27ರಂದು ಸಂಕಲ್ಪ ಸಭೆ: ಬಲಿಜ ಮುಖಂಡರ ಪೂರ್ವಭಾವಿ ಸಭೆ

ಚಿಕ್ಕಬಳ್ಳಾಪುರ: ‘2ಎ’ ಮೀಸಲಾತಿ ಕಲ್ಪಿಸುವಂತೆ ಆಗ್ರಹಿಸಿ ಜ.27ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ‘ಬಲಿಜ ಸಂಕಲ್ಪ ಸಭೆ’ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಶನಿವಾರ ನಗರದಲ್ಲಿ ಬಲಿಜ ಸಮುದಾಯದ ಮುಖಂಡ ಸಭೆ ನಡೆಯಿತು.
‘2ಎ’ ಮೀಸಲಾತಿ ವಿಚಾರದಲ್ಲಿ ಸಮುದಾಯವು ಒಗ್ಗಟ್ಟು ಪ್ರದರ್ಶಿಸಬೇಕು ಎಂದು ಸಭೆಯಲ್ಲಿ ತೀರ್ಮಾನಿಸಿದ ಮುಖಂಡರು, ಬಲಿಜ ಸಮುದಾಯಕ್ಕೆ ಸೋಲಿಸುವ ಮತ್ತು ಗೆಲ್ಲಿಸುವ ಶಕ್ತಿ ಇದೆ ಎಂದು ಸಂದೇಶ ರವಾನಿಸಿದರು.
ಕರ್ನಾಟಕ ಬಲಿಜ ಸಂಘ ಕಾರ್ಯದರ್ಶಿ ಜಗದೀಶ್ ಮಾತನಾಡಿ, ‘ಬಲಿಜ ಸಮುದಾಯಕ್ಕೆ ಆಗಿರುವ ಅನ್ಯಾಯವನ್ನು ಸರ್ಕಾರ ಸರಿಪಡಿಸಬೇಕು. ಸಮುದಾಯ ತ್ಯಾಗಕ್ಕೆ ಹೆಸರುವಾಸಿ. ಪ್ರಾಣವನ್ನು ಅರ್ಪಿಸಿ ದೇಶ ರಕ್ಷಿಸಿರುವ ಸಮುದಾಯ ನಮ್ಮದು. ಈಗ ನಾವು ಇನ್ನೊಬ್ಬರ ಮುಂದೆ ಬೇಡಬೇಕಾದ ಸ್ಥಿತಿ ಎದುರಾಗಿದೆ. ಇಂತಹ ಸಮಯದಲ್ಲಿ ಕ್ರಾಂತಿಕಾರಕ ನಿರ್ಧಾರ ತೆಗೆದುಕೊಳ್ಳಬೇಕು’ ಎಂದರು.
‘ಸಣ್ಣ ಪುಟ್ಟ ಸಮುದಾಯಗಳೇ ಒಮ್ಮತದಿಂದ ನಡೆಯುತ್ತಿವೆ. ನಾವು ಪ್ರಶ್ನೆ ಮಾಡುವ ಮನೋಭಾವವನ್ನು ಕಳೆದುಕೊಂಡಿದ್ದೇವೆ. ನಾವು ಯಾವುದೇ ಕಾರಣಕ್ಕೂ ರಾಜೀ ಆಗಬಾರದು. ಹೋರಾಟದ ಹಾದಿಯಲ್ಲಿ ಬಲಿಜ ಸಮುದಾಯ ನಡೆಯಬೇಕು’ ಎಂದು ಹೇಳಿದರು.
‘ರಾಜ್ಯದ ಕೆಲವು ವಿಧಾನಸಭಾ ಕ್ಷೇತ್ರಗಳಲ್ಲಿ ಸಮುದಾಯ ನಿರ್ಣಾಯಕವಾಗಿದೆ. ಚಿಕ್ಕಬಳ್ಳಾಪುರ, ಬಾಗೇಪಲ್ಲಿ ಕ್ಷೇತ್ರದಲ್ಲಿ ಬಲಿಜ ಸಮುದಾಯ ಮನಸ್ಸು ಮಾಡಿದರೆ ಯಾರನ್ನು ಬೇಕಾದರೂ ಸೋಲಿಸಬಹುದು, ಗೆಲ್ಲಿಸಬಹುದು. ನಮ್ಮಲ್ಲಿ ಒಮ್ಮತ ಮತ್ತು ನಾಯಕತ್ವದ ಕೊರತೆ ಇದೆ. ಸರ್ಕಾರಕ್ಕೆ ಎಚ್ಚರಿಕೆ ಕೊಡಬೇಕು ಎಂದರೆ ಸಂಕಲ್ಪ ಸಭೆಯ ವೇದಿಕೆಯಲ್ಲಿ ನಿರ್ಣಯಕೈಗೊಳ್ಳಬೇಕು’ ಎಂದರು.
ಬಿಎಂಟಿಸಿ ಉಪಾಧ್ಯಕ್ಷ ಕೆ.ವಿ.ನವೀನ್ ಕಿರಣ್ ಮಾತನಾಡಿ, ‘ನಾವು ಆರು ತಿಂಗಳ ಮುನ್ನ ಹೋರಾಟ ಆರಂಭಿಸಿದ್ದರೆ ಈ ಸರ್ಕಾರ ಇರುವಾಗಲೇ ಸೌಲಭ್ಯ ಪಡೆಯುವ ಅವಕಾಶವಿತ್ತೇನೊ. ಇದು ಮಾಡು ಇಲ್ಲವೆ ಮಡಿ ಎನ್ನುವ ಸಂದರ್ಭ’ ಎಂದು ಹೇಳಿದರು.
‘ನಮಗೆ ವಯಸ್ಸಾಯಿತು. ನಮ್ಮ ಮಕ್ಕಳಿಗೆ, ಅವರ ಸಂತತಿಗೆ ‘2ಎ’ ಮೀಸಲಾತಿ ಸೌಲಭ್ಯ ಬೇಕು ಎನ್ನುವುದು ನಮ್ಮೆಲ್ಲರ ಒಗ್ಗಟ್ಟಿನ ಕೂಗು ಆಗಬೇಕು. ಈ ಹಿಂದೆ ನಮ್ಮಲ್ಲಿ ಐಪಿಎಸ್, ಐಎಎಸ್ ಅಧಿಕಾರಿಗಳು ಇರುತ್ತಿದ್ದರು. ಆದರೆ 1994ರ ನಂತರ ಸಮಯದಾಯದ ಒಬ್ಬರೂ ಐಎಎಸ್ ಅಧಿಕಾರಿ ಆಗಿಲ್ಲ. ಜನಾಂಗಕ್ಕೆ ಸರ್ಕಾರಿ ನೌಕರಿ ತಲುಪುತ್ತಿಲ್ಲ. ಇದನ್ನು ಎಲ್ಲರೂ ಅರಿತುಕೊಳ್ಳಬೇಕು’ ಎಂದರು.
ನಾವು ಯಾರೂ ಈ ಜಾತಿಯಲ್ಲಿ ಹುಟ್ಟಬೇಕು ಎಂದು ಅರ್ಜಿ ಹಾಕಿಲ್ಲ. ಆದರೆ ಹುಟ್ಟಿರುವ ಜಾತಿಗೆ ಏನು ಮಾಡಿದ್ದೇವೆ ಎನ್ನುವುದು ಮುಖ್ಯ. ಸಮುದಾಯಕ್ಕೆ ನಾನು ಇಂತಹ ಸೇವೆ ಮಾಡಿದ್ದೇನೆ ಎನ್ನುವ ತೃಪ್ತಿ ಎಲ್ಲರಿಗೂ ಬರಬೇಕು. ಇಲ್ಲಿ ಯಾರಿಗೂ ವೈಯಕ್ತಿಕ ಹಿತಾಸಕ್ತಿ ಇಲ್ಲ. ಇದು ಜನಾಂಗದ ಪರ ಆಸಕ್ತಿ. ಸರ್ಕಾರಕ್ಕೆ ನಮ್ಮ ಕೂಗು ಕೇಳಿಸಬೇಕು ಎಂದು ಹೇಳಿದರು.
1994ರಲ್ಲಿ ವೀರಪ್ಪ ಮೊಯಿಲಿ ಅವರು ‘2ಎ’ನಿಂದ ಸಮುದಾಯವನ್ನು ತೆಗೆದಾಗ ಸಮುದಾಯದ ಯಾರಾದರೂ ನ್ಯಾಯಾಲಯಕ್ಕೆ ಹೋಗಿದ್ದರೆ ಇಂದು ನಮಗೆ ಹೋರಾಟದ ಸ್ಥಿತಿ ಬರುತ್ತಿರಲಿಲ್ಲ. ಜ.27ರ ಸಮ್ಮೇಳನಕ್ಕೆ ಚಿಕ್ಕಬಳ್ಳಾಪುರದಿಂದ ದೊಡ್ಡ ಸಂಖ್ಯೆಯಲ್ಲಿ ಸಮುದಾಯದವರು ಭಾಗಿಯಾಗೋಣ. ಇಲ್ಲಿ ಬಂದಿರುವ ಒಬ್ಬ ಮುಖಂಡರು 10 ಜನರನ್ನು ಕರೆದುಕೊಂಡು ಹೋಗಬೇಕು’ ಎಂದು ಸಲಹೆ ನೀಡಿದರು.
ಬಲಿಜ ಸಂಘದ ಅಧ್ಯಕ್ಷ ಪೆರಿಕಲ್ ಸಿದ್ದಣ್ಣ, ಮಂಜುನಾಥ್, ಬಲಿಜ ಸಂಘದ ಸದಸ್ಯ ದಿವಾಕರ್, ಚನ್ನಕೃಷ್ಣಪ್ಪ, ಮೂರ್ತಿ, ಅಂಬರೀಷ್, ಎಸ್.ವಿ.ಶ್ರೀನಿವಾಸ್, ದಯಾನಂದ್, ಉಪೇಂದ್ರ, ಗೋಪಾಲ ಕೃಷ್ಣ, ಡಾಂಬು ಶ್ರೀನಿವಾಸ್, ಲೀಲಾವತಿ ಶ್ರೀನಿವಾಸ್ ಇತರರು ಹಾಜರಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.