ಪರಿಸರಸ್ನೇಹಿ ಗಣಪನಿಗೆ ಬೇಡಿಕೆ ಹೆಚ್ಚಳ ನಿರೀಕ್ಷೆ

7
ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ (ಪಿಒಪಿ) ಗಣೇಶ ಮೂರ್ತಿ ನಿಷೇಧ ಮಾಡಿದ ಸರ್ಕಾರ

ಪರಿಸರಸ್ನೇಹಿ ಗಣಪನಿಗೆ ಬೇಡಿಕೆ ಹೆಚ್ಚಳ ನಿರೀಕ್ಷೆ

Published:
Updated:
Deccan Herald

ಚಾಮರಾಜನಗರ: ಗೌರಿ–ಗಣೇಶ ಹಬ್ಬಕ್ಕೆ ದಿನಗಣನೆ ಶುರುವಾಗಿದೆ. ಈ ಬಾರಿ ಹಬ್ಬವನ್ನು ಯಾವ ರೀತಿ ಆಚರಿಸಬೇಕು, ಯಾವೆಲ್ಲ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಸಂಘ ಸಂಸ್ಥೆಗಳು ಆಲೋಚಿಸಲು ಆರಂಭಿಸಿದ್ದರೆ, ಗಣಪನ ಮೂರ್ತಿ ತಯಾರಕರಲ್ಲಿ, ಮಾರಾಟಗಾರರಲ್ಲಿ ಒತ್ತಡ ಆರಂಭವಾಗಿದೆ.

ರಾಜ್ಯ ಸರ್ಕಾರ ಪ್ಲಾಸ್ಟರ್‌ ಆಫ್‌ ಪ್ಯಾರಿಸ್ (ಪಿಒಪಿ) ಗಣಪತಿ ಮೂರ್ತಿಗಳ ತಯಾರಿಕೆ ಮತ್ತು ಮಾರಾಟಕ್ಕೆ ನಿಷೇಧ ಹೇರಿರುವುದು ಇದಕ್ಕೆ ಕಾರಣ. ಪಿಒಪಿ ಗಣೇಶನ ಮೂರ್ತಿಯನ್ನು ತಯಾರಿಸಲು ರಾಸಾಯನಿಕಗಳನ್ನು ಹೆಚ್ಚಾಗಿ ಬಳಸುವುದರಿಂದ ಪರಿಸರ ಮಾಲಿನ್ಯ, ಅದರಲ್ಲೂ ಜಲಮಾಲಿನ್ಯ ಉಂಟಾಗುತ್ತದೆ ಎಂಬ ಕಾರಣದಿಂದ ಪಿಒಪಿಯಿಂದ ಮಾಡಿದ ಗಣೇಶನ ಮೂರ್ತಿಗಳ ತಯಾರಿಕೆ, ವಿತರಣೆ ಅಥವಾ ಮಾರಾಟವನ್ನು ನಿಷೇಧಿಸಲಾಗಿದೆ.

ಸರ್ಕಾರದ ನಿರ್ದೇಶನವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಜಿಲ್ಲಾಧಿಕಾರಿ ಅವರು ಈಗಾಗಲೇ ಅಧಿಕಾರಿಗಳಿಗೆ ಹಾಗೂ ಸ್ಥಳೀಯ ಸಂಸ್ಥೆಗಳಿಗೆ ಸೂಚಿಸಿದ್ದಾರೆ.

ಒಂದು ವೇಳೆ ಆದೇಶವನ್ನು ಜಾರಿಗೆ ತಂದದ್ದೇ ಆದರೆ, ಪರಿಸರಸ್ನೇಹಿ ಗಣೇಶ ವಿಗ್ರಹಗಳಿಗೆ ಈ ಬಾರಿ ಬೇಡಿಕೆ ಹೆಚ್ಚಾಗುವ ನಿರೀಕ್ಷೆ ಇದೆ. ತಯಾರಕರು ಹಾಗೂ ವ್ಯಾಪಾರಿಗಳು ಕೂಡ ಇದೇ ನಿರೀಕ್ಷೆಯಲ್ಲಿ ಇದ್ದಾರೆ. 

ಜೇಡಿಮಣ್ಣಿನ ಗಣಪ: ಪಿಒಪಿ ಗಣಪತಿ ಮೂರ್ತಿ ಸಂಪೂರ್ಣ ನಿಷೇಧವಾದರೆ ಕುಂಬಾರಿಕೆಗೆ ಹೆಚ್ಚಿನ ಉತ್ತೇಜನ ನೀಡಿದಂತೆ ಆಗುತ್ತದೆ ಎಂದು ಹೇಳುತ್ತಾರೆ ತಯಾರಕರು. ಪರಿಸರಸ್ನೇಹಿ ಗಣೇಶನ ಮೂರ್ತಿಗಳನ್ನು ಹೆಚ್ಚಾಗಿ ಜೇಡಿಮಣ್ಣಿನಿಂದ ತಯಾರಿಸಲಾಗುತ್ತದೆ. ಇದಕ್ಕೆ ಬಳಸುವ ಬಣ್ಣಗಳು ಕೂಡ ಪರಿಸರಸ್ನೇಹಿ ಆಗಿರುತ್ತವೆ. ಹೋಳಿ ಹಬ್ಬದ ಸಂದರ್ಭದಲ್ಲಿ ಬಳಸುವ ಬಣ್ಣಗಳನ್ನೇ ಹೆಚ್ಚಾಗಿ ಬಳಸಲಾಗುತ್ತದೆ.

‘25 ವರ್ಷಗಳಿಂದ ಗಣಪತಿ ಮೂರ್ತಿ ತಯಾರಿಸುತ್ತಿದ್ದೇವೆ. ಹಬ್ಬಕ್ಕೆ ಆರು ತಿಂಗಳು ಇರುವಾಗಲೇ ಮೂರ್ತಿ ತಯಾರಿಕೆ ಆರಂಭ ಮಾಡುತ್ತೇವೆ. ತಾಲ್ಲೂಕಿನ ಬಂಡಿಗೆರೆಯಿಂದ ಜೇಡಿಮಣ್ಣು ತಂದು ಸಂಗ್ರಹಿಸಿಡುತ್ತೇವೆ. ಈಗಾಗಲೇ 400ಕ್ಕೂ ಹೆಚ್ಚು ಗಣಪತಿ ಮೂರ್ತಿಗಳು ಸಿದ್ಧಗೊಂಡಿವೆ’ ಎಂದು ಅಮಚವಾಡಿ ಗ್ರಾಮದ ಸಿದ್ಧಶೆಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಒಂದು ಟ್ರ್ಯಾಕ್ಟರ್‌ ಜೇಡಿಮಣ್ಣಿಗೆ ₹2,000 ಬೆಲೆ ಇದೆ. ಮೂರ್ತಿ ತಯಾರಕರು, ಬಣ್ಣ ಲೇಪನ ಮಾಡುವವರು ಸೇರಿದಂತೆ ಒಟ್ಟು 8 ಮಂದಿಗೂ ಹೆಚ್ಚು ಕೂಲಿಯವರಿದ್ದಾರೆ. ತಯಾರಿಕೆ– ಮಾರಾಟಕ್ಕೆ ಒಪ್ಪಿಗೆ ನೀಡುವಂತೆ ನಗರಸಭೆಗೆ ಮನವಿ ನೀಡಿದ್ದೇನೆ. ಸ್ಥಳೀಯ ಆಡಳಿತ ಪಿಒಪಿ ಗಣಪತಿ ನಿಷೇಧಕ್ಕೆ ಸಂಪೂರ್ಣ ಕಡಿವಾಣ ಹಾಕಿದರೆ ಮಣ್ಣಿನ ಗಣಪತಿ ಮೂರ್ತಿಗೆ ಬೇಡಿಕೆ ಹೆಚ್ಚಲಿದೆ. ಇದರಿಂದ ನಮ್ಮ ಕಸುಬಿಗೆ ಉತ್ತೇಜನ ದೊರೆಯಲಿದೆ’ ಎಂದು ಅವರು ಹೇಳಿದರು.

ನಗರಸಭೆಯ ಅಧಿಕಾರಿಗಳು ಇತ್ತೀಚೆಗೆ ಸಿದ್ಧಶೆಟ್ಟಿ ಅವರ ಮನೆಗೆ ಭೇಟಿ ನೀಡಿ, ತಯಾರಿಕೆ ವಿಧಾನವನ್ನು ಪರಿಶೀಲಿಸಿದ್ದಾರೆ. ಯಾವುದೇ ಕಾರಣಕ್ಕೂ ಪಿಒಪಿಯಿಂದ ವಿಗ್ರಹ ತಯಾರಿಸದಂತೆ ಸೂಚಿಸಿದ್ದಾರೆ.

‌ಅರ್ಧ ಅಡಿಯಿಂದ 5 ಅಡಿ ಎತ್ತರದ ಮೂರ್ತಿಗಳನ್ನು ತಯಾರಿಸಲಾಗುತ್ತದೆ. ಸುಮಾರು ₹30ರಿಂದ ₹3,000ವರೆಗೂ ದರ ನಿಗದಿಯಾಗಿದೆ. ಕೂಲಿ, ಬಾಡಿಗೆಗೇ ಹೆಚ್ಚು ಖರ್ಚಾಗುತ್ತದೆ ಎಂದು ಹೇಳುತ್ತಾರೆ ತಯಾರಕರು.

‘10 ವರ್ಷಗಳಿಂದ ನಾವು ಗಣೇಶ ಮೂರ್ತಿ ತಯಾರಿಕೆ ಹಾಗೂ ಮಾರಾಟದಲ್ಲಿ ತೊಡಗಿದ್ದೇವೆ. ಸಾರ್ವಜನಿಕರು ಹಬ್ಬದ ದಿನ ಪರಿಸರಸ್ನೇಹಿ ಮಣ್ಣಿನ ಗಣಪತಿ ಮೂರ್ತಿಯನ್ನೇ ಪ್ರತಿಷ್ಠಾಪನೆ ಮಾಡಬೇಕು. ಇದರಿಂದ ಮಣ್ಣಿನ ಗಣೇಶ ಮೂರ್ತಿಗಳನ್ನು ತಯಾರಿಸುವವರಿಗೆ ಅನುಕೂಲವಾಗಲಿದೆ’ ಎಂದು ಅಮಚವಾಡಿ ಗ್ರಾಮದ ಮತ್ತೊಬ್ಬ ಮೂರ್ತಿ ತಯಾರಕ ಪಿ.ಮಹದೇವಸ್ವಾಮಿ ಹೇಳಿದರು.

6 ವರ್ಷ ಜೈಲು, ₹10 ಸಾವಿರ ದಂಡ

ರಾಜ್ಯದಲ್ಲಿ ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ ಗಣೇಶ ಮೂರ್ತಿಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ಪಿಒಪಿ ಗಣೇಶ ಮೂರ್ತಿ ತಯಾರಿಸುವುದು ಅಥವಾ ಮಾರಾಟ ಮಾಡುವುದು ಕಂಡುಬಂದರೆ ಕನಿಷ್ಠ ಒಂದೂವರೆ ವರ್ಷದಿಂದ ಗರಿಷ್ಠ 6 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಜೊತೆಗೆ ₹10 ಸಾವಿರದವರೆಗೆ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !