ಬೆಳೆದಿವೆ. ಇದರಿಂದ ಬಡಾವಣೆಯಲ್ಲಿ ಅನೈರ್ಮಲ್ಯ ಉಂಟಾಗಿದೆ. ಚರಂಡಿ ಹೂಳು ತೆಗೆಸಿ ಬಡಾವಣೆ ಸ್ವಚ್ಛಗೊಳಿಸಿ ನೈರ್ಮಲ್ಯ ಕಾಪಾಡುವಲ್ಲಿ ಸಂಬಂಧಪಟ್ಟವರು ವಿಫಲರಾಗಿದ್ದಾರೆ ಎಂದು ಇಲ್ಲಿನ ನಿವಾಸಿಗಳು ಹೇಳುತ್ತಾರೆ.

ಗ್ರಾಮದ ಕೆಲವು ಬಡಾವಣೆಗಳಿಗೆ ಮಾತ್ರ ಸಿಮೆಂಟ್ ಕಾಂಕ್ರೀಟ್‌  ರಸ್ತೆ ನಿರ್ಮಿಸಲಾಗಿದೆ. ಉಳಿದ ಬಡಾವಣೆಗೆ ಈ ಸೌಲಭ್ಯವಿಲ್ಲ. ಮಳೆ ಬಂದಾಗ ರಸ್ತೆಗಳು ಕೆಸರುಗದ್ದೆಯಂತಾಗುತ್ತವೆ. ಜನ ಮತ್ತು ವಾಹನ ಸಂಚಾರಕ್ಕೆ ಅಡಚಣೆಯಾಗುತ್ತದೆ. ತಗ್ಗು ಪ್ರದೇಶಗಳಲ್ಲಿ ಮಳೆ ನೀರು ನಿಲ್ಲುವುದರಿಂದ ನಿವಾಸಿಗಳ ಗೋಳು ಹೇಳತೀರದಾಗಿದೆ.

ಬಡಾವಣೆಯ ಚರಂಡಿಗಳನ್ನು ಸ್ವಚ್ಛಗೊಳಿಸಿ ಹೊಸ ಬಡಾವಣೆಗಳಿಗೆ ಹೊಸದಾಗಿ ಚರಂಡಿ ನಿರ್ಮಿಸಬೇಕು ಎಂದು ನಿವಾಸಿಗಳಾದ ಮಹದೇವಸ್ವಾಮಿ ಹಾಗೂ ಮರಿಸ್ವಾಮಿ ಒತ್ತಾಯಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT