ಶ್ರಾವಣ ಮಾಸದಲ್ಲಿ ಬೆಲೆ ಏರುವ ನಿರೀಕ್ಷೆ

7
ಮಾರುಕಟ್ಟೆಗೆ ಲಗ್ಗೆ ಇಟ್ಟ ಶಿಮ್ಲಾ ಸೇಬು, ದ್ರಾಕ್ಷಿ; ಫಾರಂ ಕೋಳಿ ಮೊಟ್ಟೆಗೆ ಬೇಡಿಕೆ

ಶ್ರಾವಣ ಮಾಸದಲ್ಲಿ ಬೆಲೆ ಏರುವ ನಿರೀಕ್ಷೆ

Published:
Updated:

ಚಾಮರಾಜನಗರ: ಶ್ರಾವಣ ಮಾಸ ಆರಂಭವಾಗುತ್ತಿದಂತೆಯೇ ಮಾರುಕಟ್ಟೆಯಲ್ಲಿ ಚಟುವಟಿಕೆಗಳು ಗರಿಗೆದರಿವೆ. ತರಕಾರಿ, ಹೂವು, ಹಣ್ಣುಗಳಿಗೆ ಬೇಡಿಕೆ ಬರುವ ನಿರೀಕ್ಷೆಯಲ್ಲಿ ವ್ಯಾಪಾರಿಗಳಿದ್ದಾರೆ. ಕೆಲವು ವಾರಗಳಿಂದೀಚೆಗೆ ಕೆಳಮಟ್ಟದಲ್ಲಿದ್ದ ಬೆಲೆ ಇನ್ನು ಏರುವ ಸಾಧ್ಯತೆ ಇದೆ.

ಆದರೆ, ವಾರದ ಆರಂಭದಲ್ಲಿ ಬೆಲೆಯಲ್ಲಿ ಹೆಚ್ಚಿನ ಬದಲಾವಣೆ ಕಂಡು ಬಂದಿಲ್ಲ. ಕೆಲವು ತರಕಾರಿ, ಹಣ್ಣುಗಳ ಧಾರಣೆಯಲ್ಲಿ ಏರಿಳಿತವಾಗಿದೆ. ಸದ್ಯ ಹೂವುಗಳ ದರವೂ ಕೈಗೆಟುಕುವಂತಿದೆ. 

ಹೂವುಗಳ ಬೇಡಿಕೆಗೆ ಅನುಗುಣವಾಗಿ ಬೆಲೆ ನಿಗದಿಯಾಗುತ್ತದೆ ಎಂದು ಹೇಳುತ್ತಾರೆ ವ್ಯಾಪಾರಿಗಳು. ಗುರುವಾರ ಮತ್ತು ಶುಕ್ರವಾರಗಳಂದು ಹೆಚ್ಚಿನ ಬೇಡಿಕೆ ಇರುವುದರಿಂದ ಅವುಗಳ ಬೆಲೆಯಲ್ಲಿ ಏರಿಳಿತವಾಗುತ್ತಿದೆ.

ಕಳೆದ ವಾರದ ಕೊನೆಯಲ್ಲಿ ಭೀಮನ ಅಮಾವಾಸ್ಯೆ ಇದ್ದುದರಿಂದ ಹೂವುಗಳಿಗೆ ಬೇಡಿಕೆ ಇತ್ತು ಎಂದು ಹೇಳುತ್ತಾರೆ ವ್ಯಾಪಾರಿಗಳು.

ಟೊಮೆಟೊ ಯಾರಿಗೂ ಬೇಡ: ತರಕಾರಿಗಳ ಪೈಕಿ ಟೊಮೆಟೊ ಕುಸಿತದ ಹಾದಿಯಿಂದ ಹೊರ ಬಂದಿಲ್ಲ. ಕಳೆದ ವಾರ ಚಿಲ್ಲರೆ ಮಾರುಕಟ್ಟೆಯಲ್ಲಿ ಇದ್ದಂತಹ ದರ ಈ ವಾರವೂ ಮುಂದುವರಿದಿದೆ. ₹5ಗೆ ಕೆಜಿ ಟೊಮೆಟೊ ಸಿಗುತ್ತಿದೆ.

ಕ್ಯಾರೆಟ್‌ನ ಮತ್ತೆ ₹10 ತುಟ್ಟಿ ಆಗಿದೆ. ಹೋದ ವಾರ ಕ್ಯಾರೆಟ್‌ನ ಬೆಲೆ ₹30 ಇತ್ತು. ಸೋಮವಾರ ₹40 ಆಗಿದೆ. ಉಳಿದ ತರಕಾರಿಗಳ ದರದಲ್ಲೂ ಏರಿಳಿತ ಕಂಡು ಬಂದಿದೆ.  

ಶಿಮ್ಲಾ ಸೇಬು ಆಗಮನ: ಬಹು ನಿರೀಕ್ಷಿತ ಶಿಮ್ಲಾ ಸೇಬು ಈ ವಾರ ಮಾರುಕಟ್ಟೆ ಪ್ರವೇಶಿಸಿದೆ. ಕೆಜಿಗೆ ₹100 ರಿಂದ ₹120ಕ್ಕೆ ಮಾರಾಟವಾಗುತ್ತಿದೆ.

‘ಸೀಸನ್‌ ಆರಂಭದಲ್ಲಿ ಕಾಯಿ ಸೇಬುಗಳು ಬರುತ್ತವೆ. ಹಾಗಾಗಿ ಹಸಿರು ಬಣ್ಣದಲ್ಲಿ ಇರುತ್ತದೆ. ಸ್ವಲ್ಪ ದಿನಗಳ ನಂತರ ಕೆಂಪು ಹಳದಿ ಬಣ್ಣಕ್ಕೆ ತಿರುಗಿದ, ಹಣ್ಣಾದ ಸೇಬು ಲಭ್ಯವಾಗುತ್ತದೆ. ಇದಕ್ಕೆ ಬೇಡಿಕೆ ಇರುತ್ತದೆ’ ಎಂದು ಹೇಳುತ್ತಾರೆ ಹಣ್ಣುಗಳ ವ್ಯಾಪಾರಿ ಮಹೇಶ್.

ಈ ವಾರ ಬಿಳಿ ಹಾಗೂ ಕಪ್ಪು ದ್ರಾಕ್ಷಿ ಮತ್ತೆ ಮಾರುಕಟ್ಟೆ ಪ್ರವೇಶಿಸಿದೆ. ಬಿಳಿ ದ್ರಾಕ್ಷಿ ₹100, ಕಪ್ಪು ದ್ರಾಕ್ಷಿ ₹80ಕ್ಕೆ ಮಾರಾಟವಾಗುತ್ತಿದೆ.

ಮಾವು ತುಟ್ಟಿ: ಆರಂಭದಿಂದಲೂ ಅಗ್ಗವಾಗಿದ್ದ ಮಾವಿನ ಹಣ್ಣು, ಸೀಸನ್‌ ಅಂತ್ಯಕ್ಕೆ ತುಟ್ಟಿಯಾಗಿದೆ. ಮಾರುಕಟ್ಟೆಯಲ್ಲಿ ನೀಲಂ ಮಾತ್ರ ಲಭ್ಯವಿದ್ದು ₹70ರಿಂದ ₹80ಗೆ ಮಾರಾಟವಾಗುತ್ತಿದೆ. ಕಿತ್ತಳೆ, ಸೀಬೆ ಕಾಯಿ, ಸೀತಾಫಲ, ಮೂಸಂಬಿ, ಅನನಾಸು ಹಾಗೂ ಬೇರಿಕಾಯಿಗಳ ದರ ಯಥಾಸ್ಥಿತಿ ಮುಂದುವರಿದಿದೆ.

ಫಾರಂ ಕೋಳಿ ಮೊಟ್ಟೆಗೆ ಬೇಡಿಕೆ: ಜಿಲ್ಲೆಯಲ್ಲಿ ಫಾರಂ ಕೋಳಿ ಮೊಟ್ಟೆಗಳಿಗೆ ಹೆಚ್ಚು ಬೇಡಿಕೆ ಇದೆ. ಮಾರುಕಟ್ಟೆಯಲ್ಲಿ 100 ಮೊಟ್ಟೆಗೆ ₹480 ಬೆಲೆ ಇದೆ. 

‘ಪ್ರತಿ 3 ದಿನಗಳಿಗೊಮ್ಮೆ ಮೊಟ್ಟೆ ದರ ಏರಿಳಿತವಾಗುತ್ತದೆ. ಮೈಸೂರಿನ ವ್ಯಾಪಾರಿಗಳು ನಮ್ಮ ಮಳಿಗೆಗೆ ನೇರವಾಗಿ ಮೊಟ್ಟೆಗಳನ್ನು ಪೂರೈಸುತ್ತಾರೆ’ ಎಂದು ಹೇಳುತ್ತಾರೆ ವ್ಯಾಪಾರಿ ರೆಹಮಾನ್‌.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !