ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ: ಸದಸ್ಯರ ಸಭೆ ನಡೆಸದ ಆಡಳಿತಾಧಿಕಾರಿ

ಸಮಸ್ಯೆಗಳ ಕುರಿತು ಚರ್ಚಿಸಲು ಸಭೆ ಕರೆಯುವಂತೆ ಕಳೆದ ವರ್ಷವೇ ಜಿಲ್ಲಾಧಿಕಾರಿಗೆ ನಗರಸಭೆ ಸದಸ್ಯರ ಮನವಿ
Published 27 ಮಾರ್ಚ್ 2024, 6:33 IST
Last Updated 27 ಮಾರ್ಚ್ 2024, 6:33 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ನಗರಸಭೆಯ ಮೊದಲ ಅವಧಿಯ ಅಧ್ಯಕ್ಷ, ಉಪಾಧ್ಯಕ್ಷರ ಅವಧಿ ಮುಕ್ತಾಯವಾಗಿ 10 ತಿಂಗಳು ಪೂರ್ಣವಾಗಿದೆ. ಇನ್ನೂ ಎರಡನೇ ಅವಧಿಯ ಆಡಳಿತ ಮಂಡಳಿ ರಚನೆ ಆಗಿಲ್ಲ. ಜಿಲ್ಲಾಧಿಕಾರಿ ಅವರೇ ನಗರಸಭೆ ಆಡಳಿತಾಧಿಕಾರಿ ಆಗಿದ್ದಾರೆ.

ಆಡಳಿತ ಮಂಡಳಿ ಇಲ್ಲದಿರುವ ಕಾರಣ ಅಧಿಕಾರಿಗಳು ಮತ್ತು ಸಿಬ್ಬಂದಿಯದ್ದೇ ಕಾರುಬಾರು ಎನಿಸಿದೆ. ಈ ಹತ್ತು ತಿಂಗಳಲ್ಲಿ ನಗರಸಭೆಯಲ್ಲಿ ಸಮಸ್ಯೆಗಳ ಕುರಿತು ಚರ್ಚಿಸಲು ಒಮ್ಮೆಯೂ ಸದಸ್ಯರ ಸಭೆಯನ್ನು ಆಡಳಿತಾಧಿಕಾರಿ ನಡೆಸಿಲ್ಲ. ಅಧ್ಯಕ್ಷರು ಇಲ್ಲದ ಕಾರಣ ನಗರಸಭೆ ಆಡಳಿತಾಧಿಕಾರಿಯೇ ಆ ಸ್ಥಾನದಲ್ಲಿ ಇರುವರು.

ಚಿಕ್ಕಬಳ್ಳಾಪುರ ನಗರ ವ್ಯಾಪ್ತಿಯಲ್ಲಿ ವಾರ್ಡ್‌ನ ಗಡಿ ಕಲ್ಲುಗಳನ್ನು ನೆಡುವುದು, ಹಲವು ವರ್ಷಗಳಿಂದ ಓವರ್‌ ಹೆಡ್‌ ಟ್ಯಾಂಕ್‌ಗಳನ್ನು ಸ್ವಚ್ಛಗೊಳಿಸದಿರುವುದು,  ನಗರದ ಕಸವಿಲೇವಾರಿಗೆ ವೇಗ ನೀಡುವ ಸಂಬಂಧ ಸರ್ವ ಸದಸ್ಯರ ಸಭೆಯನ್ನು ತಮ್ಮ ಅಧ್ಯಕ್ಷತೆಯಲ್ಲಿ ಕರೆದು ಸಮಸ್ಯೆಗಳ ಪರಿಹಾರಕ್ಕೆ ಕ್ರಮಕೈಗೊಳ್ಳಬೇಕು ಎಂದು ಕೋರಿ ಸದಸ್ಯರು 2023ರ ಆಗಸ್ಟ್‌ನಲ್ಲಿ ನಗರಸಭೆ ಆಡಳಿತಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಅವರಿಗೆ ಮನವಿ ಮಾಡಿದ್ದರು.

ಆದರೆ ಆ ಮನವಿ ಇಂದಿಗೂ ಈಡೇರಿಲ್ಲ. ಬಜೆಟ್‌ಗೆ ಅನುಮೋದನೆ ಪಡೆಯಲು ಮಾತ್ರ ಪೂರ್ವಭಾವಿ ಸಭೆ ಮತ್ತು ಬಜೆಟ್ ಸಭೆಯನ್ನು ಆಡಳಿತಾಧಿಕಾರಿ ನಡೆಸಿದ್ದಾರೆ. ಈ ಬಜೆಟ್ ಸಭೆಯಲ್ಲಿ ಆದಾಯ, ಖರ್ಚು ಮತ್ತಿತರ ಬಜೆಟ್ ವಿಚಾರಗಳ ಬಗ್ಗೆ ಪ್ರಸ್ತಾಪವಾಯಿತೇ ಹೊರತು ಯಾವುದೇ ಸಮಸ್ಯೆಗಳ ಪರಿಹಾರ ವಿಚಾರವಾಗಿ ಚರ್ಚೆಗಳು ಆಗಲಿಲ್ಲ.

ನಗರ ವ್ಯಾಪ್ತಿಯ ವಾರ್ಡ್‌ಗಳ ವಿಂಗಡಣೆ ಮಾಡಿ ಗಡಿ ಕಲ್ಲುಗಳನ್ನು ನೆಡುವ ಕಾರ್ಯವನ್ನು ಇದುವರೆಗೂ ನಗರಸಭೆ ಮಾಡಿಲ್ಲ. ವಾರ್ಡ್‌ಗಳ ವಿಂಗಡಣೆ ಬಗ್ಗೆ ರಾಜ್ಯಪತ್ರದಲ್ಲಿ ಪ್ರಕಟವಾಗಿದೆ. ಆದ್ದರಿಂದ ವಾರ್ಡ್‌ಗಳನ್ನು ವಿಂಗಡಣೆ ಮಾಡಿ ಗಡಿ ಕಲ್ಲುಗಳನ್ನು ನೆಡಲು ಕ್ರಮವಹಿಸಬೇಕು.

ನಗರದಲ್ಲಿ ಸಾರ್ವಜನಿಕರಿಗೆ ಸರಬರಾಜು ಮಾಡುತ್ತಿರುವ ಓವರ್ ಹೆಡ್ ಟ್ಯಾಂಕ್‌ಗಳನ್ನು ಸ್ವಚ್ಛಗೊಳಿಸಿ ದಶಕಗಳೇ ಕಳೆದಿವೆ. ಕುಡಿಯುವ ನೀಡಿನ ಹಿತದೃಷ್ಟಿಯಿಂದ ಓವರ್ ಹೆಡ್ ಟ್ಯಾಂಕ್‌ಗಳ ಸ್ವಚ್ಛತೆಗೆ ಪ್ರಾಮುಖ್ಯ ನೀಡಬೇಕು.

ಹೋಟೆಲ್, ಮಾಂಸದ ಅಂಗಡಿಗಳ ಮಾಲೀಕರ ನಿರ್ಲಕ್ಷ್ಯವು ಕಸ ವಿಂಗಡಣೆಗೆ ತಲೆನೋವಾಗಿದೆ. ಕಸವಿಲೇವಾರಿಗೆ ಪೌರಕಾರ್ಮಿಕರ ಸಂಖ್ಯೆ ಹೆಚ್ಚಳವಾಗಬೇಕಾಗಿದೆ. ಈ ಎಲ್ಲ ಸಮಸ್ಯೆಗಳ ಕುರಿತು ತಾವು ಮಾಹಿತಿ ಪಡೆದು ಪರಿಹಾರ ಕ್ರಮಗಳನ್ನು ಕೈಗೊಳ್ಳಲು ತಮ್ಮ ಅಧ್ಯಕ್ಷತೆಯಲ್ಲಿ ನಗರಸಭೆಯಲ್ಲಿ ಸರ್ವಸದಸ್ಯರ ಸಭೆಯನ್ನು ಕರೆದು ಅನುಕೂಲ ಮಾಡಿಕೊಡಬೇಕು ಎಂದು ಸದಸ್ಯರು ವಿನಂತಿಸಿದ್ದರು.

ದೂರು ಮತ್ತು ಸಮಸ್ಯೆಗಳಿಗೇ ಸ್ಪಂದನೆಯಿಲ್ಲ: ನಮ್ಮ ದೂರು ಮತ್ತು ಸಮಸ್ಯೆಗಳಿಗೆ ನಗರಸಭೆ ಸಿಬ್ಬಂದಿ ಮತ್ತು ಅಧಿಕಾರಿಗಳು ಸ್ಪಂದಿಸುವುದಿಲ್ಲ ಇನ್ನು ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸುವರೇ’ ಎಂದು ನಗರಸಭೆ ಸದಸ್ಯರು ನುಡಿಯುವರು.

‘ನಮ್ಮ ವಾರ್ಡ್‌ಗಳಲ್ಲಿ ಸ್ವಚ್ಛತೆ ಆಗುತ್ತಿಲ್ಲ. ಸಿಬ್ಬಂದಿಗೆ ಈ ಬಗ್ಗೆ ತಿಳಿಸಿದರೂ ಸ್ಪಂದಿಸುತ್ತಿಲ್ಲ’ ಎಂದು ನಗರಸಭೆಯಲ್ಲಿ ಇತ್ತೀಚೆಗೆ ನಡೆದ ಬಜೆಟ್ ಸಭೆಯಲ್ಲಿಯೇ ಸದಸ್ಯರು ಆಡಳಿತಾಧಿಕಾರಿ ಅವರಿಗೆ ದೂರಿತ್ತರೂ ಸಮಸ್ಯೆಗಳಿಗೆ ಪರಿಹಾರಗಳು ಮಾತ್ರ ಕಂಡಿಲ್ಲ. 

ಆಡಳಿತಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಅವರ ಮಾತುಗಳು ಸಭೆಗೆ ಮಾತ್ರ ಸೀಮಿತ ಎನ್ನುವಂತೆ ಆಗಿದೆ. ನಗರಸಭೆ ಆಸ್ತಿಗಳಿಗೆ ನಾಮಫಲಕ ಅಳವಡಿಸಬೇಕು, ಒತ್ತುವರಿ ತೆರವುಗೊಳಿಸಬೇಕು ಎನ್ನುವ ಸೂಚನೆಗಳನ್ನು ನಗರಸಭೆ ಸಿಬ್ಬಂದಿ ಮತ್ತು ಅಧಿಕಾರಿಗಳು ಎಷ್ಟರ ಮಟ್ಟಿಗೆ ಅನುಷ್ಠಾನಗೊಳಿಸಿದ್ದಾರೆ ಎಂದರೆ ‘ಇಲ್ಲ’ ಎನ್ನುವ ಉತ್ತರ ದೊರೆಯುತ್ತದೆ. 

ಜನರ ಒತ್ತಡ ತಾಳಲು ಆಗುತ್ತಿಲ್ಲ: ನಗರಸಭೆಯಲ್ಲಿ ಆಡಳಿತ ಮಂಡಳಿ ಇದ್ದರೆ ಅಲ್ಲಿ ನಮ್ಮ ವಾರ್ಡ್‌ಗಳಿಗೆ ಸಂಬಂಧಿಸಿದ ಕೆಲಸಗಳ ಬಗ್ಗೆ ಚರ್ಚಿಸಿ ಪರಿಹಾರ ಪಡೆಯಬಹುದು. ಆದರೆ ಆಡಳಿತ ಮಂಡಳಿಯೇ ಇಲ್ಲ. ನೀರು ಬಾರದಿದ್ದರೆ, ಮಳೆ ನೀರು ನುಗ್ಗಿದರೆ, ಚರಂಡಿ ತುಂಬಿದರೆ, ಬೀದಿ ದೀಪ ಇಲ್ಲದಿದ್ದರೆ...ಹೀಗೆ ಎಲ್ಲ ವಿಚಾರಕ್ಕೂ ನಮ್ಮ ಬಳಿಗೆ ಸಾರ್ವಜನಿಕರು ಬರುತ್ತಾರೆ. ನಾವೂ ಸಹ ನಮಗೆ ಮತ ನೀಡಿದವರು ಎಂದು ಕೆಲಸ ಮಾಡಿಕೊಡುತ್ತೇವೆ. ಆದರೆ ಆಡಳಿತ ಮಂಡಳಿ ಇಲ್ಲದ ಕಾರಣ ನಮ್ಮ ಕೆಲಸಗಳು ಆಗುತ್ತಿಲ್ಲ ಎಂದು ನಗರಸಭೆ ಸದಸ್ಯರು ಬೇಸರ ವ್ಯಕ್ತಪಡಿಸುವರು. 

ಎಸ್‌.ಎಂ.ರಫೀಕ್
ಎಸ್‌.ಎಂ.ರಫೀಕ್

‘ಮನವಿ ನೀಡಿದರೂ ಸ್ಪಂದನೆಯಿಲ್ಲ’

ಈ ಹಿಂದೆ ಚಿಕ್ಕಬಳ್ಳಾಪುರವು ಜಿಲ್ಲೆ ಆಗಿರಲಿಲ್ಲ. ಆಗ ಕೋಲಾರದಿಂದ ಜಿಲ್ಲಾಧಿಕಾರಿ ಅವರು ಚಿಕ್ಕಬಳ್ಳಾಪುರಕ್ಕೆ ಬಂದು ನಗರಸ್ಥಳೀಯ ಸಂಸ್ಥೆಗಳಲ್ಲಿ ಸದಸ್ಯರ ಸಭೆ ಕರೆದು ಸಮಸ್ಯೆಗಳ ಕುರಿತು ಚರ್ಚಿಸುತ್ತಿದ್ದರು. ಆದರೆ ಈಗ ಸಭೆ ಕರೆಯಿರಿ ಎಂದು ನಾವೇ ಮನವಿ ಮಾಡಿದರೂ ಆಡಳಿತಾಧಿಕಾರಿ ಸಭೆ ಕರೆದಿಲ್ಲ. ಇದು ಚಿಕ್ಕಬಳ್ಳಾಪುರ ಒಂದೇ ಅಲ್ಲ ಜಿಲ್ಲೆಯ ಉಳಿದ ನಗರ ಸ್ಥಳೀಯ ಸಂಸ್ಥೆಗಳಲ್ಲಿಯೂ ಇದೇ ರೀತಿ ಆಗಿದೆ ಎಂದು ಬೇಸರ ವ್ಯಕ್ತಪಡಿಸುವರು ನಗರಸಭೆ ಸದಸ್ಯ ಎಸ್‌.ಎಂ.ರಫೀಕ್.  ಬಿಲ್ ಹಣ ಬಿಡುಗಡೆ ಕಾರಣಕ್ಕೆ ಬಜೆಟ್ ಸಭೆಯನ್ನು ನಡೆಸಬೇಕಾಗಿತ್ತು. ಆ ಕಾರಣದಿಂದ ಬಜೆಟ್ ಸಭೆ ನಡೆಸಿದ್ದಾರೆ. ನಗರದ ಸಮಸ್ಯೆಗಳ ಕುರಿತು ಚರ್ಚಿಸಲು ಸಭೆ ನಡೆಸಿ ಎಂದು ನಾವು ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದರು. *** ‘ಸ್ಪಂದಿಸದ ಸಿಬ್ಬಂದಿ’ ನಮ್ಮ ವಾರ್ಡ್ ಸಮಸ್ಯೆಗಳ ಬಗ್ಗೆ ಇತ್ತೀಚೆಗೆ ನಡೆದ ನಗರಸಭೆ ಬಜೆಟ್ ಸಭೆಯಲ್ಲಿ ಮತ್ತು ಅದಕ್ಕೂ ಪೂರ್ವದಲ್ಲಿ ನಡೆದ ಬಜೆಟ್ ಸಿದ್ಧತೆಯ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾಧಿಕಾರಿ ಅವರ ಗಮನಕ್ಕೆ ತಂದಿದ್ದೇವೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ 22ನೇ ವಾರ್ಡ್ ಸದಸ್ಯೆ ಸ್ವಾತಿ ಮಂಜುನಾಥ್.  ಸಾಮಾನ್ಯಸಭೆಗಳು ಕಾಲಕಾಲಕ್ಕೆ ನಡೆದಿದ್ದರೆ ಅಲ್ಲಿ ವಾರ್ಡ್‌ ಸಮಸ್ಯೆಗಳ ಬಗ್ಗೆ ಚರ್ಚೆಗಳು ನಡೆಯುತ್ತಿದ್ದವು. ಜಿಲ್ಲಾಧಿಕಾರಿ ಅವರು ಸದಸ್ಯರ ಸಭೆ ಕರೆದು ಸಮಸ್ಯೆಗಳನ್ನು ಕೇಳಬೇಕು. ಸಮಸ್ಯೆಗಳ ಪರಿಹಾರಕ್ಕೆ ಸಿಬ್ಬಂದಿ ನಗರಸಭೆ ಅಧಿಕಾರಿಗಳಿಗೆ ಹೇಳಿ ಹೇಳಿ ಸಾಕಾಗಿದೆ ಎಂದು ಬೇಸರ ವ್ಯಕ್ತಪಡಿಸುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT