ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ 23,313 ಅನಧಿಕೃತ ಆಸ್ತಿಗಳು ಬಿ.ಖಾತೆಗೆ

Published 28 ಮಾರ್ಚ್ 2024, 6:54 IST
Last Updated 28 ಮಾರ್ಚ್ 2024, 6:54 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ರಾಜ್ಯ ಸರ್ಕಾರ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಅನಧಿಕೃತ ಬಡಾವಣೆ ಹಾಗೂ ನಕ್ಷೆ ಇಲ್ಲದೆ ನಿರ್ಮಿಸಿದ ಕಟ್ಟಡಗಳಿಗೆ ಬಿ. ಖಾತೆ ನೀಡಲು ನಿರ್ಧರಿಸಿದೆ. ಜಿಲ್ಲೆಯಲ್ಲಿ 23,313 ಅನಧಿಕೃತ ಆಸ್ತಿಗಳು ಈಗ ಬಿ.ಖಾತೆಗೆ ಎದುರು ನೋಡುತ್ತಿವೆ.

ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರ ನಗರಸಭೆ ವ್ಯಾಪ್ತಿಯಲ್ಲಿಯೇ ಅನಧಿಕೃತ ಸ್ವತ್ತುಗಳ ಸಂಖ್ಯೆ ಹೆಚ್ಚಾಗಿದೆ. ಇಲ್ಲಿನ ನಗರಸಭೆ ವ್ಯಾಪ್ತಿಯಲ್ಲಿ 8,567 ಸ್ವತ್ತುಗಳು ಖಾತೆ ಹೊಂದಿಲ್ಲ. ಇವು ಬಿ.ಖಾತೆಗೆ ಒಳಪಡಲಿವೆ. ಹೀಗೆ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ಪೈಕಿ ಚಿಕ್ಕಬಳ್ಳಾಪುರದಲ್ಲಿಯೇ ಗರಿಷ್ಠ ಸಂಖ್ಯೆಯಲ್ಲಿ ಅನಧಿಕೃತ ಸ್ವತ್ತುಗಳು ಇವೆ. 

ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿರುವ ಅನಧಿಕೃತ ಸ್ವತ್ತುಗಳಿಂದ ತೆರಿಗೆ ಸಂಗ್ರಹಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಕಂದಾಯ ಭೂಮಿಯಲ್ಲಿ ಅನಧಿಕೃತವಾಗಿ ತಲೆ ಎತ್ತಿರುವ ಕಟ್ಟಡ ಹಾಗೂ ಬಡಾವಣೆಗಳಿಗೆ ಬಿ.ಖಾತೆ ನೀಡಲು ನಿರ್ಧರಿಸಿದೆ. 

ಅನಧಿಕೃತವಾಗಿರುವ ಸ್ವತ್ತುಗಳಿಗೆ ನಗರಸಭೆಯಿಂದ ಮೂಲ ಸೌಕರ್ಯ ಕಲ್ಪಿಸಲಾಗುತ್ತಿದೆ. ಆದರೆ ತೆರಿಗೆ ಪಾವತಿಯಿಲ್ಲದ ಕಾರಣ ಸರ್ಕಾರದ ಬೊಕ್ಕಸಕ್ಕೆ ಆರ್ಥಿಕ ನಷ್ಟವಾಗುತ್ತಿದೆ.

ಚಿಕ್ಕಬಳ್ಳಾಪುರದ ನಂತರ ಶಿಡ್ಲಘಟ್ಟ ನಗರಸಭೆ ವ್ಯಾಪ್ತಿಯಲ್ಲಿ 5,607 ಅನಧಿಕೃತ ಸ್ವತ್ತುಗಳು ಬಿ.ಖಾತೆಗೆ ಎದುರು ನೋಡುತ್ತಿವೆ. ಮೂರನೇ ಸ್ಥಾನದಲ್ಲಿ ಗೌರಿಬಿದನೂರು ನಗರಸಭೆ ವ್ಯಾಪ್ತಿಯಲ್ಲಿ 4,818 ಸ್ವತ್ತುಗಳು ಬಿ.ಖಾತೆಗೆ ಎದುರು ನೋಡುತ್ತಿವೆ. 

ಖಾತೆ ದೊರೆಯದೆ ಹಲವು ವರ್ಷಗಳಿಂದ ಅನಧಿಕೃತವಾಗಿಯೆ ಉಳಿದಿರುವ ಆಸ್ತಿ ಮಾಲೀಕರಿಗೆ ಈಗ ತಮ್ಮ ಸ್ವತ್ತುಗಳಿಗೆ ಕನಿಷ್ಠ ಬಿ.ಖಾತೆ ಆದರೂ ಸಿಗಲಿದೆ ಎನ್ನುವ ಸಂತಸವಿದೆ. ಮತ್ತೊಂದು ಕಡೆ ಹಲವು ವರ್ಷಗಳಿಂದ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿದ್ದರೂ ತೆರಿಗೆ ಸಂಗ್ರಹವಾಗದೆ ಕುಡಿಯುವ ನೀರು, ಚರಂಡಿ, ಒಳಚರಂಡಿ, ಬೀದಿ ದೀಪಗಳು ಮತ್ತಿತರ ಮೂಲ ಸೌಕರ್ಯವನ್ನು ಉಚಿತವಾಗಿ ನೀಡುತ್ತಿರುವ ನಗರ ಸ್ಥಳೀಯ ಸಂಸ್ಥೆಗಳಿಗೆ ಬಿ.ಖಾತೆ ಬಳಿಕ ತೆರಿಗೆ ಸಂಗ್ರಹಕ್ಕೆ ರಹದಾರಿ ಆಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT