ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ | 11 ಗ್ರಾಮಗಳಲ್ಲಿ ನೀರು ಕುಡಿಯಲು ಯೋಗ್ಯವಲ್ಲ: ಜಿಲ್ಲಾಧಿಕಾರಿ

ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆಯಲ್ಲಿ ಜಿಲ್ಲಾಧಿಕಾರಿ
Published 2 ಮೇ 2024, 15:37 IST
Last Updated 2 ಮೇ 2024, 15:37 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಜಿಲ್ಲೆಯಾದ್ಯಂತ ಕುಡಿಯುವ ನೀರಿನ ಪರೀಕ್ಷೆಯನ್ನು ನಿರಂತರ ಮಾಡಲಾಗುತ್ತಿದೆ. ಜಿಲ್ಲೆಯ 11 ಗ್ರಾಮಗಳ ಟ್ಯಾಂಕ್‌ ನೀರು ಕುಡಿಯಲು ಯೋಗ್ಯವಲ್ಲ ಎಂದು ಪರೀಕ್ಷೆಯಿಂದ ಸಾಬೀತು ಆಗಿದೆ. ಈ ಹಿನ್ನೆಲೆಯಲ್ಲಿ ಟ್ಯಾಂಕ್‌ ಸ್ವಚ್ಛಗೊಳಿಸಲು ಅಗತ್ಯ ಕ್ರಮಕೈಗೊಳ್ಳಲಾಗಿದೆ  ಎಂದು ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಹೇಳಿದರು.

ಗುರುವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

ಮುಂದಿನ ದಿನಗಳಲ್ಲಿ ನಿಯಮಿತವಾಗಿ ನೀರು ಪರೀಕ್ಷೆ ಮಾಡುವ ಪ್ರಕ್ರಿಯೆಯನ್ನು ಮತ್ತಷ್ಟು ಚುರುಕುಗೊಳ್ಳಿಸಬೇಕು. ನೀರಿನ ಟ್ಯಾಂಕ್‌ಗಳು, ನೀರಿನ ಸಂಗ್ರಹ ತಾಣ, ಸಂಪುಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು ಸೂಚಿಸಿದರು.

ಕಾಲರಾ ರೋಗವು ಅಶುದ್ದ ನೀರಿನ ಸೇವನೆಯಿಂದ ಕಾಣಿಸಿಕೊಳ್ಳಲಿದೆ. ಡೆಂಗಿ, ಇತರ ಕೀಟ ಜನ್ಯ ರೋಗಗಳು ಸೊಳ್ಳೆಯಿಂದ ಹರಡುವುದರಿಂದ ಜನರು ಸ್ವಚ್ಛತೆ ಆದ್ಯತೆ ನೀಡಿ ಸೊಳ್ಳೆಗಳ ಉತ್ಪತ್ತಿ ತಮ್ಮ ಮನೆಗಳ ಸುತ್ತಮುತ್ತ ತಡೆಗಟ್ಟಬೇಕು. ಚರಂಡಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ನೀರು ಪೂರೈಕೆ ಪೈಪ್‌ಲೈನ್ ಗಳು ಒಡೆದುಹೋಗದಂತೆ ನೀಡಿಕೊಳ್ಳಬೇಕು. ದುರಸ್ಥಿ ಕಾರ್ಯಗಳನ್ನು ತುರ್ತಾಗಿ ಕೈಗೊಳ್ಳಬೇಕು. ಈ ಕುರಿತು ಸ್ಥಳೀಯ ಮಟ್ಟದ ಅಧಿಕಾರಿಗಳು ನಿಗಾವಹಿಸಬೇಕು ಎಂದು ನಿರ್ದೇಶಿಸಿದರು.

ಜಿಲ್ಲೆಯ 45 ಗ್ರಾಮ, 17 ವಾರ್ಡ್‌ಗಳಲ್ಲಿ ಪ್ರಸ್ತುತ ಕುಡಿಯುವ ನೀರಿನ ಸಮಸ್ಯೆ ಇದೆ. ಖಾಸಗಿ ಕೊಳವೆ ಬಾವಿಗಳ ಮೂಲಕ ನೀರು ಪೂರೈಸಲಾಗುತ್ತಿದೆ. ಮುಂದಿನ ದಿನಗಳಲ್ಲಿ 144 ಗ್ರಾಮ ಮತ್ತು 24 ವಾರ್ಡ್‌ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಬವ ಆಗಬಹುದು. ಇದನ್ನು ಗಮನದಲ್ಲಿ ಇಟ್ಟುಕೊಂಡು ನೀರಿನ ಪೂರೈಕೆಗೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು ಎಂದು ತಿಳಿಸಿದರು.

ಜಿಲ್ಲೆಯಲ್ಲಿರುವ 44 ನೀರಿನ ಟ್ಯಾಂಕರ್ ವಾಹನಗಳ ಮಾಲಿಕರಿಗೆ ಮಾಹಿತಿ ನೀಡಿ, ಯಾವುದೇ ಕ್ಷಣದಲ್ಲಿ ತಮ್ಮ ವಾಹನವನ್ನು ಕುಡಿಯುವ ನೀರಿನ ಉದ್ದೇಶಕ್ಕಾಗಿ ಜಿಲ್ಲಾಡಳಿತ ಅಧೀನಕ್ಕೆ ಪಡೆಯಬಹುದು ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್ ಜಿ.ಟಿ. ನಿಟ್ಟಾಲಿ, ಅಪರ ಜಿಲ್ಲಾಧಿಕಾರಿ ಎನ್. ತಿಪ್ಪೇಸ್ವಾಮಿ, ಉಪವಿಭಾಗಾಧಿಕಾರಿ ಡಿ.ಎಚ್. ಅಶ್ವಿನ್ ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು.

Cut-off box - ಅಧಿಕ ತಾಪಮಾನ; ಮುನ್ನಚ್ಚರಿಕೆ ಕ್ರಮಕ್ಕೆ ಸೂಚನೆ  ಅಧಿಕ ತಾಪಮಾನ ಹೆಚ್ಚಳದಿಂದ ತೀವ್ರ ಬಿಸಿಗಾಳಿ ಜಿಲ್ಲೆಯಾದ್ಯಂತ ಬೀಸುತ್ತಿರುವುದರಿಂದ ಅನಾರೋಗ್ಯದ ದುಷ್ಪರಿಣಾಮದಿಂದ ತಪ್ಪಿಸಿಕೊಳ್ಳಲು ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲೆಯಲ್ಲಿ ತೀವ್ರ ಬಿಸಿಗಾಳಿಯಿಂದ ಕುಡಿಯುವ ನೀರಿನ ಸಮಸ್ಯೆಯ ತೀವ್ರತೆಯು ಹೆಚ್ಚಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಕುಡಿಯುವ ನೀರಿನ ಪೂರೈಕೆಯಲ್ಲಿ ವ್ಯತ್ಯಯ ಆಗದಂತೆ ಕ್ರಮವಹಿಸಲು ಸೂಚಿಸಿದರು. ಬಿಸಿಗಾಳಿಯಿಂದ ಪ್ರತಿಕೂಲ ಅನಾರೋಗ್ಯ ಪರಿಣಾಮ ತಡೆಗಟ್ಟಲು ಜಿಲ್ಲೆಯ ಸಮಸ್ತ ಜನರು ಸರ್ಕಾರ ಸೂಚಿಸಿರುವ ಸಲಹೆ ಪಾಲಿಸುವಂತೆ ಜಿಲ್ಲಾಧಿಕಾರಿ ಮನವಿ ಮಾಡಿದರು. ನಿತ್ಯ ಹೀಗೆ ಮಾಡಿ ಮಧ್ಯಾಹ್ನ 12ರಿಂದ 3 ರವರೆಗೆ ಬಿಸಿಲಿನಲ್ಲಿ ಓಡಾಡಬಾರದು. ಬಾಯಾರಿಕೆ ಇಲ್ಲದಿದ್ದರೂ ಸಾಕಷ್ಟು ನೀರು ಕುಡಿಯಿರಿ. ಹಗುರವಾದ ತಿಳಿ ಬಣ್ಣದ ಸಡಿಲವಾದ ಮತ್ತು ರಂಧ್ರವಿರುವ ಹತ್ತಿ ಬಟ್ಟೆ ಧರಿಸಿ ರಕ್ಷಣಾತ್ಮಕ ಕನ್ನಡಕ ಛತ್ರಿಟೋಪಿ ಬೂಟುಗಳು ಅಥವಾ ಚಪ್ಪಲ್ ಬಳಸಿ ದೇಹ ನಿರ್ಜಲೀಕರಣಗೊಳಿಸುವ ಆಲ್ಕೋಹಾಲ್ ಚಹಾ ಕಾಫಿ ಮತ್ತು ಕಾರ್ಬೊನೇಟೆಡ್ ತಂಪು ಪಾನೀಯ ಸೇವಿಸದಿರಿ ಹೆಚ್ಚು ಪ್ರೋಟೀನ್ ಅಂಶ ಇರುವ ಆಹಾರ ಮತ್ತು ಹಳೆಯ ಆಹಾರ ಸೇವಿಸಬೇಡಿ ನಿಂಬೆ ನೀರು ಮಜ್ಜಿಗೆ ಇತ್ಯಾದಿಗಳನ್ನು ಬಳಸಿ ದೇಹವನ್ನು ಮರು- ಜಲೀಕರಣ ಮಾಡಲು ಸಹಾಯ ಮಾಡುತ್ತದೆ ಪ್ರಾಣಿಗಳನ್ನು ನೆರಳಿನಲ್ಲಿ ಇರಿಸಿ ಮತ್ತು ಅವುಗಳಿಗೆ ಕುಡಿಯಲು ಸಾಕಷ್ಟು ನೀರು ನೀಡಿ. ತೋಟಗಳಲ್ಲಿ ಕೆಲಸ ಮಾಡುವ ರೈತರು ಟೋಪಿ ಅಥವಾ ಛತ್ರಿ ಬಳಸಿ ಮತ್ತು ನಿಮ್ಮ ತಲೆ ಕುತ್ತಿಗೆ ಮುಖ ಮತ್ತು ಕೈಕಾಲುಗಳ ಮೇಲೆ ಒದ್ದೆಯಾದ ಬಟ್ಟೆ ಬಳಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT