ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಡ್ಲಘಟ್ಟ: ಸಮುದಾಯದ ನೆರವಿನಲ್ಲಿ ಅರಳಿದ ಶಾಲೆ

ಶಿಡ್ಲಘಟ್ಟ ತಾಲ್ಲೂಕಿನ ಪೆಂಡ್ಲಿವಾರಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಹೆಚ್ಚಿದ ದಾಖಲಾತಿ
Last Updated 28 ನವೆಂಬರ್ 2021, 6:49 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ಈ ಶಾಲೆಯಲ್ಲಿ 2016-17ನೇ ಸಾಲಿನಲ್ಲಿ 10 ಮಕ್ಕಳು ಇದ್ದರು. ಆದರೆ ಈಗ ಆ ಸಂಖ್ಯೆ 24ಕ್ಕೆ ಹೆಚ್ಚಿದೆ. ಇದುತಾಲ್ಲೂಕಿನ ಪೆಂಡ್ಲಿವಾರಹಳ್ಳಿ ಸರ್ಕಾರಿ ಶಾಲೆಯ ಬೆಳವಣಿಗೆ. ಇಲ್ಲಿನ ಶಾಲೆಯ ಶಿಕ್ಷಕಿ ವಿ.ಉಷಾ ಅವರಿಗೆ ರಾಜ್ಯ ಸರ್ಕಾರ ರಾಜ್ಯ ಮಟ್ಟದಲ್ಲಿ ಉತ್ತಮ ಶಿಕ್ಷಕಿ ಪ್ರಶಸ್ತಿ ನೀಡಿದ್ದು ಈ ಮೂಲಕವೂ ಶಾಲೆ
ಗಮನ ಸೆಳೆದಿದೆ.

ಶಾಲೆಯ ಬೆಳವಣಿಗೆಗೆ ಶಿಕ್ಷಕರು ಶ್ರಮವಹಿಸಿದರೆ ಯಾವ ಮಟ್ಟದಲ್ಲಿ ಯಶಸ್ಸು ಸಾಧಿಸಬಹುದು ಎನ್ನುವುದಕ್ಕೆ ಈ ಶಾಲೆ ಮಾದರಿಯಾಗಿಯೂ ಇದೆ.

ಈ ಹಿಂದೆ ಗ್ರಾಮದಲ್ಲಿ‌ ದಾಖಲಾತಿ ಸಮಸ್ಯೆ ತಲೆದೋರಿರಲಿಲ್ಲ. ಬಶೆಟ್ಟಿಹಳ್ಳಿಯಲ್ಲಿ‌ ಖಾಸಗಿ ಶಾಲೆ ಆರಂಭವಾದ ಕಾರಣ ಗಣನೀಯ‌ ಪ್ರಮಾಣದಲ್ಲಿ ವಿದ್ಯಾರ್ಥಿಗಳ ದಾಖಲಾತಿ ಇಳಿಕೆಯಾಯಿತು. ಶಿಕ್ಷಕರು, ಪೋಷಕರನ್ನು ಎಷ್ಟೇ ಮನವೊಲಿಸಿದರೂಆಂಗ್ಲ ಮಾಧ್ಯಮದ ಮೇಲಿನ ವ್ಯಾಮೋಹ ದಾಖಲಾತಿಯನ್ನು ಕುಗ್ಗಿಸಿತು.

ಇಲಾಖೆಯ ಪಠ್ಯಕ್ರಮದೊಂದಿಗೆ ಹೆಚ್ಚುವರಿ ಹೊರೆ ಆಗದಂತೆ ಫ್ಲಾಶ್‌ ಕಾರ್ಡ್ಸ್, ಪಜಲ್ಸ್,ಡ್ರಾಮ,ಸಂಭಾಷಣೆ,ರೈಮ್ಸ್ ಮತ್ತು ಆಟಗಳ ಮೂಲಕ ಕೇಳಿ ಕಲಿಯುವ,ನೋಡಿ ಕಲಿಯುವ,ಮಾಡಿ ಕಲಿಯುವ ಮೂರು ಪದ್ಧತಿಗಳನ್ನು ಅಳವಡಿಸಿಕೊಂಡು ಸಾಕಷ್ಟು ಪ್ರಗತಿಯನ್ನು ಪೆಂಡ್ಲಿವಾರಹಳ್ಳಿಯ ಸರ್ಕಾರಿ ಶಾಲೆಯ ಶಿಕ್ಷಕರು ಸಾಧಿಸಿದ್ದಾರೆ.

ಡಾ. ಸುಧಾ ಹಾಗೂ ಅವರ ವಾಟ್ಸ್‌ಆ್ಯಪ್ ಬಳಗ ಕಲಿಕಾ ಸಾಮಗ್ರಿಗಳಿಗಾಗಿ ಹಣಕಾಸಿನ ನೆರವು ನೀಡಿದೆ. ಪ್ರಣತಿ ವೇದಿಕೆಯಿಂದ ಪ್ರತಿವರ್ಷ ಈ ಶಾಲೆಯ ಮಕ್ಕಳಿಗೆ ನೋಟ್ ಬುಕ್, ಚಟುವಟಿಕಾ ಪುಸ್ತಕ ಮತ್ತು ಬರೆಯುವ ಸಾಮಗ್ರಿಗಳನ್ನು ನೀಡಲಾಗುತ್ತಿದೆ.

ಚಿಕ್ಕಬಳ್ಳಾಪುರದ,ಸಂಕಲ್ಪ ತಂಡದ ವಿನಯಾನಂದ್ ಅವರು 2019ರಲ್ಲಿ ಉತ್ತಮ ಗುಣಮಟ್ಟದ ನಲಿಕಲಿ ಪೀಠೋಪಕರಣಗಳನ್ನು ಡೆಸ್ಕ್ ಗಳನ್ನು ನೀಡಿದ್ದರು. ಕೊಠಡಿಗಳಿಗೆ ಸುಣ್ಣ ಬಣ್ಣ ಬಳಿಯಲು ಅನುದಾನಗಳ ಕೊರತೆ ಇದ್ದ ವೇಳೆ ಬೆಂಗಳೂರಿನ ಗ್ರಾಮಾಂತರ ಸಂಸ್ಥೆಯ ಉಷಾ ಶೆಟ್ಟಿ ಬಣ್ಣವನ್ನು ಉಚಿತವಾಗಿ ಕೊಡಿಸಿದರು.ಗ್ರಾಮದ ಯುವಕ ಬಣ್ಣವನ್ನು ಬಳಿದರು. ನಂತರ ಶಿಕ್ಷಕರು ಮತ್ತು ಹಿರಿಯ ವಿದ್ಯಾರ್ಥಿಗಳು ಸೇರಿ ಗೋಡೆಗಳ ಮೇಲೆ ವರ್ಲಿ ಚಿತ್ತಾರ ಮೂಡಿಸಿದರು.

2017ರಲ್ಲಿ ಮೈಸೂರಿನ ಚಿಲ್ಡ್ರನ್ಸ್ ಲಿಟರರಿ ಕ್ಲಬ್‌ ಸ್ಥಾಪಕರಾದ ಡಾ.ಆರ್.ಪೂರ್ಣಿಮಾ ಆಂಗ್ಲ ಭಾಷೆ,ವ್ಯಾಕರಣ ಕಲಿಕೆ ಕಾರ್ಯಾಗಾರವನ್ನುಶಾಲೆಯಲ್ಲಿ ನಡೆಸಿಕೊಟ್ಟರು. ‘ಎ ಬಿಗ್ ನೋ ಟು ಡ್ರಗ್ಸ್’ ಎಂಬ ನಾಟಕವನ್ನು ಕಲಿಸಿದರು. ಅವರ ಬೋಧನಾ ಪದ್ಧತಿಗಳನ್ನು ಅನುಸರಿಸಿದ್ದರಿಂದ ಮಕ್ಕಳು ಬಹುಬೇಗ ಕಲಿಯತೊಡಗಿದರು. ಮಕ್ಕಳ‌ ನಾಟಕದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿವೈರಲ್ ಆಯಿತು. ಇದು ಇತರರಿಗೂ ಸ್ಫೂರ್ತಿ ಆಯಿತು.

‘ಕೋವಿಡ್ ಸಮಯದಲ್ಲಿ ಶಾಲೆ ಮುಚ್ಚಿದ್ದರಿಂದ ಮಕ್ಕಳ ಕಲಿಕೆಗೆ ಅಡ್ಡಿ ಆಯಿತು. ಆಗಲೂ ಮಕ್ಕಳನ್ನು ಫೋನ್, ವಾಟ್ಸ್‌ಆ್ಯಪ್ ಮೂಲಕ ಸಂಪರ್ಕಿಸಿ ಪೋಷಕರ ನೆರವಿನಿಂದ ಮೂಲ‌ ಕಲಿಕಾಂಶಗಳ‌ ಕಲಿಕೆಗೆ ಒತ್ತು ಕೊಟ್ಟೆವು. ವಿದ್ಯಾಗಮ ಜಾರಿಯಾದ ಮೇಲೆ ಸುರಕ್ಷತಾ ಕ್ರಮಗಳೊಂದಿಗೆ ಮಕ್ಕಳನ್ನು ನಿರಂತರ ಸಂಪರ್ಕಿಸಿ ಅವರ ಕಲಿಕಾ ಅಂತರವನ್ನು ಸರಿದೂಗಿಸಿದೆವು.
ಇದನ್ನು ಗಮನಿಸಿದ ಪೋಷಕರು ಮಕ್ಕಳನ್ನು ಖಾಸಗಿ ಶಾಲೆಗಳಿಂದ ಬಿಡಿಸಿ ನಮ್ಮ ಶಾಲೆಗೆ ಸೇರಿಸಿದರು’ ಎನ್ನುತ್ತಾರೆ ಶಿಕ್ಷಕ ಚನ್ನಕೃಷ್ಣ.

‘ಆದರೂ ನಮ್ಮ‌ ಶಾಲೆಗೆ ಸಮಸ್ಯೆಗಳು ತಪ್ಪಿದ್ದಿಲ್ಲ. ಶಾಲಾ ಆವರಣ ಅತಿ ಕಡಿಮೆ ಸ್ಥಳಾವಕಾಶ ಹೊಂದಿದೆ.ಇರುವುದು ಎರಡೇ ಕೊಠಡಿಗಳು. ಇವು ಮಳೆಗೆ ತುಂಬಾ ಸೋರುತ್ತಿದೆ. ಒಂದು ಕೊಠಡಿ ಚಾವಣಿ ಕಿತ್ತು ಬಂದಿದೆ. ಐದೂ ತರಗತಿಯ ಮಕ್ಕಳನ್ನು ಒಂದೇ ಕೊಠಡಿಯಲ್ಲಿ ಕೂರಿಸಿ ಪಾಠ ಮಾಡಬೇಕಾಗಿದೆ’ ಎಂದು ಸಮಸ್ಯೆಗಳನ್ನು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT